ಮಗಳೆಂಬ ಮುತ್ತು ಅಪ್ಪನ ಪಾಲಿನ ಸಂಪತ್ತು

Upayuktha
0

ಡತನದ ಬವಣೆಗಳಲ್ಲಿ ಬದುಕು ಸಾಗಿಸುತ್ತಿದ್ದ ವ್ಯಕ್ತಿಗೆ ಒಬ್ಬಳೇ ಮಗಳಿದ್ದಳು. ಸಿರಿತನವೆಂಬುದು ಬದುಕಿನಲ್ಲಿ ಕಾಣದಿದ್ದರೂ ಮಗಳನ್ನೇ ತನ್ನ ಸಿರಿ ಎಂದು ತಿಳಿದಿದ್ದ ತಂದೆಗೆ ಮಗಳೇ ಪ್ರಪಂಚವಾಗಿದ್ದಳು. ಎಷ್ಟೇ ಕಷ್ಟ ತನಗಾದರೂ ಮಗಳನ್ನು ತುಂಬಾ ಚನ್ನಾಗಿ ಬೆಳೆಸಲು ಪ್ರಯತ್ನಿಸಿದ್ದ. ಆ ಮಗುವಿನ ತಾಯಿ ತೀರಿದ ಮೇಲೆ ಮರು ಮದುವೆಯಾಗದೆ ಮಗಳಿಗಾಗಿ ತನ್ನ ಸುಖ ಸಂತೋಷಗಳನ್ನು ಬದಿಗಿಟ್ಟು ಮಗಳನ್ನು ಬೆಳೆಸಿದ್ದ.


ದೇವರ ಸನ್ನಿಧಿಯ ತೀರ್ಥ ರೂಪದ ಗಂಗೆಯಲಿ ಮಿಂದೆದ್ದ ಮೃದುವಾದ ಮಲ್ಲಿಗೆಯಂತೆ ಅಪ್ಪನ ಪ್ರೀತಿಯಲಿ ಬೆಳೆದ ಕೋಮಲೆ ಅವಳಾಗಿದ್ದಳು. ಮಗಳಿಗೂ ಅಷ್ಟೇ, ಅಪ್ಪಂನೆಂದರೆ ಎಲ್ಲಿಲ್ಲದ ಪ್ರೀತಿ.


ಸಿಗ್ಮಂಡ್ ಫ್ರಾಯ್ಡ್ ನ ಸೈಕೋ ಅನಲಿಸೀಸ್ ಥಿಯರಿ "ಈಡಿಪಸ್ ಕಾಂಪ್ಲೆಕ್ಸ್" ಮನೋ ವಿಶ್ಲೇಷಣೆಯ ಸಿದ್ಧಾಂತದಲ್ಲಿ, ಹೇಳಿದಂತೆ ವಿರುದ್ಧ ಲಿಂಗದ ಪೋಷಕರೊಂದಿಗೆ ಮಗುವಿನ ಆಪ್ತತೆ ಮತ್ತು ಅದೇ ಲಿಂಗದ ಪೋಷಕರೊಂದಿಗೆ ಪೈಪೋಟಿಯ ಹೊಂದಾಣಿಕೆಯ ಪ್ರಜ್ಞೆಯಂತೆ ಮಗಳು ಅಪ್ಪನನ್ನು, ಮಗ ತಾಯಿಯನ್ನು ಪ್ರೀತಿಸುವುದು ಸಹಜ. 


ಅಪ್ಪನ ಪ್ರತಿ ನಾಡಿ ಮಿಡಿತ ಅವಳಿಗೆ ತಿಳಿದಿತ್ತು. ತನ್ನನ್ನು ಸುಖಿಯಾಗಿ ಇಡಲು ಅಪ್ಪ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂಬ ಸ್ಪಷ್ಟ ಅರಿವು ಅವಳಿಗೂ ಇತ್ತು. ಅದೇನೋ ಗೊತ್ತಿಲ್ಲ ಈ ಪ್ರಕೃತಿಯಲ್ಲಿ ಅಪ್ಪ ಮಗಳ ಬಾಂಧವ್ಯ ಅದೊಂದು ಅನನ್ಯ, ಅನುಪಮ, ಅದೃಷ್ಟ ಕೂಡ. ತಾಯಿಯು ಅಪ್ಪನನ್ನು ಪರದೆಯಂತೆ ಮುಚ್ಚಿದರು ತೆರೆಯ ಹಿಂದಿನಿಂದಲೇ ಎಲೆ ಮರೆಯ ಕಾಯಿಯಂತೆ ಶ್ರಮಿಸುವ ಶ್ರೇಷ್ಠ ಬಂಧು ಅದು ತಂದೆ ಮಾತ್ರ.


