ಲೋಕಕಲ್ಯಾಣಕ್ಕಾಗಿ ಆಡಳಿತವರ್ಗಕ್ಕೆ ಇಚ್ಛಾಶಕ್ತಿ ಅಗತ್ಯ: ರಾಘವೇಶ್ವರ ಶ್ರೀ

Upayuktha
0

ಗೋಕರ್ಣ: ಲೋಕದ ಸಮಸ್ತರಿಗೆ ಒಳಿತು ಬಯಸುವ ಮಂಗಳಮಯ ಸಮಾಜವೇ ನಿಜ ಅರ್ಥದ ರಾಮರಾಜ್ಯ. ಇಂಥ ಸಮಾಜ ನಿರ್ಮಾಣಕ್ಕೆ ಆಡಳಿತ ವರ್ಗಕ್ಕೆ ಇಚ್ಛಾಶಕ್ತಿ ಮತ್ತು ಜನತೆಯ ಸಹಯೋಗ ಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.


ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 14ನೇ ದಿನ 'ಭದ್ರಂ ಕರ್ಣೇ' ವಿಷಯದ ಬಗ್ಗೆ ಶ್ರೀಸಂದೇಶ ನೀಡಿ, ಭಗವಂತನ ಸೇವೆಗಾಗಿ ಈ ಬದುಕು ಎಂಬ ಭಾವನೆ ಎಲ್ಲರಲ್ಲಿ ಬೆಳೆದಾಗ ಲೋಕಕ್ಕೆ ಮಂಗಳವಾಗುತ್ತದೆ. ನಮ್ಮ ಮನೆ, ನಮ್ಮ ಸಮುದಾಯ, ನಮ್ಮ ಸಮಾಜ, ವಿಸ್ತøತವಾಗಿ ಇಡೀ ದೇಶಕ್ಕೆ ಕಲ್ಯಾಣವಾಗುವ ದೃಢಸಂಕಲ್ಪದೊಂದಿಗೆ ಸೇವೆ ಮಾಡಿದಾಗ ಮಾತ್ರ ಲೋಕಕಲ್ಯಾಣ ಸಾಧ್ಯ ಎಂದು ಪ್ರತಿಪಾದಿಸಿದರು.


ಸಂಸ್ಕøತದಲ್ಲಿ ಭದ್ರ ಎಂದರೆ ಶುಭ, ಮಂಗಲ, ಕಲ್ಯಾಣ ಎಂಬ ಅರ್ಥ. ಕಿವಿಗೆ ಮಂಗಲಕರ ಶಬ್ದಗಳು ಬೀಳಲಿ, ಕಣ್ಣುಗಳಿಗೆ ಒಳ್ಳೆಯ ದೃಶ್ಯಗಳು ಕಾಣಿಸಲಿ, ನಾಲಿಗೆಯಲ್ಲಿ ಸ್ತುತಿಗಳು ಬರಲಿ, ನಮ್ಮ ಶರೀರ ಸದೃಢವಾಗಿದ್ದು, ಯಜ್ಞಕಾರ್ಯಕ್ಕೆ ನಮಗೆ ಶಕ್ತಿ ನೀಡಲಿ ಎಂಬುದು 'ಭದ್ರಂ ಕರ್ಣೇ..' ಮಂತ್ರದ ಆಶಯ. ಸ್ಥಿರ ದೇಹ- ಸ್ಥಿರ ಮನಸ್ಸು ಇದ್ದು, ಲೋಕಕ್ಕೆ ಒಳಿತಾಗುವ ಕಾರ್ಯ ಮಾಡಲು ಶಕ್ತಿ ನೀಡಬೇಕು ಎಂಬ ಪ್ರಾರ್ಥನೆ ಎಂದು ವಿಶ್ಲೇಷಿಸಿದರು.


