ಮಾನವನ ಬದುಕು ಅತ್ಯಮೂಲ್ಯವಾದುದು. ಸುಳ್ಳು, ದ್ವೇಷ, ಮೋಸ,ಕಪಟ, ವಂಚನೆ, ಇರುವಂತೆಯೇ ಪ್ರೀತಿ ವಾತ್ಸಲ್ಯ, ಸಮೃದ್ಧಿ, ನಂಬಿಕೆ, ವಿಶ್ವಾಸ, ಅಭಿಮಾನ ಕೂಡ ನಮ್ಮ ಬದುಕಿನ ಭಾಗವಾಗಿರುತ್ತದೆ. ಇವೆಲ್ಲವುಗಳ ಹದ ಪಾಕವೇ ಜೀವನ. ಎಲ್ಲವನ್ನು ಹಿತವಾಗಿ ಮಿತವಾಗಿ ಹಾಕಬೇಕು. ಸರಿಯಾದ ಬೆಲ್ಲದ/ಸಕ್ಕರೆಯ ಪಾಕ ತೆಗೆದುಕೊಂಡು ಮಾಡಿದ ಉಂಡಿಗಳು ಅದೆಷ್ಟು ರುಚಿಕರವೋ ಹಾಗೆಯೇ ಬದುಕಿನಲ್ಲಿ ಉತ್ತಮ ಮತ್ತು ಸಕಾರಾತ್ಮಕತೆಯ ಬೆಲ್ಲದ ಪಾಕ ಅತ್ಯಂತ ಅವಶ್ಯಕ.
ಬದುಕಿನ ಕೆಲ ಅಹಿತಕರ ಪಾಠಗಳು ನೋಡಲು ಅತ್ಯಂತ ಕಠಿಣವೆನಿಸಿದರು ಯಾವ ಪಾಠಶಾಲೆಯಲ್ಲಿಯೂ ಕಲಿಯದ ಪಾಠಗಳನ್ನು ಕಲಿಸುತ್ತವೆ. ಅಂತಹ ಬದುಕಿನ ಸಪ್ತ ಸೂತ್ರಗಳು ಇಲ್ಲಿವೆ.
1.ಯಾರನ್ನಾದರೂ ನಾವು ಅತ್ಯಂತ ದ್ವೇಷಿಸುತ್ತಿದ್ದರೆ ನಮಗೆ ಅತಿಯಾದ ಪ್ರೀತಿಯ ಅರಿವಾಗುತ್ತದೆ. ಎಷ್ಟೋ ಬಾರಿ ನಮ್ಮ ಪ್ರೀತಿಯ ಇನ್ನೊಂದು ಮುಖವೇ ದ್ವೇಷ. ನಮ್ಮ ಎದುರಿಗಿನ ವ್ಯಕ್ತಿ ನಮ್ಮನ್ನು ಉಪೇಕ್ಷಿಸುತ್ತಿದ್ದಾನೆ, ನಂಬುವುದಿಲ್ಲ ಎಂಬ ಭಾವವೊಂದೇ ಸಾಕು ನಮಗೆ ಅವರ ಮೇಲೆ ಕೋಪ ಹುಟ್ಟಲು. ಕೋಪ ಅಸಹನೆಯಾಗಿ ಅಸಹನೆಯು ತನ್ನ ಮಿತಿಯನ್ನು ದಾಟಿದಾಗ ಮನುಷ್ಯ ವೈಪರೀತ್ಯಕ್ಕೆ ಒಳಗಾಗುತ್ತಾನೆ. ಈ ವೈಪರೀತ್ಯವೇ ದ್ವೇಷ. ಆದರೆ ಈ ದ್ವೇಷದ ಮೂಲದಲ್ಲಿ ಬತ್ತಿದ ಪ್ರೀತಿಯ ಸೆಲೆ ಇರುತ್ತದೆ. ಈ ಸೆಲೆ ಮತ್ತೆ ಉಕ್ಕಿ ಹರಿಯಲು ಕ್ಷಮೆ ಮತ್ತು ನಂಬಿಕೆ ಎಂಬ ಎರಡು ಅಸ್ತ್ರಗಳು ಸಾಕು.