ಹೀಗಿರುವಾಗ ಮಗಳು ಬೆಳೆಯುತ್ತಾ ಏನಾದರೊಂದು ಸಾಧಿಸಿ ತನ್ನ ತಂದೆಯನ್ನು ಈ ಕಷ್ಟಗಳ ಕಪಿಮುಷ್ಠಿಯಿಂದ ಹೊರತರಬೇಕೆಂದು ಪಣ ತೊಟ್ಟಳು. ಬಡತನದಲ್ಲಿರುವವರಿಗೆ ಮೆಡಿಕಲ್, ಇಂಜಿನಿಯರಿಂಗ್ ಮಾಡುವುದು ಕೂಡ ಕಷ್ಟ ಎನಿಸುವ ಸಂದರ್ಭದಲ್ಲಿ, ತಂದೆತಾಯಿಗಳಿಗೆ ಹೊರೆಯಾಗಬಾರದು ಎಂದು ಯೋಚಿಸಿ ಕಡಿಮೆ ಖರ್ಚಿನಲ್ಲಿ ಓದಿ, ತಾನೊಂದು ಐಎಎಸ್ ಅಧಿಕಾರಿಯಾಗಲು ಕನಸು ಕಂಡಳು. ಅಪ್ಪನಲ್ಲಿ ನೀವೇಧಿಸಿಕೊಂಡು ದೆಹಲಿಗೆ ತರಬೇತಿಗಾಗಿ ಹೊರಡಲು ಸಿದ್ಧಳಾದಳು.


ಮಗಳೇ ತನ್ನ ಬದುಕಿನ ಕನಸು ಎಂದುಕೊಂಡವನಿಗೆ ಮಗಳ ಕನಸುಗಳು ಭಾರ ಎನಿಸುತ್ತವೆಯೇ! ಸಾಧ್ಯವೇ ಇಲ್ಲ. "ಆಯ್ತು ಮಗಳೇ. ನಿನ್ನ ಇಷ್ಟವೇ ನನ್ನ ಇಷ್ಟ. ನೀನು ಹೊರಡಲು ಟ್ರೈನ್ ಬುಕ್ ಮಾಡಿಕೋ ನಾನು ತರಬೇತಿಗೆ ಹಣ ಹೊಂದಿಸುತ್ತೇನೆ" ಎಂದು ಅಭಯ ಹಸ್ತವಿತ್ತ. ತಂದೆ ಬಡವನಾಗಿದ್ದರೂ ಮಕ್ಕಳಿಗೆ ಯಾಕೆ ಶ್ರೀಮಂತ ಎನ್ನುವುದು ಇಂತಹ ಗುಣಗಳಿಂದ ತಿಳಿಯುವಂತದ್ದು. ಆಲ್ವಾ!


