ಆತ್ಮಬಲವು ಶಾರೀರಿಕ ಬಲಕ್ಕಿಂತಲೂ ದೊಡ್ಡದು

Upayuktha
0

ತ್ಮವು ಅದೃಶ್ಯ ಸ್ವರೂಪಿ. ನಮ್ಮ ಕಣ್ಣುಗಳಿಂದ ನಮ್ಮ ಸುತ್ತ ಮುತ್ತಲ ಪರಿಸರವನ್ನು ನೋಡುವಂತೆ, ನಮ್ಮ ಅಕ್ಕಪಕ್ಕದಲ್ಲಿರುವ ಪಕ್ಷಿ , ಪ್ರಾಣಿ , ವಸ್ತು ಮತ್ತು ವ್ಯಕ್ತಿಗಳನ್ನು ನೋಡಿದಂತೆ ಆತ್ಮವನ್ನು ನೋಡಲು ಆಗುವುದಿಲ್ಲ. ಆತ್ಮ ಎಂಬ ಪದವೇ ವಿಶಿಷ್ಠ , ವಿಭಿನ್ನ ಮತ್ತು ವೈವಿಧ್ಯಮಯವೆನಿಸುತ್ತದೆ. ಆತ್ಮವು ಯಾವ ಆಕಾರದಲ್ಲಿದೆ ಎಂದು ಹೇಳಲು ಆಗವುದಿಲ್ಲ. ಹಿರಿಯ ಅನುಭವಿಗಳು, ತತ್ವಜ್ಞಾನಿಗಳು , ಮನಶಾಸ್ತ್ರಜ್ಞರು, ತಜ್ಞರು ಹೇಳುವಂತೆ ಆತ್ಮವು ಒಂದು ಚೈತನ್ಯವೆನಿಸಿದೆ. ಚೇತನವು ಕ್ರಿಯಾಶೀಲತೆಯಿಂದ ಕೂಡಿದ್ದು ಶಕ್ತಿಯುತವಾಗಿದೆ. ಆ ಚೈತನ್ಯ ಶಕ್ತಿಗೆ ನಾವು ಆತ್ಮಬಲವೆಂದು ಹೇಳಬಹುದು. ಆತ್ಮವು ಅಗೋಚರವಾದ್ದರಿಂದ ನಿರ್ದಿಷ್ಟ ವ್ಯಾಖ್ಯೆಗಳಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ. ಸರ್ವ ಸಾಮಾನ್ಯರೂ ಹೇಳುವ ಮಾತೊಂದಿದೆ. ಶರೀರ ನಶ್ವರ ಆದರೆ ಆತ್ಮ ಶಾಶ್ವತ. ಅಂದರೆ ಮರಣ ಕೇವಲ ದೇಹಕ್ಕೆ ಮಾತ್ರ. ಆತ್ಮಕ್ಕೆ ಅಲ್ಲ. ಆಯುಷ್ಯ ದೇಹಕ್ಕೆ ಮಾತ್ರ. ಆತ್ಮಕ್ಕೆ ಆಯುಷ್ಯವಿಲ್ಲ. ಅದು ಸದಾ ಚಟುವಟಿಕೆಯಿಂದ ಕೂಡಿದ ಜೀವಕಳೆ.  


