ಬದುಕಲು ಬೇಕು ಬದುಕು

Upayuktha
0

ನಿತ್ಯ ಹೋರಾಟದ ಬದುಕಿನ ಹಾದಿಯಲ್ಲಿ ಮಾಡಿ ಮಾಡಿದವರೆಷ್ಟೊ. ಮಡಿಯುವ ಮುನ್ನ ಅರಿವಿನ ಬೆಳಕನ್ನು ಕಂಡವರೆಷ್ಟೊ . ಅರಿವಿನ ಬೆಳಕಿಗಾಗಿ ಹಗಲಿರುಳು ಶ್ರಮಿಸಿದವರೆಷ್ಟೊ. ಶ್ರಮವೇ ಪ್ರಧಾನವೆಂದು ತಿಳಿದು ಬದುಕುವ ದಾರಿಯನ್ನು ಹಿಡಿದವರೆಷ್ಟೊ. ಬದುಕಿನ ಕ್ಷಣ ಕ್ಷಣದಲ್ಲಿಯೂ ಆಣಿ ಮುತ್ತುಗಳನ್ನು ಅಳವಡಿಸಿಕೊಂಡವರೆಷ್ಟೊ. ಬಾಳಿನ ಬೆಳಕಿಂಡಿಯಲ್ಲಿ ಅವಲೋಕಿಸಿದಾಗ ಹೊಟ್ಟೆ ಉರಿದು ಕೊಂಡವರೆಷ್ಟೊ , ಸಂತಸ ಪಟ್ಟವರೆಷ್ಟೊ , ಸ್ಥಿತಪ್ರಜ್ಞರೆಷ್ಟೊ , ಚಿಂತನ- ಮಂಥನಗಳನ್ನು ಮಾಡಿಕೊಂಡವರೆಷ್ಟೊ , ನೂರೆಂಟು ಮಾತುಗಳನಾಲಿಸಿ , ಸರಿತಪ್ಪುಗಳ ವಿವೇಚನೆ ಮಾಡಿದವರೆಷ್ಟೊ , ಹಗಲು ಕನಸಿನಲಿ ಕಟ್ಟಿದ ಮನೆಯೊಳಗೆ ನೆಲೆಸಿದವರೆಷ್ಟೊ, ನಡುರಾತ್ರಿಯಲ್ಲಿ ಸ್ವಾತಂತ್ರ್ಯವನು ಬಯಸಿ ತಿರುಗಾಡಿದವರೆಷ್ಟೊ, ಬಿರುಗಾಳಿಯ ಬೆಂಕಿಗೆ ಬೆಂದು ನೊಂದವರೆಷ್ಟೊ , ಕಣಿವೆಯಿಂದ ಶಿಖರಕ್ಕೆ ಮೇಲೇರಿದವರೆಷ್ಟೊ , ಶಿಖರದಿಂದ ಕಣಿವೆಗೆ ಧುಮುಕಿದವರೆಷ್ಟೊ , ಸಫಲತೆ - ವಿಫಲತೆಗಳನ್ನು ಪಡೆದವರೆಷ್ಟೊ ಕಂಡವರ್ಯಾರು ಹೇಳಿ ನೋಡೋಣ. 


