ಇವರು ರಶ್ಮಿ ಅಮ್ಮೆಂಬಳ. ಶಿಕ್ಷಕ ವೀರಪ್ಪ ವಸಂತಿ ದಂಪತಿಯ ಸುಪುತ್ರಿ. ನನ್ನ ಗುರು ಕೂಡ ಹೌದು. ಸರಳ ಸಜ್ಜನಿಕೆಯ ಸ್ವಭಾವದವರು. ಸಮಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುವವರು. ಪ್ರತಿಯೊಂದು ನಿಮಿಷ ಕೂಡ ಅಮೂಲ್ಯ ಅಂತ ಇವರನ್ನು ನೋಡಿ ತಿಳಿದುಕೊಂಡಿದ್ದೇನೆ. ಮುಖದಲ್ಲಿ ಸದಾ ಮಂದಹಾಸ ಬೀರುತ್ತ ಎಲ್ಲರ ಮನಸ್ಸನ್ನು ಗೆಲ್ಲುವಂತಹ ಅದ್ಭುತ ಶಕ್ತಿ ಇವರಲ್ಲಿದೆ. ಸಂಕಷ್ಟದಲ್ಲಿರುವವರಿಗೆ ಮಾನವೀಯತೆ ಮೂಲಕ ಬೆಳಕು ನೀಡುವ ಕಾರ್ಯ ಮಾಡಬೇಕು. ಹಸಿದವನಿಗೆ ಊಟ ನೀಡುವುದು ಕೂಡ ಮಾನವೀಯತೆಯೇ ಆಗಿದ್ದು, ಮಾನವೀಯತೆಯಲ್ಲಿ ಪ್ರೀತಿ ಇದೆ. ಮಾನವೀಯತೆಯ ಪ್ರೀತಿಯಿಂದ ಪ್ರತಿಯೊಬ್ಬರಿಗೂ ಸ್ಪಂದಿಸುವ ಕಾರ್ಯ ಮಾಡಬೇಕು. ಭಗವಂತ ಪ್ರಾಣಿಗಳಿಗೂ ಮಾನವೀಯತೆಯನ್ನು ನೀಡಿದ್ದಾನೆ. ಆದರೆ ಅವುಗಳಿಗೆ ಜವಾಬ್ದಾರಿ ಇಲ್ಲ; ಆದರೆ ಮನುಷ್ಯನಾದವನಿಗೆ ಪರಸ್ಪರ ಸಂಕಷ್ಟಕ್ಕೆ ಸ್ಪಂದಿಸುವ ಜವಾಬ್ದಾರಿಯಿದೆ. ಇಡೀ ವಿಶ್ವದಲ್ಲಿ ಮಾನವೀಯತೆ ಮೆರೆಯುವ ಅನೇಕ ವ್ಯಕ್ತಿಗಳು, ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.
ಅಂತಹ ಗಣ್ಯ ವ್ಯಕ್ತಿಗಳಲ್ಲಿ ಡಾ. ರಶ್ಮಿ ಅಮ್ಮೆoಬಳ ಕೂಡ ಒಬ್ಬರು. ಬಾನುಲಿ, ಪತ್ರಿಕೆ, ಟಿವಿ ಮಾತ್ರವಲ್ಲದೇ ಶಿಕ್ಷಣದಲ್ಲಿ ಕೂಡ "ಸೈ" ಎನಿಸಿಕೊಂಡಿದ್ದಾರೆ. ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಣೇಲ ಬರಿಕೆ ಮತ್ತು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಮುಡಿಪುವಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಸರಕಾರಿ ಪದವಿಪೂರ್ವ ಕಾಲೇಜು ಕುರ್ನಾಡು ಮುಡಿಪುವಿನಲ್ಲಿ ಪ್ರೌಢ ಶಿಕ್ಷಣ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು, ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು, ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ, 'ಮಾಧ್ಯಮದಲ್ಲಿ ಮಹಿಳೆ ಎನ್ನುವ 'ಸಂಶೋಧನಾ ಮಹಾಪ್ರಬಂಧಕ್ಕೆ ಎಂಫಿಲ್ ಪದವಿಯನ್ನು, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ 'ದಿ ಇಂಪಾಕ್ಟ್ ಆಫ್ ಕಮ್ಯುನಿಟಿ ರೇಡಿಯೋ ಇನ್ ಸೋಶಿಯೋ ಕಲ್ಚರಲ್ ಟ್ರಾನ್ಸಿಶನ್" ಎನ್ನುವ ಪ್ರೌಢ ಸಂಶೋಧನಾ ಪಿ.ಹೆಚ್.ಡಿ ಪದವಿಯನ್ನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನಲ್ಲಿ ತುಳು ಎಂ.ಎ ಪದವಿಯನ್ನು ಪೂರೈಸಿರುತ್ತಾರೆ.
