ಪ್ರತಿಭೆ ಎಂಬುದು ಹುಟ್ಟಿದಾಗಿನಿಂದಲೇ ಒಲಿದು ಬರುವಂತಹ ಮಚ್ಚೆಯಲ್ಲ ಹಾಗೂ ಸುಲಭವಾಗಿ ದೊರೆಯುವಂತದ್ದೂ ಅಲ್ಲ. ತನಗೊಲಿದ ಕಲೆಯನ್ನು ಶ್ರದ್ಧೆಯಿಂದ ಕಲಿತು, ಛಲ ಬಿಡದೆ, ನಿರಂತರ ಕಠಿಣ ಪರಿಶ್ರಮದ ಬೆವರಿನ ಫಲವೇ ಸಾಧನೆ. ಅಂತಹ ಸಾಧನೆಯ ಹಾದಿಯಲ್ಲಿ ನಡೆದು ಸಾಧಕಿಯಾಗಿರುವವರು ಕರ್ನಾಟಕದ ಕುವರಿ, ಶ್ರೇಯಾ ಚಿದಾನಂದ ಪೂಜಾರಿ.
ಇವರು ಮೂಲತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನಿವಾಸಿಯಾಗಿದ್ದು, ದಿ|| ಚಿದಾನಂದ ಪೂಜಾರಿ ಮತ್ತು ಪ್ರೇಮ ದಂಪತಿಗಳ ಪುತ್ರಿ. ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರಸ್ವತಿ ವಿದ್ಯಾಲಯದಲ್ಲಿ ಪಡೆದಿರುತ್ತಾರೆ. ಹಾಗೂ ಪದವಿಪೂರ್ವ ಶಿಕ್ಷಣವನ್ನು ಎಸ್‌ಎಸ್ ಪಿಯು ಕಾಲೇಜು ಸುಬ್ರಹ್ಮಣ್ಯದಲ್ಲಿ ಪಡೆದಿರುತ್ತಾರೆ. ಇವರು ಪ್ರಸ್ತುತ ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಪ್ರಥಮ ಬಿ.ಸಿ.ಎ ಅನ್ನು ವ್ಯಾಸಂಗ ಮಾಡುತ್ತಿದ್ದಾರೆ. ಇವರ ಸಹೋದರ ಶ್ರವಣ್ ಕಡಬ ರವರು ತಮ್ಮ ಓದಿನೊಂದಿಗೆ, ತಮ್ಮನ್ನು ತಾವು ಯಕ್ಷಗಾನ, ಸಂಗೀತ ಹಾಗೂ ನೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರೇಯರವರು ನೃತ್ಯಕ್ಕೆಂದೇ ಇಳಿದರೆ ನಾಟ್ಯಮಯೂರಿಯೇ ನಾಚುವುದು, ಸಂಗೀತದ ಜಟಾಪಟಿಯಾದರೆ ಕೋಗಿಲೆಯನ್ನೇ ಮೀರಿಸುವರು, ಲೇಖನವನ್ನು ಹಿಡಿದರೆ ಒಂದೊಮ್ಮೆ ಕವಿ ಪುಂಗವರ ಸ್ಥಾನಕ್ಕೆ ಭೇಟಿ ನೀಡುವರು, ಹಾಗೂ ಚಿತ್ರಕಲೆಗೆ ಇಳಿದರೆ ಕಠಿಣವೆಂಬುದೇ ಇವರ ಬಳಿ ಸುಳಿಯದು. ಹೀಗೆ ಸಂಗೀತ, ನೃತ್ಯ, ಕವನ, ಕೀಬೋರ್ಡ್ ಮತ್ತು ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆಯಾದ ಶ್ರೇಯರವರು ನಮ್ಮ ನಾಡಿಗೆ ಅಮೋಘ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.
ಇವರು ಗಾಯನ ಲೋಕದಲ್ಲಿ ತಮ್ಮ ಮಧುರವಾದ ಸ್ವರ ಕಂಠದ ಮೂಲಕ ಜನರ ತನು– ಮನಗಳನ್ನು ಸೆಳೆಯುತ್ತಿರುವ ಗಾಯಕಿ. ಶ್ರೇಯರವರು ಸಂಗೀತ ತರಬೇತಿಯನ್ನು ಡಾ. ಕಿರಣ್ ಕುಮಾರ್ ಗಾನಸಿರಿ ಹಾಗೂ ರಘು ಬಿಜೂರು ಇವರಿಂದ ಪಡೆದಿರುತ್ತಾರೆ ಹಾಗೂ ಕೀಬೋರ್ಡ್ ತರಬೇತಿಯನ್ನು ಶ್ರೀ ಕಡ್ಯಾ ವಾಸುದೇವ ಭಟ್ ಇವರಿಂದ ಪಡೆದಿರುತ್ತಾರೆ. ಇವರ ಕಂಠ ಒಂದು ಕೋಗಿಲೆ, ತಿಳಿದವರು ನಿಲ್ಲರು ಕೇಳದೆ. ಇವರು ತುಳು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಸಂಗೀತವನ್ನು ಹಾಡುತ್ತಾರೆ. ಇವರು ಗಾಯನ ಸ್ಪರ್ಧೆಗಳಲ್ಲಿ "Best Performer" ಆಗಿ ಕೂಡ ಮಿಂಚಿದ್ದಾರೆ. ಬೆಳ್ತಂಗಡಿಯಲ್ಲಿ ನಡೆದ "Star singer" ಜೋಡಿ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಇವರು ಕಲಾ ರಂಗಕ್ಕೆ ನೀಡಿದ ಅಮೋಘ ಸೇವೆಯನ್ನು ಗುರುತಿಸಿ ಆಮಂತ್ರಣ ಸಂಸ್ಥೆಗಳ ವತಿಯಿಂದ ಕಲೆ ಆರಾಧನೆ ಗೌರವವನ್ನು ನೀಡಿರುತ್ತಾರೆ.
