ಕಾಂಗ್ರೆಸ್ ಅಭಿವೃದ್ಧಿಯ ಶತ್ರು: ಮೂಲ್ಕಿಯಲ್ಲಿ ಪ್ರಧಾನಿ ಮೋದಿ ವಾಗ್ಧಾಳಿ

Upayuktha
0




ಮಂಗಳೂರು: ಪ್ರಧಾನಿ ನರೇಂದ್ರ ಮೊದಿ ಅವರು ಕರಾವಳಿ ಕರ್ನಾಟಕದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಮೂಲ್ಕಿಯಲ್ಲಿ ನಡೆಸಿದ ಸಾರ್ವಜನಿಕ ಸಮಾವೇಶದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ತಮ್ಮ ಮಾತಿನ ಮೋಡಿಯಿಂದ ವ್ಯಾಪಕ ಗಮನ ಸೆಳೆದರು.

ಬಜರಂಗ ದಳ ವನ್ನು ನಿಷೇಧಿಸುವ ಕಾಂಗ್ರೆಸ್‌ನ ಪ್ರಣಾಳಿಕೆಯ ಪ್ರಸ್ತಾವವನ್ನು ಕಟುವಾಗಿ ಖಂಡಿಸಿದ್ದಲ್ಲದೆ, ಭಾರತೀಯತೆ, ಹಿಂದುತ್ವ, ಅಭಿವೃದ್ಧಿ ವಿಚಾರಗಳಲ್ಲಿ ಕಾಂಗ್ರೆಸ್ ಹೇಗೆ ರಿವರ್ಸ್ ಗೇರ್‌ನಲ್ಲಿದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು.

ಅವರ ಭಾಷಣ ಪ್ರಮುಖಾಂಶಗಳು ನಮ್ಮ ಓದುಗರಿಗಾಗಿ: 

ದಕ್ಷಿಣ ಕನ್ನಡ ಮತ್ತು ಉಡುಪಿ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲೇ ನಂ.1 ಆಗಿದೆ. ದೇಶದಲ್ಲಿ ಕರ್ನಾಟಕ ನಂ.1 ಆಗುವುದಕ್ಕೆ, ಔದ್ಯೋಗಿಕ ವಿಕಾಸದಲ್ಲಿ ನಂ.1 ಆಗಬೇಕಲ್ಲವೆ?  ಬಿಜೆಪಿಯ ಪ್ರಯತ್ನ ಆ ದಿಕ್ಕಿನಲ್ಲಿದೆ. ಕೃಷಿ ಅಭಿವೃದ್ಧಿಯಲ್ಲಿ ನಂ..1, ಮೀನುಗಾರಿಕೆಯಲ್ಲಿ ನಂ.1  ಆಗಲು ನಿರಂತರ ಕೆಲಸ ನಡೆಯುತ್ತಿದೆ. ನಮ್ಮ ಗುರಿ ಕರ್ನಾಟಕವನ್ನು ಆರೋಗ್ಯ, ಶಿಕ್ಷಣದಲ್ಲಿ ನಂ. 1 ಮಾಡುವುದು. ವಿಕಾಸದ ಎಲ್ಲ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ನಂ 1 ಮಾಡಲು ಬಿಜೆಪಿ ಬಯಸುತ್ತದೆ. ಆದರೆ ಕಾಂಗ್ರೆಸ್ ಏನು ಬಯಸುತ್ತಿದೆ? ಕಾಂಗ್ರೆಸ್ ಕರ್ನಾಟಕವನ್ನು ದಿಲ್ಲಿಯಲ್ಲಿ ಕುಳಿತ ಶಾಹಿ ಪರಿವಾರದ ನಂ.1 ಎಟಿಎಂ ಮಾಡಲು ಬಯಸುತ್ತಿದೆ. ಎಲ್ಲ ಯೋಜನೆಗಳಲ್ಲಿ 85% ಕಮಿಷನ್ ತಿನ್ನುವ ಕಾಂಗ್ರೆಸ್ ಕರ್ನಾಟಕವನ್ನು ದಶಕಗಳ ಹಿಂದೆ ಒಯ್ಯಲು ಬಯಸುತ್ತಿದೆ. ಕರ್ನಾಟಕದ ಜನತೆ ಕಾಂಗ್ರೆಸ್‌ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕು. ಇನ್ನು ಜೆಡಿಎಸ್‌ ತನ್ನ ಬೇಳೆ ಬೇಯಿಸಿಕೊಳ್ಳಲು ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ಬರಲೆಂದು ಹಾರೈಸುತ್ತಿದೆ. ಈ ಬಗ್ಗೆ ಮತದಾರರು ಎಚ್ಚರಿಕೆಯಿಂದಿರಬೇಕು ಎಂದು ಮೋದಿ ಹೇಳಿದರು.


