ಮಡಕೆ ಎನ್ನುವಾಗ ಮೊದಲು ನೆನಪಾಗುವುದೇ ಹಿಂದಿನ ಕಾಲದ ಬದುಕು. ಏಕೆಂದರೆ ಹಿಂದಿನ ಕಾಲದ ಜನರೇ ಹೆಚ್ಚಾಗಿ ಮಡಕೆ ಪಾತ್ರಗಳನ್ನು ಬಳಸುತ್ತಿದ್ದರು. ಅವರು ಮನೆಗೆ ಬಂದ ಅತಿಥಿಗಳಿಗೆ ಮಡಕೆ ಗ್ಲಾಸ್ಗಳಲ್ಲಿ ನೀರು ಕೊಡುವುದು ಅವರ ವಾಡಿಕೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಡಕೆ ಪಾತ್ರಗಳು ಕಣ್ಮರೆಯಾಗಿ ಹೋಗಿವೆ. ಎಷ್ಟರ ಮಟ್ಟಿಗೆ ಎಂದರೆ ಮಕ್ಕಳಿಗೆ ಮಣ್ಣಿನ ಮಡಕೆಯ ಬಗೆಗೆ ಸಣ್ಣ ಕಲ್ಪನೆಯೂ ಇಲ್ಲದಿರುವುದು ವಿಪರ್ಯಾಸ.
ಮಡಕೆ ಮಾಡುವುದು ಸುಲಭದ ಕೆಲಸವಲ್ಲ. ಅದೆಷ್ಟೋ ಕಷ್ಟ ಪಡಬೇಕಾಗುತ್ತದೆ. ಜೇಡಿ ಮಣ್ಣನ್ನು ತಂದು, ಅದನ್ನು ಹುಡಿ ಮಾಡಿ ಒಂದು ದಿನ ಬಿಡಬೇಕು. ಮರುದಿನ ಆ ಮಣ್ಣನ್ನು ಅಂಟು ಬರುವಂತೆ ಮಾಡಿ, ಮಡಕೆ ಚಕ್ರದಲ್ಲಿಡಬೇಕು. ಒಬ್ಬರು ಮಡಕೆ ಚಕ್ರವನ್ನು ತಿರುಗಿಸಿದರೆ, ಮತ್ತೊಬ್ಬರು ಮಡಕೆಗೆ ರೂಪವನ್ನು ಕೊಡುತ್ತಾರೆ. ಇದನ್ನು ಮಾಡುವಾಗ ತಾಳ್ಮೆ, ಶ್ರದ್ಧೆ ತುಂಬಾ ಮುಖ್ಯವಾಗಿರುತ್ತದೆ. ಮಡಕೆ ಮಾಡಿದ ನಂತರ ಅದರ ಅಡಿಭಾಗವನ್ನು ಕತ್ತರಿಸಿ ಬೇರ್ಪಡಿಸುತ್ತಾರೆ. ಸಣ್ಣ ಮರದ ಹಲಗೆಯಿಂದ ಇದರ ತಳ ಭಾಗವನ್ನು ಬಡಿದು ಸರಿಪಡಿಸುತ್ತಾರೆ.
ಮಡಕೆಯನ್ನು ತಯಾರಿಸುವುದು ಒಂದು ಕಲೆ. ಆ ಕಲೆ ಕುಂಬಾರರಿಗೆ ರಕ್ತಗತವಾಗಿ ಬಂದಿರುತ್ತದೆ. ಆದರೆ ಇತ್ತೀಚೆಗೆ ಮಡಕೆಯನ್ನು ಯಾರೂ ಉಪಯೋಗಿಸದ ಕಾರಣ ಕುಂಬಾರರ ವೃತ್ತಿಗೆ ತೊಡಕು ಉಂಟಾಗಿದೆ. ಈಗಿನ ಜನರು ಮಡಕೆ ಪಾತ್ರೆಯನ್ನು ಬಿಟ್ಟು ಸ್ಟೀಲ್, ಅಲ್ಯೂಮಿನಿಯಂ ಪಾತ್ರೆಗಳತ್ತ ವಾಲಿದ್ದಾರೆ. ಮಡಕೆ ಪಾತ್ರೆಗಳ ಉಪಯೋಗ ಯಾರಿಗೂ ತಿಳಿದಿಲ್ಲ.ಈ ಪಾತ್ರೆಯಲ್ಲಿ ಮಾಡಿದ ಆಹಾರ ಆರೋಗ್ಯಕ್ಕೆ ತುಂಬಾ ಪೂರಕವಾಗಿರುತ್ತದೆ. ಮಡಕೆ ಪಾತ್ರೆಗಳಲ್ಲಿ ಸಿಗುವ ಆರೋಗ್ಯ ಈಗಿನ ಸ್ಟೀಲ್ ಪಾತ್ರೆಗಳಲ್ಲಿ ಸಿಗುವುದಿಲ್ಲ.
