ಆ ಸ್ಕೂಲ್‌ನಲ್ಲಿ ಹಾಸ್ಟೆಲ್ ಅಡ್ಮಿಶನ್ನ ಸಿಕ್ಕೋದು ಎಷ್ಟು ಕಷ್ಟ ಗೊತ್ತಾ? ನಮ್ಮ ಯಜಮಾನ್ರಿಗೆ ಎಂಎಲ್ಎ ಮಿನಿಸ್ಟರ್‌ಗಳೆಲ್ಲ ಪರಿಚಯ ಸಿಕ್ಕಾಪಟ್ಟೆ ಇನ್‌ಫ್ಲ್ಯುಯೆನ್ಸ್ ಹಾಕಿ ಸೀಟು ತಂದಿರೋದು..!!
ಇನ್ನಾ ಆ ಸ್ಕೂಲ್ ಹಾಸ್ಟೆಲ್ ಅಂದ್ರೆ ಶ್ರೀಮಂತರ ಮಕ್ಕಳಷ್ಟೆ ಓದೋಕೆ ಆಗುವಂತಾದ್ದು ನಾವು ಐದಲ್ಲ, ಹತ್ತು ಲಕ್ಷ ಹೋದ್ರು ಚಿಂತೆಯಿಲ್ಲ ಅಂತ ಮಗನಿಗೋಸ್ಕರ ಖರ್ಚು ಮಾಡಿ ಸೇರಿಸಿರೋದು...!!!
ಈ ಮೇಲಿನ ಮಾತುಗಳು ಕಷ್ಟ ಪಟ್ಟು ಮೂರು ಐದನೇ ಕ್ಲಾಸು ಓದೊ ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸಿದ ಸಂಭ್ರಮದಲ್ಲಿರುವ ಅಪ್ಪ ಅಮ್ಮಂದಿರದು.
ಒಂದು ಹಂತದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆಂದು ಮಕ್ಕಳು ಅಪ್ಪ ಅಮ್ಮನನ್ನು ತೊರೆದು ಹೋಗಲೆಬೇಕು ಆದ್ರೆ ಕನಿಷ್ಠ ಪಕ್ಷ ಹತ್ತನೇ ತರಗತಿಯಲ್ಲ ಎಂಟನೇ ತರಗತಿಯವರೆಗೂ ಮಕ್ಕಳನ್ನು ತಮ್ಮ ಹತ್ತಿರವಿಟ್ಟುಕೊಂಡು ಸಲುಹದ ಅಪ್ಪ ಅಮ್ಮಂದಿರು ಜವಾಬ್ದಾರಿಯಿಂದ ನುಣಚಿಕೊಂಡು ಮಕ್ಕಳ ಭವಿಷ್ಯತ್ತಿಗಾಗಿಯೇ ಈ ಸವಲತ್ತು ತ್ಯಾಗ ಎನ್ನುವ ನೆಪವೂಡ್ಡಿ ಮಾತೃ ಪ್ರೇಮ ಪಿತೃ ಪ್ರೇಮದಿಂದ ಮಕ್ಕಳನ್ನು ವಂಚಿಸುತ್ತಿದ್ದಾರೆ.
* ಆಟ ಆಡುತ್ತಾ ಮಗು ಎಡವಿ ಅಮ್ಮಾ ಅಂತ ಕೂಗು ಹಾಕಿದ್ರೆ ಸಾಕಿತ್ತು ತಾಯಿ ಜೀವ ಸೊರುವ ರಕ್ತವ ನೋಡಿ ವಿಲವಿಲ ಒದ್ದಾಡುತ್ತಿತ್ತು, ಅಲ್ಲಿ ನೀವೆ ಬಂಧಿಸಿಟ್ಟ ಗೂಡಲ್ಲಿ ಅದೆಷ್ಟು ಸಾರಿ ಮಗು ಬಿದ್ದು ರಕ್ತ ಸುರಿಸುತ್ತ ನಿಮ್ಮನ್ನು ಕರೆದಿದೇಯೊ ತಾಯಿಯ ಒಡಲು ಅದನ್ನು ಅರಿಯದಷ್ಟು ಸ್ತಬ್ಧವಾಗಿ ಬಿಟ್ಟಿದ್ದೇಯಾ??
