ಅರಳುವ ಕನಸುಗಳನ್ನು ಚಿವುಟದಿರಿ
ಮಕ್ಕಳು ದೇಶದ ಆಸ್ತಿ, ಆದರೆ...
ಜೂನ್ ತಿಂಗಳು ಬಂತೆಂದರೆ ಸಾಕು ಶಾಲೆಗೆ ಹೋಗುವ ಮಕ್ಕಳಲ್ಲಿ ಎಲ್ಲಿಲ್ಲದ ಸಡಗರ. ಹೊಸ ಬ್ಯಾಗ್, ಪುಸ್ತಕ, ಕೊಡೆ, ಸ್ನೇಹಿತರು, ಆಟಪಾಠ ಹೀಗೆ ಲವಲವಿಕೆಯಿಂದಿರುವ ಮಕ್ಕಳು ಹಾಗೂ ತಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸುವ ತವಕದ ಪೋಷಕ ವರ್ಗವನ್ನು ನೋಡಬಹುದು. ಇನ್ನೊಂದೆಡೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಕೆಲಸಕ್ಕೆ ತಳ್ಳುವ ವರ್ಗ-ಚಿಂದಿ ಹೊತ್ತು ನಡೆಯುವ, ಕಲ್ಲು ಕುಟ್ಟುವ, ಬಣ್ಣದ ಬೊಂಬೆ ಮಾರುವ, ಮೂಟೆ ಹೊರುವ ಮಕ್ಕಳು ಕಣ್ಣ ಮುಂದೆ ಬರುತ್ತಾರೆ.
ಶತಮಾನಗಳ ಹಿಂದೆಯೇ ಬೇರು ಬಿಟ್ಟು ಹೆಮ್ಮರವಾಗಿ ಬೆಳೆದಿರುವ ಈ ಬಾಲ ಕಾರ್ಮಿಕ ಪದ್ಧತಿ ಒಂದು ದೇಶದ ಸಾಮಾಜಿಕ ಹಾಗೂ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲ ಶಕ್ತಿಯನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಅನಿಷ್ಠ ಪಿಡುಗು. ದೇಶದ ಆಸ್ತಿಯಾಗಿ ಬೆಳೆಯಬೇಕಾದ ಕಂದಮ್ಮಗಳು ಅವಕಾಶವಂಚಿತರಾಗಿ, ಶೋಷಣೆಯ ಭಾಗವಾಗಿ, ಬಡತನವೆಂಬ ವಿಷವರ್ತುಲದ ಭಾಗವಾಗುತ್ತಿರುವುದು ವಿಷಾದನೀಯ.
ಸಾಮಾಜಿಕ ಪಿಡುಗು-ಮಾನವೀಯತೆಗೊಂದು ಕಳಂಕ
ಮಕ್ಕಳ ಭವಿಷ್ಯದ ಜೊತೆಗೆ ಆಟವಾಡುವ ‘ಬಾಲ ಕಾರ್ಮಿಕ ಪದ್ಧತಿ’ ಒಂದು ಸಾಮಾಜಿಕ ಪಿಡುಗು, ಮಾನವೀಯತೆಗೊಂದು ಕಳಂಕ. ಶಾಲೆಗೆ ಹೋಗಿ ತಮ್ಮ ಬಾಳನ್ನು ಬಂಗಾರವಾಗಿಸಬೇಕಾದ ಮಕ್ಕಳು ಹಲವಾರು ಕಾರಣಗಳಿಂದ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬಹಳಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಬಾಲ್ಯದ ಸಂತೋಷವನ್ನು ಅನುಭವಿಸಲಾಗದೆ, ನಿರಾಶಾದಾಯಕ ಭವಿಷ್ಯದಲ್ಲಿ ತೊಳಲಾಡುವ ಪರಿಸ್ಥಿತಿ ಎದುರಾಗುತ್ತಿದೆ. ಮಕ್ಕಳು ದೇಶದ ಆಸ್ತಿ, ದೇಶದ ಆಸ್ತಿಯಾಗಬೇಕಾದ ಮಕ್ಕಳೇ ತಮಗರಿವಿಲ್ಲದಂತೆಯೇ ಇಂದು ದೇಶ ಎದುರಿಸುತ್ತಿರುವ ಬಲು ದೊಡ್ಡ ಪಿಡುಗಿನ ಒಂದು ಭಾಗವಾಗುತ್ತಿರುವುದು ಬೇಸರದ ವಿಚಾರ. ದೇಶದ ಜವಬ್ದಾರಿಯುತ ಪ್ರಜೆಗಳಾಗಬೇಕಾದ ಈ ಮೊಗ್ಗುಗಳು ಅರಳುವ ಮೊದಲೇ ದುಡಿತದ ಬಂಧನಕ್ಕೆ ಒಳಗಾಗುವ ದಾರುಣ ಸ್ಥಿತಿಯನ್ನು ನಿತ್ಯ ಕಾಣುತ್ತಿದ್ದೇವೆ. ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಮಕ್ಕಳ ಭವಿಷ್ಯವನ್ನು ಎಳವೆಯಲ್ಲಿಯೇ ಚಿವುಟುವ ಕ್ರೂರ ಪದ್ದತಿಗೆ ಇತಿಶ್ರೀ ಹಾಡಲೇಬೇಕಿದೆ.
ವಿಶ್ವ ಬಾಲಕಾರ್ಮಿಕ ವಿರೋಧಿ ದಿನ
ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು, ಬಾಲ ಕಾರ್ಮಿಕ ಪದ್ಧತಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಉದ್ಧೇಶದಿಂದ ಗುರಿಯೊಂದಿಗೆ ಪ್ರತಿವರ್ಷ ಜೂನ್ 12 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ‘ಬಾಲ ಕಾರ್ಮಿಕ ವಿರೋಧಿ ದಿನ’ ವನ್ನು ಆಚರಿಸುತ್ತಿದೆ.
ಶಿಕ್ಷಣದಿಂದ ವಂಚಿತರಾಗಿ, ಹಿಂಸಾತ್ಮಕವಾಗಿ ದುಡಿಸಿಕೊಳ್ಳುತ್ತಿರುವ ಬಾಲ ಕಾರ್ಮಿಕರನ್ನು ರಕ್ಷಿಸಿ, ಅವರಿಗೆ ಶಿಕ್ಷಣ ಕೊಡಬೇಕು ಎಂದು ವಿಶ್ವ ಕಾರ್ಮಿಕ ಸಂಘಟನೆಯು (ಇಂಟರ್ ನ್ಯಾಶನಲ್ ಲೇಬರ್ ಆರ್ಗನೈಸೇಶನ್) 2002 ರಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಮುನ್ನೆಲೆಗೆ ತಂದಿತು. ಬಾಲ ಕಾರ್ಮಿಕರ ರಕ್ಷಣೆಗಾಗಿ ಜಗತ್ತಿನ ಗಮನ ಸೆಳೆಯಲು ವಿಶ್ವ ಕಾರ್ಮಿಕ ಸಂಘಟನೆಯು 2002 ರಲ್ಲಿ ಜೂನ್ 12 ‘ವಿಶ್ವ ಬಾಲಕಾರ್ಮಿಕ ವಿರೋಧಿ ದಿನ’ ಎಂದು ಘೋಷಿಸಿತು.
ವಿಶ್ವ ಕಾರ್ಮಿಕ ಸಂಘಟನೆ (ILO)ಯ ಪ್ರಕಾರ ವಿಶ್ವದಾದ್ಯಂತ ಮಿಲಿಯಗಟ್ಟಲೆ ಹುಡುಗಿಯರು ಮತ್ತು ಹುಡುಗರಿಗೆ ತಮ್ಮ ಶಿಕ್ಷಣದ ಹಕ್ಕು, ಆರೋಗ್ಯ ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿ ದುಡಿಯಲು ತೊಡಗಿದ್ದಾರೆ. ಈ ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚು ಬಾಲ ಕಾರ್ಮಿಕರು ಕಾನೂನುಬಾಹಿರ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ.
ಬಾಲಕಾರ್ಮಿಕ ಪದ್ದತಿ ನಿಲ್ಲಿಸಿ, ಶಿಕ್ಷಣ ಆರಂಭಿಸಿ
ಬಾಲ್ಯ ದುಡಿಯುವ ಸಮಯವಲ್ಲ, ಬದಲಾಗಿ ಸುಂದರ ಕನಸುಗಳನ್ನು ಕಟ್ಟುವ ಸಮಯ. ಯಾವ ಮಗುವೂ ತನ್ನ ಬಾಲ್ಯವನ್ನು ದುಡಿಮೆಗಾಗಿ ತ್ಯಾಗಮಾಡಬಾರದು. ಈ ನಿಟ್ಟಿನಲ್ಲಿ ಈ ವರ್ಷದ ಧ್ಯೇಯ ವಾಕ್ಯ “ಬಾಲಕಾರ್ಮಿಕ ಪದ್ದತಿಯನ್ನು ಕೊನೆಗಾಣಿಸಿ, ಉತ್ತಮ ಭವಿಷ್ಯತ್ತಿಗಾಗಿ ಶಿಕ್ಷಣ ಕೊಡಿಸಿ”. (End child labour, educate for a better future)
ಈ ಪಿಡುಗಿನ ಅಗಾಧತೆ
ILO ಪ್ರಕಾರ “15 ವರ್ಷ ಕೆಳಗೆ ಇರುವ ಯಾವುದೇ ವ್ಯಕ್ತಿಯು ಜೀವನೋಪಾಯ ವೃತಿಯಲ್ಲಿ ತೊಡಗಿರುವುದನ್ನು ಬಾಲಕಾರ್ಮಿಕರು ಎಂದು ಕರೆಯುತ್ತಾರೆ”. ವಿಶ್ವದಾದ್ಯಂತ ಸುಮಾರು 152 ಮಿಲಿಯನ್ ಬಾಲ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. 2011 ರ ಜನಗಣತಿಯ ಪ್ರಕಾರ ಭಾರತದಲ್ಲಿ 5-14 ವಯಸ್ಸಿನ 259.64 ಮಿಲಿಯನ್ ಮಕ್ಕಳಲ್ಲಿ 10.1 ಮಿಲಿಯನ್ ಬಾಲ ಕಾರ್ಮಿಕರಿದ್ದಾರೆ. ಭಾರತದಲ್ಲಿ ಪ್ರತಿ 10 ಮಕ್ಕಳ ಪೈಕಿ ಒಂದು ಮಗು ಕುಟುಂಬದ ಪಾಲಿಗೆ ಸಂಪಾದನೆಯ ಸಾಧನವಾಗಿದೆ. ಕರ್ನಾಟಕದಲ್ಲಿ ಸುಮಾರು ಐದು ಲಕ್ಷ ಮಕ್ಕಳಿಗೆ ಬಾಲ್ಯವೆಂಬುದು ದೂರದ ಕನಸು. ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶ ಮೊದಲ ಸ್ಥಾನಗಳನ್ನು ಪಡೆದುಕೊಂಡರೆ ಕರ್ನಾಟಕ 10ನೇ ಸ್ಥಾನದಲ್ಲಿದೆ.
ಗ್ರಾಮೀಣ ಪ್ರದೇಶದಿಂದ ನಗರಕ್ಕೆ ವಲಸೆ ಬರುತ್ತಿರುವ ಕಾರ್ಮಿಕರ ಮಕ್ಕಳು ದುಡಿಮೆಗೆ ತೊಡಗಿಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದು ತಿಳಿಯಲಾಗಿದೆ. ಅಪಾಯಕಾರಿ ಕೈಗಾರಿಕೆಗಳಲ್ಲಿ, ಮನೆಗಳಲ್ಲಿ ಹಾಗೂ ಕಟ್ಟಡ ನಿರ್ಮಾಣಗಳಲ್ಲಿ ಅತೀ ಹೆಚ್ಚು ಸಂಖ್ಯೆಯ ಮಕ್ಕಳು ದುಡಿಯುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪ್ರಭಾವವನ್ನು ಉಂಟು ಮಾಡುತ್ತಿರುವುದು ಕಳವಳಕಾರಿಯಾಗಿದೆ.
ಸಂಕೀರ್ಣ ಸಮಸ್ಯೆ
ಬಾಲಕಾರ್ಮಿಕತೆ ಎಂಬುದು ಒಂದು ಸಂಕೀರ್ಣವಾದ ಸಮಸ್ಯೆ. ಒಂದು ಸಾಮಾನ್ಯ ಕುಟುಂಬದಿಂದ ಹಿಡಿದು ಅಪಾಯಕಾರಿ ದುಡಿಮೆಗಳಲ್ಲಿ ದುಡಿಯುವ ಮಕ್ಕಳವರೆಗೆ ವಿಸ್ತಾರ ವ್ಯಾಪ್ತಿಯನ್ನು ಪಡೆದುಕೊಂಡಿದೆ.
