ವರ್ಣಾಶ್ರಮ: ಒಂದು ವಿಶ್ಲೇಷಣೆ

Upayuktha
0

ತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಂದು ಚಿತ್ರದಲ್ಲಿ ....ಪುಟ್ಟ ಗಿಡದಲ್ಲಿ ಹೂವು,ಮುಳ್ಳು, ಎಲೆ, ಬೀಜ  ಮತ್ತು ಮುಖ್ಯವಾಗಿ ಬೇರು ಮತ್ತು ಅವುಗಳನ್ನು ವರ್ಣಾಶ್ರಮದ ನಾಲ್ಕು ವಿಧಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವಿಭಾಗಿಸಲಾಗಿತ್ತು. ನೋಡಲು ಸರಳ ಎಂದೆನಿಸಿದರು ಆಳವಾದ, ಉತ್ತಮ ಒಳನೋಟವನ್ನು ಹೊಂದಿದ ಆ ಚಿತ್ರದ ಕುರಿತಾದ ವಿವರಣೆ ಇಲ್ಲಿ ನೀಡುತ್ತಿದ್ದೇನೆ.


ವರ್ಣಾಶ್ರಮಗಳು ಮನುಷ್ಯ ಮಾಡುವ ಕರ್ಮ/ಕೆಲಸಗಳ ಮೇಲೆ ನಿರ್ಧರಿತವಾಗಿದೆಯೇ ಹೊರತು ಆತನ ಜಾತಿಯಿಂದಲ್ಲ  ಬ್ರಾಹ್ಮಣನಾದ ಜಮದಗ್ನಿ ಮಹರ್ಷಿಯ ಪುತ್ರ ಪರಶುರಾಮ ಕ್ಷತ್ರಿಯನಾಗಿಯೂ, ಕ್ಷತ್ರಿಯನಾಗಿದ್ದ ಕೌಶಿಕ ಮಹಾರಾಜ ಮುಂದೆ ವಿಶ್ವಾಮಿತ್ರನಾಗಿಯು ತಂತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರು. ಕುಂತಿಯ ಪುತ್ರ ಸೂತನ ಕೈಯಲ್ಲಿ ಸಿಕ್ಕು ಸೂತಪುತ್ರನಾದನೆ ಹೊರತು ಆತನ ಜಾತಿಯಿಂದಲ್ಲ.


ಪುರುಷ ಸೂಕ್ತದಲ್ಲಿಯೂ ಕೂಡ ಜಾತಿಯನ್ನು ಕುರಿತು ಹೀಗೆ ಹೇಳುತ್ತಾರೆ... ಬುದ್ಧಿಮತ್ತೆ ಮತ್ತು ವಿವೇಕಗಳನ್ನು ಹೊಂದಿದವನು ಬ್ರಾಹ್ಮಣನು, ತನ್ನ,ತನ್ನ ಕುಟುಂಬದ ಮತ್ತು ತನ್ನ ಸುತ್ತಲಿನ ಜನರನ್ನು ರಕ್ಷಿಸುವವನು ಕ್ಷತ್ರಿಯನು, ವ್ಯಾಪಾರ, ವ್ಯವಹಾರ ಮಾಡುವವನು ವೈಶ್ಯನಾಗಿಯೂ ಇನ್ನಿತರ ಸೇವಾ ಕಾರ್ಯಗಳನ್ನು ಮಾಡುವವನು ಶೂದ್ರನು ಆದರು. ವರ್ಣಾಶ್ರಮದ ವಿಂಗಡಣೆಯಲ್ಲಿ ಮೇಲು-ಕೀಳು ಎಂಬ ಯಾವುದೇ ರೀತಿಯ ಭೇದ ಭಾವ ಇರಲಿಲ್ಲ. ಅವರವರ ವೃತ್ತಿ ಆಧರಿತ ವರ್ಣಾಶ್ರಮದ ಪದ್ಧತಿ ಜಾರಿಯಲ್ಲಿತ್ತು.


