ಕ್ಯಾಂಪಸ್: ಅಂಕವೆಂಬ ಸೋಂಕು

Upayuktha
0



ಶೈಕ್ಷಣಿಕ ವಿಭಾಗಗಳ ಫಲಿತಾಂಶ ಬಂದಾಗ ಪ್ರತಿ ಬಾರಿಯೂ 'ಅಯ್ಯೋ ನನ್ನ ಎರಡು ಮಾರ್ಕ್ ಹೋಯ್ತು, ಇನ್ನೂ ಐದು ಅಂಕ‌ ಹೆಚ್ಚು ಕೊಟ್ಟಿದ್ದರೆ ಡಿಸ್ಟಿಕ್ಷಂನ್ ಸಿಗ್ತಿತ್ತು' ಎಂದು ಹೇಳುವುದನ್ನು ಆಲಿಸುತ್ತೇವೆಯೇ ವಿನಃ ನಂಗಿಷ್ಟು ಅಂಕ ದೊರಕಿದೆಯಲ್ಲ! ಎಂದು ಸಮಾಧಾನದಿಂದ ನಿಟ್ಟುಸಿರು ಬಿಡುವುದನ್ನು ಕೇಳುವುದೇ ಅಪರೂಪ. ಜೀವನ ಅಂಕದ ಮೇಲೆ‌ಯೇ ಸಾಗುತ್ತಿದೆ ಎಂಬ ಭ್ರಮೆಯಲ್ಲಿ ನಾವು ಬದುಕುತ್ತಿದ್ದೇವೆಯೋ ಎಂಬ ಪ್ರಶ್ನೆ ಮೂಡುತ್ತದೆ.


ವಿದ್ಯಾರ್ಥಿ ಜೀವನವಿರುವುದೇ ಕಲಿಯುದಕ್ಕೆ, ಮಕ್ಕಳು ಕಲಿಯುವ ಪ್ರಾಯದಲ್ಲಿ ಕಲಿಯಬೇಕು. ಅದೆಲ್ಲ ನೂರಕ್ಕೆ ನೂರು ಸರಿಯಾದ ಮಾತು. ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ಪಾಲಿಸುವುದು ಅವರ ಜವಾಬ್ದಾರಿ. ಆದರೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಪುಸ್ತಕದಲ್ಲಿರುವುದನ್ನು ಉರು ಹೊಡೆದುಕೊಂಡು ಇದ್ದರೆ ಜೀವನ ಮೌಲ್ಯಗಳು ಅರ್ಥವಾಗಲು ಸಾಧ್ಯವೇ!? ಬದುಕು ಒಡ್ಡುವ ಸವಾಲುಗಳಿಗೆ ಪಠ್ಯ ಪುಸ್ತಕ ಉತ್ತರವನ್ನು ನೀಡಲಾರದೆಂಬ‌ ಕಹಿಸತ್ಯ ಓದುತ್ತಿರುವಾಗಲೇ ಮನವರಿಕೆಯಾಗಬೇಕಲ್ಲವೇ? 

ಹೆತ್ತವರು ತಮ್ಮ ಮಕ್ಕಳ ಪ್ರಗತಿಯನ್ನು ಅವರ ಸಹಪಾಠಿಗಳಿಗೆ, ನೆಂಟರಿಷ್ಟರ ಮಕ್ಕಳಿಗೆ ಹೋಲಿಕೆ‌ ಮಾಡಿ, ಮಕ್ಕಳ ಮೇಲೆ ರೇಗಾಡುತ್ತಾರೆ. ಇದರ ಪರಿಣಾಮವಾಗಿ ಎಳೆಯ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ಹಾಗಾಗಿ ಕಡಿಮೆ ಅಂಕ ಬಂದರೆ ನಾನು ಪ್ರಯೋಜನಕ್ಕಿಲ್ಲದವನು ಎಂಬ ನಿರಾಶಾ ಭಾವ, ಹೆಚ್ಚು ಅಂಕ ಬಂದರೆ ನನಗೆ ಎಲ್ಲಾ ತಿಳಿದಿದೆ ಎಂಬ ಅಹಂ ಭಾವ ಒಡಮೂಡುವುದು ಸಾಮಾನ್ಯ.‌ ಅರಳಬೇಕಾದ ವ್ಯಕ್ತಿತ್ವ ಅಲ್ಲಿಯೇ ಕಮರಿಬಿಡುತ್ತದೆ. 