ಆ ದಿನ ಬಂದೇ ಬಿಟ್ಟಿತು. ಮಗಳು ಹೊರಟು ನಿಂತಳು. ಅಪ್ಪನಿಗೆ ಅದ್ಯಾಕೋ ಕಸಿವಿಸಿ. ಎಂದೂ ಬಿಟ್ಟಿರದ ಮಗಳನ್ನು ಒಂದು ವರ್ಷ ದೆಹಲಿಗೆ ಕಳುಹಿಸುವುದು ಹೇಗೆಂದು ಒಳಗೊಳಗೇ ಚಡಪಡಿಸುತ್ತಿದ್ದ. ಮುಂದೆ ಮದುವೆ ಮಾಡಿ ಕಳುಹಿಸುವ ಸಂದರ್ಭ ಬಂದಾಗ ನಾನೇನು ಮಾಡಲಿ! ಮಗಳನ್ನು ಹೇಗೆ ಬಿಟ್ಟಿರಲಿ ಎಂದೆಲ್ಲ ಒಳಗೊಳಗೇ ನೋವು ಪಡುತ್ತಾ ಹೊರಗೆ ಮಾತ್ರ ಗಟ್ಟಿ ಜಟ್ಟಿ ತಾ ಎನ್ನುವಂತೆ ನಗುತ್ತಾ ಗಂಭೀರ ಮುಖ ಹೊತ್ತು ಸ್ಟೇಷನ್‌ಗೆ ಮಗಳ ಲಗೇಜ್ ಜೊತೆ ಬಂದು ಮಗಳನ್ನು ಟ್ರೈನ್ ಒಳಗೆ ಕೂಡಿಸಿ, ತಾನು ಕಿಟಕಿಯಲ್ಲಿ ಬಂದು ನಿಂತು ತಂದೆಯಾಗಿ ತಿಳಿಸುವ ಎಲ್ಲಾ ಸೂಚನೆಗಳನ್ನು ಮಗಳಿಗೆ ಕೊಡುತ್ತಿದ್ದಂತೆ ಟ್ರೈನ್ ಸೈರನ್ ಆಗಿಯೇ ಬಿಟ್ಟಿತು. ಟ್ರೈನ್ ಹೊರಟಿತು. ಕಣ್ಣು ತುಂಬಿಕೊಂಡು ಮಗಳಿಗೆ ಟಾಟಾ ಎನ್ನುತ್ತಾ, ಟ್ರೈನ್ ಆ ಸ್ಟೇಷನ್ ನಿಂದಕಣ್ಮರೆಯಾಗುವವರೆಗೆ ಅಲ್ಲಿಯೇ ನಿಂತು, ಮಗಳು ಹೋದ ದಿಕ್ಕಿನೆಡೆಗೆ ಪದೇ ಪದೇ ನೋಡುತ್ತಾ, ಮಗಳೇ ನಿನ್ನ ಕನಸುಗಳು ಸಾಕಾರಗೊಳ್ಳಲಿ ಎಂದು ಮನದಲ್ಲೇ ಹಾರೈಸುತ್ತಾ ಮನೆಗೆ ತೆರಳಿದ.


ಯಾತವತ್ತಾಗಿ ತನ್ನ ದಿನಚರಿಯಂತೆ ಕೆಲಸಕ್ಕೆ ಹೋಗಿ, ಕೆಲಸದ ನಡುವೆ ಆಗಾಗ ಮಗಳನ್ನ ನೆನೆಯುತ್ತಾ ತೇವಗೊಂಡ ಕಣ್ಣುಗಳನ್ನು ಅಲ್ಲಲ್ಲೇ ಒರೆಸಿಕೊಂಡು ಕೆಲಸದಲ್ಲಿ ತಲ್ಲೀನನಾದ. ಹೀಗೆ ಮೂರು ನಾಲ್ಕು ಗಂಟೆಗಳು ಕಳೆದಿರಬೇಕು TV ಯಲ್ಲಿ ಭಯಾನಕ ಸುದ್ದಿಯೊಂದು ಬಿತ್ತರಗೊಂಡಿತು. Coromandel express ಟ್ರೈನ್ ಆಕ್ಸಿಡೆಂಟ್ ಆಗಿದೆ ಎಂದು. ವಿಷಯ ತಿಳಿದು ಈತನ ಎದೆ ಜಲ್ ಎಂದಿತು. ಮಗಳೇ ಎಂದು ಚಿತ್ಕಾರ ಕೂಗಿದ. ತಕ್ಷಣಕ್ಕೆ ಸ್ಮರಣ ಶಕ್ತಿ ಹೇಳಿತು no no ನನ್ನ ಮಗಳು ಹೊರಟ ಟ್ರೈನ್ ಇದಲ್ಲ. ಅದು 'Bangalore-Howrah superfast'.