ಗಿಡದ ಎಲ್ಲ ಭಾಗಗಳು ಸರಿಯಾದ ರೀತಿಯಲ್ಲಿ ಮತ್ತು ಸಮಾನವಾಗಿ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸಿದರೆ ಗಿಡವು ಆರೋಗ್ಯಕರವಾಗಿ ನಳನಳಿಸುತ್ತದೆ. ಹೊಂದಾಣಿಕೆ ಮತ್ತು ಅನುಸರಿಸಿಕೊಂಡು ಹೋಗುವ ಸಸ್ಯದ ವಿವಿಧ ಭಾಗಗಳ ಕಾರ್ಯನಿರ್ವಹಣೆಯು ಸಸ್ಯದ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ. ಅಂತೆಯೇ ಸಮಾಜ ಎಂಬ ಹೂವು ಪ್ರಫುಲ್ಲಿತವಾಗಿ ನಳನಳಿಸುತ್ತಾ, ತನ್ನ ಸುಗಂಧವನ್ನು ಪಸರಿಸುತ್ತಾ ಇರಲು ಎಲ್ಲ ವರ್ಣಗಳ ಜನರು ಹೊಂದಾಣಿಕೆಯಿಂದ ತಮ್ಮ ತಮ್ಮ ಕಾರ್ಯ ನಿರ್ವಹಿಸಬೇಕು.


ಬ್ರಾಹ್ಮಣ ವರ್ಗ ಎಂಬ ಬೀಜವು ಉತ್ತಮ ಫಲಿತ ಶಕ್ತಿಯನ್ನು, ಜ್ಞಾನವನ್ನು ಮುಂದಿನ ಪೀಳಿಗೆಗೆ ನೀಡುವ ಬದ್ಧತೆಯನ್ನು ಕೊಡುತ್ತದೆ. ಕಲಿಯುವ ಆಸಕ್ತಿಯುಳ್ಳವರು ಮತ್ತು ಸಮಾಜಮುಖಿಯಾಗಿ, ಸಮಾಜದ ಅಗತ್ಯತೆಗಳಿಗೆ ಸ್ಪಂದಿಸುವ ಗುಣ ಹೊಂದಿರುವ ಎಲ್ಲರೂ ಬ್ರಾಹ್ಮಣ ವರ್ಗಕ್ಕೆ ಸೇರಿದವರು ಹೊರತು ಜಾತಿಯಿಂದಲ್ಲ.


ಯಾವ ರೀತಿ ಗಿಡದಲ್ಲಿರುವ ಮುಳ್ಳು ಗಿಡವನ್ನು ಅಪಾಯಗಳಿಂದ ರಕ್ಷಿಸುತ್ತದೆಯೋ ಅಂತೆಯೇ ಕ್ಷತ್ರಿಯ ಎಂಬ ಮುಳ್ಳು ಸಮಾಜದಲ್ಲಿನ ಜನರನ್ನು ಅಪಾಯಕಾರಿ ತೊಂದರೆಗಳಿಂದ ರಕ್ಷಿಸುವ ದೈಹಿಕ ದಾರ್ಢ್ಯ ಮತ್ತು ಮಾನಸಿಕ ಬಲಿಷ್ಠತೆಯನ್ನು ಹೊಂದಿರುತ್ತಾನೆ. ತನ್ನ ಸುತ್ತಲಿನ ಜನರ ರಕ್ಷಣೆಯೇ ಆತನ ಮೊದಲ ಆದ್ಯತೆಯಾಗಿರುತ್ತದೆ. ಸಂಕಷ್ಟ ಸಮಯದಲ್ಲಿ ತನ್ನವರನ್ನು ಕಾಯುವ ಮತ್ತು ಸಮೃದ್ಧಿಯ ಸಮಯದಲ್ಲಿ ರಾಷ್ಟ್ರದ ಇನ್ನಿತರ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಕ್ಷತ್ರಿಯ ಸಮಾಜದ ಬಹುಮುಖ್ಯ ಅಂಗವಾಗಿ ಪರಿಣಮಿಸುತ್ತಾನೆ.


ಸಸ್ಯದಲ್ಲಿರುವ ಎಲೆಗಳು ಸಸ್ಯದ ಬೆಳವಣಿಗೆಗೆ ಪೋಷಕವಾಗುವ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುತ್ತವೆ. ಅಂತೆಯೇ ವೈಶ್ಯ ಎಂಬ ವ್ಯಕ್ತಿಯು ಸಮಾಜದ ದೈಹಿಕ ಶಕ್ತಿಗೆ ಅನುಗುಣವಾಗಿ ಜೀವನ ಸಾಮಗ್ರಿಗಳನ್ನು, ಅವಶ್ಯಕತೆಗಳನ್ನು ಪೂರೈಸುವ ಮತ್ತು ಸದಾ ಕಾಲವು ಕಾರ್ಯನಿರ್ವಹಿಸುವ ಕ್ಷಮತೆಯನ್ನು ಹೊಂದಿದ್ದು ಸಮಾಜದ ಬೆಳವಣಿಗೆಗೆ ತನ್ನ ಆಮೂಲಾಗ್ರ ಕಾಣಿಕೆಯನ್ನು ಸಲ್ಲಿಸುತ್ತಾನೆ. ಸಮಾಜದ ನಿಶ್ಚಿತ ಮತ್ತು ತ್ವರಿತ ಬೆಳವಣಿಗೆ ಮತ್ತು ಸಾಮರ್ಥ್ಯ ನಿಂತಿರುವುದು ವೈಶ್ಯರ ಮೇಲೆ.