ಮಕ್ಕಳ ಮೃದುಲತೆಯನ್ನು ಅರ್ಥೈಸಿಕೊಂಡು, ಅವರ ಸಾಮರ್ಥ್ಯವನ್ನು ಅರಿಯಬೇಕಾದುದು ಹೆತ್ತವರ ಕರ್ತವ್ಯ. ‌ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ವಿಶೇಷವಾದ ಗುಣವಿದ್ದೇ ಇರುತ್ತದೆ. ಅದನ್ನು ಗುರುತಿಸಿ ಪೋಷಿಸಬೇಕು. ವಾಸ್ತವವಾದ ವಿಚಾರವೇನೆಂದರೆ, ಅಂಕಗಳಿಂದಲೇ ಜೀವನ ನಡೆಯುವುದಲ್ಲ. ಕ್ರಿಯಾತ್ಮಕ ಚಟುವಟಿಗಳಿಂದ, ರಚನಾತ್ಮಕ ಕೌಶಲ್ಯಗಳಿಂದಲೂ ಬದುಕನ್ನು ಕಟ್ಟಿಕೊಳ್ಳಬಹುದು; ಧರ್ಮದ ಹಾದಿಯಲ್ಲಿ ನೆಮ್ಮದಿಯಾಗಿ ಬದುಕನ್ನು ಸಾಗಿಸಬಹುದು. ಮಾತ್ರವಲ್ಲದೆ, ಸಮಾಜವು ಸಮತೋಲನದಲ್ಲಿ ಮುಂದುವರಿಯಬೇಕಾದರೆ ಕೂಲಿ ಕಾರ್ಮಿಕನಿಂದ ಹಿಡಿದು ವಿಜ್ಞಾನಿಯವರೆಗೆ ಎಲ್ಲರೂ ಅಗತ್ಯ. ಹಾಗಾಗಿ ಯಾವ ಕೆಲಸ ಉತ್ಕೃಷ್ಟವೂ ಅಲ್ಲ ಯಾವುದೂ ನಿಕೃಷ್ಟವೂ ಅಲ್ಲ. ಎಲ್ಲವೂ ನಾವು ನೋಡುವ ದೃಷ್ಟಿಕೋನದಲ್ಲಿದೆ ಅಷ್ಟೇ! 


ಹೆಚ್ಚು ಅಂಕ ಬಂದರೆ ಕೈ ತುಂಬಾ ಸಂಬಳ‌ ಪಡೆಯಬಹುದು, ನಾಲ್ಕು ಜನರಿಗೆ ಬಾಸ್ ಆಗಬಹುದು ಎಂಬೆಲ್ಲ ಕನಸುಗಳನ್ನು ಮಕ್ಕಳ ಮೇಲೆ‌ ಹೇರಿಬಿಡಲಾಗುತ್ತದೆ. ಹಣ ಸಂಪಾದನೆಯೇ ಮುಖ್ಯ; ಬೇರೆಯೆಲ್ಲ ಶೂನ್ಯ ಎಂದೇ ಮಕ್ಕಳ ಮನಸ್ಸಲ್ಲಿ ಅಚ್ಚೊತ್ತುತ್ತದೆ.‌ ಆದರೆ ಒಂದಂತೂ ನಿಜ. ಹಣವೆಷ್ಟೇ ಇರಲಿ, ಉತ್ತಮ ಗುಣಗಳನ್ನು ಹೊಂದಿರುವ ವ್ಯಕ್ತಿತ್ವ ಇದ್ದರೆ ಮಾತ್ರ ಜೀವನ ಬೆಳಕಾಗಿ ಬೆಳಗಲು ಸಾಧ್ಯ! ಹಿರಿಯರನ್ನು ಗೌರವಿಸುವ, ಕಿರಿಯರನ್ನು ಆದರಿಸುವ ರೀತಿಯನ್ನು, ಮಾನವೀಯತೆಯ ಸೆಲೆಯನ್ನು ಅರಿಯದಿದ್ದರೆ ಎಷ್ಟು ಅಂಕ ಪಡೆದರೂ ವ್ಯರ್ಥ.‌ 