2.ಯಾವುದರ ಬಗ್ಗೆ ನಿರ್ಣಯಾತ್ಮಕವಾಗಿ ನಾವು ಮಾತನಾಡುತ್ತಿವೆಯೋ ಅದು ನಮಗೆ ಸಮ್ಮತಿಯನ್ನು ಕಲಿಸುತ್ತದೆ.... ನಾವು ಯಾವುದನ್ನು ನಂಬುತ್ತೇವೆಯೋ ಅದನ್ನು ಮಾತ್ರ ಒಪ್ಪಿಕೊಳ್ಳಲು ಮನಸ್ಸು ಹಾತೊರೆಯುತ್ತದೆ. ತಮ್ಮ ತಮ್ಮ ಸಂಗಾತಿಗಳಲ್ಲಿ ಕಾಣುವ ಎಲ್ಲಾ ರೀತಿಯ ಅನವಶ್ಯಕ ಅಭ್ಯಾಸಗಳ ಬಗ್ಗೆ ನಾವು ಖಂಡತುಂಡವಾಗಿ ಮಾತನಾಡುತ್ತೇವೆ. ಮಕ್ಕಳನ್ನು ಹೀಗೆಯೇ ಇರಬೇಕು ಎಂದು ಅಪೇಕ್ಷೆ ಪಡುತ್ತೇವೆ. ಮನೆ, ಕುಟುಂಬದ ಹೊರತಾಗಿಯೂ ಸಮಾಜವನ್ನು ಕೂಡ ನಮ್ಮ ಇಚ್ಛೆಯಂತೆ ಇರಲಿ ಎಂಬ ಆಶಯದೊಂದಿಗೆ ಸದಾ ನಾವು ನಿರ್ಣಯಾತ್ಮಕವಾಗಿ ಮಾತನಾಡುತ್ತೇವೆ. ಆದರೆ ನಮ್ಮ ಆಶಯದಂತೆ ಕಾರ್ಯಗಳು ನಡೆಯದೆ ಹೋದಾಗ ನಾವು ಇದ್ದ ಸ್ಥಿತಿಯನ್ನು ಒಪ್ಪಿಕೊಳ್ಳುತ್ತೇವೆ. ಅದು ಅನಿವಾರ್ಯವೂ ಕೂಡ.ಇದು ನಮಗೆ ಸಮ್ಮತಿಯ ಸ್ವಭಾವವನ್ನು ಕಲಿಸಿಕೊಡುತ್ತದೆ.
3.ಯಾವ ವಿಷಯದ ಬಗ್ಗೆ ನಮಗೆ ಭಯವಿರುತ್ತದೆಯೋ
ಆ ವಿಷಯವು ನಮ್ಮನ್ನು ಹಿಂಜರಿಕೆಯಿಂದ ಹೊರ ತರುವ ಧೈರ್ಯವನ್ನು ನೀಡುತ್ತದೆ.... ಸಮಯ ಸಂದರ್ಭಗಳು ನಮ್ಮ ಇಚ್ಛೆಯಂತೆಯೇ ನಡೆಯುವುದಿಲ್ಲ. ಚಿಕ್ಕಂದಿನಲ್ಲಿ ನೀರಿನ ಭಯವಿರುವ ವ್ಯಕ್ತಿ ಅಸಾಮಾನ್ಯ ಈಜು ಪಟುವಾಗಬಲ್ಲ, ಎತ್ತರದ ಭಯವಿರುವ ವ್ಯಕ್ತಿ ಪರ್ವತಾರೋಹಿಯಾಗಬಲ್ಲ. ಓದಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡ ವ್ಯಕ್ತಿ ತನ್ನ ಸ್ವಪ್ರಯತ್ನದಿಂದ ಉತ್ತಮ ಶಿಕ್ಷಕನಾಗಬಲ್ಲ. ನನ್ನಿಂದ ಮಾಡಲಾಗದು ಎಂಬ ಭಯ, ಹಿಂಜರಿಕೆಗಳು ನಮ್ಮನ್ನು ಆ ಕಾರ್ಯವೆಸಗದಂತೆ ಹಿಂದೇಟು ಹಾಕಿಸುತ್ತವೆ. ಆದರೆ ಒಂದು ಬಾರಿ ಆ ಭಯದ ಆಚೆಗಿನ ಜಗತ್ತನ್ನು ನಾವು ಸಕಲ ಪ್ರಯತ್ನಪಟ್ಟು ತಲುಪಿದರೆ ನಮ್ಮಲ್ಲಿರುವ ಹಿಂಜರಿಕೆ ದೂರವಾಗುತ್ತದೆ. ಅಸಾಮಾನ್ಯ ಪ್ರತಿಭೆಗಳ ಹಿಂದಿರುವ ಡ್ರೈವಿಂಗ್ ಫೋರ್ಸ್ ಅಂದರೆ ಚಾಲನಾ ಶಕ್ತಿ ಅವರವರ ಭಯ ಮತ್ತು ಹಿಂಜರಿಕೆಗಳೇ ಎಂಬುದು ಸುಳ್ಳಲ್ಲ.
