ಪೋಪು ಹೋಗೋಣ ಬಾರೋ ರಂಗ

Upayuktha
4 minute read
0

(ಜೂನ್ 3, ಶ್ರೀ ಶ್ರೀಪಾದರಾಜರ ಆರಾಧನೆಯ ಪ್ರಯುಕ್ತ ಈ ಲೇಖನ)




ಹರಿದಾಸ ಸಾಹಿತ್ಯಕ್ಕೆ ಶ್ರೀಕಾರ ಹಾಕಿದ ಶ್ರೀಪಾದರಾಜರು ರಂಗವಿಠಲ ಅಂಕಿತದಲ್ಲಿ ರಚಿಸಿದ ಕೃತಿಗಳು ಅದ್ಭುತ. ಹಾಡುತ, ಪಾಡುತ, ನಲಿದಾಡುತ ರಂಗವಿಠಲನನ್ನೇ "ಪೋಪು ಹೋಗೋಣ ಬಾರೋ ರಂಗ" ಎಂದು ಸಲುಗೆಯಿಂದ ಆಡಲು ಕರೆದವರು ಶ್ರೀ ಶ್ರೀಪಾದರಾಜರು. ರಾಯಚೂರು, ಮಾನವಿ, ಚೀಕಲಪರ್ವಿ, ಈ ಭಾಗವೆಲ್ಲ ಹರಿದಾಸರ ತೊಟ್ಟಿಲು ಎಂದೇ ಪ್ರಸಿದ್ಧವಾಗಿದ್ದರೆ, ಶ್ರೀಪಾದರಾಜರ ಕಾರ್ಯ ಕ್ಷೇತ್ರವಾದ ಮುಳಬಾಗಿಲು ಕ್ಷೇತ್ರ ಹರಿದಾಸರ ತವರೂರಾಗಿದೆ.


ಒಂದೊಂದು ಘಟ್ಟ ದಾಟಿ ಬಂದ ಹರಿದಾಸ ಸಾಹಿತ್ಯ ಇಂದಿಗೂ ಸಹಸ್ರ ಸಹಸ್ರ ಕೀರ್ತನೆಗಳಿಂದ ಮನೆಮನಗಳನ್ನು ಬೆಳಗುತ್ತಿರುವ ಹರಿದಾಸ ಸಾಹಿತ್ಯದ ಜೀವಸೆಲೆಯಾಗಿ, ಹರಿದಾಸ ಸಾಹಿತ್ಯದ ಭದ್ರವಾದ ಮೂಲನೆಲೆ ಹಾಕಿ ಕೊಟ್ಟ ಶ್ರೀಪಾದರಾಜರು ಹರಿದಾಸ ಸಾಹಿತ್ಯದ ತಾಯಿಯಂತೆ.


ಜನಸಾಮಾನ್ಯರ ಮೇಲೆ ಮಮತೆಯನ್ನು ಹರಿಸಿದ ಹರಿದಾಸ ಸಾಹಿತ್ಯದ ಗಂಗೆಯಂತೆ, ಭಗವಂತನನ್ನು ಭಕ್ತಿ ಮಾರ್ಗದ ಮೂಲಕ ಪ್ರಾರ್ಥಿಸಿ, ಅನನ್ಯವಾಗಿ ಗಾನನರ್ತನಗಳಿಂದ ಪೂಜಿಸಿ ಒಲಿಸಿಕೊಳ್ಳುವ ಪರಿಯನ್ನು ಮನೆಮನದಲ್ಲಿ ಬಿತ್ತಿದ ಶ್ರೀಪಾದರಾಜರು ದಾಸಸಾಹಿತ್ಯದ ಪ್ರವರ್ತಕರು.


ಪಂಡಿತರ ಸೊತ್ತಾಗಿದ್ದ, ದೇವಭಾಷೆಯಾದ ಸಂಸ್ಕೃತದಲ್ಲಿರುವ ವೇದ, ಉಪನಿಷತ್ತುಗಳು, ಆಗಮ ನಿಗಮಗಳು, ಭಾಗವತ, ಭಾರತ ಹಾಗೂ ರಾಮಾಯಣ ಪುರಾಣಗಳಲ್ಲಿರುವ ಕಥೆಗಳಲ್ಲಿನ ಸಾರವನ್ನು, ತತ್ವ ಸತ್ವ ಮಹತ್ವಗಳನ್ನು ಅರ್ಥವಾಗುವ ರೀತಿಯಲ್ಲಿ ಸರಳೀಕರಣ ಮಾಡಿ ಕನ್ನಡದಲ್ಲಿ ತಿಳಿಸಿಕೊಟ್ಟ, ದಾಸಸಾಹಿತ್ಯವು ಸಾಮಾನ್ಯ ಜನರಿಗೆ ತಲುಪಿ ಜೀವನಕ್ಕೆ ಮಾರ್ಗದರ್ಶಕವಾಗುವಲ್ಲಿ ಯಶಸ್ವಿಯಾಯಿತು.