ಕಡಿಮೆ ವೆಚ್ಚದಲ್ಲಿ ಹೆಚ್ಚು ಕೆಲಸವನ್ನು ಮಾಡಿಸಿಕೊಳ್ಳಬಹುದು ಎಂಬ ದುರುದ್ದೇಶದಿಂದ ಗ್ಯಾರೇಜ್, ಹೋಟೆಲ್, ಕಾರ್ಖಾನೆಗಳು, ಬೇಕರಿಗಳು, ಕಟ್ಟಡ ನಿರ್ಮಾಣದಲ್ಲಿ, ಅಂಗಡಿ ಮಳಿಗೆಗಳಲ್ಲಿ, ಶ್ರೀಮಂತರ ಮನೆಗಳಲ್ಲಿ ಕೆಲಸದಾಳುಗಳಾಗಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ಕಷ್ಟವಾಗುವ ಕೆಲಸಗಳಲ್ಲಿ ತೊಡಗಿರುವ ಬಾಲಕಾರ್ಮಿಕರ ಯಾತನೆ ಅರಣ್ಯರೋದನವಾಗಿದೆ.
ಹೆಚ್ಚಿನ ಪ್ರಮಾಣದ ಬಾಲಕಾರ್ಮಿಕರು ದುರ್ಬಲ ವರ್ಗದ ಕಡುಬಡವರ ಕುಟುಂಬದಿಂದ ಬಂದಿರುವುದು ಸ್ಪಷ್ಟವಾಗುತ್ತದೆ. ಕಿತ್ತು ತಿನ್ನುವ ಬಡತನ, ಅನಕ್ಷರತೆ, ಸಾಮಾಜಿಕ ಭದ್ರತೆಯಿಲ್ಲದಿರುವುದು, ಪೋಷಕರ ನಿರ್ಲಕ್ಷತನ, ಸಾಲದ ವಿಷವರ್ತುಲ, ಲಿಂಗ ತಾರತಮ್ಯ, ಕೌಟುಂಬಿಕ ಕಲಹಗಳು ಹಾಗೂ ಬಲವಂತದ ಕಾರಣದಿಂದಾಗಿ ಜಗತ್ತಿನಾಧ್ಯಂತ ಮಿಲಿಯಗಟ್ಟಲೆ ಮಕ್ಕಳು ಬಾಲ ಕಾರ್ಮಿಕರಾಗಿ ಬದುಕು ನಡೆಸುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ.
ಬಾಲ ಕಾರ್ಮಿಕ ಪದ್ಧತಿಯು ಮಕ್ಕಳನ್ನು ವಿದ್ಯಾಭ್ಯಾಸದ ಅವಕಾಶದಿಂದ ವಂಚಿಸಿ, ಕಷ್ಟಕರವಾದ ಹಾಗೂ ಅನಾರೋಗ್ಯಕರವಾದ ಕೆಲಸಗಳಿಗೆ ತಳ್ಳಿ ಬಡತನದ ವಿಷವರ್ತುಲದ ಕಬಂಧ ಬಾಹುಗಳಲ್ಲಿ ಒದ್ದಾಡುವಂತೆ ಮಾಡುತ್ತದೆ.
ಬಾಲಕಾರ್ಮಿಕ ನಿಷೇಧ ಕಾಯ್ದೆ
ನಿಗದಿತ ವಯಸ್ಸಿಗಿಂತ ಅಂದರೆ 14 ವರ್ಷ ವಯಸ್ಸಿನ ಕೆಳಗಿನ ದುಡಿಯುವ ಮಕ್ಕಳನ್ನು ಬಾಲ ಕಾರ್ಮಿಕರು ಎಂದು ಕರೆಯುತ್ತಾರೆ. ಮಕ್ಕಳನ್ನು ಕಾರ್ಮಿಕರಾಗಿ ಉಪಯೋಗಿಸಿಕೊಳ್ಳುವುದನ್ನು ತಡೆಗಟ್ಟಲು ಮತ್ತು ಅಪಾಯಕಾರಿ ಪರಿಸರದಲ್ಲಿ ದುಡಿಸಿಕೊಳ್ಳುವುದನ್ನು ನಿಲ್ಲಿಸಲು ಬಾಲಕಾರ್ಮಿಕ (ತಡೆ ಮತ್ತು ನಿಯಂತ್ರಣ) ಕಾಯ್ದೆ 1986 ನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯಡಿ 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ ಹಾಗೂ 15 ರಿಂದ 18 ವರ್ಷದ ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸುವುದನ್ನು ನಿಷೇಧಿಸಲಾಗಿದೆ. ಕಾಯ್ದೆ ಉಲ್ಲಂಘಿಸಿ ಬಾಲ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ವ್ಯಕ್ತಿಗಳಿಗೆ 3 ತಿಂಗಳಿನಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
ಮಕ್ಕಳು ಕೆಲಸ ಮಾಡಬಾರದೆ?
