ಸವಿ ನೆನಪು: ಗಣಪತಿಯೂ..ಉಪ್ಪಿನಕಾಯಿಯೂ.!

Upayuktha
0

ಪ್ರಪಂಚವೇ ಹೀಗೆ. ಯಾವ ಯಾವುದೋ ವಿಷಯಕ್ಕೆ ಬರುವ  ಸಂಪರ್ಕಗಳು, ಯಾರು ಯಾರಿಗೋ ಉಂಟಾಗುವ ಸಂಬಂಧಗಳು, ಗುರಿಯೇ ಇಲ್ಲದ ಪಯಣಗಳು, ಕಲ್ಪನೆಗೂ ಸಿಲುಕದ ಘಟನೆಗಳು, ಪ್ರೀತಿಸುವಲಿ ದ್ವೇಷಗಳು, ದ್ವೇಷಿಸುವಲಿ ಅನುಕಂಪಗಳು, ಬದುಕಬೇಕಾದವರ ಅಗಲಿಕೆಯು, ಅಗಲಲಾರದೆ ಬದುಕುವವರು.. ಹೀಗೆ ಅದೆಷ್ಟೋ ಸಂಬಂಧವೇ ಇಲ್ಲದಿದ್ದರೂ ಅದೆಲ್ಲೋ ಅಡಗಿರುವ ನಿಗೂಢ ಗುಟ್ಟುಗಳು. ಈ ಗುಟ್ಟುಗಳು ಬಿಚ್ಚುವಾಗಲೇ ಸತ್ಯವೆಂಬ ಭಾವದ ಅನಾವರಣವು. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಈ ಲೇಖನದ ಶೀರ್ಷಿಕೆಯಂತೆ ನನಗಾದ ಸಂಬಂಧವೇ ಇಲ್ಲದೆ ಏಕಕಾಲದಲ್ಲಾದ ಎರಡು ಅನುಭವಗಳನ್ನು ನಿಮ್ಮ ಮುಂದೆ ಬಿಚ್ಟಿಡುತ್ತೇನೆ. ಆವಾಗಲೇ ಅರ್ಥವಾದೀತು ಗಣಪತಿಗೂ ಉಪ್ಪಿನಕಾಯಿಗೂ ಇರುವ ಸಂಬಂಧ. 


ನನ್ನ ಆತ್ಮಕಥೆ 'ಬದುಕಿ ಬಂದ ಬಾಳು' ಇದರಲ್ಲಿ ಒಂದು ಕಂತಿನಲ್ಲಿ ನನ್ನ ಅಜ್ಜನವರ ವಿಚಾರವನ್ನು  ಪ್ರಸ್ತಾಪಿಸಿದ್ದೆ. ಅವರ ಬಹುಮುಖ ಪ್ರತಿಭೆಗಳಲ್ಲಿ ಒಂದಾದ ಆವೆ ಮಣ್ಣಿನಿಂದ ಗಣಪತಿ ಮಾಡುವ ವಿಧಾನದ ಕುರಿತು ಬರೆದಿದ್ದೆ. ಆದರೆ ಅವರು ಮಾಡಿದಂಥ ಗಣಪತಿಯ ಮೂರ್ತಿ ಇವತ್ತು ಎಲ್ಲೂ ಇರಲಿಕ್ಕಿಲ್ಲವೆಂದು ಅದರ ತಪಾಸಣೆಗೆ ನಾನು ಹೋಗಿಲ್ಲ. ಯಾಕೆಂದರೆ ಚೌತಿ ಪೂಜೆ ಆದ ಮೇಲೆ ಗಣಪತಿಯ ಮೂರ್ತಿಯನ್ನು ನೀರಿಗೆ ಹಾಕುವುದರಿಂದ ಅಜ್ಜನ ಕೌಶಲ್ಯ ಪೂರ್ಣವಾದ ಗಣಪತಿ ವಿಗ್ರಹ ಬರಿದೆ ಕಲ್ಪನೆಯಲ್ಲಿ ಮಾತ್ರವಿತ್ತು. ಅಥವಾ ಆಗಿನ ಕಾಲದಲ್ಲಿ ಕ್ಯಾಮೆರಾದಲ್ಲಿ ತೆಗೆದ ಭಾವಚಿತ್ರಗಳು ಎಲ್ಲಾದರೂ ಇರುವ ಸಾಧ್ಯತೆ ಇತ್ತು. ವೀಡಿಯೊದ ಸಂಸ್ಕೃತಿ ಅಂದು ಇರಲಿಲ್ಲವಾದ್ದರಿಂದ ಅಜ್ಜ ಮಾಡಿದ ಗಣಪತಿ ಮನದೊಗೆ ಮಾತ್ರ ಸ್ಥಾನ ಪಡೆದಿತ್ತು. ಇವತ್ತು ಗಣಪತಿಯ ವಿಗ್ರಹ ಮಾಡುವ ವಿಧಾನಗಳು ಹಲವಾರಿವೆ. ಆದರೆ ಅಂದು ಅಜ್ಜನವರು ಯಾವುದೇ ತರಬೇತಿ ಪಡೆಯದೆ ತನಗೆ ತಾನೇ ಗುರುವಾಗಿ ಆಯಬದ್ಧವಾದಂಥ ಸುಂದರವಾದ ಮೂರ್ತಿಯನ್ನು ತಯಾರು ಮಾಡುತ್ತಿದ್ದರೆಂದರೆ ಖಂಡಿತ ಅದು ಗಣಪತಿಯದ್ದೇ ಅನುಗ್ರಹವೆನ್ನಬೇಕು. ಏನೇ ಇರಲಿ ಅಜ್ಜನ ಆ ಕೌಶಲ್ಯವನ್ನು ಅಂದು ನೋಡಿದವರು ನಾವಾದ್ದರಿಂದ ಧನ್ಯತಾ ಭಾವವೊಂದು ನಮ್ಮ ವಯೋಮಾನದವರಲ್ಲಿದೆ. 


ಅಂತೆಯೇ ನನ್ನ ಪತ್ನಿಯಾದ ಮಹಾಲಕ್ಷ್ಮಿಯು ಅಡುಗೆ ಮಾಡುವಂಥ ವೃತ್ತಿಯನ್ನು ನೆಚ್ಚಿಕೊಂಡವಳು. ಅವಳ ಕೈ ಅಡುಗೆ ಉಂಡವರು ಯಾರಾದರೂ ಅದರ ರುಚಿಯನ್ನು ಮರೆಯಲಾರರು. ಅಹಂಕಾರವಲ್ಲ... ಯಾವುದೇ ಅಡುಗೆ ಇರಲಿ, ಎಷ್ಟೇ ಜನರಿಗಿರಲಿ ಅದು ಮಹಾಲಕ್ಷ್ಮಿಗೆ ಸವಾಲಾಗಿರಲಿಲ್ಲ. ಅದೊಂದು ಕಲೆ ಅವಳಿಗೆ ದೈವದತ್ತವಾಗಿ ಬಂದಿತ್ತೆಂದೇ ಹೇಳಬಹುದು. ಆದರೆ ಎಷ್ಟೇ ಒಳ್ಳೆಯ ಅಡುಗೆ ಮಾಡಿದರೂ ಒಂದು ಹೊತ್ತು ಅಥವಾ ಒಂದು ದಿನ ಉಣ್ಣಬಹುದು. ಮತ್ತೆ ಅದು ಉಳಿದರೂ ಹಳಸುವುದು ಸಹಜ. ಮುಂದೆ ಮಹಾಲಕ್ಷ್ಮಿಯು ಗತಿಸಿದ ಬಳಿಕ ನಮಗೆ ಅವಳ ಅಡುಗೆ ಬರಿದೆ ಕನಸು ಮಾತ್ರ. ಇರಲಿ... ಮಹಾಲಕ್ಷ್ಮಿಯು ಅಡುಗೆಯಷ್ಟೇ ರುಚಿಯಾದ ಉಪ್ಪಿನಕಾಯಿಯನ್ನೂ ಮಾಡುತ್ತಿದ್ದಳು. ಪ್ರತಿ ವರುಷವೂ ನೂರಾರು ಕಿಲೋದಷ್ಟು ಇದರ ವ್ಯಾಪ್ತಿ ಇತ್ತು. (ಇವತ್ತು ಈ ಭರಣಿಗಳೆಲ್ಲ ಕವುಚಿ ಹಾಕಿಟ್ಟಿದ್ದೇವೆ. ಅಷ್ಟು ಪ್ರಮಾಣದಲ್ಲಿ ಮಾಡುವ ಧೈರ್ಯವಾಗಲಿ ಕೌಶಲ್ಯವಾಗಲಿ ನನಗೆ ಇಲ್ಲದ ಕಾರಣ ಅದೆಲ್ಲವೂ ಇನ್ನು ಕನಸು) ಹಾಗೆಯೇ ಆಕೆ ಮಾಡಿಟ್ಟಂಥ ಉಪ್ಪಿನಕಾಯಿ ಮಾತ್ರ ಅವಳ ಕಾಲವಾದ ನಂತರವೂ ಒಂದು ವರ್ಷದಷ್ಟು ಕಾಲ ಹಾಳಾಗದೇ ಇದ್ದು ನಾವು ದಿನವೂ ಸವಿಯುತ್ತಿದ್ದೆವು. ಪ್ರತಿಯೊಂದು ಊಟವೂ ಅವಳ ನೆನಪಿನೊಂದಿಗೇ ಮುಗಿಯುತ್ತಿತ್ತು. ಅದು ಕೂಡ ಮುಗಿಯುತ್ತ ಬಂದಾಗ ದುಃಖವೇ ಆಗುತ್ತಿತ್ತು. ಹಾಗೆಂದು ಅದನ್ನು ಎಷ್ಟು ದಿನವಿಡಬಹುದು? ಒಂದಲ್ಲ ಒಂದು ದಿನ ಮುಗಿಯಲೇ ಬೇಕಲ್ಲವೆ. ಅಂತು ಉಪ್ಪಿನಕಾಯಿಯ ಕೊನೆಯ ಚಮಚದಷ್ಟನ್ನೂ ಮುಗಿಸಿ ಆಯಿತು. ಇನ್ನು ಇದು ಬರಿದೆ ನೆನಪು ಮಾತ್ರವೆಂದು ಅರಿತು ಅದರ ಕೊನೆಯ ಸವಿಯನ್ನು ಸವಿದಾಗ ನಮ್ಮ ಮತ್ತು ಅವಳ ಕೊನೆಯ ಕೊಂಡಿಯೂ ತಪ್ಪಿ ಹೋದದ್ದೂ ಸತ್ಯ, ಭರಣಿಗಳು ನೇಪಥ್ಯಕ್ಕೆ ಸೇರಿದ್ದೂ ಸತ್ಯ. 


ಅಂತೆಯೇ ನಿನ್ನೆಯ ದಿನ ಅಂದರೆ ಜೂನ್ ಹತ್ತನೇ ತಾರೀಕಿನಂದು ಬೆಳಗ್ಗೆ ಮೊಬೈಲ್ ವೀಕ್ಷಣೆ ಮಾಡುತ್ತಿದ್ದೆ. ನಮ್ಮ ಅಜ್ಜನ ಮನೆಯಾದ ಹೈಪಾಜೆ ಹೆಸರಿನಲ್ಲಿ ಒಂದು ವಾಟ್ಸಪ್ ಗ್ರೂಪಿದೆ. ನಾನು ಅದರಲ್ಲಿ ಸದಸ್ಯನಾದ್ದರಿಂದ ಸಹಜವಾಗಿ ನೋಡುತ್ತಿರುತ್ತೇನೆ. ಆದರೆ ನಿನ್ನೆ ಆ ಗ್ರೂಪಿನಲ್ಲಿ ನನ್ನ ತಮ್ಮನಾದ ವೀರೇಶ್ವರನು ಒಂದು ಪೋಸ್ಟ್ ಹಾಕಿದ್ದ. ಅದನ್ನು ನೋಡಿ ನನಗೆ ಅದೆಷ್ಟು ಆನಂದವಾಯಿತೆಂದರೆ ಆ ಕ್ಷಣವೇ ನಾನು ನಲ್ವತ್ತು ವರ್ಷಗಳಷ್ಟು ಹಿಂದೆ ಹೋದೆ. ಅಂದು ನಾನು ಮನದೊಳಗೆ ಬಂಧಿಸಿದ್ದ ಅಜ್ಜನು ಮಾಡಿದ ಗಣಪತಿ ಮೂರ್ತಿಯು ಕಣ್ಣೆದುರಿಗೆ ಪ್ರತ್ಯಕ್ಷವಾಗಿತ್ತು. ಕಾರಣ ಇಷ್ಟೆ. ಅಜ್ಜನ ಶಿಷ್ಯವರ್ಗದಲ್ಲಿ ದುರ್ಗದ ಮಾವಿನಮಲೆ ಎಂಬಲ್ಲಿರುವ ಶ್ರೀಯುತ ಕೃಷ್ಣ ಚಿಪ್ಲೂಣ್ಕರ್ ಕೂಡ ಒಬ್ಬರು. ಇವರ ಮನೆಯಲ್ಲೂ ಚೌತಿ ಪೂಜೆ ಆಗುತ್ತಿತ್ತು. ಆ ಕಾಲದಲ್ಲಿ ನಮ್ಮಜ್ಜ ಸುಂದರವಾದ ಗಣಪತಿಯ ಮೂರ್ತಿಯೊಂದನ್ನು ಕೃಷ್ಣಣ್ಣನವರಿಗೆ ಮಾಡಿ ಕೊಟ್ಟಿದ್ದರು. ಅವರು ಅದನ್ನು ನೀರಿಗೆ ಹಾಕದೆ ಅಜ್ಜನ ನೆನಪಿಗೋಸ್ಕರ ಮನೆಯಲ್ಲೇ ಇಟ್ಟುಕೊಂಡಿದ್ದರು. ಅಲ್ಲಿಗೆ ಆ ವಿಷಯ ಅವರಿಗಷ್ಟೇ ಸೀಮಿತವಾಯಿತು. ಯಾವಾಗ ಈ ವಾಟ್ಸಪ್ ಎಂಬ ಮಾಧ್ಯಮ ಪ್ರಾರಂಭವಾಯಿತೋ ಆಗ ಇಂಥ ಕೆಲವೊಂದು ವಿಷಯಗಳು ಬೆಳಕಿಗೆ ಬರಲಾರಂಭಿಸಿದವು. ಅಂತೆಯೇ ಈ ಗಣಪತಿಯ ಮೂರ್ತಿ ನಲ್ವತ್ತು ವರ್ಷಗಳಿಂದಲೂ ಕೃಷ್ಣಣ್ಣ ಕಾಪಾಡಿಕೊಂಡು ಬಂದಿರುವುದು ನಿಜವಾಗಿಯೂ ಅವರೊಬ್ಬ ಕಲಾಪ್ರೇಮಿ ಎಂಬುದನ್ನು ಸಾಬೀತು ಪಡಿಸಿದೆ. ಏನೇ ಇರಲಿ ಈ ಮೂರ್ತಿಯನ್ನು ನೋಡುವುದು ನಮ್ಮ ಭಾಗ್ಯವೆಂದೇ ಹೇಳಬಹುದು. ಇನ್ನು ಮೂರ್ತಿಯ ಬಗ್ಗೆ ನಾನು ಹೇಳಬೇಕಾಗಿಲ್ಲ. ಸಾಕ್ಷಾತ್ ಗಣಪತಿಯೇ ಎದುರಿಗೆ ಬಂದು ಕೂತಂತೆ ಕಾಣುವುದು ಅದರ ಸೂಕ್ಷ್ಮತೆಗೆ ಸಾಕ್ಷಿಯಾಗಿದೆ. ಮಂದಸ್ಮಿತ, ಎಡಕ್ಕೆ ದಿಂಬಿನ ಮೇಲೆ ಕೈ ಇಡುವಲ್ಲಿ ಶರೀರವನ್ನು ಬಾಗಿಸಿದ ಭಂಗಿ, ಶರೀರಕ್ಕೆ ತಕ್ಕಂಥ ಕೈ ಕಾಲುಗಳು, ಅದಕ್ಕೆ ತಕ್ಕಂಥ ಮುಖ, ಪೂರಕವಾದ ಸೊಂಡಿಲು ಆಹಾ.. ಅಂತು ಸಣ್ಣ ಕೊಂಡಾಟದ ಮಗುವನ್ನು ನೋಡಿದ ಭಾವ. ಅಲ್ಲಿಗೆ ನಮ್ಮಜ್ಜ ಮತ್ತೊಮ್ಮೆ ಅವರ ಕಲೆಯೊಡನೆ ಪ್ರತ್ಯಕ್ಷವಾದದ್ದಂತು ನಿಜ.


ಇನ್ನು ಉಪ್ಪಿನಕಾಯಿಯ ವಿಚಾರಕ್ಕೆ ಬರೋಣ. ನನ್ನ ಮಗಳಾದ ಶಾರ್ವರಿಯ ಮದುವೆ ಆಮಂತ್ರಣಕ್ಕೆಂದು ಮೊನ್ನೆ ಅಂದರೆ ಜೂನ್ ತಿಂಗಳ ಒಂಭತ್ತನೇ ತಾರೀಕು ಪುತ್ತೂರಿಗೆ ಗೋಪಾಲಕೃಷ್ಣ ಭಟ್ ಎನ್ನುವವರಲ್ಲಿ ಹೋಗಿದ್ದೆ. ಇವರು ನನಗೆ ನನ್ನ ಹೆಂಡತಿ ಕಡೆಯಿಂದ ಸಂಬಂಧ. ಮಧ್ಯಾಹ್ನ ಊಟ ಅಲ್ಲೇ ಮಾಡಿದ್ದೆವು. ಊಟ ಎಂದ ಮೇಲೆ ಉಪ್ಪಿನಕಾಯಿಗೊಂದು ವಿಶಿಷ್ಟವಾದ ಸ್ಥಾನವಿರುವುದೂ ಸಹಜ ತಾನೆ. ಅಂತೆಯೇ ಗೋಪಾಲಕೃಷ್ಣ ಭಟ್ರಲ್ಲೂ ಉಪ್ಪಿನಕಾಯಿ ಬಡಿಸಿದ್ದರು. ಅದರಲ್ಲೇನು ವಿಶೇಷವೆನ್ನಬಹುದು. ರುಚಿಯಲ್ಲಿ ವ್ಯತ್ಯಾಸವರಬಹುದೇ ಹೊರತು ಉಪ್ಪಿನಕಾಯಿ ಉಪ್ಪಿನಕಾಯಿಯೇ. ಆದರೆ ನಮಗೆ ಆ ದಿನದ ಉಪ್ಪಿನಕಾಯಿ ಈ ಜನ್ಮವಿರುವವರೆಗೂ ಮರೆಯಲಾಗದ ಒಂದು ಭಾವವನ್ನು ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ. ಮನೆಯ ಯಜಮಾನಿ ಉಪ್ಪಿನಕಾಯಿ ಬಡಿಸುವಾಗ ನನ್ನ ಮಗಳಲ್ಲಿ 'ಇದು ಲಕ್ಷ್ಮಿ ಮಾಡಿದ ಉಪ್ಪಿನಕಾಯಿ. ನಮ್ಮಲ್ಲಿ ಉಪ್ಪಿನಕಾಯಿಯ ಬಳಕೆ ಕಡಿಮೆಯಾದ್ದರಿಂದ ಆವತ್ತು ಲಕ್ಷ್ಮಿ ಕೊಟ್ಪಂಥ ಉಪ್ಪಿನಕಾಯಿಯಲ್ಲಿ ಎರಡು ಭರಣಿ ಇನ್ನೂ ಉಳಕೊಂಡಿದೆ' ಎಂದರು. ನನಗೆ ಒಂದೇ ಸಲಕ್ಕೆ ಆಶ್ಚರ್ಯವೂ ಆಯಿತು ಜತೆಗೆ ನಾನೇನಾದರೂ ಕೇಳಿದ್ದು ತಪ್ಪೇ ಎಂಬ ಸಂಶಯವೂ ಬಂತು. ಮತ್ತೊಮ್ಮೆ ಅವರು ಹೇಳಿದಾಗ ರೋಮಾಂಚನವಾಯಿತು. ಮತ್ತೆ ವಿಚಾರ ಮಾಡುವಾಗ ಸಾಧಾರಣ ಐದು ವರ್ಷಗಳ ಹಿಂದೆ ನಮ್ಮಲ್ಲಿ ಮಾಡಿದ ಕೊನೆಯ ಉಪ್ಪಿನಕಾಯಿಯ ನೆನಪು ಬಂತು. 2018 ರಲ್ಲಿ ಲಕ್ಷ್ಮಿ ಸಾಧಾರಣ ಒಂದು ಕ್ವಿಂಟಾಲಿನಷ್ಟು ಉಪ್ಪಿನಕಾಯಿ ಮಾಡಿದ್ದಳು. ನಾವು ಕ್ಯಾಟರಿಂಗ್ ಮಾಡುವವರಾದ್ದರಿಂದ ಅದೆಲ್ಲವೂ ಮುಗಿಯುತ್ತಿತ್ತು. ಅಂತೆಯೇ ಲಕ್ಷ್ಮಿಗೆ ತಾನು ಮಾಡಿದ ಇಂಥ ವಿಶೇಷವಾದ ವ್ಯಂಜನಗಳನ್ನು ತನ್ನ ನೆಂಟರಿಷ್ಟರಿಗೆ ಕೊಟ್ಟರೆ ಮಾತ್ರ ಅದರ ಸದ್ವಿನಿಯೋಗವೆಂಬ ಭಾವದಿಂದ ಅಂದು ಅಂದರೆ ಐದು ವರ್ಷದ ಹಿಂದೆ ಪುತ್ತೂರು ಗೋಪಾಲಕೃಷ್ಣ ಭಟ್ರಿಗೆ ಕೊಟ್ಟಂಥ ಉಪ್ಪಿನಕಾಯಿಯ ರುಚಿ ನಮಗೆ ಆ ದಿನ ದೊರಕಿದ್ದು ಮಾತ್ರ ಎಂದಿಗೂ ಮರೆಯಲಾಗದ ಅನುಭವವಾಯಿತು. ಅಂತೆಯೇ ಆ ಮನೆಯ ಯಜಮಾನಿ ಶಾರದಕ್ಕ ಒಂದು ಭರಣಿ ಉಪ್ಪಿನಕಾಯಿಯನ್ನು ವಾಪಸು ನಮಗೆ ಕೊಟ್ಟು 'ಇರಲಿ ಇದು ಲಕ್ಷ್ಮಿಯ ನೆನಪಿಗೆ' ಎಂದಾಗ ಇದಕ್ಕಿಂತ ದೊಡ್ಡ ಉಡುಗೊರೆ ನಮಗೆ ಆ ಕ್ಷಣದಲ್ಲಿ ಯಾವುದೂ ಇರಲಿಲ್ಲ.

ಆದ್ದರಿಂದ ಈ ಉಪ್ಪಿನಕಾಯಿ ಬರಿದೆ ರುಚಿ ಮಾತ್ರವಲ್ಲ ಅದು ಲಕ್ಷ್ಮಿಯ ಕಾಯಕದ ಒಂದು ಭಾಗವಾಗಿ, ಅವಳ ಕೆಲಸದ ಶ್ರದ್ಧೆಯ ಫಲವಾಗಿ, ಇನ್ನೆಂದೂ ಅವಳ ಕೈ ರುಚಿ ಸಿಗದೆಂಬ ನಿರಾಸೆಯಲ್ಲಿರುವಾಗ ಉಪ್ಪಿನಕಾಯಿಯ ರೂಪದಲ್ಲಿ ಲಕ್ಷ್ಮಿಯ ಸಾಂಗತ್ಯ ದೊರೆತಂತಾಗಿ ಮೈಯೆಲ್ಲ ರೋಮಾಂಚನ ಮಾತ್ರವಲ್ಲ ಅದೇನೋ ಹೊಸತೊಂದು ಅನುಭವವೂ ನಮಗಾಯಿತು. ಈಗ ನಾವದನ್ನು ಮುಗಿಸಲೂ ಆಗದೆ, ತಿನ್ನಲೂ ಆಗದೆ ಒಂದು ಭಾವನಾತ್ಮಕ ಸಂಬಂಧವಿರುವ ವಸ್ತುವಿನಂತೆ ಜೋಪಾನವಾಗಿ ಫ್ರಿಜ್ನೊಳಗಿಟ್ಟಿದ್ದೇವೆ. ಮತ್ತೊಂದು ವಿಚಾರವೆಂದರೆ ಅಜ್ಜ ಮಾಡಿದ ಗಣಪತಿ ಹೇಗೆ ಇಂದು ನಿನ್ನೆ ಮಾಡದಂತೆ ಇದೆಯೋ ಅದೇರೀತಿ ಲಕ್ಷ್ಮಿ ಮಾಡಿದ ಉಪ್ಪಿನಕಾಯಿ ಕೂಡ ಈ ವರ್ಷವೇ ಮಾಡಿದಷ್ಟು ತಾಜಾತನದಿಂದ ಕೂಡಿರುವುದೂ ಸತ್ಯವೇ. ಇವೆರಡೂ ಅನುಭವಗಳು ನನಗೆ ಒಂದರ ಹಿಂದೆ ಒಂದರಂತೆ ಆಗುವಾಗ ಮನಸ್ಸಿಗೆ ಬಹಳ ಆನಂದವಾಯಿತು. ಇದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆಂಬ ಭಾವದಲಿ ಈ ಲೆಖನದ ಸೃಷ್ಟಿಯಾಯಿತು. ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ...ಎಲ್ಲಿಯದೋ ಈ ಅನುಬಂಧ...

*********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top