ಧ್ಯಾನವು ಕೃತಯುಗದಿ, ಯಜನ ಯಜ್ಞವು ತ್ರೇತಾಯುಗದಿ, ದಾನವಾಂತಕನ ದೇವತಾರ್ಚನೆ ದ್ವಾಪರದಿ, ಕಲಿಯುಗದ ಗಾಯನದಿ ಕೇಶವ ಎಂದೊಡನೆ ಬಂದು ಕೈಗೂಡುವುದು ರಂಗವಿಠಲ ಎಂಬ ಶ್ರೀಪಾದರಾಜರು ಸರಳ ಕನ್ನಡದಲ್ಲಿ ದಾಸಸಾಹಿತ್ಯವನ್ನು ಜನಮಾನಸದ ಹೃದಯದಲ್ಲಿ ಶ್ರೀಕಾರ ಹಾಕಿದರು. ಹರಿದಾಸಸಾಹಿತ್ಯದ ಮೂಲ ಪ್ರೇರಣೆ ಶ್ರೀ ಮಧ್ವಾಚಾರ್ಯರು. ಹರಿದಾಸ ಸಾಹಿತ್ಯ ನಿರ್ಮಾಣಕ್ಕೆ ಕನ್ನಡ ಸಾಹಿತ್ಯದಲ್ಲಿ ಶ್ರೀಮಧ್ವಾಚಾರ್ಯರ ದ್ವಾದಶ ಸ್ತೋತ್ರವೇ ಮೂಲಪ್ರೇರಣೆಯಾಯಿತು.


ಐದು ಶತಮಾನಗಳ ಹಿಂದೆಯೇ, ವೈದಿಕವಿದ್ವನ್ಮಣಿಗಳು ಕನ್ನಡವೆಂದರೆ ಮೈಲಿಗೆಯೆಂದು ಮೂಗುಮುರಿಯುತ್ತಿದ್ದ  ಕಾಲದಲ್ಲಿ, ಪೀಠಾಧಿಪತಿಗಳಾದವರು ಸಂಸ್ಕೃತ ಬಿಟ್ಟು ಬೇರೆ ಭಾಷೆಯನ್ನು ಉಪಯೋಗಿಸುವುದು ಊಹಿಸಲೂ ಸಾಧ್ಯವಿಲ್ಲದ್ದ ಪರಿಸ್ಥಿತಿಯಲ್ಲಿ, ಶ್ರೀಪಾದರಾಜರು ಕನ್ನಡಕ್ಕೆ ಅಗ್ರಪಟ್ಟ ಕಟ್ಟಿ, ಸಿದ್ದಾಂತವನ್ನು, ಸಾಹಿತ್ಯವನ್ನು, ಬದುಕಿನ ಮೌಲ್ಯವನ್ನೂ ಕನ್ನಡದಲ್ಲೇ ಪ್ರಕಟಿಸಿದರು.


ಯುಗಯುಗಗಳಲ್ಲಿ ಆಗುತ್ತಿದ್ದ, ಕಾಲದಿಂದ ಕಾಲಕ್ಕೆ ಆಗುತ್ತಿದ್ದ ಬದಲಾವಣೆಗಳನ್ನು ಅರಿತು, ವೇದ ಉಪನಿಷತ್ತುಗಳು ಎಂದರೆ , ಶಾಸ್ತ್ರ ವೆಂದರೆ ಬೆಚ್ಚಿ ಬೆದರಿ ದೂರ ನಿಂತಿದ್ದ ಪಾಮರರಲ್ಲಿ ಅನುಗ್ರಹ ಮಾಡಿ, ದೊಡ್ಡವರನ್ನು ಮೇಲೆ ತರುವುದು ದೊಡ್ಡದಲ್ಲ, ದಡ್ಡರನ್ನು ಮೇಲೆತ್ತುವುದು ಶ್ರೇಷ್ಠ ಹಾಗೂ ಅತ್ಯಗತ್ಯ ಕಾರ್ಯ ಎಂದು ತಿಳಿದು ಶ್ರೀಪಾದರಾಜರಂತಹ ಮಹಾನುಭಾವರೂ ಸಹ, ಕನ್ನಡ ಭಾಷೆಯಲ್ಲಿ ಬರೆಯುವಂತೆ ಮಾಡಿದ್ದೇ ದಾಸ ಸಾಹಿತ್ಯ .