ಮಕ್ಕಳು ಕೆಲಸದಲ್ಲಿ ತೊಡಗಬಾರದು ಎಂದು ಈ ಕಾಯ್ದೆಯ ಅರ್ಥವಲ್ಲ. ಒಂದು ಮಗುವು ಕುಟುಂಬದ ಸಹಾಯಕ್ಕಾಗಿ, ಕುಟುಂಬದ ಉದ್ಯಮದಲ್ಲಿ ಶಾಲಾ ಸಮಯದ ನಂತರ ಅಥವಾ ರಜಾ ದಿನಗಳಲ್ಲಿ ಕೆಲಸ ಮಾಡಲು ಮಾತ್ರ ಅವಕಾಶ ಕಲ್ಪಿಸಿದೆ. ಸರಕಾರವು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಲು ಅನುಕೂಲವಾಗುವಂತೆ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ’ಯಡಿಯಲ್ಲಿ ಎಲ್ಲಾ ಮಕ್ಕಳ ಕಲಿಕೆಗೆ ಅವಕಾಶ ಕಲ್ಪಿಸಿದೆ. ಆದರೆ 2011 ರ ಜನಗಣತಿಯ ಪ್ರಕಾರ 42.7 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಬಾಲಕಾರ್ಮಿಕತೆಗೆ ಕಾರಣಗಳೇನು?
ಬಾಲ ಕಾರ್ಮಿಕ ಪದ್ಧತಿ ಹೆಚ್ಚಾಗಲು ಮುಖ್ಯ ಕಾರಣ ಬಡತನ ಮತ್ತು ಶಿಕ್ಷಣದ ಕೊರತೆ. ಹೆಚ್ಚುತ್ತಿರುವ ಜನಸಂಖ್ಯೆಯೂ ಬಾಲಕಾರ್ಮಿಕತೆಗೆ ಪ್ರಮುಖ ಕಾರಣವಾಗಿದ್ದು, ಇದರಿಂದ ಉದ್ಯೋಗದ ಕೊರತೆಯಾಗುತ್ತದೆ. ಆಗ ಅನಿವಾರ್ಯವಾಗಿ ಮಕ್ಕಳು ಸಿಕ್ಕ ಸಿಕ್ಕ ಕೆಲಸವನ್ನು ಮಾಡಲು ಮುಂದಾಗುತ್ತಾರೆ. ದೇಶದಲ್ಲಿನ ಅನಕ್ಷರತೆ ಮತ್ತು ಸೂಕ್ತ ಶಿಕ್ಷಣದ ಕೊರತೆ ಕೂಡ ಬಾಲಕಾರ್ಮಿಕ ಪದ್ಧತಿಗೆ ಕಾರಣ. ಬಹುತೇಕರು ಅನಕ್ಷರಸ್ಥರಾಗಿರುವುದರಿಂದ ಮಾನವ ಹಕ್ಕುಗಳ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಸಾಮಾನ್ಯವಾಗಿ ಇಂಥವರ ಮಕ್ಕಳು ಬಾಲಕಾರ್ಮಿಕರಾಗಿ ಬಿಡುತ್ತಾರೆ ಮತ್ತು ಪೋಷಕರಿಗೆ ಇದು ಅನಿವಾರ್ಯವೂ ಆಗಿರುತ್ತದೆ. ಇದರೊಂದಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸಾಮಾಜಿಕ ಅಭದ್ರತೆ ಸದಾ ಕಾಡುತ್ತಿರುತ್ತದೆ. ಅಂಥವರ ಮಕ್ಕಳು ಸಹಜವಾಗಿಯೇ ದುಡಿಮೆಗೆ ಮುಂದಾಗುತ್ತಾರೆ.
