ಮಂಗಳೂರು: ಒಬ್ಬ ನಾಯಕನಾಗಿ ಹೊರಹೊಮ್ಮುವುದಕ್ಕೆ ಯಾವುದೇ ಹುದ್ದೆ, ರ‍್ಯಾಂಕ್ ನ ಅಗತ್ಯವಿಲ್ಲ. ಸಂದರ್ಭಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಗುಣವಿದ್ದರೆ ಸಾಕು. ರೆಡ್ ಕ್ರಾಸ್ ಇಂತಹ ಗುಣಗಳನ್ನು ಬೆಳೆಸುತ್ತದೆ, ಎಂದು ನಿವೃತ್ತ ಐಜಿಪಿ, ಕರ್ನಾಟಕ ರೆಡ್ ಕ್ರಾಸ್ ಶಾಖೆಯ ಉಪಾಧ್ಯಕ್ಷ ಗೋಪಾಲ್ ಬಿ. ಹೊಸೂರ್ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಸರಕಾರಿ ಜಿಲ್ಲಾ ವೆನ್ಲಾಕ್ ಅಸ್ಪತ್ರೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಯೇನಪೋಯ ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಇವುಗಳ ಜಂಟಿ ಆಶ್ರಯದಲ್ಲಿ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ನಡೆದ ವಿಶ್ವ ರೆಡ್ ಕ್ರಾಸ್ ದಿನ-2023, ಯುವ ರೆಡ್ ಕ್ರಾಸ್ ಸ್ವಯಂಸೇವಕರ ಇಂಟರ್ನ್ ಶಿಪ್ -0.1 ಪ್ರಶಸ್ತಿ ಪ್ರದಾನ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭ ಮತ್ತು ಸೇವ ನಿವೃತ್ತಿ ಹೊಂದುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ವೇಳೆ ಮೊಟ್ಟಮೊದಲ ಮಂಗಳೂರು ವಿಶ್ವವಿದ್ಯಾನಿಲಯದ ಮೊದಲ ತೌಳವ ಕುಲಪತಿಯಾಗಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕೋವಿಡ್ ಸಮಯದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳನ್ನು, ಅಂತೆಯೇ ರೆಡ್ ಕ್ರಾಸ್ ಗಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಅವರನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸೇವೆಯಲ್ಲಿ ತೊಡಗಿಕೊಂಡಿರುವಾಗ ಸಿಗುವ ಸಾರ್ಥಕ್ಯದ ಖುಷಿ ಕೋಟಿ ಕೊಟ್ಟರೂ ಸಿಗದು. ಈ ನಿಟ್ಟಿನಲ್ಲಿ ಕೋವಿಡ್, ಮತ್ತು ಇನ್ನಿತರೆ ಕೆಲವು ತುರ್ತು ಸಂದರ್ಭಗಳಲ್ಲಿ ರೆಡ್ ಕ್ರಾಸ್ನ ಸೇವೆ ಶ್ಲಾಘನೀಯ ಎಂದರು. ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ ರೆಡ್ ಕ್ರಾಸ್ ಗೆ ಸೇರಲು ನಿರ್ಮಲ ಮತ್ತು ನಿಷ್ಕಲ್ಮಶ ಮನಸ್ಸಿದ್ದರೆ ಸಾಕು. ಯುವ ರೆಡ್ ಕ್ರಾಸ್ 'ಮಾನವೀಯತೆಯ ಮನೆ'ಯಿದ್ದಂತೆ ಎಂದರು.
ಇದೇ ಸಂದರ್ಭದಲ್ಲಿ ಗೋಪಾಲ್ ಬಿ. ಹೊಸೂರ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ವಿವಿಯ ಕೊಂಕಣಿ ಅಧ್ಯಯನ ಪೀಠ ಹಾಗೂ ಬ್ಯಾರಿ ಅಧ್ಯಯನ ಪೀಠಗಳ ವತಿಯಿಂದಲೂ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯೆನಪೋಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯ್ ಕುಮಾರ್, ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಸಿ.ಎ ಶಾಂತಾರಾಮ್ ಶೆಟ್ಟಿ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಗೌರವ ವೈದ್ಯಾಧಿಕಾರಿ ಡಾ. ಕೆ. ಆರ್ ಕಾಮತ್, ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಭಾರತೀಯ ರೆಡ್ ಕ್ರಾಸ್ ರಾಜ್ಯ ಪ್ರತಿನಿಧಿ ಯತೀಶ್ ಬೈಕಂಪಾಡಿ, ಯುವ ರೆಡ್ ಕ್ರಾಸ್ ನಿರ್ದೇಶಕ ಸಚೇತ್ ಸುವರ್ಣ, ಕಾರ್ಯದರ್ಶಿ ಸಂಜಯ್ ಶೆಟ್ಟಿ, ಖಜಾಂಜಿ ಮೋಹನ್ ಶೆಟ್ಟಿ, ಯೇನಪೋಯ ವಿವಿಯ ರೆಡ್ ಕ್ರಾಸ್ ನೋಡಲ್ ಅಧಿಕಾರಿ ನಿತ್ಯಶ್ರೀ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