ಬದುಕೊಂದು ನಿತ್ಯ-ನೂತನ ಪಾಠಶಾಲೆ

Upayuktha
0

ಜೀವನದಲ್ಲಿ ಅದೆಷ್ಟೋ ಘಟನೆಗಳು ನಮ್ಮ ನಿರೀಕ್ಷೆಗಳನ್ನೂ ಮೀರಿ ಘಟಿಸಿಬಿಡುತ್ತವೆ. “ಹೀಗೂ ಆಗಬಹುದು.. ಹೀಗೂ ಸಂಭವಿಸಬಹುದು..” ಎಂದು ನಾವು ಯೋಚಿಸುವ ಮೊದಲೇ ಹಲವಾರು ಕಠಿಣ ಸಂದರ್ಭಗಳು ಎಲ್ಲರ ಜೀವನದಲ್ಲೂ ಎದುರಾಗಬಹುದು. ಆದರೆ ಇಂತಹ ಎಷ್ಟೋ ಸಂದರ್ಭಗಳಲ್ಲಿ ನಮ್ಮ ಮನಸ್ಸು ನಮ್ಮ ಸಿಮಿತದಲ್ಲೇ ಇರುವುದಿಲ್ಲ. ನಮ್ಮ ಯೋಚನಾ ಲಹರಿಯೂ ಸ್ಥಬ್ಧವಾಗಿಬಿಡುತ್ತದೆ. ಬಹುಶಃ ಇಂತಹ ಸಂದರ್ಭಗಳನ್ನು ಎದುರಿಸುವುದೇ ಜೀವನದಲ್ಲಿ ಬರುವಂತಹಾ ಕ್ಲಿಷ್ಟಕರ ಸಂದರ್ಭವಾಗಿರುತ್ತದೆ. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ಇಂತಹ ಸಂದರ್ಭಗಳು ಭಿನ್ನವಾಗಿರುತ್ತದೆ. ಯಾಕೆಂದರೆ ಎಲ್ಲರ ಸಾಮರ್ಥ್ಯವೂ ಒಂದೇ ರೀತಿಯಾಗಿಲ್ಲವಲ್ಲಾ. ಯಾರೋ ಒಬ್ಬರಿಗೆ ಕಷ್ಟ ಎನಿಸುವ ವಿಷಯವು ಮತ್ಯಾರಿಗೋ ಸುಲಭ ಎನಿಸಬಹುದಲ್ಲಾ. ಆದರೆ ನಮ್ಮ ಊಹೆಗೂ ನಿಲುಕದ ಘಟನೆಗಳು ನಮ್ಮ ಜೀವನದಲ್ಲಿ ಸಂಭವಿಸುವ ಮೂಲಕ ಒಂದು ಪಾಠವನ್ನು ನಮಗೆ ತಿಳಿಸಿ ಹೋಗುತ್ತದೆ. ಸಂದರ್ಭವನ್ನು ಎದುರಿಸಿದವರಿಗೆ ಜೀವನದೊಂದು ಪಾಠವನ್ನು ತಿಳಿಸಿದರೆ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಂಡವರಿಗೆ ಇನ್ನೊಂದು ತರಹದ ಜೀವನ ಪಾಠವನ್ನು ತಿಳಿಸಿಕೊಡುತ್ತದೆ. ಮಾತ್ರವಲ್ಲದೇ ಮುಂದೊಂದು ದಿನ ನಮ್ಮ ಜೀವನದಲ್ಲೂ ಇವುಗಳು ಇಂತಹ ಸಂದರ್ಭಗಳನ್ನು ಕುಗ್ಗದೇ ಎದುರಿಸಲು ಸಹಾಯ ಮಾಡುತ್ತದೆ.


ಜೀವನ ಎಂದರೇ ಒಂದು ರೀತಿಯ ಶಿಕ್ಷಣವಲ್ಲವೇ. ಇಲ್ಲಿ ಪ್ರತಿನಿತ್ಯವೂ ನಾವು ಹಲವಾರು ಪಾಠಗಳನ್ನು ಕಲಿಯುವುದಿದೆ. ತಾಯಿಯ ಹೊಟ್ಟೆಯೊಳಗಿನ ತಿಂಗಳ ಮಗುವಾಗಿರು ವಾಗಿನಿಂದಲೂ, ಭೂಮಿಗೆ ಬಂದು, ಪುಟ್ಟ ಪುಟ್ಟ ಕಣ್ಣುಗಳನ್ನು ತೆರೆದು, ಅಂಬೆಗಾಲಿಟ್ಟು ನಡೆದಾಗಿನಿಂದ ಹಿಡಿದು, ಜೀವನದ ಕೊನೆಯುಸಿರು ಎಳೆವವರೆಗೂ ಪ್ರತಿಯೊಂದು ಹೊಸ ವಿಷಯಗಳು, ಹಾಗೇ ಕಲಿಯಬೇಕಾದ ವಿಷಯಗಳು.


