ಚಿಕಿತ್ಸಕ ಗುಣದ ಕವಿ ಕನಕ :ಪ್ರೊ. ತಾಳ್ತಜೆ

Upayuktha
0

ರಾಮಕುಂಜದಲ್ಲಿ ಕನಕ ಕಮ್ಮಟ ಉದ್ಘಾಟನೆ

ಮುಡಿಪು: ತಮಿಳುನಾಡಿನಿಂದ ಮೊದಲ್ಗೊಂಡು ಕನ್ನಡನಾಡಿನ ಮೂಲಕ ಉತ್ತರಭಾರತ ಕಡೆಗೆ ವ್ಯಾಪಿಸಿದ ಭಕ್ತಿಲತೆ ಭಾರತದ ಬದುಕನ್ನು ಪೋಷಿಸಿದೆ. ಈ ಭಕ್ತಿಪರಂಪರೆಯ ವಿಶಿಷ್ಟ ಕವಿ ಕನಕ. ತನ್ನ ಆಧ್ಯಾತ್ಮಿಕ ಮತ್ತು ಸಾಮಾಜಿಕ ರಚನೆಗಳಲ್ಲಿ ಕನಕದಾಸರು ಚಿಕಿತ್ಸಕ ಗುಣದ ಕವಿಯಾಗಿ ಮೂಡಿಬಂದಿದ್ದಾರೆ, ಎಂದು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಅವರು ಅಭಿಪ್ರಾಯಪಟ್ಟರು.


ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನಪೀಠ ಮತ್ತು ಕನಕದಾಸ ಸಂಶೋಧನಾಕೇಂದ್ರ ಮತ್ತು ಶ್ರೀರಾಮ ಕುಂಜೇಶ್ವರ ಪ್ರಥಮದರ್ಜೆ ಕಾಲೇಜು ಸಹಯೋಗದೊಂದಿಗೆ ಶ್ರೀರಾಮ ಕುಂಜೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಒಂದು ದಿನದ 'ಕನಕ ಕೀರ್ತನ ಗಾಯನ ಕಮ್ಮಟ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ವಿಜಯನಗರ ಸಾಮ್ರಾಜ್ಯದ ಪಾಳೆಯಗಾರ, ಶುದ್ಧಾಂಗ ಸೈನಿಕನಾಗಿದ್ದ ಕನಕ ತಿರುಪತಿ ತಿಮ್ಮಪ್ಪ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತದ ಮೂಲಕ ಕಂಡುಕೊಂಡ ದಿವ್ಯಾನುಭವ ಅವರ ಕೀರ್ತನೆಗಳಲ್ಲಿ ಅಭಿವ್ಯಕ್ತಗೊಂಡಿದೆ, ಎಂದರು.


ಕಾರ್ಯಕ್ರಮದಲ್ಲಿ ರಾಮ ಕುಂಜೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ ಯಸ್ ಕುವೆಚ್ಚಾರು ಅಧ್ಯಕ್ಷತೆ ವಹಿಸಿದ್ದರು. ಆಶಯ ಭಾಷಣ ಮಾಡಿದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಅವರು ಸಾಹಿತ್ಯ ಸಂಗೀತ ಕಲೆ ಮತ್ತು ಅಧ್ಯಾತ್ಮಿಕ ಪರಂಪರೆ ಒಂದು ಭಾವಭಾರತವನ್ನು ರೂಪಿಸಿದೆ. ಆ ಪರಂಪರೆಯ ಕೊಂಡಿಯಾಗಿರುವ ಕನಕದಾಸರು ಸಂಗೀತ ಮತ್ತು ಭಕ್ತಿಯ ಅನುಸಂಧಾನದ ಮೂಲಕ ಅಪೂರ್ವ ಸಾಧನೆ ಮಾಡಿದರು,ಎಂದರು.

ಶ್ರೀರಾಮ ಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಅವರು ಸ್ವಾಗತಿಸಿದರು. ರಾಮಕುಂಜಲಲಿ ಕಲಾಸಂಘದ ಸಂಯೋಜಕರಾದ ಜಯಶ್ರೀ ಭಟ್ ಅವರು ವಂದಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸುಂದರ ಶೆಟ್ಟಿ ಉಪಸ್ಥಿತರಿದ್ದರು. 


ಪ್ರಸಿದ್ಧ ಗಾಯಕರಾದ ಯಜ್ಞೇಶ್ ಆಚಾರ್ಯ ಸುಬ್ರಹ್ಮಣ್ಯ ಅವರು ಕನಕಕೀರ್ತನ ಗಾಯನ ಕಮ್ಮಟವನ್ನು ನಡೆಸಿಕೊಟ್ಟರು. ಶ್ರೀವಾಣಿ ಕಾಕುಂಜೆ ಸಹಗಾಯಕರಾಗಿ, ಸುಹಾಸ್ ಹೆಬ್ಬಾರ್ ಮತ್ತು ರವಿರಾಜ್ತಬಲ ಮತ್ತು ಹಾರ್ಮೋನಿಯಂನಲ್ಲಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ವಿವಿಧ ಕಾಲೇಜಿನ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದರು.

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top