ಇವರು ಡಾ. ಶೇಖರ್ ಅಜೆಕಾರುರವರ ನೇತೃತ್ವದಲ್ಲಿ ಕರ್ನಾಟಕ ಮಕ್ಕಳ ಸಮ್ಮೇಳನದ ವತಿಯಿಂದ "state honour award" ಸ್ವೀಕರಿಸಿರುತ್ತಾರೆ. ಪಿ.ವಿ ಪ್ರದೀಪ್ ಕುಮಾರ್ ರವರ ನೇತೃತ್ವದಲ್ಲಿ ಕಥಾ ಬಿಂದು ಪ್ರಕಾಶನದ ವತಿಯಿಂದ"ಚೈತನ್ಯಶ್ರೀ "ಪ್ರಶಸ್ತಿ ಪಡೆದಿರುತ್ತಾರೆ. ಸತ್ಯ ಶಾಂತ ಪ್ರತಿಷ್ಠಾನ (ರಿ )ಇದರ ವತಿಯಿಂದ ನೀಡಲಾದ ರಾಜ್ಯಮಟ್ಟದ ಪ್ರತಿಭಾ ಚೇತನ ಪ್ರಶಸ್ತಿ – 2022ರ ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಇವರು ತಮ್ಮ ಊರಿನ ದೇವಸ್ಥಾನ ಹಾಗೂ ಕೊರಗಜ್ಜನ ದೈವಸ್ಥಾನದ ಕುರಿತು ಭಕ್ತಿ ಗೀತೆಯನ್ನು ರಚಿಸಿ ಧ್ವನಿ ನೀಡಿ ಸಿಡಿ ಬಿಡುಗಡೆಯನ್ನು ಮಾಡಿರುತ್ತಾರೆ. ಟಿವಿ ಚಾನಲ್ ಗಳಲ್ಲೂ ತಮ್ಮ ಪ್ರತಿಬೆ ಪ್ರದರ್ಶಿಸಿರುತ್ತಾರೆ. ಹೀಗೆ ತಮ್ಮ ಗಾಯನದ ಸಾಧನೆಯನ್ನು ಮುಂದುವರಿಸುತ್ತಾ ಬರುತ್ತಿದ್ದಾರೆ.
ಬಹುಮುಖ ಪ್ರತಿಭಾವಂತೆಯಾಗಿರುವ ಶ್ರೇಯ ರವರು ನೃತ್ಯದ ಮೂಲಕವೂ ಜನರನ್ನು ರಂಜಿಸುತ್ತಿದ್ದಾರೆ.ಇವರು ನೃತ್ಯ ತರಬೇತಿಯನ್ನು ವಿದುಷಿ ಶಾಲಿನಿ ಆತ್ಮ ಭೂಷಣ್ ಹಾಗೂ ವಿದುಷಿ ಪ್ರಮೀಳ ಲೋಕೇಶ್ ರವರಿಂದ ಪಡೆದಿರುವರು. ಇವರು ಭರತನಾಟ್ಯದ ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ತೇರ್ಗಡೆ ಹೊಂದಿರುತ್ತಾರೆ. ಇವರು ಕಾರ್ಯಕ್ರಮಗಳಲ್ಲಿ ತಮ್ಮ ನೃತ್ಯವನ್ನು ನೀಡುವ ಮೂಲಕ ಜನರನ್ನು ರಂಜಿಸುತ್ತಿದ್ದಾರೆ.