ಯಾವ ರೀತಿ ಬೇರುಗಳ ಮೇಲೆಯೇ ಸಸ್ಯದ ನಿಜವಾದ ಬೆಳವಣಿಗೆ ನಿಂತಿರುವುದೋ ಹಾಗೆಯೇ ಸ್ವಸ್ಥ ಮತ್ತು ಸದೃಢ ಸಮಾಜ ಎಂಬ ಹೆಮ್ಮರದ ಮೂಲ ಕಾರಣ ಶೂದ್ರ ಎಂಬ ಬೇರು. ಅಗೋಚರವಾಗುವ ಅವರ ಹಲವಾರು ಸೇವಾ ಕಾರ್ಯಗಳಿಂದ ಸಮಾಜ ನಿಂತಿದೆ. ಮೇಲಿನ 3 ವರ್ಗಗಳಿಗೆ ಸಾರ್ವಕಾಲಿಕವಾಗಿ ಇವರ ಸೇವೆಯ ಅಗತ್ಯತೆ ಬೇಕು.ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಇವರ ಹಾಜರಿ ಇದ್ದೇ ಇರುತ್ತದೆ, ಇರಲೇಬೇಕು ಕೂಡ. ಬೇರಿಲ್ಲದ ಮರವನ್ನು ಹೇಗೆ ನಾವು ಊಹಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ ಶೂದ್ರರಿಲ್ಲದ ಸಮಾಜ ಸಾಧ್ಯವಿಲ್ಲ.


ಪುರುಷಸೂಕ್ತದಲ್ಲಿ


ಬ್ರಾಹ್ಮಣೋಸ್ಯ ಮುಖಮಾಸೀತ್

ಬಾಹೂ ರಾಜನ್ಯಃ ಕೃತಃ

ಊರೂ ತದಸ್ಯ ಯದ್ವೈಶ್ಯಃ

ಪದ್ಭ್ಯಾಮ್ ಶೂದ್ರೋs ಅಜಾಯತ


ಈ ಸಮಾಜದ ಮುಖವಾಗಿ ಬ್ರಾಹ್ಮಣರು ಇದ್ದರೆ ಬಾಹುಗಳು ಕ್ಷತ್ರಿಯರು, ಮುಖ್ಯಸ್ಥಾನವಾದ ಉದರವನ್ನು ವೈಶ್ಯರು ಮತ್ತು ಈ ಎಲ್ಲದರ ಭಾರವನ್ನು ಹೊರುವ ಶಕ್ತಿಯನ್ನು ಕಾಲುಗಳು ಹೊಂದಿದ್ದು ಅವು ಶೂದ್ರರನ್ನು ಸೂಚಿಸುತ್ತದೆ.


ಅಲಂಕಾರೋಕ್ತಿಗಳ ಮೂಲಕ ಚಾತುರ್ವರ್ಣ ಗಳನ್ನು ನಿರೂಪಿಸಿರುವ ಈ ಉಕ್ತಿಯಲ್ಲಿ ಭಕ್ತಿ, ಶ್ರದ್ಧೆ, ಜ್ಞಾನ ವೈರಾಗ್ಯ ಮಾರ್ಗಗಳನ್ನು ಅನುಸರಿಸುವ ಯಾವುದೇ ವ್ಯಕ್ತಿಯು ಬ್ರಾಹ್ಮಣನಾಗುತ್ತಾನೆ ಎಂದು ಹೇಳಿದೆ.


ತನ್ನ ಪ್ರಾಣವನ್ನು ಪಣಕ್ಕಿಟ್ಟು ಮತ್ತೊಬ್ಬರನ್ನು ರಕ್ಷಿಸುವ, ಹೋರಾಡುವ ಕಲೆಯನ್ನು ಕರಗತಗೊಳಿಸಿಕೊಂಡವ, ಎಲ್ಲರನ್ನು ರಕ್ಷಿಸುವ ಭುಜ ಬಲವುಳ್ಳ ವ್ಯಕ್ತಿಯು ಕ್ಷತ್ರಿಯನೆಂದು ಗುರುತಿಸಿಕೊಳ್ಳುತ್ತಾನೆ.