ಹದಿನೈದನೆಯ ಶತಮಾನದಲ್ಲಿ ಪೂಜಾ ಕೈಂಕಾರ್ಯಗಳಿಗೆ ಸೂಕ್ತವೆನಿಸುವ ದೇವರಬಗೆಗಿನ ಸಣ್ಣ, ಪುಟ್ಟ ಹಾಡುಗಳನ್ನು ಮುತ್ತುತುಂಬಿದ ಕನ್ನಡ ಭಾಷೆಯಲ್ಲಿ ಮೊದಲು ಹಾಡಿದ ವಾಗ್ಗೇಯಕಾರರು ಶ್ರೀಪಾದರಾಜರು. ಸಂಸ್ಕೃತ ಭಾಷೆಯಲ್ಲಿ ಎತ್ತರದಲ್ಲಿದ್ದ ಭಕ್ತಿ ತತ್ವವನ್ನು ಜನಸಾಮಾನ್ಯರ ಹೃದಯಕ್ಕೆ ಸಮೀಪ ತಂದವರು. ಕಾವ್ಯ-ಸಂಗೀತದ ಹಾಲು, ಹಣ್ಣು,  ಜೇನು ಕಲಸಿಕೊಟ್ಟವರು. ಎಲ್ಲಕಿಂತ ಮಿಗಿಲಾಗಿ  ಸ್ವತಂತ್ರವಾಗಿ, ಸ್ವಚ್ಛಂದವಾಗಿ ಹಾಡಲು ಸರ್ವಕಾಲಿಕ ಜೀವನ ದರುಶನವನ್ನು ತೆರೆದಿಟ್ಟ ಯತಿವರ್ಯ ಶ್ರೀ ಶ್ರೀಪಾದರಾಜರು.


ಶ್ರೀಪಾದರಾಜರ ವಿರಹದ ಚಿತ್ರಣ ಅನುಪಮ. 'ಲಕುಮಿಯ ನಲ್ಲ ಬಾರದಿದ್ದರೆ ಹಾರ ಕೊರಳಿಗೆ ಭಾರ' ಎನ್ನುವ ಗೋಪಿಯರ ವಿಹೃಲತೆ ಹಾಗೂ ವಿರಹದ ಭಾವ ಅನನ್ಯ. 'ಇಟ್ಟಾಂಗೆ ಇರುವೆನೋ ಹರಿಯೇ, ಎನ್ನ ದೊರೆಯೇ' ಎನ್ನುವ ಅವರು ನಾವುಗಳು ಬದುಕಿನಲ್ಲಿ ಹೇಗಿರಬೇಕು ಎಂಬುದನ್ನು ಸೂಚಿಸುತ್ತಾರೆ. 'ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ' ಎನ್ನುವ  ಶ್ರೀಪಾದರಾಜರ ಕೀರ್ತನೆ ಅವರಿಗೆ ಶ್ರೀರಂಗದ ರಂಗನಾಥನಲ್ಲಿದ್ದ ವಿಶಿಷ್ಟ ಭಕ್ತಿಯ ಪ್ರಕಟಣೆಯಾಗಿದೆ. 


