ಇತ್ತೀಚಿನ ದಿನಗಳಲ್ಲಿ ಜೀವನ ಮೌಲ್ಯಗಳು ಎನ್ನುವ ಶಬ್ದ, ಸಮಾಜದ ಬಗ್ಗೆ ಕಳಕಳಿಯುಳ್ಳ ಚಿಂತನಶೀಲ ವ್ಯಕ್ತಿಗಳ ವಲಯದಲ್ಲಿ ಹೆಚ್ಚು ಹೆಚ್ಚಾಗಿ ಬಳಕೆಯಾಗುತ್ತಿದೆ. ಹಾಗೆಯೇ ವಿಶಾಲ ಮನೋಭಾವ ಮತ್ತು ದೂರದೃಷ್ಟಿಗಳಿಲ್ಲದ ಸಾಮಾನ್ಯ ಜನರಲ್ಲಿ ಇದರಷ್ಟು ಔದಾಸೀನ್ಯಕ್ಕೆ ಈಡಾದ ಜೀವನ ಆಯಾಮ ಮತ್ತೊಂದಿಲ್ಲವೆಂದರೆ ಸುಳ್ಳಲ್ಲ. ಮೌಲ್ಯ ಎಂದರೇನು?
ಮೌಲ್ಯವೆಂದರೆ ಬೆಲೆಯುಳ್ಳದ್ದು ಉಪಯುಕ್ತವಾದದ್ದು ಅಮೂಲ್ಯವಾದದ್ದು ಎಂದರ್ಥ. "ಜೀವನ ಮೌಲ್ಯಗಳು" ಎಂದರೆ ಮನುಷ್ಯ ಜೀವನದಲ್ಲಿ ಜೀವನದಲ್ಲಿ ಬೆಲೆಬಾಳುವಂತ ಆದರ್ಶಗಳು. ಮಾನವ ಜೀವನಕ್ಕೆ ಯಾವ ಅಂಶಗಳು ಮಹತ್ವವನ್ನು ತಂದುಕೊಡುತ್ತವೆಯೋ ಅವೇ ಜೀವನದ ಮೌಲ್ಯಗಳು ಅಲ್ಲವೇ.
ನಮ್ಮ ಜೀವನಕ್ಕೆ ಬೆಲೆ ತಂದು ಕೊಡುವಂತಹ ಅಂಶಗಳು ಯಾವುವು? ಎಣೆ ಇಲ್ಲದ ಶ್ರೀಮಂತಿಕೆಯೇ? ಅನುಪಮ ಸೌಂದರ್ಯವೇ? ಕಣ್ಣು ಕೋರೈಸುವ ವಸ್ತ್ರಾಭರಣಗಳೆ? ಇತರರನ್ನು ದಮನ ಮಾಡಬಲ್ಲ ದೈಹಿಕ ಶಕ್ತಿಯೇ? ಅನ್ಯರನ್ನು ಅಂಕೆಯಲ್ಲಿಟ್ಟುಕೊಳ್ಳಬಲ್ಲ ಅಧಿಕಾರಬಲವೇ? ಇತರರನ್ನು ಬೆರಗುಗೊಳಿಸಬಲ್ಲ ಪಾಂಡಿತ್ಯವೇ? ಅಭಿಮಾನಿಗಳ ಆರಾಧನೆಯನ್ನು ಒದಗಿಸಬಲ್ಲ ಕಲಾಪ್ರೌಢಿಮೆಯೇ? ಪರರ ಮೆಚ್ಚುಗೆಯ ಪ್ರತಿಕವಾದ ಪ್ರಸಿದ್ಧಿಯೇ? ಹಿಡಿದ ಕಾರ್ಯವನ್ನು ಸಾಧಿಸಬಲ್ಲ ಕೌಶಲವೇ? ನಿಸ್ಸಂಶಯವಾಗಿ ಈ ಒಂದೊಂದು ಅಂಶವೂ ನಮ್ಮ ಜೀವನಕ್ಕೆ ಕೆಲಮಟ್ಟಿನ ಬೆಲೆಯನ್ನು ತಂದು ಕೊಡುತ್ತವೆ. ಆದರೆ ನಮ್ಮ ಬಾಳಿಗೊಂದು ಘನತೆ ಬರಬೇಕಾದರೆ ಬದುಕಿನಲ್ಲಿ ಸಾರ್ಥಕತೆ ಮೂಡಬೇಕಾದರೆ, ಇದಕ್ಕಿಂತ ಹೆಚ್ಚಿನ ಅಂಶಗಳನ್ನು ನಮ್ಮ ಜೀವನದಲ್ಲಿ ನಾವು ರೂಡಿಸಿಕೊಳ್ಳಬೇಕಾಗುತ್ತದೆ. ಈ ಎಲ್ಲಾ ಅಂಶಗಳ ಸಮೂಹವನ್ನೇ ಜೀವನದ ಮೌಲ್ಯಗಳು ಎನ್ನುತ್ತೇವೆ. ಪ್ರಾಮಾಣಿಕತೆ ಆತ್ಮವಿಶ್ವಾಸ, ಸಕಾರಾತ್ಮಕ ದೃಷ್ಟಿಕೋನ, ಸಮಯ ಪರಿಪಾಲನೆ, ಆರ್ಥಿಕ ಶುಚಿತ್ವ, ಧೈರ್ಯ, ಔಚಿತ್ಯ ಪ್ರಜ್ಞೆ ಇದೇ ಮೊದಲಾದ ಸದ್ಗುಣಗಳು.