ಇವರು ಯಾವುದೇ ತರಬೇತಿಯನ್ನು ಪಡೆಯದೆ ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡು, ಇಂದು ಅದ್ಭುತವಾದ ಕೊಡುಗೆ ನೀಡುತ್ತಿದ್ದಾರೆ.ಗೃಹಪ್ರವೇಶ ಹಾಗೂ ಮದುವೆಗಳಂತಹ ಸಮಾರಂಭಗಳಲ್ಲಿ ತಾವೇ ಬಿಡಿಸಿದ ಚಿತ್ರಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಶ್ರೀ ಗೋಕರ್ಣ ಕ್ಷೇತ್ರ ಕುದ್ರೋಳಿಗೆ ತಾವೇ ಬಿಡಿಸಿದ ಶಿವನ ಚಿತ್ರವನ್ನು ನೀಡಿರುತ್ತಾರೆ. ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರಶಸ್ತಿಗಳನ್ನು ತಮ್ಮ ಮುಡುಗೇರಿಸಿಕೊಂಡಿರುತ್ತಾರೆ. ಯುವವಾಹಿನಿ (ರಿ) ಕಡಬ ಘಟಕ ಕಡೆಯಿಂದ ಪ್ರತಿಭಾ ಪುರಸ್ಕಾರವನ್ನು ಪಡೆದಿರುತ್ತಾರೆ.
ಇಷ್ಟಲ್ಲದೇ ಇವರು ಪ್ರಥಮ ಪದವಿಯ ವಿದ್ಯಾಭ್ಯಾಸದೊಡನೆ ಹವ್ಯಾಸವಾಗಿ ರೂಡಿಸಿಕೊಂಡ ಕವನ ರಚನೆಯ ಮೂಲಕ ಅಮೋಘ ಸಾಧನೆಯನ್ನು ಮಾಡುತ್ತಿದ್ದಾರೆ. ಇವರು ರಾಜ್ಯಮಟ್ಟದ ಮಕ್ಕಳ ಕವಿಗೋಷ್ಠಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು ಸೇರಿದಂತೆ ಹಲವಾರು ಬಹುಮಾನಗಳನ್ನು ಮುಡಿಗೇರಿಸಿಕೊಂಡಿರುತ್ತಾರೆ. ಅಂದು ರೂಡಿಸಿಕೊಂಡ ಆ ಸಣ್ಣ ಹವ್ಯಾಸ, ಇಂದು ತಾವೇ ಕವನ ರಚಿಸಿ ಸ್ವತಃ ಹಾಡುವ ಮೂಲಕ ಜನರ ಮನ ಗೆದ್ದಿರುತ್ತಾರೆ.
"ಬಹುಮುಖ ಪ್ರತಿಭೆ ಯಾದ ಶ್ರೇಯ ಸಿಪಿ ಕಡವರನ್ನು ತಮ್ಮ ಸಾಧನೆಯ ಸ್ಪೂರ್ತಿ ಯಾರೆಂದು ಕೇಳಿದಾಗ ಅವರ ಮಾತಿನಲ್ಲಿ ಅರಳಿದ ಪದವೊಂದೇ– 'ನನ್ನ ಅಮ್ಮ' ಅಮ್ಮನೇ ನನಗೆ ಸ್ಪೂರ್ತಿ, ನನ್ನ ಗೆಲುವು. ಸಾಧನೆಯ ಪಥದ ಸುಲಭದ ರಾಣಿ ಅಮ್ಮ. ರಾತ್ರಿ– ಹಗಲು ಎನ್ನದೆ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದ ಬೆನ್ನುಗಾವಲು ಎಂದು ಹೇಳಿದರು".
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಮ್ಮ ಪ್ರತಿಯೊಂದು ಸಾಧನೆಗೂ ಬೆನ್ನುಗಾವಲಾಗಿರುವ ನಿಮ್ಮ ಅಮ್ಮನಿಗೊಂದು ನನ್ನ ದೊಡ್ಡ ಸಲಾಂ. ಸಾಧನೆಯ ಪಟ್ಟಿಯಲ್ಲೊಂದು ಸಾಧಕರಾಗಿದ್ದರು ಕೂಡ, ಸ್ವಲ್ಪವೂ ಅಹಂ ಇಲ್ಲದ ಸರಳತೆಯ ಸುಂದರ ನಡತೆ. ಪ್ರತಿಭೆಗಳಿಗೆ ಜೀವ ತುಂಬಿರುವ ಒಡತಿ. ನನಗೊಂದು ಹೆಮ್ಮೆಯ ಸಂಗತಿ, ನಾ ನಿಮ್ಮ ಗೆಳೆಯರ ಬಳಗತಿ. ಹರಸುವೆ ನಾ ನಿಮಗೆ ಬೆಳಕಾಗಲಿ ನಿಮ್ಮ ಜೀವನವು ಸಾಧನೆಯ ಹಾದಿಯೊಂದಿಗೆ, ಹರುಷದಿ ನಗುತಿರಿ ಎಂದೆಂದಿಗೂ. ಆಶಿಸುವೆನು ನಿಮ್ಮ ಬಹುಮುಖ ಪ್ರತಿಭೆ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಹರಡಲಿ.
- ಕೀರ್ತನ ಒಕ್ಕಲಿಗ, ಬೆಂಬಳೂರು
ಪ್ರಥಮ ಬಿಎ, ವಿವೇಕಾನಂದ ಕಾಲೇಜು ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