.... ಹೀಗೊಂದು ಪತ್ರ
ಎಲ್ಲರಿಗೂ ನಮಸ್ಕಾರ,
ನನ್ನನ್ನು ಹುಟ್ಟಿಸಿದ ಆ ಬ್ರಹ್ಮನಿಗೆ ಗೊತ್ತಿಲ್ಲ ಯಾಕೆ ನನ್ನನ್ನು ಹುಟ್ಟಿಸಿದನೆಂದು. ಬಹುಶಃ ನಾನು ಆತನ ಸೃಷ್ಟಿಕ್ರಿಯೆಯ ಅತ್ಯಂತ ವಿಕೃತ ಜೀವಿ. ಭಾವನೆಗಳನ್ನು ಬಂಡೆಗಲ್ಲು ಮಾಡಿಕೊಂಡು ಬದುಕುವ ಜೀವಿ ನಾನು.ನೋವನ್ನು ಮನದ ಚಿಪ್ಪಿನೊಳಗೆ ಬಚ್ಚಿಟ್ಟು ಬದುಕುವ ವ್ಯಕ್ತಿ ನಾನು.
ನಾ ಹುಟ್ಟಿದಾಗ ಜಗದ ಜನರು ನನ್ನ ದೈಹಿಕ ಅಂಗದಿಂದ ನನ್ನನ್ನು ಗಂಡು ಎಂದು ಗುರುತಿಸಿದರು. ಹಲವಾರು ವರ್ಷಗಳವರೆಗೆ ನಾನು ಕೂಡ ಹಾಗೆಯೇ ಇದ್ದೆ. ಆದರೆ ಕೆಲ ವರ್ಷಗಳ ನಂತರ ನನ್ನ ದೇಹದಲಾಗುತ್ತಿರುವ ಬದಲಾವಣೆಗಳು ನನ್ನಲ್ಲಿ ತಳಮಳವನ್ನುಂಟು ಮಾಡತೊಡಗಿದವು. ಚಿರತೆಯ ಚರ್ಮವನ್ನು ಹೊದ್ದ ಕುರಿಮರಿ ತನ್ನದಲ್ಲದ ವ್ಯಕ್ತಿತ್ವವನ್ನು ಪ್ರದರ್ಶಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಾನಲ್ಲದ ನನ್ನನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗದೆ ಹೋಯಿತು.
ಹೊರ ಜಗತ್ತಿನ ಕಣ್ಣಿಗೆ ಗಂಡಾಗಿದ್ದ ನಾನು ಮಾನಸಿಕವಾಗಿ ಹೆಣ್ಣಾಗಿದ್ದೆ. ಹೆಣ್ಣಿನಂತೆ ಅಲಂಕರಿಸಿಕೊಳ್ಳಲು, ಬಟ್ಟೆ ಧರಿಸಲು, ಒನಪು ಮತ್ತು ವಯ್ಯಾರವಾಗಿ ನಡೆಯಲು ಮನ ಹಾತೊರೆಯುತ್ತಿತ್ತು. ಅಂತೆಯೇ ನಾ ನಡೆಯಲಾರಂಭಿಸಿದೆ. ಮೊದಮೊದಲು ಹೆಣ್ಣಿನ ವೇಷ ಧರಿಸಿದ ನನ್ನನ್ನು ಕಂಡು ತಮಾಷೆ ಮಾಡಿ ನಕ್ಕ ನನ್ನ ಅಪ್ಪ ಅಮ್ಮ ಒಡಹುಟ್ಟಿದವರು ನಂತರ ಭಯಪಡಲಾರಂಭಿಸಿದರು.ನನ್ನ ತಂದೆ ತಾಯಿಗಳಿಗೆ ನನ್ನನ್ನು ನಾನಿರುವಂತೆಯೇ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ನನ್ನ ಮಾನಸಿಕ ಭಾವನೆಗಳು, ತುಮುಲಗಳಿಗಿಂತ ಸಮಾಜದ ಭಯ ಅವರಿಗಿತ್ತು. ಪರಿಣಾಮ ಬೈಗುಳ, ಹೊಡೆತ, ಬಡಿತ ಎಲ್ಲವೂ ಮುಗಿದು ಮನೆಯಿಂದ ನನ್ನನ್ನು ಹೊರ ಹಾಕಿದರು. ನಾನವರ ಪಾಲಿಗೆ ಮುಗಿದು ಹೋದ ಕಥೆಯಾಗಿದ್ದೆ.ಸತ್ತು ಹೋಗಿದ್ದೆ.
ಹಾಗೆ ಹೊರ ಬಿದ್ದ ನನಗೆ, ಬಸ್ ಸ್ಟ್ಯಾಂಡ್ ರೈಲ್ವೆ ಸ್ಟೇಷನ್ ಮತ್ತು ಫುಟ್ ಪಾತಗಳೇ ಗತಿಯಾಗಿದ್ದವು.. ಅಲ್ಲಿಯೂ ಕೂಡ ನನ್ನನ್ನು ಕ್ಷುದ್ರ ಜೀವಿಯಂತೆ ನಿಕೃಷ್ಟವಾಗಿ ಕಾಣುತ್ತಿದ್ದರು. ಚಪ್ಪಾಳೆ ತಟ್ಟಿ ಗೇಲಿ ಮಾಡಿ ನಗುತ್ತಿದ್ದರು. ಅಸಹ್ಯಕರವಾಗಿ ವರ್ತಿಸುತ್ತಿದ್ದರು. ಇದು ಕೇವಲ ನನ್ನೊಬ್ಬನ/ಳ ಕಥೆಯಲ್ಲ. ನನ್ನಂತಹ ಸಹಸ್ರಾರು ಜನರ ವ್ಯಥೆ. ಸಂಜೆ ಸರಿಯುತ್ತಿದ್ದಂತೆ ನನ್ನನ್ನು ಕೆಟ್ಟ ಕಣ್ಣಿಂದ ನೋಡುತ್ತಿದ್ದವರ ಲಾಲಸೆಗೆ ಭಯ ಪಡುವಂತಾಗುತ್ತಿತ್ತು. ಹೊಟ್ಟೆಯ ಹಸಿವಿಗೆ, ಕೊಡುವ ಪುಡಿಗಾಸಿಗೆ ಕೈ ಚಾಚ ಬೇಕಾಗುತ್ತಿತ್ತು.
ನನ್ನ ಅದೃಷ್ಟವೇ ಸರಿ... ಕೆಲವೇ ದಿನಗಳಲ್ಲಿ ನನ್ನಂತೆ ಇರುವ ಜನರ ಗುಂಪಿನಲ್ಲಿ ಬದುಕಲು ನನಗೆ ಸೂರು ದೊರೆಯಿತು. ಓದಿನಲ್ಲಿ ಆಸಕ್ತಿ ಇದ್ದ ನಾನು ಮನೆಯಿಂದ ಹೊರ ಬೀಳುವಾಗ ತಂದ ಮಾರ್ಕ್ಸ್ ಕಾರ್ಡ್ಗಳನ್ನು ಪರಿಶೀಲಿಸಿದ ನಮ್ಮ ತಂಡದ ಹಿರಿಯ ಸದಸ್ಯರು ನನ್ನನ್ನು ಕರೆದೊಯ್ದು ಕಾಲೇಜೊಂದರಲ್ಲಿ ಪ್ರವೇಶ ದೊರಕಿಸಿ ಕೊಟ್ಟರು. ಅಲ್ಲಿಯೂ ಕೂಡ ನನ್ನನ್ನು ಹಿಂದಿನಿಂದ ಕೆಟ್ಟ ಕೆಟ್ಟ ಮಾತುಗಳಿಂದ, ಅವಾಚ್ಯ ಪದಗಳಿಂದ ಕರೆಯುತ್ತಿದ್ದರು. ಆದರೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದಂತೆ ನನಗೆ ನಾನಿದ್ದ ಮನೆಯಲ್ಲಿ ತರಬೇತಿ ಕೂಡ ದೊರೆಯುತ್ತಿತ್ತು. ಪದವಿ ಮುಗಿಸಿದ ನಾನು ಉದ್ಯೋಗಕ್ಕಾಗಿ ಹಲವಾರು ಆಫೀಸುಗಳ ಮೆಟ್ಟಿಲು