ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾವಿಭಾಗದ ವತಿಯಿಂದ ಕಾಲೇಜಿನ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ 'ಯುನಿವರ್ಸಿಟಿ ಪ್ರೀಮಿಯಂ ಲೀಗ್ (ಯುಪಿಎಲ್) -2023' ಕ್ರಿಕೆಟ್ ಪಂದ್ಯಾವಳಿಯ ಐದನೇ ಆವೃತ್ತಿಯಲ್ಲಿ ಬಾಲಕರ ವಿಭಾಗದಲ್ಲಿ ಯುಸಿಎಂ ಸ್ಟ್ರೈಕರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಅಂತಿಮ ಹಣಾಹಣಿಯಲ್ಲಿ ಕಾಲೇಜಿನ ವಾಣಿಜ್ಯವಿಭಾಗ ಪ್ರಾಯೋಜಿಸಿದ್ದ, ಬಸವರಾಜ್ ನಾಯಕತ್ವದ ಯುಸಿಎಂ ಸ್ಟ್ರೈಕರ್ಸ್ ತಂಡ, ಇತಿಹಾಸ ಮತ್ತು ಅರ್ಥಶಾಸ್ತ್ರ ವಿಭಾಗಗಳು ಪ್ರಾಯೋಜಿಸಿದ್ದ ಸುದೀಪ್ ನಾಯಕತ್ವದ ಯುಸಿಎಂ ಇಲವೆನ್ ತಂಡವನ್ನು ಸೋಲಿಸಿ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಪಂದ್ಯಾವಳಿಯಲ್ಲಿ ಯುಸಿಎಂ ವಾರಿಯರ್ಸ್ (ಹಿಂದಿವಿಭಾಗ), ಯುಸಿಎಂ ರಾಯಲ್ಸ್ (ಸಮಾಜಶಾಸ್ತ್ರ ಮತ್ತು ಸಸ್ಯಶಾಸ್ತ್ರ), ಯುಸಿಎಂ ಬ್ರಿಗೇಡಿಯರ್ಸ್ (ಪ್ರಾಣಿಶಾಸ್ತ್ರವಿಭಾಗ), ಯುಸಿಎಂ ಜಾಗ್ವಾರ್ಸ್ (ರಾಜ್ಯಶಾಸ್ತ್ರ ಮತ್ತು ರಸಾಯನಶಾಸ್ತ್ರವಿಭಾಗ)ಗಳು ಭಾಗವಹಿಸಿದ್ದವು.
ಬಾಲಕಿಯರ ವಿಭಾಗದಲ್ಲಿ ವರ್ಷಾ ನಾಯಕತ್ವದ ಯುಸಿಎಂ ಟೈಟಾನ್ಸ್ (ಭೌತಶಾಸ್ತ್ರವಿಭಾಗ) ಪ್ರಶಸ್ತಿಗಳಿಸಿತು. ಯುಸಿಎಂ ರೇಂಜರ್ಸ್ (ಇಂಗ್ಲಿಷ್ ವಿಭಾಗ ಮತ್ತು ಡಾ. ಯತೀಶ್ ಕುಮಾರ್ ಪ್ರಾಯೋಜಕತ್ವ) ರನ್ನರ್ಸ್ ಆಗಿ ಮೂಡಿಬಂದಿತು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲೆ ಡಾ. ಅನಸೂಯರೈ, ಒಗ್ಗಟ್ಟು ಹಾಗೂ ಕ್ರೀಡಾಸ್ಫೂರ್ತಿಯಿಂದ ಆಡಿ, ಸೋಲು ಗೆಲುವನ್ನುಸಮಾನವಾಗಿ ಸ್ವೀಕರಿಸಬೇಕು, ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ದೈಹಿಕ ಶಿಕ್ಷಣವಿಭಾಗದ ಸಹ ನಿರ್ದೇಶಕರಾದ ಅಲ್ತಾಫ್ ಸಾಬ್ ಹಾಗೂ ರಸೂಲ್ ಸಾಬ್, ಎಲ್ಲಾ 8 ತಂಡಗಳ ಮಾಲೀಕರು, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜನ್ ವಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಮನೋಜ್ ಎಸ್. ಎಂ ಮೊದಲಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