- ಹೀಗೆ ಜೀವನದ ಮೌಲ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೇ ಸುಧೀರ್ಘವಾಗುತ್ತದೆ. ಈ ಸದ್ಗುಣ ಸದಾಚಾರಗಳೇ ಜೀವನ ಮೌಲ್ಯಗಳ ವ್ಯಕ್ತ ರೂಪ. ನಮ್ಮೊಳಗೆ ರೂಢ ಮೂಲವಾಗಿರುವ ಮೌಲ್ಯಗಳು ನಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತವೆ.
ರಾಜಭರ್ತೃಹರಿ ತನ್ನ ನೀತಿ ಶತಕದಲ್ಲಿ ಹೀಗೆ ಹೇಳುತ್ತಾನೆ:
ಏ ತೇ ಸತ್ಪುರುಷಾಃ ಪರಾರ್ಥಘಟಿಕಾಃ
ಸ್ವಾರ್ಥಾನ್ ಪರಿತ್ಯಜ್ಯ ಯೇ |
ಸಾಮಾನ್ಯಾಸ್ತು ಪರಾರ್ಥಮದ್ಯಮಭೃತಾಃ
ಸ್ವಾರ್ಥವಿರೋಧೇನ ಯೇ |
ತೇsಮಿ ಮಾನವರಾಕ್ಷಸಾಃ ಪರಹಿತಮ್
ಸ್ವಾರ್ಥಾಯ ನಿಘ್ನಂತಿ ಯೇ|
ಯೇ ತು ಘ್ನಂತಿ ನಿರರ್ಥಕಮ್
ಪರಹಿತಮ್
ತೇ ಕೇ ನ ಜಾನೀಮಹೇ||
- ಎಂದರೆ 'ತಮ್ಮ ಹಿತವನ್ನು ಕಡೆಗಣಿಸಿ ಇತರ ಅಭ್ಯುದಯಕ್ಕಾಗಿ ಶ್ರಮಿಸುವ ಜನರಿರುತ್ತಾರೆ ಅವರು ಸತ್ಪುರುಷರು; ಇನ್ನು ಕೆಲವರು, ತಮ್ಮ ಹಿತವನ್ನು ಬಲಿಗೊಡಬೇಕಾಗಿಲ್ಲದೇ ಹೋದರು ಇತರ ಒಳಿತಿಗಾಗಿ ಶ್ರಮಿಸುತ್ತಾರೆ. ಇವರು ಸಾಮಾನ್ಯರು; ಮತ್ತೆ ಕೆಲವರು ತಮ್ಮ ಏಳಿಗೆಯನ್ನು ಸಾಧಿಸಿಕೊಳ್ಳುವುದಕ್ಕಾಗಿ ಇತರರ ಹಿತವನ್ನು ನಾಶ ಮಾಡುತ್ತಾರೆ. ಇಂಥವರು ಮಾನವ ರಾಕ್ಷಸರು; ಇನ್ನು ಕೆಲವರು ತಮಗೆ ಯಾವ ಲಾಭವೂ ಇಲ್ಲದೆ ಇದ್ದರೂ ಇತರಿಗೆ ಹಾನಿಯನ್ನುoಟು ಮಾಡುತ್ತಾರೆ ಇವರನ್ನು ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ' ಎಂದರ್ಥ.