ಹೌರಾಗೆ ಹೋಗಿ ಅಲ್ಲಿಂದ ದೆಹಲಿಗೆ ಹೋಗುವ ಅವಳ ಪ್ರಯಾಣದ ಯೋಜನೆ ಅಪ್ಪನಿಗೆ ತಿಳಿದಿತ್ತು. ಒಂದು ಸೆಕೆಂಡ್‌ಗೆ ಹೋದ ಜೀವ ಮತ್ತೆ ಬಂದಂತಾಯ್ತು. ನನ್ನ ಮಗಳ ಕನಸುಗಳು ಉಳಿದವು. ದೇವರಲ್ಲಿ ಪ್ರಾರ್ಥಿಸಿದ. ಯಾಕೋ ಸಮಾಧಾನವಿಲ್ಲದಂತಾಗಿ ಮನೆಗೆ ಓಡಿ ಬಂದ. Tv on ಮಾಡಿದ ಅಪ್ಪನಿಗೆ ಮತ್ತೆ ಆಶ್ಚರ್ಯ ಕಾದಿತ್ತು. ಮಗಳು ಹೊರಟಿದ್ದು 'Bangalore-Howrah superfast ಟ್ರೈನ್ ಗೆ. ಆದರೆ ಡಿಕ್ಕಿ ಹೊಡೆದದ್ದು ಮೂರು ಟ್ರೈನ್ ಗಳು. ಅವುಗಳ ಪೈಕಿ ಅವನ ಮಗಳು ಇರುವ ಟ್ರೈನ್ ಕೂಡ ಇದೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ಹೃದಯ ಕಿತ್ತು ಬಂದಂತಾಯ್ತು. ಒಂದೇ ನೆಗೆತಕ್ಕೆ ಅಲ್ಲಿಯೇ ಸಮೀಪದಲ್ಲಿ ಇಟ್ಟಿದ್ದ ಮೊಬೈಲ್ ತೆಗೆದುಕೊಂಡು ಮಗಳಿಗೆ ರಿಂಗಣಿಸಿದ. ರಿಂಗಾಯಿತು ರಿಂಗಾಯಿತು ಫೋನ್ ಎತ್ತುವವರೇ ಇಲ್ಲ. ಮೊದಲೇ ಗಾಬರಿಯಾಗಿದ್ದ ಅಪ್ಪನ ಮನಸಿಗೆ ಮತ್ತೂ ಘಾಸಿಯಾದಂತಾಯ್ತು. ಮತ್ತೆ ಮತ್ತೆ ರಿಂಗಣಿಸಿದ ಪ್ರಯೋಜನವಾಗಲಿಲ್ಲ. ಎದೆ ಹೊಡೆದುಕೊಳ್ಳಲು ಪ್ರಾರಂಭವಾಯ್ತು. ಮಗಳೇ ಮಗಳೇ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದ. ತಾಯಿ ಇಲ್ಲದ ತಬ್ಬಲಿಯನ್ನು ಅಂಗೈಯಲ್ಲಿರಿಸಿ ಬೆಳೆಸಿ ದೊಡ್ಡವಳನ್ನಾಗಿಸಿದ್ದೆ. ಅವಳ ಕನಸುಗಳನ್ನು ನನಸಾಗಿಸಲು ಏನೆಲ್ಲಾ ಮಾಡಲು ಸಿದ್ಧನಾಗಿದ್ದೆ. ಹೀಗಿರುವಾಗ ಆ ವಿಧಿಗೆ ನನ್ನ ಮಗಳ ಮೇಲೆ ಕಣ್ಣು ಬಿದ್ದಿತೆ! ನನ್ನನ್ನಾದರು ದೇವರು ಮೇಲೆ ಒಯ್ಯಬಾರದಿತ್ತೆ ಎಂದು ನೆಲಕ್ಕೆ ಬಿದ್ದು ನೋವಲ್ಲಿ ಹೊರಳಾಡಿ ಅತ್ತ. ಎಷ್ಟೇ ಇದ್ದರೂ ತಂದೆಯ ಹೃದಯ ಅಲ್ವಾ!


ತಕ್ಷಣ ಮತ್ತೆ ತಲೆಯಲ್ಲಿ ಒಂದು ವಿಚಾರ ಹೊಳೆಯಿತು. ಮಗಳು ಗಾಯಗೊಂಡಿರಬಹುದು.. ಆಸ್ಪತ್ರೆಯಲ್ಲಿರಬಹುದು.. ಆಕ್ಸಿಡೆಂಟ್ ಆದಾಗ ಮೊಬೈಲ್ ಎಲ್ಲೋ ಬಿದ್ದಿರಬಹುದು.. ಮಗಳ ಸಾವಾಗಿದೆ ಎಂದು ನಾನ್ಯಾಕೆ ಅಂದುಕೊಳ್ಳಬೇಕು! ಸಾಧ್ಯವಿಲ್ಲ.. ನನ್ನ ಮಗಳು ಸಾಯಲು ಸಾಧ್ಯವಿಲ್ಲ. ನನ್ನ ಬದುಕಿನ ಬಡತನವನ್ನು ಹಿಂಗಿಸಲು ಬಂದ ಲಕ್ಷ್ಮಿ ಅವಳು. ಸಾವಿನ ದವಡೆಯಲ್ಲಿದ್ದ ನನ್ನ ಹೆಂಡತಿಗೆ ಮಾತು ಕೊಟ್ಟಿದ್ದೆ ನಾನು ಮಗಳನ್ನು ಪ್ರಾಣ ಕೊಟ್ಟಾದರೂ ಸರಿ ಕಾಪಾಡಿಕೊಂಡು ಅವಳನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡಿಯೇ ತೀರುವೆ ಎಂದು. ಹೀಗಿರುವಾಗ ದೇವರು ಕೈ ಬಿಡಲಾರ. ನಾನು ಈಗಲೇ ಆ ಅಪಘಾತ ಸ್ಥಳಕ್ಕೆ ಹೊರಡಬೇಕು ಎಂದುಕೊಂಡು ತನ್ನ ಹತ್ತಿರದ ಬಂಧು ಬಳಗದವರಿಗೆ ವಿಷಯ ತಿಳಿಸಿ ತನ್ನ ಜೊತೆ ಬರಲು ಕೇಳಿಕೊಂಡ. ದೊಡ್ಡ ದಂಡೆ ಬಂದಿತು.