ಉದರ ಇಲ್ಲವೇ ಹೊಟ್ಟೆಯ ಮೂಲಕ ಗುರುತಿಸಲ್ಪಡುವ ಐಶ್ವರ್ಯ ಮತ್ತು ಧನ ಧಾನ್ಯಗಳನ್ನು ಸಂಗ್ರಹಿಸುವ ಮತ್ತು ಅದನ್ನು ರಾಷ್ಟ್ರದ ಅಭಿವೃದ್ಧಿಯ ಸಾಧನೆಗೆ ಬಳಸುವ ಮೂಲಕ ಕಾರ್ಯನಿರ್ವಹಿಸುವವರು ವೈಶ್ಯರೆಂದು ಗುರುತಿಸಿಕೊಳ್ಳುತ್ತಾರೆ.


ಯಾವ ರೀತಿ ಕಾಲುಗಳು ಇಡೀ ದೇಹದ ಸಮಸ್ತ ಭಾರವನ್ನು ಹೊರುತ್ತದೆಯೋ ಹಾಗೆಯೇ ಇಡೀ ಜಗತ್ತಿನ ಎಲ್ಲ ಜನಾಂಗದವರ ಸೇವಾ ಕೈಂಕರ್ಯವನ್ನು ಕೈಗೊಳ್ಳುವ ಜನಾಂಗವು ಶೂದ್ರ ಎಂದು ಕರೆಸಿಕೊಳ್ಳುತ್ತದೆ.


 ಕಟ್ಟರ್ ವಾದಿಗಳು ಅದೆಷ್ಟೇ ನಮ್ಮ ವಣಾ೯ಶ್ರಮ ವ್ಯವಸ್ಥೆಯ ಕುರಿತು ಬಾಯಿ ಬಡೆದುಕೊಂಡರೂ,ಎಷ್ಟೇ ಹಿಂದು ಮುಂದೆ ನೋಡಿದರೂ ವರ್ಣಾಶ್ರಮದ ತಾತ್ಪರ್ಯ ಇಷ್ಟೇ. ಬೆಳ್ಳಗಿರುವ ಹಾಲನ್ನು ಸುಣ್ಣದ ತಿಳಿ ನೀರು ಎಂದು ತಿಳಿದುಕೊಂಡರೆ ಏನು ಮಾಡಲು ಸಾಧ್ಯ. ಕಾರಣ ಅರಿತು ಮಾತನಾಡಬೇಕು. ಅರಿಯದೆ ನಮ್ಮದೇ ಆದ ಅರ್ಥಗಳನ್ನು ಕಲ್ಪಿಸಿಕೊಳ್ಳುತ್ತಾ ಹೋದರೆ ತಲೆಗೊಂದು ಅರ್ಥವನ್ನು ಕಾಣಬೇಕಾಗುತ್ತದೆ. ಯಾವ ಒಂದು ಅಂಗವಿಲ್ಲದಿದ್ದರೂ ದೇಹ ಊನವೆನ್ನಿಸುತ್ತದೆಯೋ ಹಾಗೆಯೇ ಸಮಾಜದ ಈ ವರ್ಣಾಶ್ರಮದ ವ್ಯವಸ್ಥೆಯಲ್ಲಿನ ಪ್ರತಿಯೊಬ್ಬರು ತಮ್ಮದೇ ಆದ ಕಾಣಿಕೆಯನ್ನು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಸಲ್ಲಿಸುತ್ತಾರೆ. ವ್ಯವಸ್ಥೆಯನ್ನು ಗೌರವಿಸುವ ಮೂಲಕ ಪ್ರೋತ್ಸಾಹಿಸೋಣ. ಜಾತಿ ಆಧಾರಿತ ಭಾರತವನ್ನು(ಜಾತಿ ಗಣತಿಯು ಬಲುಮುಖ್ಯ. ಹಿಂದುಳಿದವರನ್ನು ಗುರುತಿಸಿ ಅವರನ್ನು ಮುಂದೆ ತರಲು ಜಾತ್ಯಾಧಾರಿತ ಗಣತಿ ಯಶಸ್ವಿಯಾಗಿದೆ) ಜಾತ್ಯತೀತ, ಪ್ರಜಾಸತ್ತಾತ್ಮಕ ರಾಷ್ಟ್ರವನ್ನಾಗಿಸುವಲ್ಲಿ ಅಹರ್ನಿಶಿ ದುಡಿಯೋಣ.

-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top