ಶ್ರೀಪಾದರಾಜರ ಕೀರ್ತನೆಗಳೆಂದರೆ ಅವರ ಅನುಭವದ,  ತತ್ವಜ್ಞಾನದ ಉನ್ನತ ನುಡಿ-ಕಿಡಿಗಳು. ಜನಮನವನ್ನು ಬೆಳಗುವ ದಿವ್ಯ ಜ್ಯೋತಿಗಳು.  ಅವರದು ಲಲಿತ ಶೈಲಿ, ಮಧುರ ವಿಸ್ತಾರ, ಗೀತ ಸ್ವಭಾವ, ಭಕ್ತಿ ಭಾವ, ದಂಡ ಕಮಂಡಲದ ಸನ್ಯಾಸಿಗಳಾಗಿ ಮಾತ್ರವೇ ಉಳಿಯದೆ ದಂಡಕ, ವೃತ್ತನಾಮ, ಉಗಾಭೋಗ, ಸುಳಾದಿ ಕೀರ್ತನೆಗಳಿಂದ ಹರಿದಾಸ ಸಾಹಿತ್ಯದ ದಿವ್ಯ ದೀವಿಗೆಯನ್ನು ಹಚ್ಚಿಟ್ಟ ವೈಷ್ಣವೀಯ ಪ್ರತಿಭಾ ಪಾಂಡಿತ್ಯದ ವೈರಾಗ್ಯ, ಮಹಾ ಸೌಭಾಗ್ಯ ನಿಧಿಗಳು ಶ್ರೀಪಾದರಾಜರು.


ಸ್ವರ್ಣವರ್ಣತೀರ್ಥರೆಂದು ಅನ್ವರ್ಥನಾಮದಿಂದ ವಿಖ್ಯಾತರಾದ ಇವರು ಅವರನ್ನು ತಮ್ಮಲ್ಲಿಗೆ ಬರಮಾಡಿಕೊಳ್ಳುವುದು ಔಚಿತ್ಯಪೂರ್ಣವಾಗಿತ್ತು. ಒಮ್ಮೆ ಶ್ರೀಸ್ವರ್ಣವರ್ಣತೀರ್ಥರು ಶ್ರೀರಂಗಪಟ್ಟಣವನ್ನು ಕುರಿತು ಪ್ರವಾಸಗೊಂಡು ಮಧ್ಯರಂಗಕ್ಷೇತ್ರವಾದ ಶಿವನ ಸಮುದ್ರಕ್ಕೆ ಆಗಮಿಸಿ, ಯತಿಪುಂಗವರಾದ ಶ್ರೀ ಪುರುಷೋತ್ತಮತೀರ್ಥರನ್ನು ಕಾಣುವ ತವಕದಿಂದ ಕಣ್ವ ನದೀತೀರದಲ್ಲಿರುವ ಆಶ್ರಮಕ್ಕೆ ಭೇಟಿ ಇತ್ತರು. ಈ ಸಮಯದಲ್ಲಿ ಅಲ್ಲಿ ಲಕ್ಷ್ಮೀನಾರಾಯಣನೆಂಬ ಬಾಲಕನ ಭೇಟಿ ಭಗವತ್ಸಂಕಲ್ಪವಾಗಿತ್ತು. ಆ ಬಾಲಕನ "ಅತ್ತನೋಡಿ ಇತ್ತನೋಡಿ ಸುತ್ತನೋಡಿ ಗೊತ್ತುಮಾಡಿ’’ ಎಂಬ ಮಾರ್ಮಿಕ ಮಾತಿನಿಂದಲೇ ಬೆರಗಾಗಿ, ಶ್ರೀ ಪುರುಷೋತ್ತಮತೀರ್ಥರೊಡನೆ ಇದ್ದ ಬಾಲಯತಿಗಳನ್ನು ನೋಡಿ ಇವರಂತಯೇ ನಮಗೂ ಒಬ್ಬನನ್ನು ಪಡೆಯುವ ಆಕಾಂಕ್ಷೆಯನ್ನು ತಿಳಿಸಿದರು. ಶ್ರೀ ಪುರುಷೋತ್ತಮತೀರ್ಥರು ಬಾಲಕನ ಮಾತಾ-ಪಿತೃಗಳನ್ನು ಬರಮಾಡಿಕೊಂಡು ಅವರ ಮನವೊಲಿಸಿ ತಾಯಿಗೆ ಸಾಂತ್ವನವನ್ನು ನೀಡಿ, ಬಾಲಕನ ಶ್ರೇಯೋಭಿವೃದ್ದಿಗೆ ತಾವು ಬದ್ಧಕಂಕಣರಾಗಬೇಕೆಂದು ತಿಳಿಸಿ, ಬಾಲಕನನ್ನು ಶ್ರೀ ಸ್ವರ್ಣವರ್ಣತೀರ್ಥರಿಗೆ ಒಪ್ಪಿಸುವಂತೆ ಮಾಡಿದರು.


ಬಾಲಕನನ್ನು  ಶ್ರೀರಂಗಕ್ಕೆ ಕರೆದೊಯ್ದು ಬ್ರಹ್ಮೋಪದೇಶ ಪೂರ್ವಕವಾಗಿ ಯತ್ಯಾಶ್ರಮವನ್ನು ಅನುಗ್ರಹಿಸಿ 1412ರಲ್ಲಿ ಶ್ರೀ ಲಕ್ಷ್ಮೀನಾರಾಯಣ ಮುನಿ ಗಳೆಂದು ನಾಮಕರಣ ಮಾಡಿದರು.

ಅತಿ ಚಿಕ್ಕವಯಸ್ಸಿನಲ್ಲಿಯೇ `ಯೋಗಿ’ ಎಂತಲೂ, `ಮುನಿ’ ಎಂತಲೂ ಪ್ರಶಸ್ತಿಗಳನ್ನು ಸಂಪ್ರತಿಪನ್ನ ವಿದ್ವಚ್ಚಕ್ರ ಚೂಡಾಮಣಿಗಳಿಂದ ಪಡೆದವರು.


ಶ್ರೀವಿಭುದೇಂದ್ರತೀರ್ಥರಲ್ಲಿ ಪ್ರೌಢವ್ಯಾಸಂಗ ಎಂಟು ವರ್ಷಗಳ ಕಾಲ ಮುಗಿಸಿ, ತಮ್ಮ ತವರುಮನೆಯಾದ ಶ್ರೀರಂಗಕ್ಕೆ ಹಿಂತಿರುಗಿ ಶ್ರೀಸ್ವರ್ಣವರ್ಣತೀರ್ಥರಿಗೆ ತಂದೊಪ್ಪಿಸಿದರು.

ಶ್ರೀ ಶ್ರೀಪಾದರಾಜರು ವಾಗ್ವಜ್ರವೆಂಬ ಪರವಾದಿಗಳಿಗೆ ವಜ್ರಾಯುಧ ಸದೃಶವಾದ ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಾರೆ. ಇದು ನಮಗೆ ದೊರೆತಿರುವ ಏಕೈಕ ಗ್ರಂಥವಾಗಿದೆ. ಕನ್ನಡ ಪದ್ಯಸುಳಾದಿಗಳನ್ನು ಭಕ್ತಿ-ಭಾವುಕತೆಯ ಬಗೆ ಬಗೆಯ ಅಭಿವ್ಯಕ್ತಿಗೆ ಹೆಚ್ಚು ಮಹತ್ವವನ್ನು ನೀಡಿ, ದಾಸ ಪಂಥ ಪ್ರವರ್ತಕರೆಂದು ಪ್ರಸಿದ್ಧರಾದರು.


ಕರ್ನಾಟಕ ಸಂಗೀತದ ರಾಗತಾಳಗಳ ಬಳಕೆಯಲ್ಲಿ ಅತ್ಯಂತ ಗೊಂದಲವಿದ್ದ ಕಾಲದಲ್ಲಿ, ಅದಕ್ಕೊಂದು ನಿಶ್ಚಿತ ರೂಪವನ್ನು ನೀಡುವ ಕಾರ್ಯಕ್ಕೆ ಚಾಲನೆ ನೀಡಿದವರು ಶ್ರೀಪಾದರಾಜರು. ಶ್ರೀ ವ್ಯಾಸರಾಜರ ಹಾಗೂ ಪುರಂದರದಾಸರ ಮೂಲಕ ಕರ್ನಾಟಕ ಸಂಗೀತ ಪದ್ಧತಿಗೇ ಒಂದು ವ್ಯವಸ್ಥಿತ ಸ್ವರೂಪವನ್ನು ಅವರು ನೀಡಿದರು. ಅಂತರಂಗದ ಭಕ್ತಿಗೆ ಹಾಡಿನ ಅಭಿವ್ಯಕ್ತಿಯನ್ನು ನೀಡಿ ಲೋಕನೀತಿಯನ್ನು ಮನಗಾಣಿಸಿದರು.


