ಬೈಂದೂರು: ಕುಂದಾಪ್ರ ಡಾಟ್ ಕಾಂ ವತಿಯಿಂದ 'ವಿಷನ್ ಬೈಂದೂರು 2033' ಕಾರ್ಯಕ್ರಮ

Upayuktha
0


ಬೈಂದೂರು:
ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದೇ ಅಭಿವೃದ್ಧಿ ಎಂಬ ಕಲ್ಪನೆ ನಮ್ಮಲ್ಲಿದೆ. ಆದರೆ ಶಿಕ್ಷಣ, ಆರೋಗ್ಯ ಮತ್ತು ತಲಾ ಆದಾಯದ ಅಂಶಗಳನ್ನು ಒಟ್ಟು ಸೇರಿಸಿ ಮಾಡಲಾಗುವ ಅಪೇಕ್ಷಿತ ಮಾರ್ಪಾಡುಗಳು ನೈಜ ಅಭಿವೃದ್ಧಿ ಎಂದೆನಿಸಿಕೊಳ್ಳುತ್ತದೆ ಎಂದು ರಾಜ್ಯ ಪಂಚಾಯತ್ ಸಂಪನ್ಮೂಲ ವ್ಯಕ್ತಿ ಎಸ್. ಜನಾರ್ದನ ಮರವಂತೆ ಹೇಳಿದರು.


ಅವರು ಉಪ್ಪುಂದ ದೇವಕಿ ಬಿ.ಆರ್.ಸಭಾಂಗಣದಲ್ಲಿ ಕುಂದಾಪ್ರ ಡಾಟ್ ಕಾಂ ವತಿಯಿಂದ ಆಯೋಜಿಸಲಾದ 'ವಿಷನ್ ಬೈಂದೂರು 2033' ಕಾರ್ಯಕ್ರಮ ಉದ್ಘಾಟಿಸಿ, ಅಭಿವೃದ್ಧಿಯ ಪರಿಕಲ್ಪನೆ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು.


ಯುನೈಟೆಟ್ ನೇಷನ್ಸ್‍ ಡೆವಲಪ್ಮೆಂಟ್ ಪ್ರೋಗ್ರಾಂ ಜಾಗತಿಕವಾಗಿ ಮಾತ್ರವಲ್ಲದೇ ಪ್ರತಿದೇಶದ ಮಾನವ ಅಭಿವೃದ್ಧಿಯ ಸೂಚ್ಯಂಕವನ್ನು ಜನರ ಮುಂದಿಡುತ್ತದೆ.ಸದ್ಯಜಾಗತಿಕವಾಗಿ ಮಾನವ ಅಭಿವೃದ್ಧಿಯ ಅಂತಿಮ ಹಂತ `ಸುಖೀ ಜೀವನ' ಎಂದು ಕಂಡುಕೊಳ್ಳಲಾಗಿದೆ. ಇದರಲ್ಲಿ ಶಿಕ್ಷಣ, ಆರೋಗ್ಯ, ತಲಾಆದಾಯ ಹೆಚ್ಚಳ ಸೇರಿದಂತೆ ಹಲವು ಅಂಶಗಳೂ ಸೇರಿಕೊಂಡಿದೆ. ಪ್ರಸ್ತುತ ಹಲವು ದೇಶಗಳಲ್ಲಿ ಹ್ಯಾಪಿನೆಸ್‍ಇಂಡೆಕ್ಸ್ ಅಳೆಯಲಾಗುತ್ತದೆ ಎಂದರು.


ದೇಶದಲ್ಲಿ ಮಾನವ ಅಭಿವೃದ್ಧಿ ಸೂಕ್ಯಂಕವನ್ನು ಅಳತೆ ಮಾಡಿದ ಎರಡನೇ ರಾಜ್ಯಕರ್ನಾಟಕ. ರಾಜ್ಯದಲ್ಲಿ ಜಿಲ್ಲಾ ಮಟ್ಟದ ಅಭಿವೃದ್ಧಿ ಸೂಕ್ಯಂಕ ಸಿದ್ದಪಡಿಸಿದ್ದ ಉಡುಪಿ ಜಿಲ್ಲೆಗೆ ಪ್ರಥಮ ಬಹುಮಾನ ಬಂದಿತ್ತು. ಉಡುಪಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾನವ ಅಭಿವೃದ್ಧಿಯ ಅಧ್ಯಯನ ನಡೆದಿದ್ದವು. ಇಂತಹ ಅಧ್ಯಯನವನ್ನು ಆಧರಿಸಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಬಹುಮುಖ್ಯ ಎಂದರು.