ಎಲ್ಲರೂ ಇನ್ನೇನು ಮನೆಯಿಂದ ಹೊರಡಬೇಕು ಎನ್ನುವುದರೊಳಗೆ ಅವನ ಮೊಬೈಲ್ ಗೆ ಕರೆಯೊಂದು ಬಂದಿತು. ಅವನು ಗದ್ಗದಿತನಾಗಿ ಆತಂಕದಿಂದ "ಹೆಲ್ಲೊ"! ಎಂದ. ಆ ಕಡೆಯಿಂದ "ಈ ಮೊಬೈಲ್ ಇಟ್ಟುಕೊಂಡ ಯುವತಿಯು ಅಸುನೀಗಿದ್ದಾಳೆ. ಅವಳ id ಕಾರ್ಡ್ ಮತ್ತು ಮೊಬೈಲ್ ಅವಳ ಜೊತೆ ಸಿಕ್ಕಿವೆ. ಇಸ್ಟೊತ್ತಿನವರೆಗೂ ಈ ಯುವತಿಯ ವಸ್ತುಗಳು ಕಸ್ಟಡಿಯಲ್ಲಿದ್ದವು. ಯುವತಿಯ ದೇಹವನ್ನು ಶವಾಗಾರದದಲ್ಲಿ ಇರಿಸಿರುವೆವು. ಬಂದು ಗುರುತಿಸಿ ತೆಗೆದುಕೊಂಡು ಹೋಗಬಹುದು" ಎಂದರು.


ಅಪ್ಪನ ಹೃದಯ ಛಿದ್ರವಾಯಿತು, ಮಾತು ಬರದಂತಾಯ್ತು, ದುಃಖ ದುಗುಡ ಇಲ್ಲದ ನಿರ್ಲಿಪ್ತವಾದ ಮುಖ ಅವನದಾಯ್ತು. ಕಣ್ಣುಗಳು ತುಂಬಿಕೊಂಡರು ಅಳು ಹೊರ ಬರಲಿಲ್ಲ. ಇದನ್ನೆಲ್ಲಾ ಗಮನಿಸಿದ ಸಂಬಂಧಿಕರು ಅವನ ಭುಜಕ್ಕೆ ಕೈ ಹಾಕಿ ಸಾಂತ್ವನ ಹೇಳಲು ಪ್ರಾರಂಭಿಸಿದರು. ನೋಡು! ಶವಾಗಾರದಲ್ಲಿ ಇಟ್ಟ ದೇಹವನ್ನು ತರೋಣ ನೀನು ಗಟ್ಟಿಯಾಗಬೇಕು ಎಂದರು.


ಅಪ್ಪನ ಮನಸು ಒಪ್ಪಲೇ ಇಲ್ಲಾ. No ನನ್ನ ಮಗಳು ಸಾಯಲಿಲ್ಲ. ಸಾಯಲು ಸಾಧ್ಯವಿಲ್ಲ. ನನ್ನ ಜೀವ ಮಾನದ ಕನಸು ಅವಳು. ದೇವರು ಹೀಗೆ ಅನ್ಯಾಯ ಮಾಡಲಾರ. ನನ್ನ ಮಗಳು ಬದುಕಿದ್ದಾಳೆ ಎಂದ. ಸಂಬಂಧಿಕರು ಸಮಾಧಾನ ಮಾಡುತ್ತಾ ಬಂದ ಕರೆ ಶವಾಗಾರ ಎಂದಮೇಲೆ ಸಾವು ಖಚಿತವಾಗಿದೆ ಎಂದರ್ಥ. ತಂದೆಯಾಗಿ ನಿನಗೆ ಮಗಳ ಸಾವನ್ನು ಒಪ್ಪಿಕೊಳ್ಳಲಾಗಲ್ಲ. ಹೀಗಾಗಿ ಅವಳು ಸತ್ತಿಲ್ಲ ಎನಿಸುವುದು ಸಹಜ. ಮೊದಲು ಹೋಗೋಣ ನಡೀರಿ. ಸಮಯವಾದಂತೆ ಮೃತ ದೇಹ ತರುವುದು ಕಷ್ಟವಾಗುತ್ತದೆ ಎಂದು ಮಾತನಾಡಿಕೊಂಡರು.


ಅಪ್ಪನ ಧ್ವನಿ ಮತ್ತೆ ಪ್ರತಿಧ್ವನಿಸಿತು. No.. ನನ್ನ ಮಗಳು ಬದುಕಿದ್ದಾಳೆ, ಸತ್ತಿಲ್ಲ.. ನನ್ನ ಬಿಟ್ಟು ಹೋಗಲು ಸಾಧ್ಯವಿಲ್ಲ. ನೀವು ಏನೇ ಹೇಳಿ ಅವಳು ಸತ್ತಿಲ್ಲ ಎಂದ.


ಸಂಬಂಧಿಕರು ಒಳಗೊಳಗೇ ಅಪ್ಪನ ಮನಸ್ಥಿತಿಯನ್ನು ಕಂಡು ಅದೆಷ್ಟು ಪ್ರೀತಿ ಮಗಳೆಂದರೆ ಎಂದು ಮಮ್ಮಲ ಮರುಗಿದರು. ಅದೆಷ್ಟೇ ಸಮಾಧಾನ ಮಾಡಿದರು ಅಪ್ಪನ ಮನಸು ಒಪ್ಪಲು ತಯಾರಿಲ್ಲ. ಮಗಳು ಬದುಕಿದ್ದಾಳೆ ನನ್ನ ಮಗಳು ಬದುಕಿದ್ದಾಳೆ ಎನ್ನುತ್ತಲೇ ಸ್ನೇಹಿತರು ಸಂಬಂಧಿಕರೊಂದಿಗೆ ವಾಹನವನ್ನು ಹತ್ತಿ ಮೊದಲೇ ಮೊಬೈಲ್ ಲ್ಲಿ ತಿಳಿಸಿದ ಶವಾಗಾರಕ್ಕೆ ತಲುಪಿದರು.


ಅಲ್ಲಿ ಸುಮಾರು 300 ಮೃತ ದೇಹಗಳನ್ನು ರಾಶಿ ರಾಶಿ ಯಾಗಿಸಿದ್ದರು. ಅದೆಷ್ಟು ಜನ ಕಣ್ಣೀರು ಹಾಕುತ್ತಾ, ಅಳುತ್ತಾ ನರಳುತ್ತಾ, ತಮ್ಮ ತಮ್ಮ ಸಂಬಂಧಿಕರ ಶವಗಳನ್ನು ಪಡೆಯಲು ಸಾಲಿನಲ್ಲಿ ನಿಂತಿದ್ದರು. ಒಳಗೆ ಬಿಳಿ ಬಟ್ಟೆಯಲ್ಲಿ ಸುತ್ತಿ ಇಟ್ಟ ಶವಗಳನ್ನು ನೋಡಿ ಈತನ ಎಲ್ಲಾ ಸ್ನೇಹಿತರು ಸಂಬಂಧಿಕರು ತಡೆಯಲಾಗದೆ ಇವನನ್ನು ತಬ್ಬಿಕೊಂಡು ಅಳಲು ಪ್ರಾರಂಭಿಸಿದರು. ಇವನು ಮಾತ್ರ ಇಲ್ಲಾ ನನ್ನ ಮಗಳು ಸತ್ತಿಲ್ಲ. ಸಾಯಲು ಸಾಧ್ಯವಿಲ್ಲ ಎಂದು ಒಂದೇ ಓಟಕ್ಕೆ ಎಲ್ಲರನ್ನೂ ನೂಕಿ ಶವಾಗಾರದ ಒಳಗೆ ನುಗ್ಗಿದ. ಒಂದೊಂದೇ ಬಟ್ಟೆ ಸುತ್ತಿಟ್ಟ ದೇಹಗಳ ಮುಖದ ಮೇಲಿನ ಬಟ್ಟೆಯನ್ನು ಸರಿಸಿ ನೋಡುತ್ತಾ ಮಗಳ ಹುಡುಕಾಟ ಪ್ರಾರಂಭ  ಮಾಡಿದ.


