ಜಗತ್ತಿನ ಪ್ರತಿ ಜೀವಿಗೂ ತೀರಿಸಲಾಗದ ಋಣವೆಂದರೆ ಅದು ತಾಯಿಯ ಪ್ರೀತಿ, ಅದನ್ನು ಹೊರತು ಇನ್ಯಾವುದೂ ಇರಲು ಸಾಧ್ಯವಿಲ್ಲ. ತಾಯಿ ಕೇವಲ ಎರಡಕ್ಷರದ ಪದವಾಗಿರಬಹುದು. ಆದರೆ ಅವಳ ಆರೈಕೆ, ಮಾತು-ಕಾಳಜಿ ಎಲ್ಲವೂ ನಮಗೆ ಇನ್ನೊಬ್ಬರಿಂದ ಸಿಗುವುದು ಅಸಾಧ್ಯ.
ಹುಟ್ಟಿದ ಮನೆಯನ್ನು ಬಿಟ್ಟು ಗಂಡನ ಮನೆಗೆ ಕಾಲಿಡುವಾಗ ಹೆಣ್ಣಿಗೆ ಎಲ್ಲವೂ ಹೊಸದಾಗಿರುತ್ತದೆ. ತಂದೆ ತಾಯಿಯೊಂದಿಗೆ ಬೆಳೆದ ಅವಳು ಗಂಡ, ಅತ್ತೆ, ಮಾವರೊಂದಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾಳೆ. ಅದರೊಂದಿಗೆ ಸಂಬಂಧಿಕರು ಆಗಿರಬಹುದು ನೆರೆಕೆರೆಯವರು ಆಗಿರಬಹುದು ಮೂರು-ನಾಲ್ಕು ತಿಂಗಳು ಕಳೆಯುತ್ತಿದ್ದಂತೆ ವಿಶೇಷವೇನು ಇಲ್ಲವೇ? ಎಂದು ಕೇಳುತ್ತಾ ಹರಟೆ ಹೊಡೆಯಲು ಪ್ರಾರಂಭಿಸುತ್ತಾರೆ. ಹೆಣ್ಣಿಗೆ ಇವೆಲ್ಲ ಮಾತುಗಳು ಸಂಕಟವಾಗುತ್ತಿರುತ್ತದೆ. ಆದರೂ, ತಾಯಿತನ ಎನ್ನುವುದು ಹೆಣ್ಣಿನ ನಂಟು.
ನೋವು ನಲಿವುಗಳ ಮಧ್ಯೆ, ಇಷ್ಟ-ಕಷ್ಟಗಳ ಮಧ್ಯೆಯು ಹೆಣ್ಣು ಗಂಡಿನ ಸಂಪರ್ಕದೊಂದಿಗೆ ಗರ್ಭವತಿಯಾಗುತ್ತಾಳೆ. ಗರ್ಭವತಿಯಾದ ವೇಳೆ ಅದೆಷ್ಟೇ ನೋವು, ಸಂಕಟಗಳೆಲ್ಲವನ್ನೂ ಮನಸ್ಸಿನಲ್ಲೇ ನುಂಗಿಕೊಂಡು ಒಂಬತ್ತು ತಿಂಗಳು ತನ್ನ ಕೂಸನ್ನು ಹೊಟ್ಟೆಯಲ್ಲಿ ಜೋಪಾನ ಮಾಡುತ್ತಾಳೆ.
ಮಗು ಪ್ರಪಂಚ ನೋಡುವ ಹೊತ್ತಿನಲ್ಲಿ ಮಗುವಿನ ಜೀವಕ್ಕಾಗಿ ತನ್ನ ಪ್ರಾಣ ಮುಡಿಪಾಗಿಟ್ಟುಕೊಂಡು ಸಾವಿನ ಬಾಗಿಲನ್ನು ಮುಟ್ಟಿ ಹೋರಾಟ ಮಾಡುವ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ. ಹುಟ್ಟಿದಂದಿನಿಂದ ಹಾಲುಣಿಸಿ ಪೋಷಿಸಲು ಪ್ರಾರಂಭಿಸಿದ ತಾಯಿ ಮಗುವಿಗಾಗಿ ಹೆಜ್ಜೆ ಹೆಜ್ಜೆಗೂ ಪಣತೊಡುತ್ತಾಳೆ.
ಉಣಿಸಿ, ತಿನಿಸಿ ಜೋಪಾನಗೈವ ಜೀವವೆಂದರೆ ಅದು ತಾಯಿ ಮಾತ್ರ. ತಾಯಿಗೆ ಮುಪ್ಪು ಬಂದರೂ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುವಳು. ದೊಡ್ಡವರಾಗಿದ್ದಾರೆ ಎಂದು ಕೈ ಬಿಡುವವಳಲ್ಲ.
-ಅನನ್ಯ ಎಚ್ ಸುಬ್ರಹ್ಮಣ್ಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