ಪಂಚೇಂದ್ರಿಯಗಳಿಗೆ ರಸದೌತಣ, ಜ್ಞಾನಕ್ಕೆ ವಿಚಾರಸಂಕಿರಣ
ವಿದ್ಯಾಗಿರಿ: ಕಣ್ಣು ಹಾಯಿಸಿದಷ್ಟು ಹಲಸು ಹಾಗೂ ಹಣ್ಣುಗಳ ಸಿಂಗಾರ, ತಂಗಾಳಿಯಲ್ಲೂ ಹಣ್ಣುಗಳ ಘಮಲು, ಜಿಟಿಜಿಟಿ ಮಳೆಗೆ ಹಲಸಿನ ತಿನಿಸು, ರೈತರಿಗೆ ಬೀಜ- ಸಸಿಗಳ ಆಯ್ಕೆ, ಮಹಿಳೆಯರಿಗೆ ಮನದಣಿಯುವಷ್ಟು ಆಹಾರ, ಉಡುಪು, ಗೃಹೋಪಯೋಗಿ ವಸ್ತುಗಳ ಸಂಭ್ರಮ, ಮಕ್ಕಳಿಗೆ ಮುದನೀಡುವ ತಿನಿಸು ಹಾಗೂ ಕೌಶಲ ಗುಜ್ಜೆ ಕಬಾಬ್, ಪೆಲತ್ತರಿ ಸ್ಪೆಷಲ್, ಮುಳ್ಕಾ, ಉಂಡುಲ್ಗಾ, ರಸಾಯನ, ಸಫಾಲ್, ಉಪ್ಪಿನ ಸೋಳೆ, ಸ್ಮೂತಿ, ಆಯುರ್ವೇದ ಆಹಾರಗಳು.
ಇದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಹಲಸು- ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿ ನೇತೃತ್ವದಲ್ಲಿ ಕೃಷಿಋಷಿ ಡಾ.ಎಲ್.ಸಿ. ಸೋನ್ಸ್ ಸ್ಮರಣಾರ್ಥ ಹಮ್ಮಿಕೊಂಡ ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಮತ್ತು ಕೃಷಿ ಪ್ರದರ್ಶನಗಳ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ‘ಸಮೃದ್ಧಿ’ಯಲ್ಲಿ ಶನಿವಾರ ಕಂಡುಬಂದ ಚಿತ್ರಣ.
ಮಹಾಮೇಳವು ಶುಕ್ರವಾರ (ಜು.14) ಸಂಜೆ ಉದ್ಘಾಟನೆಗೊಂಡಿದ್ದು, ಜನಸಾಗರ ಹರಿದುಬರುತ್ತಿದೆ. ಮೂಡುಬಿದಿರೆಯ ಸುಮಾರು 75 ಸಂಘ- ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ನಡೆಯುತ್ತಿರುವ ಮೇಳವು ಹೊಸ ಹುರುಪು ನೀಡಿದೆ.
ಹಲಸಿನ ಹಣ್ಣುಗಳ ಮಳಿಗೆ, ಇತರೆ ಹಣ್ಣುಗಳ ಹಾಗೂ ಆಹಾರ ಮಳಿಗೆಗಳು, ವಿವಿಧ ಉತ್ಪನ್ನಗಳ ಮಳಿಗೆಗಳ ಜತೆಗೆ ಸ್ವದೇಶಿ ಉತ್ಪನ್ನಗಳ ಮಳಿಗೆಗಳು, ಗೃಹೋಪಯೋಗಿ ವಸ್ತುಗಳ ಮಳಿಗೆ ಹಾಗೂ ನರ್ಸರಿ ಮಳಿಗೆಗಳು ಸೇರಿದಂತೆ 200ಕ್ಕೂ ಅಧಿಕ ಮಳಿಗೆಗಳು ಆಗಮಿಸಿದ್ದವು.
ಹಲಸು ಮೇಳದಲ್ಲಿ ವಾಹನದ ನಿಲುಗಡೆಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಸಜ್ಜಿತ ಎರಡು ಬೃಹದಾಕಾರದ ವೇದಿಕೆಗಳಲ್ಲಿ ಮಳಿಗೆಗಳನ್ನು ತೆರಯಲಾಗಿದೆ. ಹಲಸು ಮೇಳದ ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಸ್ಥಳದಲ್ಲಿ ನಿಯೋಜಿತ ಎನ್‍ಸಿಸಿ ಕೆಡೆಟ್‍ಗಳು ಮಾರ್ಗದರ್ಶನ ನೀಡುತ್ತಿದ್ದರು. ಯುವಕ-ಯುವತಿಯರು, ಮಕ್ಕಳು, ಗಂಡಸರು, ಹೆಂಗಸರು ಸೇರಿದಂತೆ ಎಲ್ಲಾ ವಯೋಮಾನದ ಹಾಗೂ ಸಕಲ ವರ್ಗಗಳ ಜನರು ಪಾಲ್ಗೊಂಡು ಮೇಳದ ಅಚ್ಚುಕಟ್ಟುತನವನ್ನು ಶ್ಲಾಘಿಸಿದರು.
