ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Upayuktha
0

ಪುತ್ತೂರು: ರಾಷ್ಟ್ರೀಯ ವಿಚಾರಧಾರೆ, ಬಲಿದಾನ ಮಾಡಿದ ಹಿರಿಯರನ್ನು ಸ್ಮರಿಸುವುದು, ರಾಷ್ಟ್ರ ಕಾಯುವ ಸೈನಿಕರಿಗೆ ವಿಶೇಷ ಗೌರವ ಸಿಗಬೇಕೆನ್ನುವ ನಿಟ್ಟಿನಲ್ಲಿ ಅಮರ್ ಜವಾನ್ ಜ್ಯೋತಿಯ ಸ್ಥಾಪನೆ - ಹೀಗೆ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆ ರಾಷ್ಟ್ರೀಯತೆಗೆ ತನ್ನನ್ನು ತಾನು ಹಲವು ವಿಚಾರಗಳಲ್ಲಿ ಜೋಡಿಸಿಕೊಂಡಿದೆ. ಇಂತಹ ಸಂಸ್ಥೆಗಳು ಸಮಾಜದ ಗೌರವವನ್ನೂ ಹೆಚ್ಚಿಸಿದೆ. ನಮ್ಮ ಧರ್ಮವನ್ನು ಗೌರವಿಸುವುದರ, ಪ್ರೀತಿಸುವುದರ ಜೊತೆಗೆ ವಿದ್ಯಾರ್ಥಿಗಳು ವಿದ್ಯಾಲಯದ ಗೌರವವನ್ನು ಎತ್ತರೆತ್ತರಕ್ಕೆ ಏರಿಸಿ ದೇಶದ ಸತ್ಪ್ರಜೆಗಳಾಗಿ ವಿಶ್ವಕ್ಕೆ ಭಾರತ ಮಾದರಿಯಾಗುವಂತೆ ಮಾಡುವ ಮಹತ್ತರ ಜವಾಬ್ದಾರಿ ವಿದ್ಯಾರ್ಥಿಗಳದ್ದು. ಶಿಕ್ಷಣದ ಜೊತೆಗೆ ನೈತಿಕತೆಯನ್ನೂ ಬೆಳೆಸಿಕೊಂಡು ಅಬ್ದುಲ್ ಕಲಾಂರಂತೆ, ಮುರಳಿ ಮನೋಹರ್ ಜೋಶಿಯಂತೆ ಸಮಾಜಕ್ಕೆ ಆದರ್ಶರಾಗಿ. ಸಂಸ್ಕೃತಿ ವಿಚಾರಧಾರೆಗಳ ಮೂಲಕ ಸಮಾಜಕ್ಕೆ ಹಿತವಾಗುವ ಕೆಲಸ ಮಾಡಿ. ಸುಖ ಶಾಂತಿ ನೆಮ್ಮದಿಯ ಭವಿಷ್ಯ ನಿಮ್ಮದಾಗಲಿ. ನಿಮ್ಮ ಯೋಜನೆಗಳೆಲ್ಲ ಕಾರ್ಯಗತವಾಗಲಿ. ನಿಮ್ಮ ನಾಯಕರಿಗೆ ಸಹಕಾರ ಕೊಡಿ ಎಂದು ಪುತ್ತೂರಿನ ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿ ಸಂಘದ ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ದೀಪ ಪ್ರಜ್ವಲನೆಗೈದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ರಾಜಕೀಯ ಪಕ್ಷ ಮುಖ್ಯವಲ್ಲ. ಪಕ್ಷೇತರವಾದರೂ ವ್ಯಕ್ತಿಯ, ರಾಜಕಾರಣಿಯ ಸಾಮರ್ಥ್ಯವನ್ನು ನೋಡಬೇಕು. ಜನನಾಯಕರು ಜನಸೇವಕರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ; ರಾಜಕೀಯದಲ್ಲಿ ಇಂತಹ ಪರಿವರ್ತನೆಯಾಗಬೇಕು. ವ್ಯಕ್ತಿ ಪೂಜೆ ಮುಖ್ಯವಲ್ಲ. ಪ್ರಶ್ನೆ ಮಾಡುವ ನಿರಂತರ ಹವ್ಯಾಸ ಮಗುವಿನಿಂದ ಮುದುಕರ ತನಕ ಇದ್ದಾಗ ಮಾತ್ರ ಸಮಾಜ, ದೇಶ ಸುಧಾರಣೆಯಾಗುವುದು. ಅಂಬಿಕಾ ಶೈಕ್ಷಣಿಕವಾಗಿ ತುಂಬಾ ಮುಂದಿದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ ತುಂಬಿ ತುಳುಕುತ್ತಿದೆ. ಎಲ್ಲೇ ಇರಿ ಹೇಗೇ ಇರಿ ದೇಶದ ಮಣ್ಣಿನ ಋಣವನ್ನು ಮರೆಯದಿರಿ ಎಂದು ಸಭೆಯ ಅಧ್ಯಕ್ಷರಾದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ನಿಕಟಪೂರ್ವ ವಿದ್ಯಾರ್ಥಿ ನಾಯಕ ಆಕಾಶ್ ಜೆ ರಾವ್ ಅವರು ವಿದ್ಯಾರ್ಥಿ ಸಂಘದ ಧ್ವಜವನ್ನು ಅತಿಥಿಗಳಿಗೆ ಹಸ್ತಾಂತರಿಸಿ ಅತಿಥಿಗಳು ನೂತನ ವಿದ್ಯಾರ್ಥಿ ನಾಯಕರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯರು ವಿದ್ಯಾರ್ಥಿ ನಾಯಕರು ಹಾಗೂ ವಿವಿಧ ಖಾತೆಯ ಮಂತ್ರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶಾಂತ್ ಬಿ ಎಂ, ಉಪಾಧ್ಯಕ್ಷೆ ಸಮೃದ್ಧಿ ಎಸ್ ರೈ, ಕಾರ್ಯದರ್ಶಿ ಶಮನ್ ಕೃಷ್ಣ ಕೆ, ಜತೆಕಾರ್ಯದರ್ಶಿ ವಿಕೇಶ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.  C++ ಪ್ರೊಗ್ರಾಮಿಂಗ್ ಸರ್ಟಿಫಿಕೇಟ್ ಕೋರ್ಸ್‍ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರಗಳನ್ನು ಕೊಡಲಾಯಿತು. ಗಣಕವಿಜ್ಞಾನ ಉಪನ್ಯಾಸಕ ಪ್ರದೀಪ್ ಕೆ ವೈ ಈ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿನಿ ಆತ್ಮಶ್ರೀ ಎಂ ಪ್ರಾರ್ಥಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷತಾ ಆರ್ ವಂದಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕರಾದ ಮುರಳಿ ಮೋಹನ್ ಮತ್ತು ಪುನೀತ್ ಸಹಕರಿಸಿದರು.   


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
To Top