ರಾಮಾಯಣದಲ್ಲಿ ಅಯೋಧ್ಯೆಯನ್ನು ಬಣ್ಣಿಸಿರುವ ಕವಿ ವಾಲ್ಮೀಕಿ, ಅಯೋಧ್ಯೆಯನ್ನು ಭೂಲೋಕದ ಸ್ವರ್ಗ ಎಂದು ವರ್ಣಿಸಿದ್ದಾನೆ. ಎಲ್ಲೆಡೆ ಮಂಗಳಕರ ವಾತಾವರಣ, ಮಧುರ ಕೂಜನ, ಹೂಹಾಸಿದ ಹಾದಿ, ಸುಗಂಧ ಮಂಗಳಜಲದ ಘಮ, ವನಸ್ಪತಿಗಳ ಮೂಲಕ ಹಾದುಬರುವ ಆರೋಗ್ಯಕರ ತಂಗಾಳಿ, ಎಲ್ಲೆಡೆ ವೈವಿಧ್ಯಮಯ ಶಿಲ್ಪವೈಭವ, ಮಧುರ ಸಂಗೀತ, ಕಬ್ಬಿನ ಹಾಲನ್ನು ಹೋಲುವ ಮಧುರವಾದ ಜಲ, ಎಲ್ಲೆಡೆ ರಾಮನ ಸ್ತುತಿ ಕೇಳಿಬರುತ್ತಿರುವ ವರ್ಣನೆ ರಾಮಾಯಣದಲ್ಲಿದೆ. ನಾವು ಕೂಡಾ ಇಂಥ ಆದರ್ಶ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.


ದೇವಭಾವ ನಮ್ಮಲ್ಲಿ ಬಂದಾಗ ದೇವರಿಗೆ ನಾವು ಮಾಡುವ ಪೂಜೆ ಸಲ್ಲುತ್ತದೆ. ಈ ಪವಿತ್ರತೆ, ಅರ್ಹತೆಯನ್ನು ಪ್ರಾರ್ಥಿಸುವ ಮಂತ್ರ ಇದು. ನಮ್ಮ ಜೀವನವೇ ಒಂದು ಯಜ್ಞ. ದೇವತೋದ್ದೇಶದ ಪ್ರತಿ ತ್ಯಾಗವೂ ಯಜ್ಞವಾಗುತ್ತದೆ. ದೇವಹಿತದ ಆಯಸ್ಸನ್ನು ನಮಗೆ ಕೊಡಿ ಎನ್ನುವುದು ಇದರ ಅರ್ಥ ಎಲ್ಲರಿಗೂ ಒಳಿತಾದರೆ ಸಹಜವಾಗಿಯೇ ದೇಶ ಮಂಗಳಮಯವಾಗುತ್ತದೆ ಎಂದರು.


ಆದರೆ ಇಂದು ಎಲ್ಲವೂ ಕಲುಷಿತ. ನಾವು ಉಸಿರಾಡುವ ಗಾಳಿ, ಸೇವಿಸುವ ನೀರು ಎಲ್ಲವೂ ವಿಷಮಯ. ಎಲ್ಲೆಡೆ ಒಳಿತಿನ ಬದಲು ಕೆಡುಕನ್ನೇ ಕಾಣುತ್ತಿದ್ದೇವೆ. ಅಮಂಗಲ, ಅಶುಭ, ಕಲ್ಮಶ, ಕೊಳಕು ನೀಡದ ಅಂತರ್ಯ ಮತ್ತು ಬಾಹ್ಯ ಶುದ್ಧಿಯ ಭಾವ ಎಲ್ಲರಲ್ಲೂ ಒಡಮೂಡುವಂತಾಗಬೇಕು. ಈ ಕಾರ್ಯ ಅಶೋಕೆಯ ಪುಣ್ಯ ಪರಿಸರದ ನಮ್ಮ ಗುರುಕುಲಗಳಿಂದಲೇ ಆರಂಭವಾಗಲಿ ಎಂದು ಸ್ವಾಮೀಜಿ ಆಶಿಸಿದರು.


ಹವ್ಯಕ ಮಹಾಮಂಡಲದ ಮಾಜಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ವಿವಿವಿ ಆಡಳಿತಾಧಿಕಾರಿ ಟಿ.ಜಿ.ಪ್ರಸನ್ನ ಕುಮಾರ್, ವಿವಿವಿ ಶೈಕ್ಷಣಿಕ ಸಂಯೋಜಕಿ ಅಶ್ವಿನಿ ಉಡುಚೆ, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top