ಮಹಾಮೇಳಕ್ಕೆ ಭೇಟಿ ನೀಡಿದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ಮೇಘ ಪ್ರತಿಕ್ರಿಯಿಸಿ, ‘ಉತ್ತರ ಕರ್ನಾಟಕದಲ್ಲಿ ನಾವು ಹಲಸು ಹಣ್ಣು ತಿನ್ನುತ್ತೇವೆ. ಆದರೆ, ಇದರಿಂದ ಇಷ್ಟೊಂದು ಖಾದ್ಯ ಹಾಗೂ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸಬಹುದು. ಸವಿಯಬಹುದು ಎಂಬುದು ಇಲ್ಲಿಯೇ ನನಗೆ ಗೊತ್ತಾಗಿದ್ದು. ಇದೊಂದು ಹಲಸು ವಿಸ್ಮಯ’ ಎಂದು ಹರ್ಷೋದ್ಘಾರ ವ್ಯಕ್ತಪಡಿಸಿದರು.
ಮಹಾಮೇಳದಲ್ಲಿ ‘ಹಣ್ಣುಗಳ ಕಸೂರಿ ಕಲೆ’ ಪ್ರದರ್ಶಿಸುತ್ತಿರುವ ಶ್ರೀಹರ್ಷ ಗುರುಲಕ್ಷ್ಮೀ ನಾರಾಯಣ ಉಪಾಧ್ಯಾಯ ಮಾತನಾಡಿ, ‘ಈ ಕಲೆಯನ್ನು ನಾನು ಥೈಲ್ಯಾಂಡ್‍ನಲ್ಲಿ ಕಲಿತು ಬಂದಿದ್ದೇನೆ. ದೇಶೀಯ ಜೊತೆ ವಿದೇಶದ ನಾವಿನ್ಯತೆಗಳಿಗೂ ಇಲ್ಲಿ ಅವಕಾಶ ನೀಡಿರುವುದು ಒಂದು ವಿಶ್ವದರ್ಶನವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ವಿಚಾರ ಸಂಕಿರಣ:
ಶನಿವಾರ ‘ಹಣ್ಣು ಮತ್ತು ತರಕಾರಿಗಳ ಮೌಲ್ಯವರ್ಧನೆ ಮತ್ತು ಸಂರಕ್ಷಣೆ ಕುರಿತು ಕೊಪ್ಪದ ಪ್ರಗತಿಪರ ಕೃಷಿ ಉತ್ಪನ್ನ ತರಬೇತುದಾರರಾದ ಸುಮಾ ರಂಗಪ್ಪ ಮಾಹಿತಿ ನೀಡಿದರು. ಸೇರಿದ್ದ ರೈತರು, ರೈತಮಹಿಳೆಯರು ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ಹಲಸಿನ ಮಿಲ್ಕ್ ಶೇಕ್, ಬರ್ಗರ್, ಫಿಜಾ, ಸ್ಮೂತಿ ಮಾಡುವ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಬಳಿಕ ಸಖರಾಯಪಟ್ಟಣದ ಹಲಸಿನ ಹಣ್ಣಿನ ಉತ್ಪನ್ನಗಳ ತರಬೇತುದಾರ ಶಿವಣ್ಣ ‘ಹಲಸಿನ ಹಣ್ಣಿನ ಮೌಲವರ್ಧನೆ ಹಾಗೂ ಸಂರಕ್ಷಣೆಯ ವಿಧಾನ’ಗಳ ಕುರಿತು ಉಪನ್ಯಾಸ ನೀಡಿದರು. ವಿಶೇಷವಾಗಿ ಹವಾಗುಣ, ಭೌಗೋಳಿಕತೆ ಮತ್ತಿತರ ಆದ್ಯತೆಗೆ ಅನುಗುಣವಾಗಿ ಪ್ರದೇಶವಾರು ಹಲಸು ಬೆಳೆ, ಸಂಸ್ಕರಣೆ ಬಗ್ಗೆ ಅವರು ಸವಿವರ ನೀಡಿದರು.
ಸಮಾರೋಪ ನಾಳೆ:
ಜು.16 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭವು ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ನಡೆಯಲಿದ್ದು, ಶಾಸಕ ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಮಂಗಳೂರು ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಮತ್ತು ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಬಿ. ಭಾಗವಹಿಸುವರು.
ಇದಕ್ಕೂ ಮೊದಲು 10 ಗಂಟೆಗೆ ಬಂಟ್ವಾಳದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಜೊ. ಪ್ರದೀಪ್ ಡಿಸೋಜ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