ಉತ್ತಮ ಅಂಕ ಗಳಿಸಿದವರು ಉನ್ನತ ವಿದ್ಯಾಭ್ಯಾಸಕ್ಕೆಂದು ವಿದೇಶಗಳಿಗೆ ತೆರಳಿ, ಅಲ್ಲೇ ನೆಲೆಸುತ್ತಾರೆ. ಕಷ್ಟಪಟ್ಟು ಕಲಿಸಿದ ತಂದೆ- ತಾಯಿಯ  ಋಣವನ್ನು ಹಣದಲ್ಲೇ ತೀರಿಸಲು ಪ್ರಯತ್ನಿಸುವ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಲೇ ಇವೆ. ಆದರೆ, ನಮ್ಮ‌ ಮಗ ಅಥವಾ ಮಗಳು ಬೇರೆ ದೇಶದಲ್ಲಿ ಕೆಲಸದಲ್ಲಿದ್ದಾರೆ ಎಂಬ ಮಾತೇ ಹೆಮ್ಮೆಯಾಗಿ ಬಿಟ್ಟಿರುವಾಗ ಮುಂದಿನ ಜೀವನದ ಬಗೆಗೆ ಆಲೋಚಿಸುವ ವಿವೇಚನೆ ಎಲ್ಲಿಂದ ಬಂದೀತು? ಸಂಬಂಧಗಳ ಬಂಧ ಕಳಚಿಬಿಡುತ್ತದೆ, ಮಕ್ಕಳ ಪ್ರೀತಿ ವೃದ್ಧಾಪ್ಯದಲ್ಲಿ ದೂರವಾಗುತ್ತದೆ ಎಂಬ ಕಹಿ ಸತ್ಯ ಹೆತ್ತವರಿಗೆ ತಿಳಿಯುವುದೇ ಇಲ್ಲ; ತಂದೆ ತಾಯಿಯನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿಯೆಂಬುದು ಮಕ್ಕಳಿಗೆ ಅರ್ಥವಾಗುವುದೂ ಇಲ್ಲ. 


ಅಂಕ‌ ಎಷ್ಟೇ ದೊರೆತರೂ ಪಡೆದುದ್ದಕ್ಕೆ ತೃಪ್ತಿಯಿರಲಿ. ಮನಸ್ಸು ವಿಪರೀತ ಒತ್ತಡಕ್ಕೆ ಸಿಲುಕಿ ಖಿನ್ನತೆಗೆ ಜಾರಲು ಅಂಕಗಳು ಕಾರಣವಾಗದಿರಲಿ‌. ಸಾಧನೆಗೆ ಹಲವಾರು ಮಾರ್ಗಗಳಿವೆ. ಹೊಸದಾದ ಹಾದಿಯನ್ನು ಹುಡುಕಿ ಗುರುತರವಾದ ಯಶಸ್ಸನ್ನು ಪಡೆಯಬಹುದು. ಅತಿಯಾದ ಆಸೆಗಳ ಸುಳಿಯೊಳಗೆ ಬಿದ್ದು ಜವಾಬ್ದಾರಿಯನ್ನು ಮರೆಯದಿರಿ ಅಷ್ಟೇ!



-ಪಂಚಮಿ ಬಾಕಿಲಪದವು

ದ್ವಿತೀಯ ಬಿ.ಎ, ಪತ್ರಿಕೋದ್ಯಮ ವಿಭಾಗ

ಅಂಬಿಕಾ ಮಹಾವಿದ್ಯಾಲಯ, ಬಪ್ಪಳಿಗೆ, ಪುತ್ತೂರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top