ಮಂಗಳೂರು: ಇತ್ತೀಚೆಗೆ ಸದ್ದು ಮಾಡುತ್ತಿರುವ ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯೇ ಯುಕೆಟಿಎಲ್. ಅಂದರೆ ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ. ಯೋಜನೆಯ ಬಗ್ಗೆ ಜನ ಸಾಮಾನ್ಯರಿಗೆ ಒಂದಿಷ್ಟು ಮಾಹಿತಿ ನೀಡುವ ಪ್ರಯತ್ನ ನಮ್ಮದು.
ಯಾವುದೇ ದೇಶದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಎಲ್ಲ ಬಗೆಯ ಮೂಲ ಸೌಕರ್ಯಗಳು ಮೊದಲು ಅಭಿವೃದ್ಧಿಯಾಗಬೇಕು. ಹೆದ್ದಾರಿ, ಸಂಪರ್ಕ, ವಿದ್ಯುತ್, ನೀರು ಸರಬರಾಜು- ಇವಿಷ್ಟು ದೇಶದ ಎಲ್ಲೆಡೆ, ಎಲ್ಲ ಜನರಿಗೆ ನಿರಾತಂಕವಾಗಿ ಸಿಗುವಂತಾದರೆ ಆ ದೇಶ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುವುದು ನಿಶ್ಚಿತ. ಈ ನಿಟ್ಟಿನಲ್ಲಿ ಭಾರತ ಸರಕಾರ ಮೂಲ ಸೌಕರ್ಯ ಯೋಜನೆಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ. ಈಗಾಗಲೇ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳು, ಚತುಷ್ಪಥ, ಷಟ್ಪಥ, ದಶಪಥ ಹೆದ್ದಾರಿಗಳು, ಎಕ್ಸ್‌ಪ್ರೆಸ್ ಹೈವೇಗಳ ನಿರ್ಮಾಣ, ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸುವ ಯೋಜನೆಗಳು, ಗ್ರಾಮೀಣ ಪ್ರದೇಶಗಳಲ್ಲೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸರ್ವ ಋತು ಸಂಚಾರಯೋಗ್ಯವಾದ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ, ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ- ಇತ್ಯಾದಿ ಬಹು ವಿಧದ ಹೆದ್ದಾರಿಗಳ ನಿರ್ಮಾಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹುದೊಡ್ಡ ಕ್ರಾಂತಿಯೇ ನಡೆಯುತ್ತಿದೆ.
ಅಂತೆಯೇ ಎಲ್ಲ ಬಗೆಯ ಕೈಗಾರಿಕೆಗಳು, ಉದ್ಯಮ ವಹಿವಾಟುಗಳು, ಕೃಷಿ, ಕೃಷಿ ಆಧರಿತ ಉದ್ಯಮಗಳು, ಮಾಹಿತಿ ತಂತ್ರಜ್ಞಾನ ಆಧರಿತ ವ್ಯವಹಾರಗಳು, ಆಹಾರ ಸಂಸ್ಕರಣೆ, ಆತಿಥ್ಯ ಉದ್ಯಮ, ವಾಹನೋದ್ಯಮ- ಹೀಗೆ ಎಲ್ಲದಕ್ಕೂ ಪ್ರಧಾನವಾಗಿ ಬೇಕಾಗಿರುವುದು ಇಂಧನ ಅಥವಾ ಶಕ್ತಿ. ಈ ಶಕ್ತಿಯ ಮೂಲವೇ ವಿದ್ಯುತ್. ಹೀಗಾಗಿ ವಿದ್ಯುತ್ ಇಲ್ಲದೆ ಒಂದು ಗಂಟೆಯೂ ಇರಲಾಗದ ಸನ್ನಿವೇಶದಲ್ಲಿ ನಾವಿಂದು ಬದುಕುತ್ತಿದ್ದೇವೆ. ಇದನ್ನು ಮನಗಂಡು ಸರಕಾರ ವಿದ್ಯುತ್ ಕ್ಷೇತ್ರದಲ್ಲಿ ದೇಶವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಏರಿಸಲು ಅಸಾಂಪ್ರದಾಯಿಕ ಶಕ್ತಿ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಅತಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮುಗಿದು ಹೋಗಬಹುದಾದ ಸಂಪನ್ಮೂಲಗಳು (ಮುಖ್ಯವಾಗಿ ಜಲ ಸಂಪನ್ಮೂಲ, ಕಲ್ಲಿದ್ದಲು, ಪೆಟ್ರೋಲಿಯಂ) ಸೀಮಿತವಾಗಿದ್ದು, ಸೌರ ವಿದ್ಯುತ್, ಪವನ ವಿದ್ಯುತ್, ಅಣು ವಿದ್ಯುತ್‌ನಂತಹ ಅಸಾಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಉತ್ಪಾದಿಸಿ ಬೇಡಿಕೆಯನ್ನು ಪೂರೈಸಲು ಆದ್ಯತೆ ನೀಡಿದೆ. ದೇಶದ ಬೇಡಿಕೆ ಪೂರೈಸುವುದಷ್ಟೇ ಅಲ್ಲದೆ, ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ದೇಶದ ಒಳಗೆ ಹಾಗೂ ಅನ್ಯ ದೇಶಗಳಿಗೂ ವಿದ್ಯುತ್ ರಫ್ತು ಮಾಡುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಾಕಿಕೊಂಡಿದೆ.
