ಧರ್ಮರಾಯ ಮಾಡುತ್ತಿದ್ದ 'ರಾಜಸೂಯ' ಯಾಗ (ವಾಜಪೇಯ ಸೋಮಯಾಗದಂತೆ ರಾಜಸೂಯ ಯಾಗವೂ ಯಾಗ ಕ್ರಮಗಳಲ್ಲಿ ಒಂದು) ಸಂಪೂರ್ಣವಾಗಿ ಮುಗಿದ ನಂತರ ಅಗ್ರಪೂಜೆ ಸಲ್ಲಿಸಬೇಕಾದ ಸಮಯ ಬಂದಿತು.
ಭೀಷ್ಮರು " ಲೋಕ ಪೂಜ್ಯನಾದ ಶ್ರೀ ಕೃಷ್ಣನೇ ಅಗ್ರಪೂಜೆಗೆ ಅರ್ಹ ವ್ಯಕ್ತಿ " ಎಂದು ಹೇಳಿದರು.
ಭೀಷ್ಮರ ಮಾತನ್ನು ಸಭೆಯಲ್ಲಿದ್ದ ಎಲ್ಲರೂ ಒಪ್ಪಿ ಅನುಮೋದಿಸಿದರು.
ಧರ್ಮರಾಜನು ಸಂಭ್ರಮದಿಂದ ಶ್ರೀಕೃಷ್ಣನಿಗೆ ಅಗ್ರಪೂಜೆ ಸಲ್ಲಿಸಲು ಮುಂದಾದನು.
ಆ ಸಂದರ್ಭದಲ್ಲಿ ಶಿಶುಪಾಲನು ಕ್ರೋಧದಿಂದ “ಧರ್ಮರಾಜ, ಸಭೆಯಲ್ಲಿ ಅನೇಕ ಶ್ರೇಷ್ಟ ರಾಜಾಧಿರಾಜರು ಇದ್ದರೂ, ಒಬ್ಬ ಗೊಲ್ಲನ ಮಗನಾದ ಕಳ್ಳ ಕೃಷ್ಣನಿಗೆ ಅಗ್ರಪೂಜೆಯನ್ನು ಮಾಡುತ್ತಿರುವೆ. ಕೃಷ್ಣ ಒಬ್ಬ ತಿಂಡಿಪೋತ, ಉಡಾಳ, ಹೆಣ್ಣು ಮಕ್ಕಳನ್ನು ಛೇಡಿಸುತ್ತಾ ಕಾಲ ಕಳೆಯುವವನು. ತಂತ್ರಗಾರಿಕೆಯಲ್ಲಿ ವಿಷದ ಕಾಳಿಂಗ ಸರ್ಪವನ್ನು ಕೊಂದು ತನ್ನ ಮೈಗೂ ವಿಷ ಅಂಟಿಸಿಕೊಂಡಿದ್ದಾನೆ. ಅವನ ಮೈ ನೆಕ್ಕಿದರೂ ಸಾವು ಖಂಡಿತ. ಅಂತಹ ಗೊಲ್ಲನನ್ನು ಗೌರವಿಸುವುದು ಅವಿವೇಕ" ಎಂದನು.
ಕೃಷ್ಣನನ್ನು ಬಯ್ಯುತ್ತಿರುವ ಶಿಶುಪಾಲನ ಮಾತು ಭೀಮನಿಗೆ ಹಿಡಿಸಲಿಲ್ಲ. ಸಿಟ್ಟಿನಿಂದ ಶಿಶುಪಾಲನನ್ನು ದಂಡಿಸಲು ಮುಂದಾದ. ಯಾದವರೂ 'ಸಿಂಹದಂತೆ ಪ್ರತಾಪ' ದಿಂದ ಶಿಶುಪಾಲನನ್ನು ಹೊಡೆಯಲು ಮುಂದಾದರು.
ಆಗ ಭೀಷ್ಮರು ಎಲ್ಲರನ್ನು ತಡೆದು “ಈ ಶಿಶುಪಾಲ ಯಾರು ಗೊತ್ತಾ? ಹುಟ್ಟುವಾಗಲೇ ಇವನಿಗೆ ಚತುರ್ಭುಜಗಳಿದ್ದವು. ಮೂರು ಕಣ್ಣುಗಳಿದ್ದವು. ಯಾರು ಇವನನ್ನು ಎತ್ತಿಕೊಂಡಾಗ ಎರಡು ಭುಜಗಳು, ಒಂದು ಕಣ್ಣು ಉದುರಿ ಹೋಗುವುದೋ ಅವನಿಂದ ಮರಣ ನಿಶ್ಚಯ" ಎಂದರು.
