ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ & ರೇಂಜರ್ಸ್ ಸಂಬಂಧಿತ ‘ವಸ್ತು ಪ್ರದರ್ಶನ’ ಹಾಗೂ ‘ಅಂತರ್ ತರಗತಿ ಸ್ಪರ್ಧೆ’ PRAMUKA'23
ಉಜಿರೆ: ಮಾನವತೆಯ ಸೇವೆ ಮಾಡುವುದು ಮಾನವ ಬದುಕಿನ ಅತ್ಯುತ್ತಮ ಕಾರ್ಯವಾಗಿದ್ದು, ಅದನ್ನು ಧ್ಯೇಯವಾಗಿರಿಸಿಕೊಂಡಿರುವ ಸ್ಕೌಟ್ಸ್ ಗೈಡ್ಸ್ ನ ಕಾರ್ಯ ಸ್ತುತ್ಯರ್ಹ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ. ಅಭಿಪ್ರಾಯಪಟ್ಟರು.
ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ & ರೇಂಜರ್ಸ್ (ಸ್ಕೌಟ್ಸ್ & ಗೈಡ್ಸ್ ಹಿರಿಯ ವಿಭಾಗ) ಘಟಕವು ನಿನ್ನೆ (ಜೂ.9) ಆಯೋಜಿಸಿದ್ದ ಒಂದು ದಿನದ ‘ರೋವರ್ಸ್ & ರೇಂಜರ್ಸ್ ಸಂಬಂಧಿತ ವಸ್ತುಪ್ರದರ್ಶನ’ ಹಾಗೂ ‘ಅಂತರ್ ತರಗತಿ ಸ್ಪರ್ಧೆ’ಗಳ ಉದ್ಘಾಟನ ಸಮಾರಂಭ ‘ಪ್ರಮುಕ 23’ ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯರಿಗೆ ಸಹಾಯ ಮಾಡಿದವರನ್ನು ಇತಿಹಾಸ ಸ್ಮರಿಸುತ್ತದೆ. ಗಾಂಧೀಜಿ, ವಿವೇಕಾನಂದರಂತಹ ಮಹಾತ್ಮರ ತ್ಯಾಗ, ಸಮರ್ಪಣೆ, ಸಂಯಮ, ಸರಳತೆ ಹಾಗೂ ಅವರು ಮಾನವತೆಗೆ ಮಾಡಿದ ಕಾರ್ಯಗಳನ್ನು ಚರಿತ್ರೆ ಸ್ಮರಿಸುತ್ತದೆ. ಮಾನವತೆಗೆ ಸಹಾಯ ಮಾಡುವುದು ಶ್ರೇಷ್ಠ ಕಾರ್ಯವಾಗಿದ್ದು, ಅದನ್ನು ಸ್ಕೌಟಿಂಗ್ ಮಾಡುತ್ತಿದೆ ಎಂದು ಅವರು ಹೇಳಿದರು.
“ರಾಷ್ಟ್ರ ನಿರ್ಮಾಣ ಎಂದರೆ ಚಾರಿತ್ರ್ಯವುಳ್ಳ ವ್ಯಕ್ತಿಗಳನ್ನು ರೂಪಿಸುವುದು. ವಿದ್ಯೆಯ ಕರ್ತವ್ಯ ಇದು. ನಮ್ಮ ಕಾಲೇಜಿನ ವಿದ್ಯಾರ್ಥಿಗಳು, ರೋವರ್ಸ್ ಹಾಗೂ ರೇಂಜರ್ ಗಳು ಲಭ್ಯ ಅವಕಾಶಗಳನ್ನು ಬಳಸಿಕೊಂಡು, ವ್ಯಷ್ಟಿಯಿಂದ ಸಮಷ್ಟಿಯೆಂಬಂತೆ ಮನಸ್ಸು ಕಟ್ಟುವ, ವ್ಯಕ್ತಿತ್ವ ನಿರ್ಮಿಸುವ ಹಾಗೂ ಆ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ & ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತ (ಎಎಸ್ಒಸಿ) ಭರತ್ ರಾಜ್ ಕೆ. ಅವರು, “3 ವರ್ಷದ ಮಗುವಿನಿಂದ ಹಿಡಿದು ಯುವಕರವರೆಗೆ ಸ್ಕೌಟ್ಸ್ & ಗೈಡ್ಸ್ ಸಂಸ್ಥೆ ವ್ಯಕ್ತಿತ್ವಗಳನ್ನು ಬೆಳೆಸುತ್ತದೆ. ಜಿಲ್ಲೆಯಲ್ಲಿ ಸಂಸ್ಥೆಯು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಎಸ್.ಡಿ.ಎಂ. ಕಾಲೇಜಿನ ಘಟಕವು ಸಂಸ್ಥೆಯ ಚಟುವಟಿಕೆಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ತೊಡಗಿಕೊಳ್ಳುತ್ತಿದೆ” ಎಂದರು.