ಹತ್ತಿದೆ. ಆದರೆ ಎಲ್ಲೂ ನನಗೆ ನೌಕರಿ ದೊರೆಯಲಿಲ್ಲ. ಕೊನೆಗೆ ನನ್ನದೇ ಜನರ ಜೊತೆ ಸೇರಿ ಒಂದು ಪುಟ್ಟ ಚಹಾದ ಅಂಗಡಿ ಇಟ್ಟೆವು. ಮೊದಮೊದಲು ಅಲ್ಲಿಗೆ ಬರಲು ಹಿಂಜರಿಯುತ್ತಿದ್ದ ಜನರು ನಮ್ಮ ಸದ್ವರ್ತನೆ ಮತ್ತು ಕಾರ್ಯವೈಖರಿಯನ್ನು ನೋಡಿ ಇಲ್ಲಿಗೆ ಬರಲಾರಂಬಿಸಿದರು. ನಮ್ಮ ಪುಟ್ಟ ಚಹದ ಅಂಗಡಿ ಇಂದು ದೊಡ್ಡ ರೆಸ್ಟೋರೆಂಟ್ ಆಗಿ ಬದಲಾಗಿದೆ. ನನ್ನಂತಹ ಹಲವಾರು ಜನರು ನನ್ನೊಂದಿಗೆ ನನ್ನ ಕೆಲಸದಲ್ಲಿ ಕೈಗೂಡಿದ್ದಾರೆ.
ನನ್ನ ಜೀವನ ಸುಖವಾಗಿ ಕಳೆಯುತ್ತಿದೆ ನಿಜ.... ಆದರೆ ನನ್ನಂತಹ ಸಾವಿರಾರು ಜನರು ಈ ಸಮಾಜದ ಕುಹಕ ಅವಮಾನ ಭರ್ತ್ಸನೆಗಳನ್ನು ಸಹಿಸಿ ಬದುಕುತ್ತಿದ್ದಾರೆ. ಅವರನ್ನು ಒಗ್ಗೂಡಿಸಿ ಬದುಕುವ ಕಲೆಯನ್ನು ಕಲಿಸಬೇಕಾಗಿದೆ.
ಇದೆಲ್ಲವನ್ನು ಹೇಳಲು ಕಾರಣವಿಷ್ಟೇ, ಉತ್ತರ ಭಾರತದ ರಾಜ್ಯವೊಂದರ ಮುಖ್ಯಮಂತ್ರಿ ಬುದ್ಧ ದೇವ ಭಟ್ಟಾಚಾರ್ಯ ಅವರ ಮಗಳು ಸುಚೇತನದೇವಿ ಲಿಂಗ ಪರಿವರ್ತನೆಗೊಳಗಾಗುವ ತನ್ನ ನಿರ್ಧಾರವನ್ನು ಪ್ರಕಟಿಸಿದ ವಾರ್ತೆ ಇಂದಿನ ಸಮಾಚಾರ ಪತ್ರಿಕೆಯಲ್ಲಿ ಓದಿದೆ. ಇದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಈ ರೀತಿ ತಮ್ಮದಲ್ಲದ ವ್ಯಕ್ತಿತ್ವದ ಹೊರೆಯನ್ನು ತಲೆಯ ಮೇಲೆ ಹೊತ್ತಿರುವ, ಸಾಮಾಜಿಕ ಬಹಿಷ್ಕಾರದ ಕಾರಣಕ್ಕಾಗಿ ಅದನ್ನು ಮುಚ್ಚಿಟ್ಟುಕೊಳ್ಳುತ್ತಿರುವ ಹಲವಾರು ಜನರಿಗೆ ಇದೊಂದು ಬೆಳವಣಿಗೆ ಧೈರ್ಯವನ್ನು ನೀಡಬಹುದು.