ಮೊದಲ ಮತದಾರರಿಗೆ ಮೋದಿ ಮನವಿ:

ದಕ್ಷಿಣ ಕನ್ನಡದಲ್ಲಿ ಈ ಬಾರಿ ಮೊದಲ ಸಲ ಹಕ್ಕು ಚಲಾಯಿಸುವ ಯುವ ಮತದಾರರು ಕರ್ನಾಟಕದ ಭವಿಷ್ಯವನ್ನು ರೂಪಿಸುವಲ್ಲಿ ನಿಮ್ಮ ಮತವನ್ನು ಬಳಸಿ. ನಿಮ್ಮ ಒಂದೊಂದು ಮತವೂ ಕರ್ನಾಟಕದ ಭವಿಷ್ಯವನ್ನು ನಿರ್ಧರಿಸಬಹುದು. ನಿಮ್ಮ ಮತಗಳೇ ನಿಮ್ಮ ಭವಿಷ್ಯವನ್ನೂ ನಿರ್ಧರಿಸಬಹುದು. ನವ ಯುವಕರು ಮೊದಲ ಮತದಾರರು, ನಿಮ್ಮ ಕೆರಿಯರ್ ರೂಪಿಸಿಕೊಳ್ಳಲು, ನಿಮ್ಮ ಕನಸಿನ ಉದ್ಯೋಗ ಪಡೆಯಲು ಅಭಿವೃದ್ಧಿಪರ, ಸರಕಾರ ನೀಡುವ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಪ್ರಧಾನಿ ಮನವಿ ಮಾಡಿದರು.


ಕಾಂಗ್ರೆಸ್ ಅಭಿವೃದ್ಧಿಯ ಶತ್ರು

ಕಾಂಗ್ರೆಸ್ ಎಂಬುದು ಶಾಂತಿ ಮತ್ತು ಅಭಿವೃದ್ಧಿಯ ಶತ್ರು. ಅದು ಭಯೋತ್ಪಾದಕ ಶಕ್ತಿಗಳನ್ನು ರಕ್ಷಿಸುತ್ತಿದೆ. ತನ್ನ ತುಷ್ಟೀಕರಣ ನೀತಿಯಿಂದಲೇ ಅದು ಇಂದಿನ ದುಸ್ಥಿತಿಗೆ ತಲುಪಿದೆ. ರಾಜಸ್ಥಾನದಲ್ಲಿ ದಶಕಗಳ ಹಿಂದೆ ಬಾಂಬ್ ಸ್ಫೋಟದಲ್ಲಿ 50ಕ್ಕೂ ಹೆಚ್ಚು ಅಮಾಯಕ ಜನ ಪ್ರಾಣ ಕಳೆದುಕೊಂಡಿದ್ದರು. ಆ ಸ್ಫೋಟದ ಷಡ್ಯಂತ್ರ ನಡೆಸಿದವರು, ಕೃತ್ಯದಲ್ಲಿ ಭಾಗಿಯಾದವರನ್ನು ಕಾಂಗ್ರೆಸ್ ಸರಕಾರದ ಪೊಲೀಸರು ನಿರ್ದೋಷಿಗಳೆಂದು ಎಂದು ಸಾರಿ ಜೈಲಿನಿಂದ ಬಿಡುಗಡೆ ಮಾಡಿದರು. ತುಷ್ಟೀಕರಣದ ಈ ನೀತಿಯೇ ಕಾಂಗ್ರೆಸ್‌ನ ಏಕಮಾತ್ರ ಹೆಗ್ಗುರುತಾಗಿ ಉಳಿದಿದೆ. ಇಂತಹ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಬಿಡಬೇಕೆ? ಆ ಮೂಲಕ ಕರ್ನಾಟಕವನ್ನು, ನಿಮ್ಮ ಭವಿಷ್ಯವನ್ನು ಹಾಳು ಮಾಡಲು ಬಿಡಬೇಕೆ? ಎಂದು ಮೋದಿ ಪ್ರಶ್ನಿಸಿದರು.