ಶ್ರೀಪಾದರಾಜರು ಕನ್ನಡ ನೆಲದ ಜಾನಪದ ನೆಲೆಯಿಂದ ಗೇಯ ಪ್ರಾಕಾರಗಳನ್ನು ಎತ್ತಿಕೊಂಡು ಕರ್ನಾಟಕ ಸಂಗೀತದಲ್ಲಿ ಕೆಲವು ಸಾರ್ಥಕ ಪ್ರಯೋಗಗಳನ್ನು ನಡೆಸಿದರು. ಈ ಪ್ರಯೋಗಗಳ ನಂತರವೇ ಪುರಂದರ ದಾಸರು ದೇಶಿಯನ್ನು ಮಾರ್ಗಿಯನ್ನಾಗಿ ಬೇರ್ಪಡಿಸಿ ವೃತ್ತನಾಮ, ಸಾಂಗತ್ಯ, ಕಂದ, ತ್ರಿಪದಿ, ತತ್ವಸುವ್ವಾಲಿ, ಸೀಸಪದ್ಯ, ಸುಳಾದಿಗಳಲ್ಲಿ ಹೊಸ ಪ್ರಯೋಗ ನಡೆಸಿದರು.


ಸುಳಾದಿಗಳನ್ನು ಮೊಟ್ಟಮೊದಲ ಬಾರಿಗೆ ಸಾಹಿತ್ಯದಲ್ಲಿ ಪ್ರಯೋಗಿಸಿದ ಸಂಪ್ರದಾಯ ಪ್ರವರ್ತಕರು ಶ್ರೀಪಾದರಾಜರು. ಸುಳಾದಿ ಸಾಮಾನ್ಯವಾಗಿ ತಾಳಮಾಲಿಕೆಯ ಸಂಗೀತರೂಪ. ಕೆಲವೊಮ್ಮೆ ಅದು ರಾಗ ತಾಳ ಮಾಲಿಕೆಯೂ ಸಹ ಆಗಬಹುದು. ಸುಳಾದಿ ಎಂಬುದು `ಸುಳು-ಹಾದಿ’ ಎಂಬ ಮೂಲದಿಂದ ಬಂದಿರುವ ಸಾಧ್ಯತೆಯಿದೆ. ಕೆಲವರು `ಸುಲಭದ ಹಾದಿಯೇ’ ಸುಳಾದಿ ಎಂದು ಹೇಳಿ ಭಾವವನ್ನು ಅಂತರಂಗದ ಒತ್ತಡವನ್ನು ಸುಲಭವಾಗಿ ಅಭಿವ್ಯಕ್ತಿಸುವ ವಿಶಿಷ್ಟ ಮಾರ್ಗಕ್ಕೆ ಸುಳಾದಿ ಎಂದೂ ಕರೆದಿದ್ದಾರೆ. ತಮ್ಮ ಶಿಷ್ಯೋತ್ತಮರಾದ ವ್ಯಾಸರಾಜರಂತಹ ಪ್ರತಿಭಾವಂತರಿಗೆ, ಮೇಧಾವಿಗಳಿಗೆ, ಕುಶಾಗ್ರಮತಿಗಳಿಗೆ, ಏಕಸಂಧಿಗ್ರಾಹಿಗಳಿಗೆ, ಪ್ರಚಂಡಧೀಶಕ್ತಿ ಸಂಪನ್ನರಿಗೆ, ಶ್ರೀಪಾದರಾಜರು ಸಮಸ್ತ ವಿದ್ಯೆಯನ್ನು ಧಾರೆಯೆರೆದರು.


ವ್ಯಾಸರಾಜರು ಶ್ರೀಪಾದರಾಜರನ್ನು ಕುರಿತು ರಚಿಸಿದ ಕೀರ್ತನೆಯಲ್ಲಿ ಅವರು 'ವಾದಿಗಜ ಮಸ್ತಕಾಂಕುಶ ಸುಜನ ಬುದ್ಧಗೇಹ'ರಾಗಿದ್ದರು ಎನ್ನುತ್ತಾ, ವಾದಿಗಳನ್ನು ಗೆದ್ದು  ಬಹುದೂರದವರೆಗೂ ವಿಖ್ಯಾತರಾಗಿದ್ದರು, ಶರಣಜನ ಸುರಧೇನುವಾಗಿದ್ದರು. ಭಕ್ತ ಜನರ,ಹರಿ ಶರಣರ, ಹರಿದಾಸರ ಪೋಷಕರಾಗಿದ್ದರು. 'ಮಹಿಮೆ ಸಾಲದೇ ಇಷ್ಟೇ ಮಹಿಮೆ ಸಾಲದೇ' ಎನ್ನುವ ಕೀರ್ತನೆಯಲ್ಲಿ ಶ್ರೀಪಾದರಾಜರಿಂದ ಘಟಿಸಿದ ಎರಡು ಪವಾಡ ಸದೃಶ್ಯ ಘಟನೆಗಳ ಪ್ರಸ್ತಾಪವಿದೆ. 


