ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಉಜಿರೆ: ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಆಗುತ್ತಿರುವ ಮಹತ್ವದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ವಾಣಿಜ್ಯಶಾಸ್ತ್ರದ ಶೈಕ್ಷಣಿಕ ಆಯಾಮ ಮತ್ತು ಸಂಶೋಧನಾ ಸಾಧ್ಯತೆಗಳನ್ನು ವಿಸ್ತರಿಸುವ ಅನಿವಾರ್ಯತೆ ಇದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಕಾವ್ಯಾ ಪಿ. ಹೆಗ್ಡೆ ಅಭಿಪ್ರಾಯಪಟ್ಟರು.
ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗವು ‘ವಾಣಿಜ್ಯ ಮತ್ತು ನಿರ್ವಹಣೆ ಕ್ಷೇತ್ರದ ಸಮಕಾಲೀನತೆ’ಯ ಕುರಿತು ವೆಬಿನಾರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಕೃತಕ ಬುದ್ಧಿಮತ್ತೆಯು ಮನುಷ್ಯನ ಬುದ್ಧಿಶಕ್ತಿಯ ಮಹತ್ವದ ಆವಿಷ್ಕಾರ. ತಂತ್ರಜ್ಞಾನದ ಕೊಡುಗೆಗಳು ಮನುಷ್ಯನ ಯೋಚನಾಶಕ್ತಿಯ ವಿಸ್ತರಣೆಯ ಅಂಶಗಳಾಗಿರುತ್ತವೆ. ಇಂಥ ವಿಸ್ತರಣೆಯ ಪರಿಕಲ್ಪನೆಯಾದ ಕೃತಕ ಬುದ್ಧಿಮತ್ತೆಯು ಮನುಷ್ಯನನ್ನೇ ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆಯಬಾರದು. ಈ ದೃಷ್ಟಿಯಿಂದ ವಾಣಿಜ್ಯಶಾಸ್ತ್ರದ ಜ್ಞಾನ ಸಾಧ್ಯತೆಗಳನ್ನು ವಿಸ್ತರಿಸುವ ಬೌದ್ಧಿಕ ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದರ ಕಡೆಗೆ ಹೆಚ್ಚಿನ ಆದ್ಯತೆ ಅಗತ್ಯ ಎಂದು ಹೇಳಿದರು.
ಸಾಮ್ರಾಜ್ಯಗಳ ಆಳ್ವಿಕೆಯ ಸಂದರ್ಭದಿಂದಲೂ ವ್ಯಾಪಾರ ವಹಿವಾಟಿನೊಂದಿಗೇ ಭಾರತ ಗುರುತಿಸಿಕೊಂಡಿದೆ. ಮೊಘಲರು ಮತ್ತು ಈಸ್ಟ್ ಇಂಡಿಯಾ ಕಂಪನಿ ವ್ಯಾವಹಾರಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಭಾರತ ಒಂದು ಕೇಂದ್ರವಾಗಿತ್ತು, ಇಲ್ಲಿ ದೊರೆಯುವ ಹೇರಳವಾದ ಸಂಪನ್ಮೂಲಗಳ ಅನುಕೂಲಗಳನ್ನು ಮನಗಂಡಿದ್ದ ಬ್ರಿಟಿಷರು, ಇಲ್ಲಿನ ಅಮೂಲ್ಯ ಉತ್ಪನ್ನಗಳನ್ನು ತಮ್ಮ ದೇಶದ ಕೈಗಾರಿಕರಣಕ್ಕೆ ಬಳಸಬೇಕೆಂದು ತೀರ್ಮಾನಿಸಿದ್ದರು. ಇಂಥ ಐತಿಹಾಸಿಕ ಹಿನ್ನೆಲೆಗಳನ್ನು ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ತಾಂತ್ರಿಕ ಆವಿಷ್ಕಾರದ ಅಂಶಗಳ ಜೊತೆಜೊತೆಗೆ ವಾಣಿಜ್ಯ ಶಾಸ್ತ್ರದ ಸಮಗ್ರತೆಯ ಅಂಶಗಳ ಕುರಿತು ಗೊತ್ತುಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಪಿ ಎನ್ ಉದಯಚಂದ್ರ ಮಾತನಾಡಿದರು. ಪ್ರಾಧ್ಯಾಪಕರು ಮತ್ತು ಯುವಸಂಶೋಧಕರು ಜಗತ್ತಿನಲ್ಲಿ ಆಗುವ ಪ್ರತಿಯೊಂದು ಬದಲಾವಣೆಗಳನ್ನು ಗಮನಿಸುತ್ತಿರಬೇಕು. ಅಂದಾಗ ಮಾತ್ರ ಇನ್ನೂ ಹೆಚ್ಚಿನ ಆಳವಾದ ಅಧ್ಯಯನ ನಡೆಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯ ಡಾ. ಕುಮಾರ ಹೆಗ್ಡೆ ಬಿ.ಎ. ಮಾತನಾಡಿ, ಭಾರತದಲ್ಲಿ ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಶೋಧನೆಗಳು ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ, ವಾಣಿಜ್ಯ ನಿಕಾಯದ ಡೀನ್ ಶಕುಂತಲಾ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾಕುಮಾರಿ ಎಸ್ ವಿ ಸ್ವಾಗತಿಸಿದರು. ಭಾಗ್ಯಶ್ರೀ ತಂಡದವರು ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಸುರೇಶ್ ಬಾಬು ಕೆ ಎನ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ

.jpg)