ವೃತ್ತಿರಂಗದಲ್ಲಿ....
ವಿದ್ಯಾಭ್ಯಾಸದ ನಂತರ ಉಪನ್ಯಾಸಕ ವೃತ್ತಿಯನ್ನು ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ಆರಂಭಿಸಿ ಆ ನಂತರ ಜಲಾನಯನ ಇಲಾಖೆಯಲ್ಲಿ ಸಮಾಜಶಾಸ್ತ್ರಜ್ಞೆಯಾಗಿ, ಹೊಸ ದಿಗಂತ ದಿನಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ, ಲಿಂಕ್ ಅಮಲು ಚಿಕಿತ್ಸಾ ಕೇಂದ್ರದಲ್ಲಿ ಆಪ್ತ ಸಮಾಲೋಚಕಿಯಾಗಿ, ಕರಾವಳಿ ಕರ್ನಾಟಕದ ಅಚ್ಚು ಮೆಚ್ಚಿನ ಚಾನೆಲ್ ನಮ್ಮ ಟಿವಿಯಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ಕಾರ್ಯಕ್ರಮದ ಸಂಯೋಜಕರಾಗಿ, ನಿರೂಪಕರಾಗಿ ವಿವಿಧ ಹುದ್ದೆಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ ಡಾ. ರಶ್ಮಿ ಅಮ್ಮೆoಬಳ ಹಲವಾರು ಸಾಕ್ಷ್ಯ ಚಿತ್ರ, ನುಡಿ ಚಿತ್ರಗಳನ್ನು ರೂಪಿಸಿ ಹೊಸ ಛಾಪನ್ನು ಮೂಡಿಸಿದ್ದಾರೆ. ಅಲ್ಲದೆ ವಿ4 ಚಾನೆಲ್ ಸೇರಿದಂತೆ ಬೆಂಗಳೂರಿನ ಉದಯ ಟಿವಿಯಲ್ಲಿ ಉಪ ಸಂಪಾದಕಿಯಾಗಿ ಅನಂತರ ತುಮಕೂರಿನ ಶ್ರೀ ಸಿದ್ದಾರ್ಥ್ ಮಾಧ್ಯಮ ಅಧ್ಯಯನ ಕೇಂದ್ರದ "ರೇಡಿಯೋ ಸಿದ್ದಾರ್ಥ"ಸಮುದಾಯ ಬಾನುಲಿಯಲ್ಲಿ ಉಪನ್ಯಾಸಕರಾಗಿ ಮತ್ತು ಕಾರ್ಯಕ್ರಮ ನಿರ್ವಾಹಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯಲ್ಲಿ ಕೂಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 25ಕ್ಕಿಂತಲೂ ಹೆಚ್ಚು ಆಂಗ್ಲ ಭಾಷಾ ಸಂಶೋಧನಾ ಲೇಖನಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ. ಕಳೆದ ಸಾಲಿನಲ್ಲಿ ಡಾ. ರಶ್ಮಿ ಅಮ್ಮೆoಬಳರವರು ರಚಿಸಿದ 'ಗಾಂಪಣ್ಣನ ತಿರ್ಗಾಟ' ಬಾನುಲಿ ಕಾರ್ಯಕ್ರಮ ಸರಣಿಯ ಸುಮಾರು 26 ಸಂಚಿಕೆಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಂಡು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಡಾ. ರಶ್ಮಿ ಮೇಡಂ ರಾತ್ರೋರಾತ್ರಿ ದೊಡ್ಡವರಾಗಿಲ್ಲ. ರಾತ್ರೋರಾತ್ರಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಿಲ್ಲ. ನಿಮಗೆ ಚೈನೀಸ್ ಬಿದಿರಿನ ಬಗ್ಗೆ ಗೊತ್ತಿದೆಯೋ ಇಲ್ವಾ ಅಂತಾ ಗೊತ್ತಿಲ್ಲ. ಕೆಲವರಿಗೆ ಗೊತ್ತಿರಬಹುದು. ನಾನು ಸಹ ಪತ್ರಿಕೆಯಲ್ಲಿ ಓದಿದ ನೆನಪು. ಅದೊಂದು ಅದ್ಭುತವಾದ ಗಿಡ ನೀವು ಒಂದು ಬೀಜ ನೆಟ್ಟು ಒಂದು ವರ್ಷ ಕಾಲ ಚೆನ್ನಾಗಿ ನೀರು ಹಾಕಿ ಪೋಷಿಸಿದರೂ ಅದು ಚಿಗುರೊಡೆಯುವುದಿಲ್ಲ. ಅದು ಚಿಗುರೊಡೆಯುವುದಕ್ಕೆ ಐದು ವರ್ಷ ಬೇಕಾಗುತ್ತದೆ. ಆ ನಂತರ ಒಂದು ಸಣ್ಣ ಗಿಡ ಬೆಳೆಯುತ್ತದೆ. ಈ ಗಿಡ ಬೆಳೆಯುವುದಕ್ಕೆ ಇನ್ನೆಷ್ಟು ವರ್ಷಗಳ ಕಾಲ ಬೇಕಾಗಬಹುದು ಎಂದೆನಿಸಬಹುದು. ಹಾಗೇನಿಲ್ಲ ಮುಂದಿನ ಆರು ವಾರಗಳ ಕಾಲ ಅದು 90 ಅಡಿಯಷ್ಟು ಬೆಳೆದು ಬಿಡುತ್ತದೆ. ಪ್ರತಿ 24 ಗಂಟೆಗೂ 39 ಇಂಚಿನಷ್ಟು ಎತ್ತರ ಅದು ಬೆಳೆಯುತ್ತ ಹೋಗುತ್ತದೆ. ಐದು ವರ್ಷಗಳ ಕಾಲ ತಾಳ್ಮೆಯಿಂದ ಕಾದರೆ ಆ ನಂತರ ಪ್ರತಿದಿನ ಅದು ಎತ್ತರೆತ್ತರಕ್ಕೆ ಬೆಳೆಯುವುದನ್ನು ನೋಡುತ್ತ ಹೋಗಬಹುದು.