ಸವಾಲುಗಳೇನು?
ನಮ್ಮ ದೇಶದಲ್ಲಿ (ಜಗತ್ತಿನ ಇತರ ದೇಶಗಳಲ್ಲೂ) ಯಾವುದೇ ಅಭಿವೃದ್ಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದರೆ ಎದುರಾಗುವ ಸವಾಲುಗಳು ನೂರಾರು. ಯೋಜನೆಗೆ ಅಗತ್ಯವಿರುವ ಭೂಸ್ವಾಧೀನದಿಂದ ತೊಡಗಿ, ಸಂತ್ರಸ್ತರಿಗೆ ಪರಿಹಾರ-ಪುನರ್ವಸತಿ ವ್ಯವಸ್ಥೆ ಒದಗಿಸುವ ಕಾರ್ಯವೇ ಭಾರೀ ವೆಚ್ಚದ ಮತ್ತು ತ್ರಾಸದಾಯಕ ಕಾರ್ಯವಾಗಿದೆ. ಇದರಿಂದಾಗಿಯೇ ಯೋಜನಾ ವೆಚ್ಚಗಳು ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತವೆ. ಅಂತಿಮವಾಗಿ ಅದರ ಹೊರೆಯನ್ನು ತೆರಿಗೆದಾರರು ಮತ್ತು ತೆರಿಗೆದಾರರಲ್ಲದವರೂ ಸೇರಿದಂತೆ ದೇಶದ ಜನರೇ ಹೊರಬೇಕಾಗುತ್ತದೆ.
ಪ್ರಸ್ತುತ ಹೆದ್ದಾರಿ ಯೋಜನೆಗಳಂತೆಯೇ ಅತಿ ಹೆಚ್ಚಿನ ಬಂಡವಾಳ ಹೂಡಿಕೆ ಹರಿದು ಬರುತ್ತಿರುವ ಇನ್ನೊಂದು ಕ್ಷೇತ್ರವೆಂದರೆ ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಮಾರ್ಗಗಳ ನಿರ್ಮಾಣ ಯೋಜನೆಗಳು. ಭಾರತ ಸರಕಾರದ ಪ್ರೋತ್ಸಾಹಕ ನೀತಿಗಳಿಂದಾಗಿ ಪ್ರಸ್ತುತ ಸಾಂಪ್ರದಾಯಿಕ ಮೂಲಗಳನ್ನು ಮೀರಿಸಿ ಸೋಲಾರ್ ನಂತಹ ಅಸಾಂಪ್ರದಾಯಿಕ ಮೂಲಗಳಿಂದಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ದೇಶಾದ್ಯಂತ ಅಗತ್ಯ ಹಾಗೂ ಬೇಡಿಕೆಗೆ ತಕ್ಕಂತೆ ಅತ್ಯುತ್ತಮ ಗುಣಮಟ್ಟದ ವಿದ್ಯುತ್ ಪೂರೈಸುವುದು ಸರಕಾರದ ಉದ್ದೇಶ. ಹಾಗೆಂದು ಎಲ್ಲೆಂದರಲ್ಲಿ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ನಿರ್ಮಿಸಲಾಗದು. ಆಯ್ದ ಸ್ಥಳಗಳಲ್ಲಿ ಸ್ಥಾಪಿಸಲಾದ ಅಧಿಕ ಸಾಮರ್ಥ್ಯದ ಸ್ಥಾವರಗಳಿಂದ ಉತ್ಪಾದಿತ ವಿದ್ಯುತ್ತನ್ನು ಎಲ್ಲಿಗೆ ಅಗತ್ಯವೋ ಅಲ್ಲಿಗೆ ರವಾನಿಸಲು ಸಮರ್ಥ ಹಾಗೂ ದಕ್ಷವಾದ ಪ್ರಸರಣ ಮಾರ್ಗಗಳ ಅಗತ್ಯವಿದೆ. ಅದಕ್ಕಾಗಿಯೇ ಗ್ರೀನ್ ಕಾರಿಡಾರ್‍ನಂತಹ ವಿವಿಧ ಕಾರಿಡಾರ್‍ಗಳನ್ನು ನಿರ್ಮಿಸುವ ಮೂಲಕ ರಾಷ್ಟ್ರೀಯ ವಿದ್ಯುತ್ ಗ್ರಿಡ್ ಅನ್ನು ರೂಪಿಸುವ ಯೋಜನೆಗೆ ಕೇಂದ್ರ ಸರಕಾರ ಆದ್ಯತೆ ನೀಡಿದೆ. ದೇಶದ ವಿವಿಧ ಭಾಗಗಳಲ್ಲಿ ಯೋಜನೆಯನ್ನು ಜಾರಿಗೊಳಿಸಲು ಟಿಬಿಸಿಬಿ (ಟ್ಯಾರಿಫ್ ಬೇಸ್ಡ್ ಕಾಂಪಿಟಿಟಿವ್ ಬಿಡ್ಡಿಂಗ್ ಪ್ರೋಸೆಸ್) ಮೂಲಕ ಖಾಸಗಿ ಸಹಭಾಗಿತ್ವದ ಯೋಜನೆ ರೂಪಿಸಿದೆ.