ಸುಖಃದಿಂದ ಕಲಿಯುವ ಪಾಠಗಳೇ ಬೇರೆ. ದುಃಖದಿಂದ ಕಲಿಯುವ ಪಾಠಗಳೇ ಬೇರೆ. ಸುಖ-ದುಃಖಗಳ ಮಿಶ್ರಣವೇ ಬದುಕಾಗಿರುವಾಗ ಎರಡನ್ನೂ ಸಮಾನವಾಗಿ ಸ್ವೀಕರಿಸ ಬೇಕಿರುವುದು ಮನುಷ್ಯರಾಗಿ ನಮ್ಮ ಧರ್ಮ.

    

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು

ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||

ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ 

ಯಿಪ್ಪತ್ತು ಸೇರೆ ರುಚಿ –

ಮಂಕುತಿಮ್ಮ ||


ಡಿವಿಜಿಯವರು ಅವರ ಮಂಕುತಿಮ್ಮನ ಕಗ್ಗದಲ್ಲಿ ಸಾರಿರಿದಂತೆ, ಹಲವು ಬಗೆಗಳು ಸೇರಿದರೆ ಮಾತ್ರ ಖಾದ್ಯಗಳನ್ನು ಸವಿಯಲು ಸಾಧ್ಯ. ಕೇವಲ ಒಂದೇ ರುಚಿಯಿಂದ ಕೂಡಿದ ಖಾದ್ಯ ಎಂದಿಗೂ ಯಾರಿಗೂ ಹಿತವಾಗಿರುವುದಿಲ್ಲ.. ಅದೇ ರೀತಿ ಎಂದಿಗೂ ಎಲ್ಲರಿಗೂ ಬದುಕಿನಲ್ಲಿ ನೋವೇ ಶಾಶ್ವತವಲ್ಲ. ಅಥವಾ ಎಲ್ಲರಿಗೂ ಸಂತೋಷದ ದಿನಗಳೇ ಸಿಗುವುದಾ ಎಂದರೆ ಅದೂ ಅಲ್ಲಾ. ಬೇವು ಬೆಲ್ಲದ ಮಿಶ್ರಣದಂತೆ ಎಲ್ಲರ ಬದುಕಿನಲ್ಲೂ ಕಷ್ಟ ಸುಖದ ಮಿಶ್ರಣಗಳು ಇದ್ದೇ ಇರುತ್ತದೆ. ಇವೆಲ್ಲವನ್ನೂ ಅನುಭವಿಸಿದ ಬದುಕಿಗೆ ಮಾತ್ರ ಸಾರ್ಥಕತೆ ಸಿಗಲು ಸಾಧ್ಯ.