ಆ ಐದು ವರ್ಷಗಳ ಕಾಲ ಆ ಗಿಡ ಏನು ಮಾಡುತ್ತಿತ್ತು? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಹುಟ್ಟುವುದು ಸಹಜ. ಆ ಐದು ವರ್ಷ ಅದು ಒಳಗೆ ಬೆಳೆಯುತ್ತಿರುತ್ತದೆ. ಅದು ಎತ್ತರಕ್ಕೆ ಬೆಳೆಯಲು ಸದ್ದಿಲ್ಲದೇ ಸೂಕ್ತ ತಯಾರಿ ನಡೆಸುತ್ತಲೇ ಇರುತ್ತದೆ. ಬೇರು ಗಟ್ಟಿಯಾಗದೇ ಕಡಿಮೆ ಸಮಯದಲ್ಲಿ ಅಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಅದು ಬೆಳೆಯುವುದಕ್ಕೆ ಸದ್ದಿಲ್ಲದೇ ಸೂಕ್ತ ತಯಾರಿ ನಡೆಸುತ್ತಿರುತ್ತದೆ. ಅದೇ ರೀತಿ ಡಾ ರಶ್ಮಿ ಅಮ್ಮೆಂಬಳ ರವರು ರಾತ್ರೋರಾತ್ರಿ ಎತ್ತರಕ್ಕೆ ಬೆಳೆಯಲಿಲ್ಲ. ಅವರಲ್ಲಿ ಸೂಕ್ತವಾದ ತಯಾರಿ ಇತ್ತು, ತಾಳ್ಮೆ, ಶ್ರದ್ದೆ, ಶ್ರಮ ಎಲ್ಲವೂ ಇತ್ತು. ಹಾಗಾಗಿ ಅಷ್ಟೆತ್ತರಕ್ಕೆ ಬೆಳೆಯಲು ಸಾಧ್ಯವಾಗಿದ್ದು. ಸಮುದಾಯ ಬಾನುಲಿಯಲ್ಲಿ ವೃತ್ತಿಯಲ್ಲಿದ್ದು ವಿಶೇಷ ಅನುಭವ ಹೊಂದಿದ್ದು, ಸಮುದಾಯ ಬಾನುಲಿ ಕುರಿತಾಗಿಯೇ ಸಂಶೋಧನೆಯನ್ನು ಮಾಡಿ ಪಿ.ಹೆಚ್‌ಡಿ ಪಡೆದು ನಮ್ಮ ಭಾರತ ದೇಶದಲ್ಲೇ ಮೊದಲಿಗರು ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಪ್ರಸ್ತುತ ಮಣಿಪಾಲ ಸಮುದಾಯ ಬಾನುಲಿ ಕೇಂದ್ರದ ಮುಖ್ಯಸ್ಥೆಯಾಗಿ, ಕರ್ನಾಟಕ ಸಮುದಾಯ ಬಾನುಲಿ ಕೇಂದ್ರಗಳ ಸಂಘದ ಸ್ಥಾಪಕಾಧ್ಯಕ್ಷರಾಗಿ ಡಾ. ರಶ್ಮಿ ಅಮ್ಮೆoಬಳರವರು ಆಯ್ಕೆಯಾಗಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ. ಇನ್ನಷ್ಟು ಸಾಧನೆ ಮಾಡಿ ಯಶಸ್ಸು ಕಾಣಲಿ ಎನ್ನುವುದೇ ನನ್ನ ಆಶಯ.
-ರಮ್ಯ ಎನ್ ನೆಕ್ಕರಾಜೆ ವೀರಕಂಭ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