ಯುಕೆಟಿಎಲ್:
ಇಂತಹ ಯೋಜನೆಗಳ ಪೈಕಿ ಒಂದು ಯುಕೆಟಿಎಲ್ ಅಥವಾ ಉಡುಪಿ-ಕಾಸರಗೋಡು ಟ್ರಾನ್ಸ್‌ಮಿಷನ್ ಲೈನ್ ಪ್ರಾಜೆಕ್ಟ್. ಒಟ್ಟು 115 ಕಿ.ಮೀ ಉದ್ದದ 400 ಕೆ.ವಿ (ಕ್ವಾಡ್) D/C ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದ ಈ ಯೋಜನೆಗೆ 2021ರಲ್ಲೇ ಕೇಂದ್ರ ಸರಕಾರ ಅನುಮತಿ ನೀಡಿತ್ತು. ಆದರೆ ನಾನಾ ಕಾರಣಗಳಿಂದ ಇದುವರೆಗೂ ಯೋಜನೆಯ ಪೂರ್ಣ ಅನುಷ್ಠಾನ ಸಾಧ್ಯವಾಗಿಲ್ಲ. ಕರ್ನಾಟಕದಿಂದ ಬರುವ ವಿದ್ಯುತ್ ಅನ್ನು ಸ್ವೀಕರಿಸುವ ಕೇರಳದ ಗಡಿ ಭಾಗದಲ್ಲಿ ಒಂದಷ್ಟು ಪ್ರಗತಿ ಸಾಧಿಸಿದ್ದರೂ ಯುಕೆಟಿಎಲ್ ಆರಂಭದ ಪ್ರದೇಶವಾದ ಉಡುಪಿಯಿಂದ ಕೇರಳ ಗಡಿ ಭಾಗವಾದ ಸಾರಡ್ಕ-ಅಡ್ಯನಡ್ಕ ವರೆಗಿನ ಭಾಗದಲ್ಲಿ ನಿರ್ಮಾಣ ಕಾರ್ಯ ಇನ್ನೂ ವೇಗ ಪಡೆದುಕೊಂಡಿಲ್ಲ. ಈ ಮಾರ್ಗಕ್ಕೆ ಸಮೀಕ್ಷೆ ನಡೆಸಲಾದ ಪ್ರದೇಶಗಳು ಬಹುತೇಕ ಸರಕಾರಿ ಭೂಮಿಯೇ ಆಗಿದ್ದರೂ ಕೆಲವು ಗ್ರಾಮಗಳಲ್ಲಿ ಕರಾವಳಿ ಜನರ ವಾಣಿಜ್ಯ ಬೆಳೆಯಾದ ಅಡಿಕೆ- ತೆಂಗಿನ ತೋಟಗಳು, ವಾಸ್ತವ್ಯದ ಮನೆಗಳು ಯೋಜನೆಯ ಪ್ರದೇಶದಲ್ಲಿ ಬರುತ್ತವೆ. ಹೀಗಾಗಿ ಉಡುಪಿಯ ಎಲ್ಲೂರು, ಮೂಡುಬಿದಿರೆ ತಾಲೂಕಿನ ಕೆಲವು ಪ್ರದೇಶಗಳು, ಬಂಟ್ವಾಳ ತಾಲೂಕಿನ ಕೆಲವು ಗ್ರಾಮಗಳಲ್ಲಿ ಯೋಜನೆಗೆ ಸಹಜವಾಗಿಯೇ ಆಕ್ಷೇಪ, ವಿರೋಧಗಳು ವ್ಯಕ್ತವಾಗಿವೆ. ಯೋಜನೆ ಅನುಷ್ಠಾನದ ಹೊಣೆ ಹೊತ್ತುಕೊಂಡಿರುವ ಸ್ಟೆರ್ಲೈಟ್ ಕಂಪನಿ ಹೇಗೆ ಈ ಸವಾಲುಗಳನ್ನು ಎದುರಿಸಿ ಹಿಡಿದ ಕಾರ್ಯ ಪೂರ್ಣಗೊಳಿಸುತ್ತದೆ ಎಂಬುದು ಕುತೂಹಲದ ಸಂಗತಿ.