* ಕನಸಿನಲ್ಲಿ ಬಂದ ಗುಮ್ಮಾ ಎದ್ರಿ ಬೆವರಿ ಅದೆಷ್ಟು ಸಾರಿ ಅಮ್ಮ ಅಪ್ಪನ ಒಡಲೊಳು ಹೊಕ್ಕು ಬೆಚ್ಚಗೆ ಮಲಗುತ್ತಿತ್ತು ಕಂದಮ್ಮ. ಇಂದು ಯಾರ ಒಡಲು ಅದು ಸೇರಲಿ ಯಾರ ತಬ್ಬಿ ಮಲಗಲಿ??
* ಮಗುವಿನ ಮುಖವ ನೋಡಿ ಕೆಂಪಾದ ಕಣ್ಣ ನೋಡಿ ಕಿವಿಯ ತುರಿಕೆಯ ಗಮನಿಸಿ, ಮಗಾ ಹುಷಾರಿಲ್ಲವಾ? ನೆಗಡಿನಾ? ಕೆಮ್ಮಾ? ಅಂತ ಉಪಚರಿಸುತ್ತಿದ್ದ ಮಗವಾ ಮುಖದಲ್ಲಿ ಮುಖವನಿಟ್ಟು ನೋಡುವರ್ಯಾರಲ್ಲಿ? ಸುಸ್ತೆಂದು ಮಲಗಿದ್ರೆ ಕಂದಮ್ಮನನ್ನು ಮಮತೆಯ ಕೈಯಿಂದ ಸಲಹುತ್ತಿದ್ದ ತಾಯಿಯ ಕೈಗಳು ಕಾಣದ ಕೈಗಳಾಗಿ ಮಾಯವಾಗಿ ಬಿಟ್ಟವೆ, ಸೇರದ ಊಟ ಅಪ್ಪ ತರುತ್ತಿದ್ದ ಎರಡು ಇಡ್ಲಿ ಎಳೆನೀರಿನ ಪ್ರೇಮ ಮಕ್ಕಳನ್ನು ಪರಿತಪಿಸುವಂತೆ ಮಾಡಿತ್ತು...!!
* ಮದ್ವೆ ಮುಂಜಿ ಪಾರ್ಟಿ ಹೋಟೆಲ್ ಪಿಕ್ನಿಕ್ ಮೋಜು ಮಸ್ತಿಗಳಲ್ಲಿ ನಾವು, ಅವರ ಭವಿಷ್ಯ ನೆಪವೊಡ್ಡಿ ನಮ್ಮ ಮಕ್ಕಳು ಕುಟುಂಬದ ಸಂಭ್ರಮದಿಂದ ದೂರ ತಳ್ಳಿದ ನಾವುಗಳು ಎದೆತಟ್ಟಿ ನಾವೊಬ್ಬ ಜವಾಬ್ದಾರಿ ಹೊತ್ತ ಅಪ್ಪ ಅಮ್ಮ ಎಂದು ಹೇಳಿಕೊಳ್ಳುವುದಾದರೂ ಹೇಗೆ?
* ಇಷ್ಟದ ತಿಂಡಿಯ ಪರಿಮಳ ಬೀರುತ್ತಲೆ ಅಮ್ಮನ ಸೆರಗಿಡಿದು ಅಡುಗೆ ಮನೆ ಸುತ್ತು ಹಾಕುತ್ತಿದ್ದ ಮಗುವಿನ ಅನುಪಸ್ಥಿತಿ ತುತ್ತು ಬಾಯಿಯಲ್ಲಿಡುವ ಹೊತ್ತಿಗೆ ಕಾಡುವುದಿಲ್ಲವೇ?