ಭಯದಿಂದ ಮೊದಲ ದೇಹದ ಮುಖ ನೋಡಿದ.. ನನ್ನ ಮಗಳಲ್ಲ, ಎರಡನೆಯ ದೇಹ.. ನನ್ನ ಮಗಳಲ್ಲ.. ಮೂರನೇಯ ದೇಹ.. No.. ಹೀಗೆ ಹತ್ತು, ಇಪ್ಪತ್ತು, ಮೂವತ್ತು, ನೂರು ಮೃತ ದೇಹಗಳ ಮುಖ ನೋಡಿದರೂ ಮಗಳ ಪತ್ತೆಯೇ ಇಲ್ಲಾ. 121 ನೇಯ ಶವ ಬಂದಿತು. ಮುಖದ ಮೇಲಿನ ಬಟ್ಟೆ ತೆರೆದ. ಅವಳೇ.. ಅವಳೇ.. ತನ್ನ ಮನೆಯ ಲಕ್ಷ್ಮಿ, ತನ್ನ ಮಗಳು.. ಎಂದು ಖಾತ್ರಿ ಪಡಿಸಿಕೊಂಡ. ಸ್ಥಬ್ದನಾದ. ಹತ್ತಿರಬಂದ. ಕಣ್ಣುಗಳು ತುಂಬಿಕೊಂಡವು. ಮಗಳ ಮುದ್ದು ಮುಖ ನೋಡಿದ.


ತಾಯಿ ಇಲ್ಲದ ಮಗಳನ್ನು ತಾನೊಬ್ಬನೇ ಬೆಳೆಸಿದ ಹಿಂದಿನ ಪ್ರತಿ ಕ್ಷಣಗಳು ಕಣ್ಣು ಮುಂದೆ ಹಾಯ್ದು ಹೋದವು. ಈ ರೀತಿ ನಿನ್ನನ್ನು ನೋಡಲು ಇಷ್ಟೊಂದು ನಾನು ಕಷ್ಟ ಪಡಬೇಕಿತ್ತೆ ಮಗಳೇ. ತಬ್ಬಲಿ ಮಗುವೆಂದು ಅದೆಷ್ಟು ಕಾಳಜಿವಹಿಸಿ ನಿನ್ನ ಬೆಳೆಸಿದೆ. ಇಂದು ನನ್ನನ್ನೇ ತಬ್ಬಲಿ ಮಾಡಿ ಹೊರಟೆಯಾ ಮುದ್ದು ಎಂದು ಭಾವ ತೀವ್ರತೆಯಲ್ಲಿ ಗಬಕ್ಕನೆ ಅವಳ ದೇಹವನ್ನು ತಬ್ಬಿಕೊಂಡು ಮಗಳ ಎದೆಗೆ ಒರಗಿ ಜೋರಾಗಿ ಕೂಗಿ ಕೂಗಿ ಅಳಲು ಪ್ರಾರಂಭಿಸಿದ. ನನ್ನ ಬಿಟ್ಟು ಹೋಗಬೇಡ, ಪ್ಲೀಸ್ ಹೋಗಬೇಡ ಮಗಳೇ. ನಿನಗಾಗಿ ಹಿಡಿದಿಟ್ಟ ಈ ಉಸಿರು ಇನ್ನಾರಿಗಾಗಿ ಮಗಳೇ.


