ನಾಗರಿಕರ ಪ್ರತಿಭಟನೆಗೆ ಜಯ
ಮಂಗಳೂರು: ವಾಮಂಜೂರು ಅಣಬೆ ಫ್ಯಾಕ್ಟರಿ ಇಂದಿನಿಂದಲೇ ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಸಿ ಅವರು ಇಂದು ಸಂಜೆಯೊಳಗೆ ಫ್ಯಾಕ್ಟರಿಗೆ ಸೀಲ್ ಹಾಕಲಾಗುವುದು ಎಂದರು. ಇದು ವಾಮಂಜೂರು ನಾಗರಿಕರಿಗೆ ಸಿಕ್ಕ ಜಯ ಎಂದು ಪ್ರತಿಭಟನಾಕಾರರು ಜಯಕಾರ ಹಾಕಿದರು.
ವಾಮಂಜೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಅಣಬೆ ಫ್ಯಾಕ್ಟರಿಯಿಂದ ದುರ್ನಾತ ಹಾಗೂ ಸ್ಥಳೀಯ ನಿವಾಸಿಗಳಿಗೆ ಆರೋಗ್ಯ ಸಮಸ್ಯೆಗಳು ತಲೆದೋರುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆಗಳು ನಡೆದಿದ್ದವು. ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿ ಜನತೆಗೆ ಬೆಂಬಲ ಘೋಷಿಸಿದ್ದರು. ಅಲ್ಲದೆ ಸರಕಾರ, ಜಿಲ್ಲಾಡಳಿತ ಸ್ಪಂದಿಸುವವರೆಗೂ ಅನಿರ್ದಿಷ್ಟವಾಧಿ ಮುಷ್ಕರ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ವಾಮಂಜೂರಿನಲ್ಲಿ ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅತಿಯಾದ ದುರ್ವಾಸನೆಯಿಂದ ವಾಂತಿ, ತಲೆನೋವು, ಆಘ್ರಾಣಿಸುವ ಶಕ್ತಿ, ಮಕ್ಕಳಲ್ಲಿ ಅನಾರೋಗ್ಯ ಎದುರಾಗುತ್ತಿದೆ.ಊಟ,ತಿಂಡಿ ಮಾಡಲು ಸಾಧ್ಯವಾಗುತ್ತಿಲ್ಲ. ಶಾಸಕನಾಗಿ ಜನರಿಗೆ ಸಂಪೂರ್ಣ ಬೆಂಬಲ ನೀಡಿ, ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ್ದರು.
ವಾಮಂಜೂರು ಬಂದ್, ರಸ್ತೆ ತಡೆ ಸಹಿತ ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ. ಮಂಗಳೂರು ಸಹಾಯಕ ಆಯುಕ್ತರು ಬಂದು ನೋಡಿ ಹೋದರೂ ಸಮಸ್ಯೆ ಬಗೆ ಹರಿಸಲು ಮುಂದಾಗಿಲ್ಲ. ಪ್ರತಿಭಟನೆ ನಡೆಸುತ್ತಿರುವ ಜನರನ್ನು ಪೊಲೀಸರು ಶಕ್ತಿ ಪ್ರದರ್ಶನ ನಡೆಸಿ ಎಬ್ಬಿಸಲು ಹೋದರೆ ಹೋರಾಟ ಬೇರೆ ಮಜಲಿಗೆ ತಿರುಗಬಹುದು.
ಮುಂದಿನ ಹೆಜ್ಜೆ ಯೋಚಿಸುವ ಮುನ್ನ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು. ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿಗಳು ರವಿವಾರದ ಒಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಭಾನುವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ರವಿಕುಮಾರ್ ಅವರು ಅಣಬೆ ಫ್ಯಾಕ್ಟರಿ ಬಂದ್ ಮಾಡಲು ಸ್ಥಳದಲ್ಲೇ ಆದೇಶ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