ಶ್ರೀ ವ್ಯಾಸರಾಜರ ವ್ಯಕ್ತಿತ್ವ ಜಗನ್ಮಾನ್ಯ - ಶ್ರೀ ವಿದ್ಯಾಶ್ರೀಶ ತೀರ್ಥರ ಅಭಿಮತ

Upayuktha
0

ಬೆಂಗಳೂರು: ಬೆಂಗಳೂರು ಗಾಂಧಿ ಬಜಾರ್ ಶ್ರೀ ವ್ಯಾಸರಾಜ ಮಠದಲ್ಲಿ ಶ್ರೀವ್ಯಾಸರಾಜ ಭಕ್ತರ ವಿಶ್ವವೇದಿಕೆಯ 23ನೇ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥರು ಅನುಗ್ರಹ ಸಂದೇಶ ನೀಡಿ ಮಾತನಾಡುತ್ತ ವೈಚಾರಿಕ ಜಗತ್ತಿನಲ್ಲಿ ಅಚಾರ್ಯ ಮಧ್ವರ ತತ್ತ್ವವಾದ, ಉಳಿದೆಲ್ಲ ಚಿಂತನ ಕ್ರಮಗಳಿಗಿಂತ ಗಂಭೀರ, ವ್ಯಾಪಕ ಹಾಗೂ ನಿರ್ದುಷ್ಟವಾದದ್ದೆಂದು ಸತಾರ್ಕಿಕವಾಗಿ, ಅತ್ಯಂತ ಸಮರ್ಪಕವಾಗಿ ಪ್ರತಿಪಾದಿಸಿ, ತಮ್ಮ `ತರ್ಕತಾಂಡವ’, `ನ್ಯಾಯಾಮೃತ’ ಹಾಗೂ `ತಾತ್ಪರ್ಯಚಂದ್ರಿಕಾ’ ಗ್ರಂಥಗಳಿಂದ ವಿದ್ವದ್ಮಾನ್ಯರಾದವರು. 


ಶ್ರೀ ಮಧ್ವಾಚಾರ್ಯರು, ಶ್ರೀ ಜಯತೀರ್ಥರೊಂದಿಗೆ `ಮಧ್ವಮತದ ಮುನಿತ್ರಯರು’ ಎಂದು ಜ್ಞಾನಿನಾಯಕರಿಂದ ಅಸಾಧಾರಣ ಗೌರವಕ್ಕೆ ಪಾತ್ರರಾಗಿರುವ ಶ್ರೀ ವ್ಯಾಸರಾಜರು ಸಮಕಾಲೀನ ತತ್ತ್ವಜ್ಞಾನ ಚಿಂತನೆಗಳನ್ನು ಅತ್ಯಂತ ಕೂಲಂಕುಷವಾಗಿ ಅಧ್ಯಯನ ಮಾಡಿ, ಅಷ್ಟೇ ತಲಸ್ಪರ್ಶಿಯಾದ ವಿಮರ್ಶೆಯನ್ನು ಮಾಡಿ ಅನೇಕ ಸಂದಿಗ್ಧಗಳನ್ನು ಪರಿಹರಿಸಿದರು. `ಮಧ್ವತತ್ತ್ವಜ್ಞಾನದ’ದ ಪ್ರಚಾರದಲ್ಲಿ ಅನ್ಯಾದೃಶವಾದ ಅಪ್ರತಿಮವಾದ ಭೂಮಿಕೆಯನ್ನು ನಿರ್ವಹಿಸಿದ ಶ್ರೀ ವ್ಯಾಸರಾಜರು, ಆಚಾರ್ಯ ಮಧ್ವರಿಂದ ಬೀಜಾವಾಪನೆಗೊಂಡಿದ್ದ ಹರಿದಾಸ ಸಾಹಿತ್ಯಪರಂಪರೆಗೆ ಪ್ರೇರಕ ಶಕ್ತಿಯಾಗಿ, ಶ್ರೀ ವಾದಿರಾಜರು, ಶ್ರೀ ವಿಜಯೀಂದ್ರರು, ಶ್ರೀ ಪುರಂದರದಾಸರು, ಶ್ರೀ ಕನಕದಾಸರೇ ಮೊದಲಾದ ವಿದ್ವದ್ವಿಭೂತಿಗಳಿಗೆ ಗುರುಗಳಾಗಿ, ವಿಜಯನಗರದ ಧರ್ಮಸಾಮ್ರಾಜ್ಯದ ರಕ್ಷಕರಾಗಿ ಈ ನಾಡಿಗೆ ನೀಡಿದ ಕೊಡುಗೆ ಅಪೂರ್ವ ಎಂದು ಅಭಿಪ್ರಾಯ  ವ್ಯಕ್ತ ಪಡಿಸಿದರು.