ಯಾರ್ಯಾರ ಆಯಸ್ಸು ಹೇಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಅದನ್ನ ತಿಳಿದು ನಾವು ಸಾಧಿಸುವುದು ಕೂಡಾ ಏನೂ ಇಲ್ಲಾ. ನಾವು ಎಷ್ಟು ವರ್ಷ ಬದುಕುತ್ತೇವೆ ಎಂಬುವುದು ಖಂಡಿತಾ ಮುಖ್ಯವಲ್ಲ. ಆದರೆ ಬದುಕಿದಷ್ಟು ಸಮಯ ಹೇಗೆ ಬದುಕಿದ್ದೇವೆ. ನಮ್ಮಿಂದ ಹೇಗೆ ಇನ್ನೊಬ್ಬರಿಗೆ ಸಹಾಯವಾಗುವಂತೆ ನಡೆದುಕೊಂಡಿದ್ದೇವೆ, ಹಾಗೂ ಹೇಗೆ ಬದುಕನ್ನು ಸಾರ್ಥಕವಾಗಿ ನಡೆಸಿದ್ದೇವೆ ಎಂಬುವುದು ಮುಖ್ಯವಾಗುತ್ತದೆ... ಹಲವಾರು ಉದಾಹರಣೆಗಳು ನಮ್ಮೆದುರಿವೆ. ಸ್ವಾತಂತ್ರ ಹೋರಾಟಗಾರ ಶ್ರೀ ಸ್ವಾಮಿ ವಿವೇಕಾನಂದರು. ಅವರು ಬದುಕಿ ಉಳಿದಿದ್ದು ಕೇವಲ 36 ವರ್ಷಗಳು. ಆದರೆ ಅವರು ಭೂಮಿಬಿಟ್ಟು ಹೋದಮೇಲೆಯೂ ಕೂಡ ಅದೆಷ್ಟೋ ವರ್ಷಗಳ ನಂತರ ಇಂದಿಗೂ ಅವರ ಸಾಧನೆಗಳನ್ನು ನಾವು ಇಂದಿಗೂ ಸ್ಮರಿಸುತ್ತೇವೆ. ಅದೇ ರೀತಿ ಎಷ್ಟು ವರ್ಷ ಬದುಕಿದ್ದೇವೆ ಎಂಬುವುದರಿಂದ ಬದುಕಿದ್ದಷ್ಟು ವರ್ಷ ಯಾವ ಯಾವ ರೀತಿಯ ಜೀವನ ಪಾಠಗಳನ್ನು ಕಲಿತಿದ್ದೇವೆ. ಅದನ್ನು ಯಾವ ಮಟ್ಟಿಗೆ ನಮ್ಮ ಜೀವನದಲ್ಲೂ ಅಳವಡಿಸಿಕೊಂಡಿದ್ದೇವೆ ಎಂಬುವುದು ಬಹುಮುಖ್ಯ.


ಕೆಲವೊಮ್ಮೆ ನಮಗೆ ನಮ್ಮ ಬೆನ್ನುತಟ್ಟಿ, ಪ್ರೋತ್ಸಾಹ ನೀಡುವವರು ಇರಬೇಕೆಂದಿಲ್ಲ. ಆಗೆಲ್ಲಾ ನಮಗೆ ಧೈರ್ಯದ ಕೊರತೆಯುಂಟಾಗಬಹುದು.ಆದರೆ ದೃತಿಗೆಡಬೇಕಾದ ಅವಶ್ಯಕತೆಯೇ ಇಲ್ಲಾ. ಯಾಕೆಂದರೆ ಸೋತರೂ, ಅದೆಷ್ಟೇ ಅವಮಾನವದರೂ ಅವಮಾನವೇ ಸನ್ಮನಕ್ಕಿರುವ ದಾರಿ ಎಂಬ ಮಂತ್ರವನ್ನ ಮನಸ್ಸಿನಲ್ಲಿ ಜಪಿಸುತ್ತಿದ್ದರೆ ನಮಗೆ ನಮಗಾಗಿ ಪ್ರೋತ್ಸಾಹ ನೀಡುವರಾರ ಅಗತ್ಯವೇ ನಮಗೆ ಬೇಕಾಗಿಲ್ಲ. ಹಾಗೂ ಜೀವನವೊಂದು ನಿತ್ಯ ನೂತನ ಪಾಠ ಶಾಲೆಯೇ ಸರಿ... ದಿನ ಹೋದಂತೆ ನಾವು ಇಲ್ಲಿ ಕಲಿಯುವ ವಿದ್ಯೆಗಳು ಅನುಭವಗಳು ಹಲವಾರು ಹಾಗಾಗಿ ಇಲ್ಲಿ ಪ್ರಯತ್ನಿಸುವುದಕ್ಕೆ ಹಿಂದೇಟು ಹಾಕಬೇಕಿಲ್ಲ. ಹಾಗೊಂದು ವೇಳೆ ಸೋತರೂ ಅದು ನಮಗೆ ಜೀವನದ ಬಹುಮುಖ್ಯ ಪಾಠವೊಂದನ್ನು ತಿಳಿಸಿಕೊಡುತ್ತದೆ. ಖಂಡಿತವಾಗಿಯೂ ಇಲ್ಲಿ ಸೋತರೆ ಸುಮ್ಮನಾಗುವುದಿಲ್ಲಾ. ಅದರಿಂದಲೂ ನಾವು ಕಲಿಯಬೇಕಾದ ವಿಷಯಗಳು ಹಲವಾರಿವೆ.

 


- ಶ್ರೇಯಾ ಮಿಂಚಿನಡ್ಕ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top