ಜಗತ್ತು ತನ್ನ ವಿಸ್ತಾರ ಸ್ವರೂಪವನ್ನು ತೋರಿಸಿರುವುದರಿಂದ ಎಲ್ಲರೂ ಎಲ್ಲಾ ಕಡೆ ಇರಲು ಸಾಧ್ಯವಾಗುವುದಿಲ್ಲ. ಜಯ ಮತ್ತು ಅಪಜಯ ಅಂದರೆ ಸೋಲು ಮತ್ತು ಗೆಲುವುಗಳು ಸರ್ವರ ಬಾಳಿಗೂ ಮೀಸಲು ಎಂಬುದು ದೃಢವಾದುದು. ಇಂದು ಸೋತವರು ನಾಳೆ ಗೆಲ್ಲುವರೆಂಬ ಭರವಸೆಯಲ್ಲೆ ಬದುಕು ಕಟ್ಟಿಕೊಳ್ಳುವವರೂ ಇದ್ದಾರೆ. ಏಕೆಂದರೆ ಬದುಕು ಅಥವಾ ಜೀವನ ಇದನ್ನು ಅರ್ಥೈಸುವುದೆಂದರೆ ಸುಲಭದ ಮಾತಲ್ಲ. ಕಾರಣ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ಗಾದೆ ಮಾತು ಆಗಾಗ ಎಲ್ಲರಿಗೂ ನೆನಪಾಗುತ್ತದೆ ಮತ್ತು ಅನುಭವಕ್ಕೂ ಬರುತ್ತದೆ. ಮನುಷ್ಯ ತನ್ನ ಜೀವನದಲ್ಲಿ ಎಷ್ಟೆಲ್ಲಾ ಯೋಜನೆಗಳನ್ನು ಹಾಕಿಕೊಂಡು ಇದನ್ನು ಇಂತಹುದೇ ಸಮಯದಲ್ಲಿ ಹೀಗೆಯೇ ಮಾಡಬೇಕು ಎಂದು ಕೊಳ್ಳುತ್ತಾನೆ. ಇದರ ಸಫಲತೆಗಾಗಿ ಹಲವು ಪ್ರಯತ್ನಗಳು ನಡೆದಿರುತ್ತದೆ. ಅಗತ್ಯಕ್ಕಿಂತ ಯಥೇಚ್ಚವಾದ ಶ್ರಮವನ್ನು ಹಾಕಿರುತ್ತಾನೆ. ಹಗಲಿರಳು ಊಟ ನಿದ್ರೆಗಳನ್ನು ತ್ಯಾಗ ಮಾಡುತ್ತಾನೆ. ತಾನು ಮಾಡುತ್ತಿರುವ ಕೆಲಸವು ಒಂದು ತಪಸ್ಸು ಎಂದು ಭಾವಿಸಿಕೊಳ್ಳುತ್ತಾನೆ. ಆದರೆ ಬದಲಾದ ಕಾಲ ಮತ್ತು ವಿಭಿನ್ನ ಸನ್ನಿವೇಶಗಳ ಸೃಷ್ಟಿ ಮನಷ್ಯನ ಯೋಜನೆಗಳನ್ನು ವಿಫಲಗೊಳಿಸುತ್ತದೆ. ತಾನೆಣಿಸದೆ ಮತ್ತು ಯೋಜಿಸದೆ ಇರುವ ಕೆಲಸ ಕಾರ್ಯಗಳು ಕೆಲವೊಮ್ಮೆ ಕ್ಷಣ ಮಾತ್ರದಲ್ಲಿ ನೆರವೇರುತ್ತವೆ. ಇದೇ ವಿಸ್ಮಯ ಎನ್ನಿಸಿಕೊಳ್ಳುತ್ತದೆ. ಬದುಕೇ ಒಂದು ನಾಟಕ ರಂಗ. ಅಂದರೆ ಈ ಭೂಮಿಯ ಮೇಲೆ ಜೀವನವೆಂಬ ನಾಟಕದಲ್ಲಿ ನಾವು ಪಾತ್ರದಾರಿಗಳು ಅಷ್ಟೇ. ಸೂತ್ರಧಾರಿ ಬೇರೆಲ್ಲೊ ಕಾಣದ ಕೈಯಂತೆ ಇದ್ದು ಎಲ್ಲವನ್ನು ನಿಭಾಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಂಡು ಕಾಲಧರ್ಮಕ್ಕೆ ತಕ್ಕಂತೆ ಮನೋಧರ್ಮವನ್ನು ಹೊಂದಿಸಿಕೊಂಡು ಜೀವನ ಸಾಗಿಸಬೇಕಿದೆ. ಏಕೆಂದರೆ ಬದಲಾವಣೆಗೆ ತಕ್ಕಂತೆ ಬದಲಾಗದಿದ್ದರೆ ಬದಲಾವಣೆಯೇ ನನ್ನನ್ನು ಬದಲಾಯಿಸುತ್ತದೆ. 


ಬದುಕು ಒಂದು ನಿತ್ಯ ನೂತನ ಪಾಠಶಾಲೆ ಎಂಬುದು ಹಿರಿಯ ಅನುಭವಿಗಳ ಮಾತಾಗಿದೆ. ಬದುಕನ್ನು ರೂಪಿಸಿಕೊಳ್ಳಲು ಬುದ್ಧಿವಂತಿಕೆ ಬೇಕು. ಈ ಬುದ್ಧಿವಂತಿಕೆ ನಮಗೆ ಎಲ್ಲೆಲ್ಲಿಂದಲೋ ಬರುವ ಉಡುಗೊರೆಯಲ್ಲ. ಇದನ್ನು ನಾವೇ ಕಷ್ಟಪಟ್ಟು ದುಡಿದು ಸಂಪಾದಿಸಿ ಕೊಳ್ಳಬೇಕು. ಬದುಕು ಒಂದು ಪಾಠ ಶಾಲೆ ಎಂದಾದ ಮೇಲೆ ನಾವೆಲ್ಲರೂ ಆ ಬದುಕೆಂಬ ಪಾಠಶಾಲೆಯ ಕಲಿಕಾರ್ಥಿಗಳು ಆಗಿರುತ್ತೇವೆ. ಕಲಿಕೆ ನಮ್ಮ ಬದುಕಿನುದ್ದಕ್ಕೂ ನಿರಂತರ ಪ್ರಕ್ರಿಯೆಯಾಗಿರುತ್ತದೆ. ಗರ್ಭದಿಂದ ಗೋರಿಯ ವರೆಗೂ ಕಲಿಕೆಯು ನಿರಂತರ ಸ್ವಾನುಭವವನ್ನು ತಂದುಕೊಡುತ್ತದೆ. ಹೀಗೆ ನಿರಂತರವಾಗಿ ಬದುಕಿನುದ್ದಕ್ಕೂ ಸ್ವಾನುಭವದಿಂದ ಕಲಿತು ಗಳಿಸಿದ ಬುದ್ಧಿವಂತಿಕೆ ನಮ್ಮನ್ನು ಎಲ್ಲಾ ರೀತಿಯ ತೊಂದರೆಗಳಿಂದ ರಕ್ತಿಸುತ್ತದೆ. ಇದೇ ಬುದ್ಧಿವಂತಿಕೆ ನಮ್ಮ ಯಶಸ್ಸಿಗೂ ಮೆಟ್ಟಿಲಾಗುತ್ತದೆ. ಸಾಧನೆಯ ಹಾದಿಯಲ್ಲಿ ಎಡರು ತೊಡರುಗಳು ಸಾಮಾನ್ಯವಾಗಿರುತ್ತವೆ. ಅವುಗಳನ್ನು ದಾಟಿಕೊಂಡು ಮೇಲೇರಬೇಕಾಗುತ್ತದೆ. ಬದುಕೆಂಬ ಪಾಠಶಾಲೆಯಲ್ಲಿ ಪ್ರತಿಯೊಂದು ಘಟನೆಯನ್ನೂ ಮಗುವಿನ ಹಾಗೆ ಕುತೂಹಲದಿಂದ ನೋಡಿ ಭಾಗವಹಿಸಬೇಕಾಗುತ್ತದೆ. ಬುದ್ಧಿವಂತಿಕೆಯಿಂದ ನಿಭಾಯಿಸಬೇಕಾಗುತ್ತದೆ. ಸ್ವಾನುಭವದಿಂದ ಪಾಠ ಕಲಿಯಬೇಕಾತ್ತದೆ. ಹಾಗೆ ಕಲಿತ ಪಾಠಗಳನ್ನು ಸಮಯೋಚಿತವಾಗಿ ಬಳಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಯಾವುದೇ ಕ್ಷೇತ್ರದಲ್ಲಾದರೂ ಮೇಲೇರಲು ಸಾಧ್ಯವಾಗುತ್ತದೆ. 


ಬದುಕಿನಲ್ಲಿ ಸಾಧನೆಯ ಮೆಟ್ಟಿಲೇರಲು ಹಲವು ರೀತಿಯ ಶಕ್ತಿಗಳು ಬೇಕಾಗುತ್ತವೆ. ಅಂತಹ ಶಕ್ತಿಗಳಲ್ಲಿ ನಂಬಿಕೆ ಮತ್ತು ವಿಶ್ವಾಸ ಮಹತ್ವದ ಶಕ್ತಿಗಳಾಗಿವೆ. ಮತ್ತು ಬದುಕಿಗೆ ಇವುಗಳೇ ಆಧಾರವಾಗಿವೆ. ನಂಬಿಕೆಯಿಂದಲೇ ಎಲ್ಲವೂ, ನಂಬಿಕೆಯ ಹೊರತು ಬೇರೇನೂ ಇಲ್ಲ ಎಂಬುದರ ಅರಿವು ನಮ್ಮೆಲ್ಲರಿಗೂ ಇರಬೇಕಾಗುತ್ತದೆ. ಸೋಲು ಮತ್ತು ಗೆಲುವುಗಳ ನಡುವೆ ನಮಗೆ ಸಹನೆಯ ಶಕ್ತಿ ನಮ್ಮಲ್ಲಿ ಇರಲೇ ಬೇಕಾಗುತ್ತದೆ. ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿನಂತೆ ಸಹನೆಗೆ ಅಭ್ಯಾಸದ ಅಗತ್ಯವಿರುತ್ತದೆ. ಇದನ್ನು ನಾವು ರೂಢಿಸಿಕೊಳ್ಳಬೇಕು. ಬದುಕಿನ ಯಶೋಗಾಥೆಗೆ ಮುಂದಾಲೋಚನೆಗಳೂ ಬಹು ಮುಖ್ಯವೆನಿಸುತ್ತವೆ. ಅಗತ್ಯವೆಸುವ ಮತ್ತು ಸೂಕ್ತ ರೀತಿಯ ಮಾರ್ಗದರ್ಶನವನ್ನಂತೂ ನಿರ್ಲಕ್ಷಿಸುವಂತಿಲ್ಲ. ವಿದ್ಯೆಯಿಂದ ಪಡೆಯುವ ಜ್ಞಾನದ ಸದ್ಬಳಕೆ , ಒಳ್ಳೆಯ ಜನರ ಸ್ನೇಹ, ಉತ್ತಮ ನಡೆ-ನುಡಿ, ಚಾರಿತ್ರ್ಯ ಶುದ್ದಿ ಮತ್ತು ಚಿತ್ತ ಶುದ್ಧಿ ಅಗತ್ಯವಾಗಿ ಬದುಕಿನಲ್ಲಿ ಬೇಕಾಗುತ್ತದೆ. ಪ್ರಪಂಚದ ಒಳ್ಳೆಯ ಅಂಶಗಳನ್ನು ಸ್ವೀಕರಿಸಿ ಉತ್ತಮ ಜೀವನ ಸಾಗಿಸೋಣ. 

-ಕೆ. ಎನ್. ಚಿದಾನಂದ ಹಾಸನ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top