ಆತ್ಮ ಬಲವು ಶಾರೀರಿಕ ಬಲಕ್ಕಿಂತಲೂ ದೊಡ್ಡದು. ದೈಹಿಕವಾಗಿ ಬೃಹತ್ ಗಾತ್ರದಲ್ಲಿರುವ ಆನೆಗೂ ಆತ್ಮಬಲವಿದ್ದರೆ ಮಾತ್ರ ಚಟುವಟಿಕೆಯಿಂದ ಕೂಡಿರುತ್ತದೆ. ಇಲ್ಲದಿದ್ದರೆ ಇಲ್ಲ. ಆತ್ಮಬಲದ ಕುರಿತಂತೆ ವಾಟ್ಸಪ್ ನಲ್ಲಿ ಒಮ್ಮೆ ಓದಿದ ಕಥೆಯನ್ನು ಉದಾಹರಿಸಲು ಇಚ್ಚಿಸುತ್ತೇನೆ. ಇದು ಪ್ರಸ್ತುತ ಓದುಗರಿಗೂ ಇಷ್ಟವಾಗಬಹುದು ಎಂಬುದು ನನ್ನ ಭಾವನೆ. ಒಮ್ಮೆ ಓರ್ವ ರಾಜನ ಸೈನ್ಯದಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು ಇದ್ದವು. ರಾಜನಿಗೆ ಒಂದು ಆನೆಯ ಮೇಲೆ ಬಹಳ ಪ್ರೀತಿ. ಆ ಆನೆಯು ರಾಜನ ಪ್ರತಿಯುದ್ಧದಲ್ಲೂ ಮುನ್ನುಗ್ಗಿ ಧೈರ್ಯದಿಂದ ಯುದ್ಧಭೂಮಿಯಲ್ಲಿ ರಾಜನಿಗೆ ಗೆಲುವನ್ನು ತಂದು ಕೊಡಲು ಶ್ರಮಿಸುತ್ತಿತ್ತು. ಪ್ರತಿ ಸಲವೂ ಆ ಅನೆಯಿಂದಾಗಿ ರಾಜ ಯುದ್ಧದಲ್ಲಿ ಗೆಲುವನ್ನು ಸಾಧಿಸುತ್ತಿದ್ದನು. ಹೀಗೆ ಕೆಲಸ ಮಾಡುತ್ತಿದ್ದ ಆನೆಗೂ ಕಾಲಾಂತರದಲ್ಲಿ ವಯಸ್ಸಾಗುತ್ತಾ ಬಂತು ಇದನ್ನು ಗಮನಿಸಿದ ರಾಜ ಆನೆಯನ್ನು ಇನ್ನು ಮುಂದೆ ಯಾವುದೇ ಯುದ್ಧಕ್ಕೆ ಕರೆದುಕೊಂಡು ಹೋಗುವುದು ಬೇಡವೆಂದು ತೀರ್ಮಾನಿಸಿ, ಆನೆಯ ಮೇಲಿನ ಪ್ರೀತಿಯಿಂದ ಅದನ್ನು ಆಭಯಾರಣ್ಯದಲ್ಲಿ ಬಿಟ್ಟು , ಚೆನ್ನಾಗಿ ನೋಡಿಕೊಳ್ಳುವಂತೆ ಸೈನಿಕರಿಗೆ ಆದೇಶಿಸಿದನು.