* ಇನ್ನೂ ಬದಲಾವಣೆ ನೈಸರ್ಗಿಕ ನಿಯಮದಂತೆ ವಯೋ ಸಹಜ ಋತುಮತಿಯಾಗಲು ತನ್ನ ದೇಹದ ಸ್ಥಿತಿಗತಿಯಲ್ಲಿನ ಬದಲಾವಣೆ ನೆಡೆಸಿದ ಸಿದ್ಧತೆ ಒಳಗಿನ ಆತಂಕವನ್ನೂ ಅಮ್ಮನ ಮಡಲಲ್ಲಿ ಮಲಗಿ ಹೇಳಿಕೊಳ್ಳದಂತಹ ದುಸ್ಥಿತಿ ಈ ಹಾಸ್ಟೆಲ್ ಸೆರೆವಾಸದ ಕಿಶೋರಿಯರದು, ಅಮ್ಮನಿಗೆ ಇದರ ಅರಿವು ಸೋಕಲಿಲ್ಲವೇ?
* ಕೋಪದಿ ಊಟ ಬೇಡವೆನ್ನಲೂ ಕೈ ತುತ್ತು ನೀಡುವ ಅಪ್ಪನಿಲ್ಲ, ಗದರುವ ಮುದ್ದಿಸುವ ಅಮ್ಮನಿಲ್ಲ, ಕಚಗುಳಿಟ್ಟ ಸತಾಯಿಸುತ್ತ ಚೇಷ್ಟೆಗಳ ಮಾಡುತ್ತಿದ್ದ ಒಡಹುಟ್ಟಿದವರಿಲ್ಲ, ನಮ್ಮ ಮಕ್ಕಳನ್ನು ನಾವೇ ಅನಾಥರಾಗಿಸಿ ಬಿಟ್ಟೆವೆಲ್ಲ!!
ಸವಲತ್ತು ಉತ್ತಮ ಹಾರೈಕೆ ಬಿಡುವಿಲ್ಲದ ಸಮಯದ ನೆಪವೊಡ್ಡಿ ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸುವ ಮಕ್ಕಳಿಗೂ, ಇದೇ ನೆಪವೂಡ್ಡಿ ಮಕ್ಕಳನ್ನು ಹಾಸ್ಟೆಲ್ ಸೇರಿಸವ ಅಪ್ಪಅಮ್ಮಂದಿರಲ್ಲಿ ವ್ಯತ್ಯಾಸವೇನು ಇಲ್ಲ!! ಹೆತ್ತವರಿಗೆ ವೃದ್ಯಾಪದಲ್ಲಿ ಹೇಗೆ ಮಕ್ಕಳು ಆಸರೆ ಬೇಕೊ ಹಾಗೆ ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೂ ಹೆತ್ತವರ ಆಸರೆಬೇಕು...
ಎಂಟನೇ ತರಗತಿಯವರೆಗೆ ಸರಕಾರಿ ಶಾಲೆಯಲ್ಲಿ ಓದಿಸಿದರೂ ಸರಿಯೇ ಈ ಹಾಸ್ಟೆಲ್ ಸಹವಾಸ ಬೇಡ. ಇನ್ನೂ ಪಟ್ಟಣದ ಉನ್ನತ ವ್ಯಾಸಂಗ ಕೊಡಿಸಬೇಕೆನ್ನುವ ಹಪಾಹಪಿ ಪಾಲಕರಲ್ಲಿದ್ದರೆ, ತಾವೇ ಪಟ್ಟಣದ ನಿವಾಸಿಗಳಾಗಿ ಬದಲಾಗಲಿ...
ಒಂದು ಕ್ಷಣ ಅದೆಷ್ಟು ನಿಮ್ಮ ಕಂದಮ್ಮ ನಿಮ್ಮನ್ನು ಅಗಲಿ ಹೋದ ಸಂಕಟದಲ್ಲಿದೆಯೋ ನೆನಪು ಮಾಡಿಕೊಳ್ಳಿ, ನಿಮ್ಮ ಅವಶ್ಯಕತೆ ಅವಕ್ಕೆ ಎಷ್ಟಿತ್ತು ಎನ್ನುವುದನ್ನು ಮನನ ಮಾಡಿಕೊಳ್ಳಿ...
-ಲೀಲಾ ಮಲ್ಲಿಕಾರ್ಜುನ ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ



