ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ‘ಮಾಧ್ಯಮ ಪರ್ವ’
ಉಜಿರೆ: ಸಮಗ್ರ ಓದಿನ ಆಧಾರದಲ್ಲಿ ಸಮೂಹ ಮಾಧ್ಯಮಗಳ ವೃತ್ತಿಪರತೆಗೆ ಬೇಕಾಗುವ ಸಂವಹನ ಕೌಶಲ್ಯಗಳ ಸೃಜನಶೀಲ ವಿಸ್ತರಣೆ ಸಾಧ್ಯವಾಗುತ್ತದೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ ಹೆಗ್ಡೆ ಬಿ.ಎ ಅಭಿಪ್ರಾಯಪಟ್ಟರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಶುಕ್ರವಾರ ಆಯೋಜಿಸಿದ ಒಂದು ದಿನದ ಅಂತರ್‍ವಿಭಾಗೀಯ ಸ್ಪರ್ಧಾತ್ಮಕ ಉತ್ಸವ ‘ಮಾಧ್ಯಮ ಪರ್ವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮೂಹ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಬೇಕಾದರೆ ಸಂವಹನ ಕೌಶಲ್ಯವಿರಲೇಬೇಕು. ಈ ಕೌಶಲ್ಯಕ್ಕೆ ಸಮಗ್ರ ಓದಿನ ಆಧಾರವೂ ಇರಬೇಕಾಗುತ್ತದೆ. ಸಮಗ್ರ ಓದಿನಿಂದ ವಿವಿಧ ವಿಷಯಗಳ ಆಳವಾದ ಜ್ಞಾನ ಪ್ರಾಪ್ತವಾಗುತ್ತದೆ. ಇಂಥ ಓದಿನ ಸಾಮಥ್ರ್ಯ ಸಂವಹನ ಕೌಶಲ್ಯದ ಕಾಂತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು ಆ ಕ್ಷಣದ ಅಗತ್ಯಕ್ಕೆ ಅನುಗುಣವಾಗಿ ವಿವರಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆಯಬೇಕಾಗುತ್ತದೆ. ಇಂಥ ಸಂದರ್ಭದಲ್ಲೆಲ್ಲಾ ಸಂವಹನ ಕೌಶಲ್ಯದ ಜೊತೆಗೆ ಸಮಗ್ರ ಓದಿನ ಸಾಮಥ್ರ್ಯವೂ ನೆರವಿಗೆ ಬರುತ್ತದೆ. ಸಮೂಹ ಮಾಧ್ಯಮ ವಿದ್ಯಾರ್ಥಿಗಳು ಇಂಥ ಸಾಮಥ್ರ್ಯವನ್ನು ರೂಢಿಸಿಕೊಂಡು ಆಳವಾದ ಜ್ಞಾನ ಪಡೆಯಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ಮಾತನಾಡಿದರು. ಸಮೂಹ ಮಾಧ್ಯಮಗಳ ವೃತ್ತಿಪರತೆ ಹೆಚ್ಚಿಸುವಂಥ ಸ್ಪರ್ಧಾತ್ಮಕ ಮನೋಧರ್ಮ ಮತ್ತು ಅದಕ್ಕನುಗುಣವಾದ ಸಾಮಥ್ರ್ಯವನ್ನು ‘ಮಾಧ್ಯಮ ಪರ್ವ’ದಂಥ ಸ್ಪರ್ಧೋತ್ಸವಗಳು ವಿದ್ಯಾರ್ಥಿಗಳಲ್ಲಿ ರೂಢಿಸುತ್ತವೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಂತರದ ಮಹತ್ವದ ಸ್ಥಾನವನ್ನು ಪಡೆದಿರುವ ಮಾಧ್ಯಮದ ವೃತ್ತಿಪರತೆಯ ಘನತೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಗುಣಗಳನ್ನು ಕಂಡುಕೊಳ್ಳುವುದರ ಕಡೆಗೆ ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚು ಆದ್ಯತೆ ನೀಡಬೇಕು ಎಂದರು.
ಸಮೂಹ ಮಾಧ್ಯಮಗಳು ಜನರಲ್ಲಿ ವಿವೇಚನೆಯನ್ನು ನೆಲೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಂಥ ಮಾಧ್ಯಮರಂಗವನ್ನು ಪ್ರವೇಶಿಸಲಿಚ್ಛಿಸುವ ವಿದ್ಯಾರ್ಥಿಗಳು ವ್ಯಾಸಂಗನಿರತರಾಗಿದ್ದಾಲೇ ವಿವೇಚನೆ ಹೊಳೆಸಬಲ್ಲ ಸಂವಹನದ ಮಾದರಿಗಳನ್ನು ಅರಿತುಕೊಂಡಾಗ ಮಾತ್ರ ಸ್ಪರ್ಧಾತ್ಮಕ ಸವಾಲನ್ನು ಸುಲಭವಾಗಿ ಎದುರಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ಮಾತನಾಡಿ ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಅಧ್ಯಯನನಿರತರಾದ ವಿದ್ಯಾರ್ಥಿಗಳ ಪ್ರತಿಭಾನ್ವಿತ ಸಂವಹನ ಕೌಶಲ್ಯಗಳ ಅನಾವರಣಕ್ಕೆ ಅವಕಾಶವೀಯುವ ಉದ್ದೇಶದೊಂದಿಗೆ ‘ಮಾಧ್ಯಮ ಪರ್ವ’ ಆಯೋಜಿತವಾಗಿದೆ ಎಂದು ತಿಳಿಸಿದರು. ‘ಮಾಧ್ಯಮ ಪರ್ವ’ದ ಪ್ರಾಧ್ಯಾಪಕ ಸಂಯೋಜಕರಾದ ಡಾ.ಹಂಪೇಶ್ ಕೆ.ಎಸ್, ಗೀತಾ ಎ.ಜೆ, ವಿದ್ಯಾರ್ಥಿ ಸಂಯೋಜಕರಾದ ಅರ್ಪಿತ್ ಇಚ್ಛೆ, ಭಾರತಿ ಹೆಗಡೆ ಉಪಸ್ಥಿತರಿದ್ದರು.
ಬಿ.ಎಸ್.ಸಿಂಧೂರ, ಪೂರ್ಣಶ್ರೀ ಪ್ರಾರ್ಥಿಸಿದರು. ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಸಿಂಧು ಹೆಗಡೆ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