ಸಮಾಜದಲ್ಲಿ ಮೊದಲೆರಡು ವರ್ಗದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಉತ್ತಮ ಸಮಾಜ ವಾಗುತ್ತದೆ. ಆದರೆ ಕೊನೆಯರಡು ವರ್ಗದ ಜನ ಹೆಚ್ಚಾದಾಗ ಸಮಾಜ ಒಳಗಿಂದ ಕೊಳೆಯುತ್ತಾ ಬರುತ್ತದೆ.
ಪ್ರತಿಯೊಬ್ಬ ಮನುಷ್ಯನು ತಾನು ಬದುಕುತ್ತಿರುವ ಸಮಾಜದ ಅನಿವಾರ್ಯ ಅಂಗ, ತನ್ನ ಸುತ್ತಮುತ್ತಲಿರುವವರ ಜೀವನದೊಂದಿಗೆ ಅವನ ಜೀವನ ಶೈಲಿ ಹಾಸುಹೊಕ್ಕಾಗಿದೆ. ಸಹಮಾನವರ ಸುಖ ದಿಕ್ಕುಗಳು ನಮ್ಮ ಜೀವನದ ಸುಸ್ಥಿತಿ,ಸುವ್ಯವಸ್ಥೆ ಸುಭದ್ರತೆಗಳ ಮೇಲೆ ಗಾಢವಾದ ಪ್ರಭಾವವನ್ನು ನಿಶ್ಚಯವಾಗಿ ಬೀರುತ್ತವೆ ನಮ್ಮ ಸಮೀಪದಲ್ಲಿರುವವರ ಸಂಪರ್ಕದಲ್ಲಿರುವವರ ಜೊತೆ ಸಭ್ಯವಾದ, ಪರಸ್ಪರ ಲಾಭದಾಯಕವಾದ, ಸ್ನೇಹಪೂರ್ಣ ಸಂಬಂಧವನ್ನಿರಿಸಿಕೊಳ್ಳಲು ಸಮಾಜದ ಸ್ವಾಸ್ಯ ಕಾಪಾಡಲು ಜೀವನ ಮೌಲ್ಯಗಳ ಅನುಷ್ಠಾನಕ್ಕಿಂತ ಅನ್ಯಮಾರ್ಗ ಮತ್ತೊಂದಿಲ್ಲ. ಇಲ್ಲದಿದ್ದರೆ ಮೌಲ್ಯರಹಿತ ಜೀವನ ರೀತಿ ಸಮಾಜವನ್ನು ಮೃಗಾಲಯವನ್ನಾಗಿ ಪರಿವರ್ತಿಸಿ ಬಿಡುತ್ತದೆ.
ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಸೇರಿಸಿಕೊಳ್ಳುವುದರಿಂದ ನಮಗೆ ದೊರೆಯುವ ಲಾಭವೇನು? ಮೊದಲನೆಯದಾಗಿ ಈ ಮೌಲ್ಯಗಳು ನಮ್ಮ ಬದುಕಿಗೆ ಒಂದು ಛಂದಸ್ಸನ್ನು ತಂದು ಕೊಡುತ್ತವೆ, ಒಂದು ಚಂದದ ಚೌಕಟ್ಟನ್ನು ಒದಗಿಸುತ್ತದೆ, ನೀತಿ ನಿಯಮಗಳ ಕಟ್ಟಿಲ್ಲದೆ ಸ್ವಚ್ಛಂದವಾಗಿ ಜೀವನ ನಡೆಸಿ, ಸರಿಪಡಿಸಲಾಗದ ಅಪಘಾತಗಳಿಗೆ ಒಳಗಾಗುವ ಜನ ಎಷ್ಟಿಲ್ಲ? ಮೇಲ್ನೋಟಕ್ಕೆ ಅವರ ಜೀವನ ಕ್ರಮ ಅನಾಯಾಸಕರವಾಗಿದೆ, ಆಕರ್ಷಕವಾಗಿದೆ ಎಂಬಂತೆ ಕಂಡುಬಂದರೂ, ಅದರ ಪರಿಣಾಮ ಮಾತ್ರ ಭಯಾನಕವಾಗಿರುತ್ತದೆ. ಆದರೆ ಮೌಲ್ಯಗಳನ್ನು ಅಭ್ಯಾಸ ಮಾಡುತ್ತ ಎಂತಹ ಪರಿಸ್ಥಿತಿಯಲ್ಲೂ ಅವುಗಳನ್ನು ಕಷ್ಟಪಟ್ಟಾದರೂ ಪಾಲಿಸುವವರ ಬದುಕು ಮೇಲ್ನೋಟಕ್ಕೆ ಕಠಿಣ ಎಂಬಂತೆ ತೋರಿದರೂ, ಅದರ ಫಲ ಶ್ರೇಯಸ್ಕರವಾಗಿರುತ್ತದೆ. ಜೀವನ ಮೌಲ್ಯಗಳನ್ನು ನಮ್ಮ ನಡೆ ನುಡಿಗಳಲ್ಲಿ ಅನುಷ್ಠಾನಕ್ಕೆ ತರುವುದು ಬಹಳ ದೊಡ್ಡ ಸವಾಲು. ಸುತ್ತಮುತ್ತಲಿರುವವರು ಈ ಮೌಲ್ಯಗಳನ್ನು ನಿರ್ಲಕ್ಷಿಸಿ ನಿರಾಯಾಸವಾಗಿ ಜೀವನ ನಡೆಸುತ್ತಿರುವಾಗ, ಪರಿಸ್ಥಿತಿ ಮೌಲ್ಯಗಳ ಪಾಲನೆಗೆ ಪ್ರತಿಕೂಲವಾಗಿರುವಾಗ ನಮ್ಮ ಬದುಕಿನಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಏರು ದಾರಿಯಲ್ಲಿ ಪ್ರಯಾಣ ಮಾಡುವ ಷ್ಟೇ ಕಷ್ಟ. ಆದರೆ ಇದೇ ಅಂಶ ನಮ್ಮ ಜೀವನವನ್ನು ಸಾಹಸಮಯ ವನ್ನಾಗಿಸುತ್ತದೆ ಎನ್ನುವುದು ಅಷ್ಟೇ ಗಮನಾರ್ಹವಾದ ವಿಷಯ! ಜೀವನ ಮೌಲ್ಯಗಳನ್ನು ನಿರಂತರವಾಗಿ, ಪರಿಪೂರ್ಣವಾಗಿ ಪಾಲಿಸುತ್ತಾ ಬಂದಂತೆ, ಅವು ನಮ್ಮನ್ನು ಮನುಷ್ಯತ್ವದ ಇತಿಮಿತಿಗಳಿಂದ ಬಿಡಿಸಿ ದೈವತ್ವಕೇರಿಸುವುದೂ ಕೂಡ ಸತ್ಯಸ್ಯ ಸತ್ಯ.
-ಸೌಮ್ಯ ಸನತ್, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