4.ಯಾವ ವಿಷಯ ನಮಗೆ ಸಿಟ್ಟು ತರಿಸುತ್ತದೆಯೋ ಅದು ನಮಗೆ ಒಪ್ಪಿಕೊಳ್ಳುವ ಮತ್ತು ಕ್ಷಮಿಸುವ ಗುಣವನ್ನು ಕಲಿಸುತ್ತದೆ.... ನಮ್ಮ ಕೈಲಾಗದ ಯಾವುದೇ ಕೆಲಸವು ನಮ್ಮಲ್ಲಿ ಅದನ್ನು ಒಪ್ಪಿಕೊಳ್ಳುವ ಗುಣವನ್ನು ಕಲಿಸುತ್ತದೆ. *ಕೈಲಾಗದವ ಮೈಪರಚಿಕೊಂಡ* ಎಂಬಂತೆ ಮೊದಮೊದಲು ಕೆಲ ಬದಲಾವಣೆಗಳು ನಮ್ಮಲ್ಲಿ ಅಸಹನೆಯನ್ನು ತರುತ್ತವೆ. ಆದರೆ ಕಾಲಕ್ರಮೇಣ ಒಪ್ಪಿಕೊಳ್ಳುವ ಶಕ್ತಿಯನ್ನು ಕೂಡ ನೀಡುತ್ತವೆ. ಕೇವಲ ಒಪ್ಪಿಕೊಳ್ಳುವುದು ಅಷ್ಟೇ ಅಲ್ಲ, ಬುದ್ಧಿ ಪರಿಪಕ್ವತೆಯನ್ನು ಹೊಂದಿದ್ದರೆ ಬೇರೆಯವರ ತಪ್ಪುಗಳನ್ನು ಕ್ಷಮಿಸುವ, ಹೋಗಲಿ ಬಿಡು ಎಂಬ ದೊಡ್ಡತನವನ್ನು ತಂದುಕೊಡುತ್ತವೆ.
5.ಯಾವುದೇ ಕಿರಿಕಿರಿ ಎನಿಸುವ ವಿಷಯವು ನಮಗೆ ಸಹನೆಯನ್ನು ಕಲಿಸುತ್ತದೆ..... 100% ನಿಜ. ಹೊಸದಾಗಿ ಮನೆಗೆ ಬಂದ ಸೊಸೆ ಮಾಡುವ ಕೆಲಸ ಅತ್ತೆಗೆ ಸ್ವಲ್ಪವೂ ಸರಿ ಬರದು, ಪತಿ-ಪತ್ನಿಯರಲ್ಲೂ ಅಷ್ಟೇ ನೂರಾರು ವಿಷಯಗಳು ಅಸಹನೆಗೆ ಕಾರಣವಾಗುತ್ತದೆ. ಓದುತ್ತಿರುವ ಪರಿಸರದಲ್ಲಿ ಕೌಟುಂಬಿಕವಾಗಿ ಸಾಮಾಜಿಕವಾಗಿ ಹಲವಾರು ವಿಷಯಗಳು ನಮ್ಮ ಕೈ ಮೀರಿ ಹೋಗುತ್ತವೆ. ಅಂತಹ ವಿಷಯಗಳನ್ನು ಒಪ್ಪಿಕೊಳ್ಳಲು ಮತ್ತು ಅಪ್ಪಿಕೊಳ್ಳಲು ನಮಗೆ ಅಪಾರ ತಾಳ್ಮೆ ಬೇಕು. ಅವರಲ್ಲಿ ನಾವು ಬಯಸುವ ಬದಲಾವಣೆ ಒಂದೇ ದಿನದಲ್ಲಿ ತರಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಕಾಯಲೇಬೇಕು ಈ ಕಾಯುವಿಕೆ ನಮಗೆ ತಾಳ್ಮೆಯನ್ನು ಕಲಿಸುತ್ತದೆ. ಈ ಅಪಾರ ತಾಳ್ಮೆಯ ಇನ್ನೊಂದು ರೂಪವೇ ಸಹನೆ.