ಅದೇನೇ ಇರಲಿ, ಯೋಜನೆಯ ಕುರಿತು ವಾಸ್ತವಿಕ ಮಾಹಿತಿಯನ್ನು ನಮ್ಮ ಓದುಗರಿಗೆ ನೀಡುವ ಪ್ರಯತ್ನ ನಮ್ಮದು.
**
ಪ್ರಾಜೆಕ್ಟ್ ಸ್ಟೋರಿ:
115 ಕಿಮೀ ಉದ್ದದ 400 kV (ಕ್ವಾಡ್) D/C ಉಡುಪಿ - ಕಾಸರಗೋಡು ಪ್ರಸರಣ ಮಾರ್ಗಗಳು ಕೇರಳದ ಉತ್ತರ ಪ್ರದೇಶದಲ್ಲಿ ವಿಶ್ವಾಸಾರ್ಹ ಮತ್ತು ಸ್ಥಿರ ವಿದ್ಯುತ್ ಸರಬರಾಜಿನ ವ್ಯವಸ್ಥೆಯನ್ನು ಸುಧಾರಿಸುತ್ತದೆ; ಮತ್ತು ಈ ಮಾರ್ಗದ ನಿರ್ಮಾಣದೊಂದಿಗೆ S1 (ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ) ಮತ್ತು S2 (ತಮಿಳುನಾಡು, ಕೇರಳ) ಕಾರಿಡಾರ್ ನಡುವಿನ ದಟ್ಟಣೆಯನ್ನು ನಿವಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನೆಯ ವಿವರ
ಉದ್ದ: 115 ಕಿಮೀ
ಶಕ್ತಿ: 400 kV (ಕ್ವಾಡ್) ಡಬಲ್ ಸರ್ಕ್ಯೂಟ್ ಲೈನ್
ಯೋಜನೆ ಪೂರ್ಣಗೊಳಿಸಲು ಕೊನೆಯ ದಿನಾಂಕ: TSA ಪ್ರಕಾರ SCOD SPV ಸ್ವಾಧೀನದಿಂದ 38 ತಿಂಗಳುಗಳು
(SCOD-Scheduled Commercial Operation Date- ಅನುಸೂಚಿತ ವಾಣಿಜ್ಯ ಕಾರ್ಯಾಚರಣೆ ದಿನಾಂಕ)
(SPV- Special Purpose Vehicle)
(TSA- Transmission Service Agreement- ಪ್ರಸರಣ ಸೇವೆ ಒಪ್ಪಂದ)
ಯೋಜನೆಯ ಅಂಶಗಳು:
ಎಲಿಮೆಂಟ್ 1 - ಮಂಗಳೂರು (ಉಡುಪಿ ಪಿಸಿಎಲ್) - ಕಾಸರಗೋಡು 400 ಕೆವಿ (ಕ್ವಾಡ್) ಡಿ/ಸಿ ಲೈನ್
ಎಲಿಮೆಂಟ್ 2 - ಕಾಸರಗೋಡಿನಲ್ಲಿ 2×500 MVA, 400/220 kV GIS ಉಪ-ಕೇಂದ್ರದ ಸ್ಥಾಪನೆ
ಎಲಿಮೆಂಟ್ 3- ಮೂರು 400 kV ಲೈನ್ Bays 2 ಜೋಡಿಗಳು ಮತ್ತು UPCL ಸ್ವಿಚ್‌ಯಾರ್ಡ್‌ನಲ್ಲಿ ಬಸ್ ಬಾರ್ ವಿಸ್ತರಣೆ ಕಾರ್ಯಗಳು
ಒಳಗೊಂಡಿರುವ ರಾಜ್ಯ: ಕರ್ನಾಟಕ ಮತ್ತು ಕೇರಳ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