ಆದರೂ ಸಜ್ಜನ ಸಮಾಜದ ಬಂಧುಗಳಲ್ಲಿ ನಮ್ಮಂತಹ ಸಹಸ್ರಾರು ಜನರ ಪ್ರತಿನಿಧಿಯಾಗಿ ನಾನು ನಿಮ್ಮಲ್ಲಿ ಕೇಳುವ ಕೆಲ ಪ್ರಶ್ನೆಗಳು
*ಪ್ರಕೃತಿಯು ನಮಗೆ ಕರುಣಿಸಿರುವ ಅನಿವಾರ್ಯದ ಈ ವಿಕೃತಿಯನ್ನು ಸ್ವೀಕರಿಸಿರುವ, ನಮ್ಮದಲ್ಲದ ತಪ್ಪಿಗೆ ಗಂಡು ಅಲ್ಲದ ಹೆಣ್ಣು ಅಲ್ಲದ ತ್ರಿಶಂಕು ಸ್ಥಿತಿಯನ್ನು ಹೊಂದಿರುವ ನಮ್ಮನ್ನು ತಮಾಷೆ ಮಾಡಿ ಅಣಕಿಸುವುದು ನಿಮಗೆ ಸರಿಯೆನಿಸುವುದೇ??
*ತನ್ನ ದೇಹದ ಅರ್ಧ ಭಾಗವನ್ನು ತನ್ನ ಪತ್ನಿಗೆ ಬಿಟ್ಟುಕೊಟ್ಟು ಅರ್ಧನಾರೀಶ್ವರನಾದ ಉಮಾಪತಿಯನ್ನು, ಗೌರಿ ಶಂಕರನನ್ನು ಪೂಜಿಸುವ ನೀವು ನಮ್ಮನ್ನೇಕೆ ತಿರಸ್ಕರಿಸುವಿರಿ?? ಬೃಹನ್ನಳೆ ಮತ್ತು ಶಿಖಂಡಿಯರನ್ನು ಒಪ್ಪಿಕೊಂಡಿರುವವರು ನೀವೇ ಅಲ್ಲವೇ??
* ಕೈಯನ್ನು ತಟ್ಟಿ, ಅಸಹ್ಯಕರ ಸನ್ನೆಗಳನ್ನು ಮಾಡಿ ನಮ್ಮನ್ನು ಚಕ್ಕ ಎಂದು ಕರೆಯುವ, ಅವಹೇಳನ ಮಾಡುವ ನೀವು ಸುಸಂಸ್ಕೃತರು ಹೇಗೆ?? ಕೈತಟ್ಟದೆ ಕರೆದರೆ ನೀವು ನಮ್ಮನ್ನು ಗಮನಿಸುವಿರೇ??
*ಪ್ರಾಣಿ ಪಕ್ಷಿಗಳನ್ನು ಎತ್ತಿ ಮುದ್ದಾಡುವ ನೀವು ನಮ್ಮ ಮುಖ ಕಂಡರೆ ಸಿಂಡರಿಸುವಿರಿ ನಿಮ್ಮ ಮುಖವನ್ನು, ಹೇಸಿಗೆಯಂತೆ ಕಾಣುವಿರಿ ನಮ್ಮನ್ನು.... ಪ್ರಾಣಿಗಿಂತ ಕೀಳೇ ನಾವು.?? ನೀವು ನಮಗೆ ಪ್ರೀತಿ, ಆದರ ನೀಡದಿದ್ದರೂ ಬೇಡ ಆದರೆ ನೀವು ತೋರುವ ಅನಾದರದಿಂದ ನಮಗಾಗುವ ನೋವಿನ ಅರಿವು ನಿಮಗಿದೆಯೇ??