“ಇಂದು ಆಯೋಜಿಸಿರುವ ಕಾರ್ಯಕ್ರಮವು ರೂಪರೇಷೆ, ವಿನ್ಯಾಸ ಹಾಗೂ ಆಯೋಜನೆಯ ದೃಷ್ಟಿಯಿಂದ ಅತ್ಯಂತ ವಿಶೇಷವಾಗಿದೆ. ರಾಜ್ಯ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲಿಯೇ ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಮಾದರಿ ಕಾರ್ಯಕ್ರಮವಾಗಿದೆ. ಎಲ್ಲ ವಿದ್ಯಾರ್ಥಿಗಳು, ವಿಭಾಗಗಳನ್ನು ತೊಡಗಿಸಿಕೊಂಡು ಮಾಡುವ ಇಂತಹ ಕಾರ್ಯಕ್ರಮಗಳು ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ನಡೆದರೆ ಉತ್ತಮ” ಎಂದು ಅವರು ಶ್ಲಾಘಿಸಿದರು.
ಕಾಲೇಜಿನ ರೋವರ್ಸ್ & ರೇಂಜರ್ಸ್ ಘಟಕದ ರೇಂಜರ್ ಲೀಡರ್ ಆಗಿ ಕರ್ತವ್ಯ ನಿರ್ವಹಿಸಿದ್ದ (ನಿಕಟಪೂರ್ವ) ಕಾಲೇಜಿನ ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿರಿಯ ರೋವರ್ ಹಾಗೂ ರೇಂಜರ್ ಗಳಿಗೆ ಕಾಲೇಜಿನ ವತಿಯಿಂದ ಪ್ರಮಾಣಪತ್ರ ವಿತರಿಸಲಾಯಿತು.
ಸ್ಕೌಟಿಂಗ್ ಕೌಶಲಗಳಿಗೆ ಸಂಬಂಧಿಸಿದಂತೆ ಆಯೋಜಿಸಲಾದ ವಸ್ತುಪ್ರದರ್ಶನ ಉದ್ಘಾಟನೆಗೊಂಡಿತು. ಸ್ಕೌಟಿಂಗ್ ನಲ್ಲಿ ಬಳಸುವ ಫ್ಲ್ಯಾಗ್ ಫಾರ್ಮೇಶನ್, ಸಿಗ್ನಲಿಂಗ್, ಶಿಬಿರ, ವಸ್ತುಗಳ ಎತ್ತರ- ಅಳತೆ ಅಂದಾಜು, ಸಾಹಸಮಯ ಚಟುವಟಿಕೆಗಳು ಇತ್ಯಾದಿಗಳ ಪ್ರತಿಕೃತಿಗಳು, ಮಂಗಳೂರಿನ ಸ್ಕೌಟ್ಸ್& ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದ ಪ್ರತಿಕೃತಿ, ವಿವಿಧ ಬಗೆಯ ಬ್ಯಾಜ್ ಹಾಗೂ ಸ್ಕಾರ್ಫ್, ಗಂಟುಗಳು (ನಾಟ್ಸ್), ಸಮವಸ್ತ್ರಗಳನ್ನು ಪ್ರದರ್ಶಿಸಲಾಗಿತ್ತು.
ಕಾಲೇಜಿನ ವಿದ್ಯಾರ್ಥಿಗಳಿಗೆ 6 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ರೋವರ್ಸ್ & ರೇಂಜರ್ಸ್ ಘಟಕದ ರೋವರ್ ಸ್ಕೌಟ್ ಲೀಡರ್ (RSL) ಪ್ರಸಾದ್ ಕುಮಾರ್ ಪ್ರಸ್ತಾವಿಸಿ, ಸ್ವಾಗತಿಸಿದರು. ರೇಂಜರ್ ಲೀಡರ್ (RL) ಗಾನವಿ ವಂದಿಸಿದರು. ರೇಂಜರ್ ಗಳಾದ ರಕ್ಷಾ ಮತ್ತು ತಂಡದವರು ಪ್ರಾರ್ಥಿಸಿ, ಪುಣ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
(ಪ್ರಮುಕ ಎಂದರೆ: ಸ್ಕೌಟ್ಸ್ & ಗೈಡ್ಸ್ ಚಳವಳಿಯು ವಿಶ್ವ ಮಟ್ಟದ ಚಳವಳಿಯಾಗಿದ್ದು, ಇದು 200ಕ್ಕೂ ಹೆಚ್ಚು ದೇಶಗಳಲ್ಲಿ ಚಾಲ್ತಿಯಲ್ಲಿದೆ. ಇಂಡೋನೇಷ್ಯಾದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರಿದ್ದು, ಅಲ್ಲಿನ ಸ್ಕೌಟ್ ಚಳವಳಿಗೆ ‘ಪ್ರಮುಕ’ ಎಂದು ಕರೆಯಲಾಗುತ್ತದೆ. ಅದರಿಂದ ಸ್ಫೂರ್ತಿ ಪಡೆದು ಈ ಕಾರ್ಯಕ್ರಮಕ್ಕೆ ‘ಪ್ರಮುಕ’ ಎಂದು ಹೆಸರಿಡಲಾಗಿದೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