"ವಿಪ್ರಗೆ ಬ್ರಹ್ಮತ್ತೆ ದೋಷ ಬರಲು ಕ್ಷಿಪ್ರ ಶಂಖೋದಕದಿ ಕಳೆಯೆ, ಅಪ್ರಬುದ್ಧರು ದೂಷಿಸಿ ಗೇರೆಣ್ಣ ಕಪ್ಪು ವಸನ ಹಸನು ಮಾಡಿದ" ಎಂದು ಹೇಳಿ ಶ್ರೀಪಾದರಾಜರು ಬ್ರಹ್ಮಹತ್ಯಾ ನಿವಾರಿಸಿದರು ಎಂದಿದ್ದಾರೆ. ಮುಂದೆ ಬ್ರಹ್ಮಹತ್ಯಾದೋಷದಿಂದ ನಿಸ್ತೇಜವಾಗಿ ಕೊರಗಿ ಕೃಶನಾಗಿದ್ದ ಚಂದ್ರಗಿರಿಯ ಅರಸ ಸಾಳ್ವನಾರಸಿಂಹನ ಬ್ರಹ್ಮಹತ್ಯಾದೋಷ ನಿವಾರಣೆ ಮಾಡಿ, ಶ್ರೀಪಾದರಾಜರು ಚಂದ್ರಗಿರಿಯ ರಾಜಗುರುಗಳಾಗುತ್ತಾರೆ. ಹಾಗೆಯೇ ಸಾಳ್ವನಾರಸಿಂಹನ ಆಡಳಿತದಲ್ಲಿದ್ದ ತಿರುಪತಿ ದೇವಸ್ಥಾನಕ್ಕೆ ನಿತ್ಯ ಪೂಜಾ ಕೈಂಕರ್ಯದ ಹೊಣೆಗಾರಿಕೆ ವ್ಯಾಸ ರಾಜರಿಗೆ ಬರುವುದಕ್ಕೆ ಕಾರಣರಾಗುತ್ತಾರೆ.


ರಾಜಸನ್ಮಾನ ಪಡೆದ ಶ್ರೀಪಾದರಾಜರು 'ವಾಗ್ವಜ್ರ' ದಂತಹ ಮೇರು ಗ್ರಂಥವನ್ನು ರಚಿಸಿ, ಅಪಾರ ಶಿಷ್ಯ ಸಂಪತ್ತನ್ನು ಹೊಂದಿದವರಾಗಿ, 98 ವರ್ಷಗಳ ತಮ್ಮ ಸುದೀರ್ಘ ಜೀವನದ ಸಮಸ್ತ ಸಾಧನೆಯ ಫಲವನ್ನು ಶಿಷ್ಯರಿಗೆ, ಹರಿದಾಸರಿಗೆ ಹಾಗೂ ಭಕ್ತ ವೃಂದಕ್ಕೆ ಅನುಗ್ರಹಿಸಿದವರು ಶ್ರೀಪಾದರಾಜರು.


