ಶ್ರೀ ರಾಮ ಮಂತ್ರ ಜಪ ಸಹಿತ ಪ್ರದಕ್ಷಿಣೆ
ಉಡುಪಿ: ಈ ವರ್ಷ ಅಧಿಕ ಶ್ರಾವಣ ಮಾಸ ಬಂದಿರುವುದು ಭಕ್ತರ ಮೇಲೆ ಭಗವಂತನ ಕಾರುಣ್ಯವೆಂದೇ ಭಾವಿಸಬೇಕು. ಪವಿತ್ರ ಅಧಿಕ ಶ್ರಾವಣ ಮಾಸದಲ್ಲಿ ಶ್ರೀ ಹರಿಯ ಪ್ರೀತ್ಯರ್ಥವಾಗಿ ಮಾಡುವ ಯಾವುದೇ ದೇವತಾ ಸತ್ಕರ್ಮಗಳಿಗೆ ಅತ್ಯಧಿಕ ಫಲವೆಂದು ಶಾಸ್ತ್ರಗಳು ಸಾರಿ ಸಾರಿ ಹೇಳಿವೆ. ಪುರುಷೋತ್ತಮ ಮಾಸವೆಂದೇ ಕರೆಯಲ್ಪಡುವ ಈ ಅಧಿಕ ಮಾಸದಲ್ಲಿ ಕರಂಬಳ್ಳಿ ಶ್ರೀ ವೇಂಕಟರಮಣದೇವರ ಸನ್ನಿಧಿಯಲ್ಲಿ ಸಮಸ್ತ ಭಕ್ತರಿಗೆ ಸಕಲ ಸದಭೀಷ್ಟ ಸಿದ್ಧಿಪೂರ್ವಕ ಶ್ರೇಯಸ್ಸು, ಗ್ರಾಮರಾಷ್ಟ್ರದಲ್ಲಿ ಸುಭಿಕ್ಷೆ ಸಮೃದ್ಧಿ, ಗೋವಂಶಕ್ಕೆ ಸುರಕ್ಷೆ ಲೋಕಕ್ಷೇಮಕ್ಕಾಗಿ ಪ್ರಾರ್ಥಿಸಿ ಸಾಮೂಹಿಕ ಲಕ್ಷ ಪ್ರದಕ್ಷಿಣ ನಮಸ್ಕಾರ ಸೇವೆಯನ್ನು ನಡೆಸಲು ಸಂಕಲ್ಪಿಸಲಾಗಿದೆ.
ಜುಲೈ 18ರ ಮಂಗಳವಾರದಿಂದ ಮೊದಲ್ಗೊಂಡು ಆಗಸ್ಟ್ 15ರ ಮಂಗಳವಾರದ ವರೆಗೆ ಅಧಿಕ ಶ್ರಾವಣ ಮಾಸ ಪರ್ಯಂತ ಈ ಲಕ್ಷ ಪ್ರದಕ್ಷಿಣ ನಮಸ್ಕಾರ ಸೇವೆ ನಡೆಯಲಿದ್ದು, ಊರ ಪರವೂರಿನ ಮಕ್ಕಳು ಹಿರಿಯರೆನ್ನದೆ ಎಲ್ಲ ವಯೋಮಾನದ ಎಲ್ಲ ಜಾತಿ ಸಮುದಾಯಗಳ ಸಮಸ್ತ ಭಕ್ತರೂ ಇದರಲ್ಲಿ ಪಾಲ್ಗೊಂಡು ಪ್ರತಿನಿತ್ಯ ಯಥಾ ಶಕ್ತಿ ಪ್ರದಕ್ಷಿಣ ನಮಸ್ಕಾರ ಸೇವೆಯನ್ನು ನಡೆಸಿ ಶ್ರೀ ವೇಂಕಟರಮಣದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಪಾಡಿಗಾರು ಶ್ರೀ ವಾಸುದೇವ ತಂತ್ರಿಗಳು, ಕೆ. ರಘುಪತಿ ಭಟ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕ ವೃಂದ ಮತ್ತು ಗ್ರಾಮದ ಹತ್ತು ಸಮಸ್ತರು ವಿನಂತಿಸಿದ್ದಾರೆ.
ಅದರ ಜೊತೆಗೆ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಮುಂಬರುವ 2024 ರ ಜನವರಿ ತಿಂಗಳಾಂತ್ಯಕ್ಕೆ ನೂತನ ಮಂದಿರದಲ್ಲಿ ಶ್ರೀ ಸೀತಾರಾಮ ದೇವರ ಪ್ರತಿಷ್ಠಾಪನೆಯೂ ನಡೆಯಲಿದೆ. ಆ ನಿಮಿತ್ತ ಜನವರಿ ತಿಂಗಳವರೆಗೆ ನಾಡಿನೆಲ್ಲೆಡೆ ರಾಮನ ಪ್ರೀತಿಗಾಗಿ ರಾಮಮಂತ್ರ ಜಪಯಜ್ಞಗಳು ನಡೆಯಬೇಕೆಂಬುದು ಮಂದಿರ ಟ್ರಸ್ಟಿನ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶರಾದ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಆಶಯವಾಗಿದೆ. ಆ ಹಿನ್ನೆಲೆಯಲ್ಲಿ ಲಕ್ಷ ಪ್ರದಕ್ಷಿಣ ನಮಸ್ಕಾರ ಸೇವೆಯ ಸಂದರ್ಭದಲ್ಲೇ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ದಿವ್ಯ ಮಂತ್ರವನ್ನು ಜಪಿಸಿಕೊಂಡು ರಾಮದೇವರ ಅನುಗ್ರಹವನ್ನೂ ಪಡೆಯಲು ಅವಕಾಶ ನೀಡಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ 7 ರಿಂದ ರಾತ್ರಿ 7.30 ರ ವರೆಗೆ (ಮಧ್ಯಾಹ್ನ ವಿರಾಮದ ಸಮಯ ಬಿಟ್ಟು) ಯಾವುದೇ ಸಮಯದಲ್ಲಿ ಭಕ್ತರು ಆಗಮಿಸಿ ಪ್ರದಕ್ಷಿಣ ನಮಸ್ಕಾರ ಸೇವೆ ನಡೆಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ:
ರಮೇಶ ಬಾರಿತ್ತಾಯ- 9886826109
ವಾಸುದೇವ ಭಟ್- 9845895136
ಲಕ್ಷ್ಮೀನಾರಾಯಣ ಆಚಾರ್ಯ- 9845242879
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