ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಉಳುಮೆ, ಬಿತ್ತನೆ; ಚಿಗುರಲಿದೆ ಹಸಿರಿನ ಚಿಲುಮೆ

Upayuktha
0

ಇಂದು (ಜೂ.15-ಗುರುವಾರ) ಪುತ್ತೂರು ಮಹಾಲಿಂಗೇಶ್ವರ ದೇವರ ರಥ ಬೀದಿಯಲ್ಲಿ ಸಾಗುತ್ತಿದ್ದೆ. ವಿಶಾಲವಾದ ಜಾಗದ ಒಂದು ಪಕ್ಕದಲ್ಲಿ (ಸುಮಾರು ಎರಡು ಎಕರೆ ಜಾಗ ಇರಬಹುದು) ಗದ್ದೆ ಉಳುಮೆ ಮಾಡಿ ಬೀಜ ಬಿತ್ತುವುದನ್ನು ಕಂಡೆ. ಭತ್ತವನ್ನು ಬೆಳೆಯುವುದು, ಬೆಳೆಸುವುದು ಮತ್ತು ಬೆಳೆಸುವವರನ್ನು ಕಂಡಾಗ ಅಭಿಮಾನ ಪಡುವ ಸ್ವತಹ ಗದ್ದೆ ಬೇಸಾಯಗಾರನಾದ ನನಗೆ ಇದನ್ನು ಕಂಡಾಗ ಅತೀವ ಸಂತೋಷವಾಯಿತು.


ಚಿಕ್ಕವನಿದ್ದಾಗ ದೇವಸ್ಥಾನದ ಎದುರಿನ ವಿಶಾಲ ಜಾಗ ಭತ್ತದ ಪೈರಿನಿಂದ ಹಸುರಿನ ಸಾಗರದಂತೆ  ಕಂಗೊಳಿಸುತ್ತಿತ್ತು. ಪ್ರಕೃತಿಯೆಂಬುದೇ ಹಸುರು. ಸೃಷ್ಟಿಯಲ್ಲಿ ಅತ್ಯಂತ ಸುಖ ನೀಡುವ ಬಣ್ಣ ಕೂಡ ಹಸಿರು. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳ ಎದುರು ದೇವರ ಆವಶ್ಯಕತೆಗಳಿಗೆ ಬೇಕಾಗಿ ಭತ್ತದ ಗದ್ದೆಯಿತ್ತು. ಬೇಸಾಯವಾಗುತ್ತಿತ್ತು, ದೇವರ ಮೇಲಿನ ಭಕ್ತಿಗೆ ಪ್ರಶಾಂತ ವಾತಾವರಣವಿತ್ತು. ಹತ್ತೂರಿಗೆ ಪ್ರಸಿದ್ಧವಾದ ಪುತ್ತೂರು ಮಾಲಿಂಗೇಶ್ವರ ಸನ್ನಿಧಾನದಲ್ಲಿಯೂ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಕಾಲದ ಅಗತ್ಯತೆಯಿಂದಲೋ, ಅನಿವಾರ್ಯತೆಯಿಂದಲೋ, ಆಧುನಿಕತೆಗೆ ತೆರೆದುಕೊಂಡ ಪರಿಣಾಮವೋ ಮಣ್ಣು ಎತ್ತರಿಸಿ ಶಾಶ್ವತವಾಗಿ ಗದ್ದೆ ಬೇಸಾಯಕ್ಕೆ ವಿದಾಯ ಹೇಳಿತ್ತು.


ವರುಷಗಳು ಅನೇಕ ಉರುಳಿದಾಗ ಮುಕ್ಕಣ್ಣನಿಗೆ ಅದೇನು ಕಂಡಿತೋ, ಶೂನ್ಯವಾದ ಹಸಿರು, ವಾಹನ ಶಬ್ದಗಳ ಭರಾಟೆ, ಬಹು ಮಹಡಿ ಕಟ್ಟಡಗಳ ಏಕತಾನತೆಗೆ ಒಂದಷ್ಟು ವಿದಾಯ ಹೇಳಲು ಮತ್ತೆ ಹಸುರಿನ ಅಪೇಕ್ಷೆ ಕಂಡ. ಉತ್ಸಾಹಿ ತಂಡವನ್ನು ಆಡಳಿತಕ್ಕೆ ಕರೆಸಿಕೊಂಡ. ಪರಿಣಾಮ ಕಳೆದ ನಾಲ್ಕು ವರ್ಷದಿಂದ ಗದ್ದೆ ಬೇಸಾಯ ಮತ್ತು ಅದಕ್ಕೆ ಪೂರಕವಾಗಿ ಗೋ ಶಾಲೆ.


ಆಧುನಿಕ ವಿದ್ಯಾಭ್ಯಾಸಕ್ಕೆ ಶರಣಾಗಿ ಶಾಲೆ ಸೇರಿದ ಮಕ್ಕಳಿಗೆ ಹಾಲೆಲ್ಲಿಂದ ಬರುತ್ತದೆ ಎಂದು ಕೇಳಿದರೆ ಪ್ಯಾಕೆಟ್ಟಿನಿಂದ, ಅಕ್ಕಿ ಎಲ್ಲಿಂದ ಕೇಳಿದರೆ ಅಂಗಡಿಯಿಂದ ಎಂಬ ಉತ್ತರ ಬರುವ ಕಾಲದಲ್ಲಿ ಸುತ್ತು ಮುತ್ತಲಿನ ಸಾವಿರಾರು ಮಕ್ಕಳಿಗೆ ಗೋವಿನ ಬಗ್ಗೆ ಮತ್ತು ಉಣ್ಣುವ ಅನ್ನದ ಬಗ್ಗೆ ಅರಿವು ಮೂಡಿಸುವ ತಾಣ ಮಹಾಲಿಂಗೇಶ್ವರ ಸನ್ನಿಧಿಯಂತೂ ಆದದ್ದು ದಿಟ.


ಪವಾಡದ ಮೇಲೆ ನಂಬಿಕೆ ಇಲ್ಲದಿದ್ದರೂ ಪವಾಡ ಸದೃಶವಾಗಿ ಭತ್ತದ ಗದ್ದೆ ಮತ್ತೆ ಚಿಗುರೊಡೆದದ್ದು ಕಾರಣಿಕತೆಗೋ ಪವಾಡಕ್ಕೋ ಸಾಕ್ಷಿ. ಶಾಶ್ವತವಾಗಿ ಬೇಸಾಯ  ಮುಂದುವರೆಯಲಿ. ದೇವರಿಗೆ ನವಾನ್ನ ಭೋಜನ ತನ್ನದೇ ಗದ್ದೆಯಿಂದ ದೊರೆಯಲಿ.


-ಎ.ಪಿ. ಸದಾಶಿವ ಮರಿಕೆ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top