ತಮ್ಮ ಕಾಲದಲ್ಲಿ ಸಂಸ್ಕೃತ ವಿದ್ಯೆಯು ಉನ್ನತ ಮಟ್ಟದಲ್ಲಿದ್ದರೂ, ಅದು ಭಕ್ತಿ ಪ್ರಚೋದನೆಗೆ ಹೆಚ್ಚು ತೀವ್ರವಾಗಿ ಪ್ರಯೋಜನವಾಗುತ್ತಿಲ್ಲವೆಂಬುದನ್ನು ಮನಗಂಡ ಶ್ರೀಪಾದರಾಜರು ದೇಶಕಾಲೋಚಿತವಾಗಿ, ವಿಜಯನಗರ ಸಾಮ್ರಾಜ್ಯದಲ್ಲಿ ಜನ ಸಾಮಾನ್ಯರಲ್ಲೂ ಹಿಂದೂ ಸಂಸ್ಕೃತಿ, ಸಂಪ್ರದಾಯ ಪರಂಪರೆಗಳ ಬಗ್ಗೆ ಸುಲಭವಾಗಿ ತಿಳಿಸಿ ಸಂಘಟನೆಯನ್ನು ಪ್ರಚೋದಿಸಲು ದಾಸಪಂಥವನ್ನು ಉದ್ಘಾಟಿಸಿದರು. ಸಕಲ ತತ್ವ ವಿಷಯಗಳನ್ನೂ, ಸಂಗೀತ ಬದ್ಧವಾಗಿ ಕನ್ನಡದಂತಹ ಲಲಿತಭಾಷೆಯಲ್ಲಿ ಜನರಿಗೆ ಕೊಟ್ಟು ಶ್ರೀಪಾದರಾಜರು ಈ ಮಾರ್ಗದಲ್ಲಿ ತಾವೇ ಮೊದಲು ಕನ್ನಡದಲ್ಲಿ ದೇವರ ನಾಮಗಳನ್ನು ಉಗಾಭೋಗಗಳನ್ನು, ಸುಳಾದಿಗಳನ್ನು ರಚನೆಮಾಡಿ ಗಂಭೀರವಾದ ಗಂಧರ್ವ ಕಂಠದಿಂದ ದೇವರೆದುರಿಗೆ ಗಾನಮಾಡಿ ತೋರಿಸಿದರು.


ಹರಿಸರ್ವೋತ್ತಮತ್ವ, ಜಗತ್ಸತ್ಯತ್ವ, ತಾರತಮ್ಯ, ಪಂಚಭೇದ ಮುಂತಾದ ಮೂಲಭೂತ ತತ್ವಗಳನ್ನು ಕನ್ನಡದಲ್ಲಿ ಸಕಲಸಜ್ಜನರಿಗೂ ಮನದಟ್ಟಾಗುವಂತೆ ಮೃದುಶೈಲಿಯಲ್ಲಿ ಅಭಿವ್ಯಕ್ತಿಸಿದರು. ತಪೋಮಹಿಮರಾದ ಶ್ರೀಪಾದರಾಜರು ಮುಳುಬಾಗಿಲಿಗೆ ಬಂದು ನೆಲೆಸಿ, ವಿಶ್ವವಿದ್ಯಾನಿಲಯವನ್ನು, ಧಾರ್ಮಿಕ ಪ್ರಚಾರ ಮಂಡಳಿಯನ್ನು ಸಂಘಟಿಸಿ, ದಶಕಗಳ ಕಾಲ ಸಹಸ್ರ ಸಹಸ್ರ ವಿದ್ಯಾರ್ಥಿಗಳನ್ನು ವಿದ್ವಾಂಸರನ್ನಾಗಿಮಾಡಿದರು. ಶ್ರೀ ವ್ಯಾಸರಾಜರಂತಹ ವಿದ್ವದ್ವಿಭೂತಿಗಳನ್ನು ನಿರ್ಮಿಸಿ ಶಕಪುರುಷರೆನಿಸಿಕೊಂಡರು.


ಇವರು ಜೇಷ್ಠ ಶುದ್ಧ ಚತುರ್ಧಶಿಯಂದು ತಮ್ಮ ಶಿಷ್ಯರಲ್ಲಿ ಒಬ್ಬರಿಗೆ ಆಶ್ರಮವನ್ನು ನೀಡಿ, ಶ್ರೀಹಯಗ್ರೀವತೀರ್ಥರೆಂದು ನಾಮಕರಣ ಮಾಡಿದರು. ಮಹಾಮಹಿಮರಾದ ಶ್ರೀ ಶ್ರೀಪಾದರಾಜರು, ಮುಳಬಾಗಿಲಿನ ಸಮೀಪದಲ್ಲಿರುವ ನರಸಿಂಹತೀರ್ಥಕ್ಷೇತ್ರದಲ್ಲಿ ವೃಂದಾವನವನಸ್ಥರಾದರು. ಇಂದಿಗೂ ಸಮಸ್ತ ಆಸ್ತಿಕ ಜನರುಗಳಿಗೆ ಅವರವರ ಮನೋಭಿಲಾಷೆಗಳನ್ನು ಪೂರೈಸುತ್ತಾ ವಿರಾಜಮಾನರಾಗಿರುವರು.



ಲೇಖನ : ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ. 

ಕನ್ನಡ ಅಧ್ಯಾಪಕಿ, ಪೂರ್ಣಪ್ರಮತಿ ಬೆಂಗಳೂರು

Post a Comment

0 Comments
Post a Comment (0)
To Top