ಮಂಗಳೂರು: ದೇಶದ ಮುಂಚೂಣಿ ವಿಮಾನ ನಿಲ್ದಾಣ ಸೇವೆಗಳ ಕಂಪನಿಯಾದ "ಏರ್ ಇಂಡಿಯಾ ಸ್ಯಾಟ್ಸ್ ಏರ್ ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ಎಐಸ್ಯಾಟ್ಸ್)" ಮತ್ತು ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರವೇಟ್ ಲಿಮಿಟೆಡ್(ವೈಐಎಪಿಎಲ್) ಕಂಪನಿಗಳು ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಸಜ್ಜಿತ ಬಹು ಮಾದರಿಯ, ಬಹುಪಯೋಗಿ ಸರಕು ಸಾಗಣೆ ವ್ಯವಸ್ಥೆ (ಕಾರ್ಗೊ ಹಬ್) ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿವೆ.
ನೊಯ್ಡಾದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಎಐಸ್ಯಾಟ್ಸ್ ಸಿಇಒ ಸಂಜಯ್ ಗುಪ್ತ ಮತ್ತು ವೈಐಎಪಿಎಲ್ ಸಿಇಒ ಕ್ರಿಸ್ಟೊಫ್ ಶೆಲ್ ಮನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.
ಈ ನೂತನ ವ್ಯವಸ್ಥೆ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ (ಐಸಿಟಿ) ಮತ್ತು ಇಂಟಿಗ್ರೇಟೆಡ್ ವೇರ್‍ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯ(ಐಡಬ್ಲ್ಯುಎಲ್ ಝಡ್)ವನ್ನು ಒಳಗೊಂಡಿರುವ ಭಾರತದ ಪ್ರವರ್ತಕ ಸೌಲಭ್ಯವಾಗಿದೆ. ಭಾರತದಲ್ಲೇ ಮೊದಲನೆಯದಾದ ಕಾರ್ಗೋ ಹಬ್‍ನ ಆಯಕಟ್ಟಿನ ಸ್ಥಳವು ಏಕೀಕೃತ ಸಹಾಯಕ ಮತ್ತು ಮೌಲ್ಯವರ್ಧಿತ ಸೇವೆಗಳೊಂದಿಗೆ ಅನೇಕ ಸಾರಿಗೆ ವಿಧಾನಗಳನ್ನು ಸಂಪರ್ಕಿಸುತ್ತದೆ. ಭಾರತ ಮತ್ತು ಹೊರರಾಷ್ಟ್ರಗಳಿಗೆ ಸರಕುಗಳನ್ನು ಸರಾಗವಾಗಿ ಸಾಗಿಸಲು ಪರಿಣಾಮಕಾರಿ ಮಾರ್ಗಗಳನ್ನು ಇದು ರೂಪಿಸುತ್ತದೆ ಎಂದು ಪ್ರಕಟಣೆ ಹೇಳಿದೆ.
ಇದನ್ನು ವಿನ್ಯಾಸಗೊಳಿಸುವ, ನಿರ್ಮಿಸುವ, ಹಣಕಾಸು ಒದಗಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಎಐಸ್ಯಾಟ್ಸ್ ಗೆ ವಹಿಸಲಾಗಿದೆ, ಇದು ಲಾಜಿಸ್ಟಿಕ್ಸ್ ಮತ್ತು ಕಾರ್ಗೊ ಉದ್ಯಮವನ್ನು ಪರಿವರ್ತಿಸುವ ಅದರ ಮಹತ್ವವನ್ನು ಮತ್ತಷ್ಟು ಒತ್ತಿಹೇಳುತ್ತದೆ. ಈ ಎಲ್ಲಾ ಸೌಲಭ್ಯಗಳ ಮೂಲಕ ಎಐಸ್ಯಾಟ್ಸ್ ಕಂಪನಿಯು, ಭಾರತದ ಸರಕು ಸಾಗಣೆ ವಲಯಕ್ಕೆ ವಿಶ್ವ ದರ್ಜೆಯ ಸರಕು ಸಂಸ್ಕರಣೆ ಮತ್ತು ಸಾರಿಗೆ ಜಾಲ ಒದಗಿಸುವ ಮಹತ್ವದ ಗುರಿ ಹೊಂದಿದೆ. ಇದು ಸರಕು ಸಾಗಣೆ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರಕಟಣೆ ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