ಆದರೆ ಆನೆ ಕಾಲಕ್ರಮೇಣ ಮಂಕಾಗುತ್ತಾ ಬಂತು, ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಮೇಲೆಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು, ಇದನ್ನು ಗಮನಸಿದ ಸೈನಿಕರು ಆನೆಯನ್ನು ನೀರಿನಿಂದ ಮೇಲೆ ತರಲು ಪ್ರಯತ್ನಿಸಿದರು. ಆದರೂ ಆನೆ ಕೆಸರಿನಿಂದ ಮೇಲೆಳಲು ಆಗಲೇ ಇಲ್ಲ. ಈ ವಿಚಾರವನ್ನು ರಾಜನ ಗಮನಕ್ಕೆ ತಂದಾಗ ತಕ್ಷಣ ಸೈನಿಕರೊಂದಿಗೆ ಆನೆ ಇದ್ದ ಸ್ಥಳಕ್ಕೆ ಬಂದ ರಾಜ ಚಿಂತೆಗೊಳಗಾದನು. ತುಂಬು ಪ್ರೀತಿಯ ಆನೆ ಕೆಸರಿನಲ್ಲಿ ಸಿಕ್ಕಿಕೊಂಡಿರುವುದು ರಾಜನ ಮನಸ್ಸಿಗೆ ತುಂಬ ಬೇಸರವಾಯಿತು. ಆಗ ತಕ್ಷಣ ಮಂತ್ರಿಯನ್ನು ಕರೆಯಿಸಿ ಏನಾದರು ಮಾಡಿ ಆನೆಯನ್ನು ಕೆಸರಿನಿಂದ ಮೇಲಕ್ಕೆ ಬರುವಂತೆ ಮಾಡಲು ಸೂಚಿಸಿದ. ತಕ್ಷಣ ಮಂತ್ರಿ ಈ ಸಣ್ಣ ಕೆಲಸಕ್ಕೆ ಇಷ್ಟೊಂದು ಚಿಂತೆ ಏಕೆ ರಾಜ ಎಂದು ನಗುತ್ತಾ ಸೈನಿಕರಿಗೆ ರಣ ಕಹಳೆಯನ್ನು ಮೊಳಗಿಸಲು ಸೂಚಿಸಿದ. ರಣ ಕಹಳೆಯ ಸದ್ದು ಆನೆಯ ಕಿವಿಗೆ ಬಿದ್ದೊಡನೆ ತನ್ನ ಆತ್ಮಬಲದಿಂದ ಆನೆ ಸಲಿಸಾಗಿ ಕೆಸರಿನಿಂದ ಮೇಲೆ ಬಂತು. ರಾಜನಿಗೆ ಬಹಳ ಸಂತೋಷವಾಯಿತು. 


ಆಗ ಮಂತ್ರಿ ಹೇಳಿದ ಪ್ರಭು ಶರೀರ ಬಲವೊಂದೆ ಬದುಕಲ್ಲ , ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು. ಆ ಸ್ಫೂರ್ತಿ ಮತ್ತು ಪ್ರೇರಣೆಯೇ ಆತ್ಮಬಲ ಆ ಸ್ಫೂರ್ತಿ ಬದುಕಲು ಪ್ರೇರೆಪಿಸಿದಾಗ ಮಾತ್ರ ಬದುಕುವ ಛಲ ಬರುತ್ತದೆ. ಆ ಸ್ಪೂರ್ತಿ ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ. ಒಂದು ಭರವಸೆಯ ಮಾತು! ನಿಷ್ಕಲ್ಮಶ ನಗು, ಪ್ರೀತಿ ಇಷ್ಟೇ ಸಾಕು! ಧೈರ್ಯದಿಂದ ಬದುಕಲು ಮತ್ತು ನಮ್ಮ ಆತ್ಮ ಬಲ ವನ್ನು ಜಾಗೃತಗೊಳಿಸಲು. 


ಅಪರೂಪದ ಮನುಷ್ಯ ಜೀವನವನ್ನು ಅರ್ಥಪೂರ್ಣವಾಗಿ ಸಾರ್ಥಕ್ಯ ಗೊಳಿಸಿಕೊಳ್ಳಲು, ಆತ್ಮಬಲ ಸದಾ ನಮ್ಮೊಂದಿಗೆ ಇರಬೇಕು. ವಸುದೈವ ಕುಟುಂಬಕಂ ಹಿನ್ನೆಲೆಯಲ್ಲಿ ವಿಶ್ವದೇಳ್ಗೆಯ ಮಹದೋದ್ದೇಶವನ್ನು ಇಟ್ಟುಕೊಂಡು ಮಹಾತ್ವಾಕಾಂಕ್ಷೆಯಿಂದ ಗಟ್ಟಿತನದ ಆತ್ಮಬಲದೊಂದಿಗೆ ಕಾರ್ಯ ನಿರ್ವಹಿಸಿದಾಗ ಅಸಾಧ್ಯವೂ ಸಾಧ್ಯವೆನಿಸುತ್ತದೆ. 

-ಕೆ.ಎನ್.ಚಿದಾನಂದ. ಹಾಸನ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top