ಕೂಸಿರುವಾಗ ನನ್ನೆದೆಯ ಮೇಲೆ ಮಲಗಿಸಿಕೊಂಡು ನಾನೇ ನಿನ್ನ ತಾಯಿಯಾಗಿ ಬೆಳೆಸಿದೆ. ಈಗ ಮತ್ತೆಂದೂ ಎದ್ದೇಳದ ನಿನ್ನೆದೆಯ ಮೇಲೆ ನಾ ಮಗುವಂತೆ ಮಲಗುವಂತಾದೆನಲ್ಲ ಮಗಳೇ ಎಂದು ಗಟ್ಟಿಯಾಗಿ ಮಗಳನ್ನು ತಬ್ಬಿ ಅಶ್ರುಧಾರೆ ಹರಿಸುತ್ತಿದ್ದಂತೆ ಒಂದು ಕ್ಷಣ ಅವನಿಗೆ ಏನೋ ಸದ್ದು ಕೇಳಿದಂತಾಯ್ತು.. ಏನದು...ಏನದು.. ಮನಸು ಪ್ರಶ್ನಿಸುತಿದೆ.... ಅವನಿಗೆ ಆ ಗಾಬರಿಯಲ್ಲಿ ಏನೊಂದು ಗೊತ್ತಾಗುತ್ತಿಲ್ಲ... ಆದರೂ ಅದೇನೋ ಲಬ್ ಡಬ್ ಎನ್ನುತಿದೆ. ಆಶ್ಚರ್ಯ... ಮಗಳ ಎದೆ ಹೊಡೆದು ಕೊಳ್ಳುತ್ತಿದೆ.. ಇದು ನಿಜವೇ!.. ಇದು ಕನಸೇ!! ಇದು ನನಸೇ..!


ಎದ್ದವನೇ.. ಜೋರಾಗಿ ಇಡೀ ಶವಗಾರಕ್ಕೆ ಕೇಳುವಂತೆ ಡಾಕ್ಟರ್.. ಡಾಕ್ಟರ್... ಡಾಕ್ಟರ್... ನನ್ನ ಮಗಳ ಹೃದಯ ಬಡಿಯುತ್ತಿದೆ.. ನನ್ನ ಮಗು ಬದುಕಿದೆ..ಎಲ್ಲಿದ್ದೀರಿ.. ಬೇಗ ಬನ್ನಿ ಎಂದು ಸಂತೋಷ, ದುಃಖ, ಗಾಬರಿ, ಆತಂಕ, ಆಶ್ಚರ್ಯ ಎಲ್ಲವೂ ಸಮ್ಮಿಶ್ರವಾದಂತೆ ಹುಚ್ಚನಂತೆ ಕೂಗ ತೊಡಗಿದ. ಅಲ್ಲೊಂದು ಮೆಡಿಕಲ್ ಟೀಮ್ ಗಾಬರಿಯಿಂದ ಓಡಿ ಬಂದು ತಪಾಸಣೆ ಮಾಡಿದರು. ಆಶ್ಚರ್ಯ ಎಂಬುವಂತೆ ಅವಳ ಹೃದಯ ಬಡಿಯುತ್ತಿದೆ. ಜೀವಂತವಿದ್ದಾಳೆ.


ತುರ್ತಾಗಿ ಆಂಬುಲೆನ್ಸ್ ಮೂಲಕ ಅವಳನ್ನು ಆಸ್ಪತ್ರೆಗೆ ದಾಖಲಿಸಿ ಸತತವಾಗಿ ICU ನಲ್ಲಿಟ್ಟು ಚಿಕಿತ್ಸೆ ಕೊಟ್ಟ 24 ಗಂಟೆಗಳ ತರುವಾಯ ಕಣ್ಣು ಬಿಟ್ಟಳು. ಇದೊಂದು ಪವಾಡವೇ ಸರಿ. ಆದರೆ ಮಗಳು ಸತಿಲ್ಲ ಸತ್ತಿಲ್ಲ ಎನ್ನುತ್ತಿದ್ದ ತಂದೆಯ ಒಳ ದನಿ ಸತ್ಯವೇ ಹೇಳಿತ್ತು. ಅಪ್ಪನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ ಮಗಳನ್ನು ಮತ್ತೆ ಮನೆಗೆ ಕರೆತಂದ ಅಪ್ಪನಿಗೆ ಮರುಜನ್ಮವಾಯ್ತು. ಮಗಳೆಂಬ ಮುತ್ತು ಯಾವತ್ತಿದ್ದರೂ ಅಪ್ಪನ ಪಾಲಿನ ಸಂಪತ್ತು. ಮಗಳಿಗಿಂತ ಅಪ್ಪನಿಗೆ ಹೆಚ್ಚೇನಿದೆ. ಅಲ್ವಾ..!



-ಡಾ. ರಾಜಶೇಖರ ನಾಗೂರ

ಸಹಾಯಕ ನಿರ್ದೇಶಕರು (ತಾಂತ್ರಿಕ)

ಪಶು ಪಾಲನ ಇಲಾಖೆ ಬಳ್ಳಾರಿ.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top