ಪರಿಹಾರ ಹೇಗೆ?
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರಬಲ ಇಚ್ಚಾಶಕ್ತಿ ಹಾಗೂ ಬದ್ಧತೆ ಅಗತ್ಯ. ಹಲವು ನೆಲೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವುದಲ್ಲದೆ ಸಾಮಾಜಿಕ ನೆಲೆಯಲ್ಲಿ ಜಾಗೃತಿ ಮೂಡಿಸುವುದೂ ಅಗತ್ಯ. 2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಾವು ತಲುಪಬೇಕಿದೆ. ಇದಕ್ಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯೂ ಮುಖ್ಯವಾದುದು. ಬಡತನ ನಿರ್ಮೂಲನೆ, ಕೌಶಲ್ಯಾಧಾರಿತ ಉದ್ಯೋಗ, ಸಾರ್ವತ್ರಿಕ ಶಿಕ್ಷಣ, ಸಾರ್ವಜನಿಕರಲ್ಲಿ ಅರಿವು, ಪೋಷಕರ ಮನಪರಿವರ್ತನೆ, ಮಕ್ಕಳ ಅಗತ್ಯತೆಗಳನ್ನು ಗುರುತಿಸಿ ಮಕ್ಕಳ ಬಾಲ್ಯ ಸ್ವಚ್ಚಂದವಾಗಿ ಅರಳಿಕೊಳ್ಳಲು ಸೂಕ್ತವಾದ ವಾತಾವರಣವನ್ನು ಒದಗಿಸುವಲ್ಲಿ ಹೆಜ್ಜೆ ಇಡಬೇಕಾಗಿದೆ.
ಅರಳುವ ಬಾಲ್ಯ ಕಮರದಿರಲಿ
ವಿದ್ಯಾವಂತರಾಗಿ ದೇಶದ ಭವಿಷ್ಯ ನಿರ್ಮಾಣ ಮಾಡಬೇಕಾಗಿರುವ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಾದ ಜವಾಬ್ದಾರಿ ನಮ್ಮದು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಾಣ ಮಾಡಬೇಕು.
ನೋಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ಪ್ರಕಾರ ಸಂಘಟಿತ ಪ್ರಯತ್ನ, ರಾಜಕೀಯ ಇಚ್ಚಾಶಕ್ತಿ, ಅಗತ್ಯ ಸಂಪನ್ಮೂಲಗಳು ಹಾಗೂ ಅವಕಾಶವಂಚಿತ ಮಕ್ಕಳ ಬಗ್ಗೆ ಸಹಾನುಭೂತಿಯಿಂದ ಬಾಲ ಕಾರ್ಮಿಕ ಪದ್ಧತಿಯನ್ನು ಮೂಲೋಚ್ಚಾಟನೆ ಮಾಡಬಹುದು. ಅಕ್ಷರ ಜ್ಞಾನ ಸಂಪಾದನೆ ಇಲ್ಲದೆ ಕಮರಿ ಹೋಗುತ್ತಿರುವ ಈ ಮಕ್ಕಳ ಜೀವನವನ್ನು ಸರಿದಾರಿಗೆ ತಂದು ಉತ್ತಮ ಭವಿಷ್ಯ ಕಲ್ಪಿಸುವ ಹೊಣೆ ನಾಗರಿಕ ಸಮಾಜದ ಕರ್ತವ್ಯವೂ ಹೌದು. ಅರಳಬೇಕಾದ ಈ ಮಕ್ಕಳ ಬಾಲ್ಯ ಬಾಡದಂತೆ ಹೊಣೆಯರಿತ ನಡವಳಿಕೆ ಎಲ್ಲರದ್ದಾಗಬೇಕಿದೆ.
-ಡಾ.ಎ.ಜಯಕುಮಾರ ಶೆಟ್ಟಿ
ನಿವೃತ್ತ ಪ್ರಾಚಾರ್ಯರು
ಶ್ರೀ.ಧ.ಮಂ. ಕಾಲೇಜು, ಉಜಿರೆ-574240
ದೂ: 9448154001
ajkshetty@gmail.com
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