*ನಮ್ಮ ದೇಹದಲ್ಲಿ ಊನವಿದ್ದರೂ ನಮಗೂ ಹೂವಿನಂತ ಮನವಿದೆ.... ಅದಕ್ಕೆ ನೀರೆರೆಯದಿದ್ದರೂ ಪರವಾಗಿಲ್ಲ, ಕೊಡಲಿ ಹಾಕಬೇಡಿ??
ನನ್ನಂತಹ ಹಲವಾರು ಜನರಿಗೆ ಸಿಗ್ನಲ್ಗಳಲ್ಲಿ ನಿಲ್ಲುವ ಪೀಡಿಸುವ, ಭಿಕ್ಷೆ ಬೇಡುವ ಮುಜುರೆ ಮಾಡುವ ಹೊಲಸ ಜೀವನ ಬೇಕಾಗಿಲ್ಲ. ಆದರೆ ಹೆತ್ತವರಿಗೆ ಬೇಡವಾದ ನಮ್ಮಂತವರನ್ನು ಪಾಲಿಸುವವರು ಇರುವುದಿಲ್ಲ. ನಮ್ಮಂತವರೇ ನಮ್ಮ ಸಂಸಾರ... ಉಳಿದವರಿಗೆಲ್ಲ ನಾವು ಸಸಾರ. ಇದರ ಅರಿವಿದೆಯೇ ನಿಮಗೆ
ನಮ್ಮಂತವರಿಗೆ ಬಾಡಿಗೆಗೆ ಮನೆ ಸಿಗುವುದಿಲ್ಲ. ಹೊಟ್ಟೆಗೆ ಅನ್ನ ಸಿಗುವುದಿಲ್ಲ. ಮಾಡುತ್ತೇವೆ0ದರು ಕೆಲಸ ಸಿಗುವುದಿಲ್ಲ ....ಆದರೂ ಭಂಡ ಜನ್ಮ ನಮ್ಮದು, ಬದುಕಬೇಕೆನ್ನುವ ಒಂದೇ ಒಂದು ಕಿಚ್ಚಿಗೆ ಎಲ್ಲರ ತಿರಸ್ಕಾರಕೂ ಸೆಡ್ಡು ಹೊಡಿತೀವಿ. ಬದುಕಲು ಹಲವು ದಾರಿಗಳ ಹುಡುಕುತ್ತೇವೆ.
ನಮ್ಮ ದೇಹದ ಗಾಯ ಕಾಣದೆ ಇರುವ ನೀವು ನಮ್ಮ ಮನಸ್ಸನ್ನು ಅರಿಯಲು ಸಾಧ್ಯವಿಲ್ಲ ಅಲ್ಲವೇ!!
ನಿಮ್ಮೆಲ್ಲರನ್ನು ಒಕ್ಕೊರಳಿನಿಂದ ಕೇಳುವುದು ಇಷ್ಟೇ ನಮ್ಮನ್ನು ಪ್ರೀತಿಸುವುದಿಲ್ಲವಾದರೂ ಪರವಾಗಿಲ್ಲ ತಿರಸ್ಕಾರ ಭಾವದಿಂದ ಕಾಣದಿರಿ. ನಮ್ಮನ್ನು ಕೆಣಕದೆ ನೆಮ್ಮದಿಯಾಗಿ ಇರಲು ಬಿಟ್ಟುಬಿಡಿ.
ಇಂತಿ ನಿಮ್ಮವರಾದ!!!!!
ತೃತೀಯ ಲಿಂಗಿಗಳು
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