6.ಯಾವುದು ನಿನ್ನ ನಿಯಂತ್ರಣದಲ್ಲಿ ಇಲ್ಲವೋ ಆ ವಿಷಯವು ನಿನ್ನಲ್ಲಿ ಹೋಗಲಿ ಬಿಡು, ಇಷ್ಟಾದರೂ ಆಯಿತಲ್ಲ,ವಿಧಿ ಬರಹ ಎಂಬ ಸಕಾರಾತ್ಮಕತೆಯನ್ನು ಕಲಿಸುತ್ತದೆ.....ಇದು ಕೂಡ ಬದುಕಿಗೆ ಅತ್ಯವಶ್ಯಕವಾದ ಸೂತ್ರ. ಅಪಾರ ಖರ್ಚು ಮಾಡಿದಾಗ್ಯೂ ಪ್ರಿಯ ಪಾತ್ರರಾದವರನ್ನು ಉಳಿಸಿಕೊಳ್ಳಲಾಗದೆ ಹೋದಾಗ ಕೂಡ, ಅದೆಷ್ಟೇ ಪ್ರಯತ್ನಪಟ್ಟು ಓಡಿದಾಗ್ಯೂ ಕೂಡ ಪ್ರಶಸ್ತಿ ದೊರೆಯದೆ ಹೋದಾಗ, ನೂರಾರು ಪ್ರಯತ್ನಗಳನ್ನು ಮಾಡಿದಾಗ್ಯೂ ಫಲಪ್ರದವಾಗದೆ ಹೋದಾಗ ಮನುಷ್ಯ ಒಂದು ರೀತಿಯ ನಿರ್ಲಿಪ್ತ ಭಾವವನ್ನು ತಾಳುತ್ತಾನೆ ಅಂತಹ ನಿರ್ಲಿಪ್ತಿಯು ಆತನಿಗೆ ಅಪಾರ ತಾಳ್ಮೆಯನ್ನು ಕಲಿಸುತ್ತದೆ. ಅಯ್ಯೋ ಸೋತು ಹೋದೆನಲ್ಲ ಎಂಬ ಭಾವದ ಬದಲಾಗಿ ನಿರ್ಲಿಪ್ತಿಯು ಆ ಮನುಷ್ಯನಲ್ಲಿ ನಮ್ಮ ಪ್ರಯತ್ನ ನಾವು ಮಾಡಿದೆವೆಂಬ ತೃಪ್ತಿ, ಸಮಾಧಾನವನ್ನು ನೀಡುತ್ತದೆ.