ಅಭಿವೃದ್ಧಿಯ ಕನಸು ಹಾಗೂ ಸವಾಲುಗಳು ವಿಷಯವಾಗಿ ಕೇಂದ್ರ ರೈಲ್ವೆ ಬೋರ್ಡ್ ಮಾಜಿ ಸದಸ್ಯ ಕೆ.ವೆಂಕಟೇಶಕಿಣಿ ಅವರು ಮಾತನಾಡಿ, ಬೈಂದೂರು ಕ್ಷೇತ್ರವೆಂಬುದು ದೈವದತ್ತ ಕೊಡುಗೆ.ಧಾರ್ಮಿಕ, ಬೀಚ್ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಪ್ರದೇಶವಿದು. ಬೈಂದೂರಿನ ಭೌಗೋಳಿಕ ಹಿನ್ನೆಲೆ ಗಮನಿಸಿದರೆ, ಇಲ್ಲಿ ಪ್ರವಾಸೋದ್ಯದಿಂದ ಮಾತ್ರ ಊರಿನ ಅಭಿವೃದ್ಧಿ ಸಾಧ್ಯವಿದೆ.ಆದರೆ ಪರಿಸರವನ್ನು ಹಾಳು ಮಾಡಿ, ಜನರನ್ನು ಒಕ್ಕಲೆಬ್ಬಿಸಿ ಯಾವ ಕೆಲಸವನ್ನೂ ಮಾಡಬಾರದು. ಹಾಗೆಯೇಜನರೂ ಸಹ ಸಣ್ಣ ಪ್ರಮಾಣದಲ್ಲಾಗುವ ತೊಂದರೆಯನ್ನು ದೊಡ್ಡದಾಗಿ ಬಿಂಬಿಸಿ ಹಿಂಮುಖ ಚಲನೆಗೆ ಅವಕಾಶ ನೀಡಬಾರದು. ಯಾವುದೇ ಅಭಿವೃದ್ಧಿ ಮಾಡುವಾಗಲೂ ಪೂರ್ವಾಪರ ಹಾಗೂ ತಾಂತ್ರಿಕ ಸವಾಲುಗಳನ್ನು ಎದುರಿಸುವುದು, ಜನರಸ್ಥೆ ಅಧಿಕಾರಿಗಳು ಆಸ್ಥೆ ವಹಿಸಿ ಕೆಲಸ ಮಾಡುವಂತೆ ಮಾಡುವುದು ಬಹುಮುಖ್ಯ ಎಂದರು.


ಶಾಸಕ ಗುರುರಾಜ್ ಗಂಟಿಹೊಳೆ ಅವರು ಮಾತನಾಡಿ, ಪ್ರತಿ ಆರಂಭವೂ ಇದೆಲ್ಲಾ ನಮ್ಮೂರಲ್ಲಿ ಸಾಧ್ಯವಿಲ್ಲ ಎಂಬ ಮಾತಿನಿಂದಲೇ ಶುರುವಾಗುತ್ತದೆ. ಆದರೆ ಇದೂ ಸಾಧ್ಯವೆಂಬ ಕನಸು ಹುಟ್ಟು ಹಾಕುವುದೇ ದೊಡ್ಡ ವಿಚಾರ. ವಿಷನ್ ಬೈಂದೂರು ವೇದಿಕೆಯ ಮೂಲಕ ಅಭಿವೃದ್ಧಿ ಚರ್ಚೆ ಆರಂಭವಾಗಿದೆ. ಚರ್ಚೆ ನಡೆದಾಗಲೇ ಉತ್ತಮ ವಿಚಾರಗಳು ಹೊರ ಬರುತ್ತದೆ.


ನಿಮ್ಮ ಕನಸುಗಳ ಬುಟ್ಟಿ, ಬಂಡಿತೋಟ ನಾನು:

ನಾನು ನಿಮ್ಮ ಕನಸುಗಳ ಬುಟ್ಟಿಯೂ ಹೌದು, ಬಂಡಿಯೂ ಹೌದು, ತೋಟವೂ ಹೌದು. ನಿಮ್ಮ ಕನಸುಗಳನ್ನು ಯಾವಾಗಲೂ ಹಂಚಿಕೊಳ್ಳಿ, ಎಲ್ಲಿ ತಲುಪಿಸಬೇಕು ಅಲ್ಲಿಗೆ ತಲುಪಿಸುವ ಜವಾಬ್ದಾರಿ ನಮ್ಮದು. ನಿಮ್ಮೆಲ್ಲಾ ಕನಸನ್ನು ಒಂದೆಡೆ ಕೂರಿಸಿ, ನಿಲ್ಲಿಸಿ ಬೆಳೆಸುವ ಕೆಲಸವೂ ನನ್ನದು ಎಂದರು.


ಬೈಂದೂರು ಕ್ಷೇತ್ರದ ಜನ ನನ್ನಲ್ಲಿ ವಿಶ್ವಾಸವಿಟ್ಟು ಆರಿಸಿದ್ದಾರೆ. ಇಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ, ಜನರ ಊರಿನ ಬಗ್ಗೆ ಏನು ಕನಸು ಕಂಡಿದ್ದಾರೋ ಅದನ್ನು ಸಾಕರಾಗೊಳಿಸುವ ಜವಾಬ್ದಾರಿಯೂ ನನ್ನದು. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಸಾರಿಗೆ ಹೀಗೆ ಎಲ್ಲಾಕ್ಷೇತ್ರದಲ್ಲಿಯೂ ಚರ್ಚೆಗಳು ವಿಷನ್ ಬೈಂದೂರು 2033 ಮೂಲಕ ಆರಂಭವಾಗಿದೆ. ಅದಕ್ಕೊಂದು ಉತ್ತರ ಕಂಡುಕೊಳ್ಳುವ ತನಕವೂ ಈ ಚರ್ಚೆಗಳು ಮುಂದುವರಿಯಲ್ಲಿ ಎಂದರು.


ಕುಂದಾಪ್ರ ಡಾಟ್ ಕಾಂ ಪ್ರವರ್ತಕ ಸುನಿಲ್ ಹೆಚ್.ಜಿ ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಉದಯ ಮರವಂತೆ ವಂದಿಸಿದರು. ಬೈಂದೂರುರೋಟರಿ ನಿಯೋಜಿತ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು. ಬಳಿಕ ಕುಂದಾ ಪ್ರಡಾಟ್ ಕಾಂ ನೇತೃತ್ವದಲ್ಲಿ ಬೈಂದೂರು ಶಾಸಕರು ಹಾಗೂ ಅಭಿವೃದ್ದಿಯ ಕನಸು ಹೊತ್ತ ನಾಗರಿಕರೊಂದಿಗೆ ಸಂವಾದಜರುಗಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top