"ಒಂದು ಬಾರಿ ಶ್ರೀಕೃಷ್ಣನು ಶಿಶುಪಾಲನನ್ನು ಎತ್ತಿಕೊಂಡಾಗ ಹಾಗೆಯೇ ಆಯಿತು. ಶಿಶುಪಾಲನ ತಾಯಿ ಕೃಷ್ಣನಿಗೆ ಸೋದರತ್ತೆ. ಆಗ ಶಿಶುಪಾಲನ ತಾಯಿ ಕೃಷ್ಣನಿಂದ ಒಂದು ಮಾತನ್ನು ತೆಗೆದುಕೊಂಡಳು. 'ನನ್ನ ಮಗ ಏನೇ ತಪ್ಪು ಮಾಡಿದರೂ ಶಿಕ್ಷಿಸಬೇಡ' " ಎಂದು.
"ಆಗ ಶ್ರೀಕೃಷ್ಣನು ಶಿಶುಪಾಲನ ನೂರು ತಪ್ಪುಗಳನ್ನು ಸಹಿಸಿಕೊಳ್ಳುವುದಾಗಿ, ಅದನ್ನೂ ಮೀರಿದರೆ ಮುಂದೆ ಅವನ ಪತನ ನಿಶ್ಚಿತ ಎಂದು ಅತ್ತೆಗೆ ಹೇಳಿದ್ದನು. ಈ ಶಿಶುಪಾಲ ನೂರು ತಪ್ಪುಗಳನ್ನು (ಬೈಗುಳ!!?) ಮಾಡಿದ್ದಾನೆ. ಇವತ್ತಿನದು ನೂರೊಂದು!!" ಎಂದು ಹೇಳಿದರು.
ಹೀಯಾಳಿಸಲ್ಪಟ್ಟ ಶ್ರೀಕೃಷ್ಣನೂ ಕರ್ತವ್ಯದ ಹೊಣೆ ಹೊತ್ತು ಸುದರ್ಶನ ಚಕ್ರವನ್ನು ತೋರ್ಬೆರಳಿಗೆ ಕರೆಸಿದ!!
ಶಿಶುಪಾಲನು ಮಾತ್ರ ಶ್ರೀಕೃಷ್ಣನನ್ನು ಅವಾಚ್ಯ ಶಬ್ದಗಳಿಂದ ಕಳ್ಳ (ಚೋರ್!!) ನೆಂದು ಜರೆಯುತ್ತಿದ್ದನು.
ಶ್ರೀಕೃಷ್ಣನ ಸುದರ್ಶನ ಚಕ್ರ ಶಿಶುಪಾಲನನ್ನು ಉರುಳಿಸಿ ಪುನಃ ಮರಳಿ ಬಂದು ಕೃಷ್ಣನನ್ನು ಸೇರಿತು.
ನೆರೆದಿದ್ದ ಜನ ಸಮೂಹ ಭಗವಂತನಿಗೆ ನಮಿಸಿತು.
ಶಿಶುಪಾಲ ಛೇದಿ ರಾಜ್ಯದ ರಾಜ ದಮಘೋಷನ ಮಗ. ರಾಜ್ಯಾಧಿಕಾರ ಪಡೆಯುವ ಯೋಗ್ಯತೆ ಇದ್ದ ಕ್ಷತ್ರಿಯ ಪಕ್ಷದ ಪ್ರತಿನಿಧಿ!! ಅಪ್ಪ ರಾಜನಾಗಿರುವಾಗ ಛೇದಿ ರಾಜ್ಯದ ಮುಖ್ಯಮಂತ್ರಿ ಯೂ ಆಗಬಹುದಾದ ರಾಜವಂಶದವ!!!. ಇನ್ನೊಬ್ಬರನ್ನು ಅದರಲ್ಲೂ ಕೃಷ್ಣನಂತಹ ಲೋಕವೇ ಮೆಚ್ಚುವಂತಹ ಧೀಮಂತ ರಾಜಕಾರಣಿಯನ್ನು ಛೇಡಿಸಿ, ತಾನೂ, ತನ್ನವರೂ ಪತನವಾಗುವಂತೆ ನೆಡೆದುಕೊಂಡ.
ಭೀಷ್ಮರ ಅಭಿ'ಮತ'ದಂತೆ ಧರ್ಮರಾಜನು ಕಮಲನಾಭ ನಾದ ಶ್ರೀಕೃಷ್ಣನಿಗೆ 'ಅಗ್ರಪೂಜೆ' ಮಾಡಿದನು. ಯಾಗ ಸಂಪನ್ನವಾಯಿತು.
-ಅರವಿಂದ ಸಿಗದಾಳ್, ಮೇಲುಕೊಪ್ಪ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