ತತ್ತ್ವಶಾಸ್ತ್ರದ ಶಿರೋಮಣಿಗಳಾದ ಶ್ರೀವ್ಯಾಸರಾಜರ ಜೀವನ ಹಾಗೂ ಗ್ರಂಥಗಳ ಅಧ್ಯಯನ, ಪ್ರಸಾರ ಹಾಗೂ ಜಾಗೃತಿಗೆಂದೇ ಸ್ಥಾಪಿತವಾದ ಸಂಸ್ಥೆ `ಶ್ರೀವ್ಯಾಸರಾಜಭಕ್ತರ ವಿಶ್ವವೇದಿಕೆಗೆ ಇದೀಗ 23ರ ಸಂಭ್ರಮ. ಶ್ರೀವ್ಯಾಸರಾಜರ ಬಗ್ಗೆ ಭಾರತ ಹಾಗೂ ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ಆಯೋಜಿಸಲಾಗುತ್ತಿದೆ.  


ಶ್ರೀವ್ಯಾಸರಾಜರು ಸಂಚರಿಸಿದ ಅನೇಕ ಸ್ಥಳಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ಸ್ಥಳೀಯರಲ್ಲೂ ಈ ಬಗ್ಗೆ ವಿಶೇಷ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಶ್ರೀವ್ಯಾಸರಾಜರ `ತಾತ್ಪರ್ಯಚಂದ್ರಿಕಾ’ ಗ್ರಂಥದ ಮೇಲೆ ಬೆಳಕು ಚೆಲ್ಲುವ ಆಂಗ್ಲಭಾಷೆಯ ಕೃತಿಯನ್ನು ಪ್ರಕಾಶಪಡಿಸಲಾಗಿದೆ. ಇಂಟರ್ನೆಟ್ ಮಾಧ್ಯಮದ ಮೂಲಕವೂ ಅನೇಕ ಕಾರ್ಯಕ್ರಮಗಳ ನೇರಪ್ರಸಾರವನ್ನು ಮಾಡುತ್ತಿರುವುದು ಗಮನಾರ್ಹವಾದುದು. ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀವ್ಯಾಸರಾಜ ಭಕ್ತರ ವಿಶ್ವವೇದಿಕೆ ಸಂಸ್ಥಾಪಕ – ಅಧ್ಯಕ್ಷರಾದ ಡಾ|| ನಂದಗುಡಿ ನಾಗು ಶ್ರೀನಿವಾಸರಾವ್‍ರವರು ತಿಳಿಸಿರುತ್ತಾರೆ. 


ಕಾರ್ಯಕ್ರಮದಲ್ಲಿ ಶ್ರೀಗಳವರಿಂದ ಶ್ರೀವ್ಯಾಸರಾಜ ದರ್ಬಾರ್  ನಡೆಯಿತು .ವಿದ್ವಾಂಸರಾದ ಆನಂದತೀರ್ಥ ನಾಗಸಂಪಿಗೆ , ಎಚ್.ಕೆ.ಸುರೇಶ್ ಆಚಾರ್ಯ , ಡಾ.ಪಿ.ವಿನಯ್ , ಕಂಬಾಲೂರು ಸುದರ್ಶನ , ಕೆಂಪದಹಳ್ಳಿ ಕೃಷ್ಣಾಚಾರ್ಯ ಉಪನ್ಯಾಸ ಹಾಗು ವಿದ್ವಾನ್ ಸಮೀರಾಚಾರ್ ರವರ ದಾಸವಾಣಿ ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top