7. ಯಾವುದೇ ಸಾಧಿಸಲಾಗದ ವಸ್ತು ಮತ್ತು ವಿಷಯಗಳು ನಮ್ಮ ಅಪಾರ ಪ್ರಯತ್ನ ಮತ್ತು ಶ್ರದ್ಧೆಯ ಮೂಲಕ ನಮಗೆ ಆ ವಿಷಯದಲ್ಲಿ ಪರಿಣತಿಯನ್ನು ತಂದು ಕೊಡುತ್ತದೆ. ನಿನಗೆ ವಿದ್ಯೆಯೇ ಹತ್ತುವುದಿಲ್ಲ ಎಂಬ ಭವಿಷ್ಯವಾಣಿಯನ್ನು ಕೇಳಿ ತನ್ನ ಕೈಯಲ್ಲಿ ಚಾಕುವಿನಿಂದ ವಿದ್ಯಾರೇಖೆಯನ್ನು ಕೊರೆದುಕೊಂಡ ಬಾಲಕ ಮುಂದೆ ಅಪ್ರತಿಮ ಪಂಡಿತನಾದ. ಓಡಲು ಸಾಧ್ಯವೇ ಇಲ್ಲ ಎಂಬಂತಹ ವ್ಯಕ್ತಿ ಒಲಂಪಿಕ್ಸ್ ನಲ್ಲಿ ಅನೇಕ ಬಾರಿ ಚಿನ್ನದ ಪದಕ ಗಳಿಸಿದ. ಕೈಕಾಲುಗಳು ಪೀಚು, ದೈಹಿಕವಾಗಿ ಅಂಗವಿಕಲ ಎಂಬ ವ್ಯಕ್ತಿ ಫುಟ್ಬಾಲ್ ನ ಅತಿ ದೊಡ್ಡ ತಾರೆಯಾದ. ಅಷ್ಟೇ ಏಕೆ ಇನ್ನು ಮುಂದೆ ನೀನು ನೃತ್ಯ ಮಾಡಲೇಬಾರದು, ಫೈಟ್ಗಳನ್ನು ಕೂಡ!! ಎಂದು ವೈದ್ಯರಿಂದ ಹೇಳಿಸಿಕೊಂಡ ಹಿಂದಿ ಚಲನಚಿತ್ರ ರಂಗದ ತಾರೆ ಹೃತಿಕ್ ರೋಷನ್ ಕೂಡ ಪ್ರಸಿದ್ಧನಾದದ್ದು ತನ್ನ ನೃತ್ಯದಿಂದ. ಮೇಲಿನ ಈ ಎಲ್ಲರಲ್ಲೂ ಇದ್ದದ್ದು ಅಪಾರವಾದ ಧಾರಣ ಶಕ್ತಿ, ಕಲಿಯುವ ಹಂಬಲ ಮತ್ತು ತಮ್ಮ ದೈಹಿಕ ತೊಂದರೆಗಳನ್ನು ಮೆಟ್ಟಿ ಏನನ್ನಾದರೂ ಸಾಧಿಸಲೇಬೇಕು ಎಂಬ ಹೆಬ್ಬಯಕೆ. ಜೊತೆಗೆ ಸತತ ಶ್ರದ್ಧೆ ಮತ್ತು ಪರಿಶ್ರಮ ಅವರನ್ನು ವಿಶ್ವ ಪ್ರಸಿದ್ಧರ ಮಟ್ಟಕ್ಕೆ ತಂದು ನಿಲ್ಲಿಸಿದೆ.
ಬದುಕಿನ ಈ ಸಪ್ತ ಸೂತ್ರಗಳ ಪಾಠಗಳನ್ನು ನಾವು ಜೀವನದಲ್ಲಿ ಒಂದಿಲ್ಲೊಂದು ಸಮಯದಲ್ಲಿ ಎದುರಿಸುತ್ತಿರುತ್ತೇವೆ. ಆಯಾಯ ಸಮಯದಲ್ಲಿ ನಮ್ಮ ಜೀವನದಲ್ಲಿ ಮಾರ್ಪಾಡನ್ನು ತಂದಿರುವ ಈ ಸಪ್ತ ಸೂತ್ರಗಳು ನಮ್ಮ ಸ್ವಭಾವದಲ್ಲಿಯೂ ಕೂಡ ಬದಲಾವಣೆಯನ್ನು ತಂದಿವೆ. ಮಾಡಲಾಗದ ಕೈಲಾಗದ ತನಕ್ಕೆ ಜಗತ್ತನ್ನು ಹಳಿಯುವ ಬದಲು ಜಗತ್ತಿನ ಒಳಿತಿಗಾಗಿ ವೈಯುಕ್ತಿಕ ಪ್ರಗತಿಗಾಗಿ ಜೀವನ ಕಲಿಸುವ ಎಲ್ಲ ಪಾಠಗಳನ್ನು ಮುಕ್ತವಾಗಿ ಆಹ್ವಾನಿಸುವ, ಆಸ್ವಾದಿಸುವ, ಕಲಿಯುವ, ಯಶಸ್ವಿಯಾಗುವ ಎಂದು ಆಶಿಸುವ.
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