ಇತ್ತೀಚಿನ ಜನರಿಗೆ ಮಡಕೆ ಪಾತ್ರೆ ಯಾವ ರೀತಿ ಸಹಾಯ ಮಾಡುತ್ತದೆ ಎಂಬುದು ತಿಳಿದೇ ಇರಲಿಲ್ಲ.ಆದರೆ ಬಿಸಿಲು ಒಳ್ಳೆಯ ರೀತಿಯಲ್ಲಿ ತಿಳಿಸಿಕೊಟ್ಟಿದೆ ಎನ್ನಬಹುದು. ಬಿಸಿಲಿನ ತಾಪವನ್ನು ಸಹಿಸಲಾಗದೇ, ನಗರ ಪ್ರದೇಶದಲ್ಲಿನ ಹೆಚ್ಚಿನ ಜನರು ಮಡಕೆ ಪಾತ್ರೆಯನ್ನು ಬಳಸುತ್ತಿದ್ದಾರೆ. ಫ್ರಿಡ್ಜ್, ಫಿಲ್ಟರ್ ಎಂದು ಹೇಳುತ್ತಿದ್ದ ಜನರು ಇದೀಗ ಮಣ್ಣಿನ ಮಡಕೆಯನ್ನು ಹುಡುಕುವ ಸ್ಥಿತಿಗೆ ಬಂದಿದ್ದಾರೆ.
ಬೇಸಿಗೆಯ ಸಮಯದಲ್ಲಿ ಈ ಪಾತ್ರೆಗಳಿಗೆ ಬಹಳಷ್ಟು ಬೇಡಿಕೆ ಇರುತ್ತದೆ. ವೈಜ್ಞಾನಿಕವಾಗಿ ಸಾಬೀತಾಗಿರುವ ಪ್ರಕಾರ ಫ್ರಿಡ್ಜ್ ಗಳಲ್ಲಿರುವ ತಂಪು ನೀರುಗಳು ಆರೋಗ್ಯಕ್ಕೆ ತುಂಬಾ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ಜನರು ಈ ಪಾತ್ರೆಗಳನ್ನು ಕೊಂಡುಕೊಳ್ಳಲು ಸರದಿ ಸಾಲುಗಳಲ್ಲಿ ನಿಲ್ಲುತ್ತಿದ್ದಾರೆ.
ಮಡಕೆಯಿಂದ ಹಲವಾರು ರೀತಿಯ ಪಾತ್ರೆಗಳನ್ನು ತಯಾರಿಸುತ್ತಾರೆ. ಆದರೆ ಈ ಪಾತ್ರೆಗಳನ್ನು ಮರೆತು ಎಲ್ಲರೂ ಸ್ಟೀಲ್ ಪಾತ್ರೆಗಳತ್ತ ಹೋಗಲೂ ಮೂಲ ಕಾರಣವೇ ಗ್ಯಾಸ್. ಯಾಕೆಂದರೆ ಗ್ಯಾಸ್ ಬಂದ ನಂತರವೇ ಎಲ್ಲರೂ ಮಡಕೆ ಪಾತ್ರವನ್ನು ಮರೆತದ್ದು. ಇದನ್ನು ತೊಳೆಯುವುದು ತುಂಬಾ ಸುಲಭ ಎಂಬುವುದು ಈಗಿನ ಜನರ ಅಭಿಪ್ರಾಯವಾಗಿದೆ.
ಹಿಂದಿನ ಬದುಕಿಗೂ ಈಗಿನ ಬದುಕಿಗೂ ತುಂಬಾ ವ್ಯತ್ಯಾಸವಿದೆ. ಈಗಿನ ಜನರು ಎಷ್ಟು ಸೌಕರ್ಯದಿಂದ ಜೀವನ ನಡೆಸುತ್ತಿದ್ದಾರೆ ಎಂದರೆ, ಕೂತಲ್ಲೇ ಎಲ್ಲವನ್ನೂ ತಯಾರಿಸುವಷ್ಟು.
ಮಣ್ಣಿನ ಮಡಕೆಗೂ ಹಲವಾರು ರೀತಿಯ ಸಂಪ್ರದಾಯವಿದೆ. ಈ ಮಡಕೆಯನ್ನು ಮನೆಗೆ ತಂದರೆ ಇದನ್ನು ಖಾಲಿಯಾಗಿ ಇಡಬಾರದು. ಏನನ್ನಾದರೂ ತುಂಬಿಸಿಡಬೇಕು. ಖಾಲಿಯಾಗಿರು ಮಣ್ಣಿನ ಮಡಕೆಯನ್ನು ಮನೆಯಲ್ಲಿ ಇಟ್ಟರೆ ಸಂಪತ್ತು ಬರಿದಾಗುತ್ತದೆ ಹಾಗೇಯೇ ಕುಟುಂಬದ ಸದಸ್ಯರ ನಡುವೆ ಮನಸ್ತಾಪಗಳಾಗುತ್ತವೆ ಎಂಬುದು ಹಿಂದಿನವರ ನಂಬಿಕೆ.
ಮಡಕೆ ಪಾತ್ರೆಗಳಿಗೆ ಇರುವ ಮಹತ್ವ ಯಾರಿಗೂ ತಿಳಿಯದ ಕಾರಣ ನಾವು ಸ್ಟೀಲ್ ಪಾತ್ರಗಳತ್ತ ವಾಲುವಂತೆ ಮಾಡಿದೆ. ಇನ್ನಾದರೂ ಮಡಕೆಯ ಮಹತ್ವವನ್ನು ತಿಳಿದು ನಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕಾಗಿದೆ.
-ಧನ್ಯಶ್ರೀ
ಪ್ರಥಮ ಪತ್ರಿಕೋಧ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