ಶಾಂತಿಪೂರ್ಣ ಅಭಿವೃದ್ಧಿಪರ ಕರ್ನಾಟಕ ನಮ್ಮ ಗುರಿ. ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುವ ಎಲ್ಲ ರಾಜ್ಯಗಳೂ ತಮ್ಮ ನೆಲದಿಂದ ಕಾಂಗ್ರೆಸ್ ಅನ್ನು ಹೊರಗೋಡಿಸುತ್ತಿವೆ. ದೇಶವು ಅಭಿವೃದ್ಧಿಯತ್ತ ಸಾಗುತ್ತಿದ್ದರೆ, ಜನಜೀವನ ಶಾಂತಿಪೂರ್ಣವಾಗಿದ್ದರೆ ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ. ಕಾಂಗ್ರೆಸ್‌ನ ಬೇಳೆ ಬೇಯಬೇಕಾದರೆ ದೇಶದಲ್ಲಿ ಅಶಾಂತಿ ಇರಬೇಕು. ಜನರ ಮಧ್ಯೆ ಜಾತಿ-ಧರ್ಮ, ಭಾಷೆಯ ನೆಲೆಯಲ್ಲಿ ಒಡಕು ಇರಬೇಕು. ಇಂತಹ ಕಾಂಗ್ರೆಸ್‌ ಈ ನಾಡಿಗೆ ಬೇಕೆ? ಕಾಂಗ್ರೆಸ್‌ನದ್ದು ಒಡೆದಾಳುವ ರಾಜನೀತಿ. ಕರ್ನಾಟಕವು ಕಾಂಗ್ರೆಸ್‌ನ ಈ ದುರ್ನೀತಿಯನ್ನು ನೋಡಿದೆ. ಭಯೋತ್ಪಾದನೆ ಆರೋಪದಲ್ಲಿ ಬಂಧಿತರಾದವರನ್ನು ಕಾಂಗ್ರೆಸ್ ರಕ್ಷಿಸುತ್ತದೆ, ಅವರ ಬಿಡುಗಡೆ ಮಾಡಿಸುತ್ತಿದೆ. ಇಂತಹ ಕಾಂಗ್ರೆಸ್ ಬೇಕೆ? ಅಂತಹ ಜನರನ್ನು ರಕ್ಷಿಸಿದರೆ ಶಾಂತಿಸ್ಥಾಪನೆ ಸಾಧ್ಯವೆ? ಅಂತಹ ದೇಶವಿರೋಧಿಗಳ ಮೇಲೆ ಕೇಸು ದಾಖಲಿಸಿ ಒಳಗೆ ತಳ್ಳುವುದು ಬಿಟ್ಟು ಬಿಡುಗಡೆ ಮಾಡುತ್ತಿದೆ ಕಾಂಗ್ರೆಸ್ ಎಂದು ಪ್ರಧಾನಿ ತೀಕ್ಷ್ಣ ವಾಗ್ದಾಳಿ ನಡೆಸಿದರು.


ಇಡೀ ದೇಶವೇ ರಾಷ್ಟ್ರವಿರೋಧಿ ಶಕ್ತಿಗಳನ್ನು ವಿರೋಧಿಸುತ್ತಿದ್ದರೆ ಕಾಂಗ್ರೆಸ್ ರಿವಸ್F ಗೇರ್‌ನಲ್ಲಿ ಹೋಗುತ್ತಿದೆ. ಇಡೀ ದೇಶ ನಮ್ಮ ವೀರ ಯೋಧರನ್ನು, ಸೇನಾಪಡೆಯನ್ನು ಆದರಿಸಿ ಗೌರವಿಸುತ್ತಿದ್ದರೆ, ಕಾಂಗ್ರೆಸ್ ಅವರನ್ನು ಅವಮಾನಿಸುತ್ತಿದೆ. ನೀವು ಸೈನಿಕರನ್ನು ಕಂಡಾಗ ಖುಷಿಪಟ್ಟರೆ ಕಾಂಗ್ರೆಸ್‌ಗೆ ಅಳು ಬರುತ್ತದೆ. ಸೇನಾ ವರಿಷ್ಠಾಧಿಕಾರಿಗಳನ್ನು ಅದು ಕೀಳು ಭಾಷೆಯಲ್ಲಿ ನಿಂದಿಸುತ್ತದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಶಕ್ತಿ ಮತ್ತು ಅಭಿವೃದ್ಧಿಯ ವೇಗವನ್ನು ನೋಡಿ ಜಗತ್ತು ನಮ್ಮನ್ನು ಗೌರವದಿಂದ ನೋಡುತ್ತಿದ್ದರೆ, ಕಾಂಗ್ರೆಸ್‌ ನಾಯಕರು ಜಗತ್ತಿನಲ್ಲೆಲ್ಲ ಓಡಾಡಿ ಭಾರತವನ್ನು  ಹೀನಾಯವಾಗಿ ಅವಮಾನಿಸಿ ಮಾತನಾಡುತ್ತಾರೆ. ಇಂತಹ ಕಾಂಗ್ರೆಸ್ ಕರ್ನಾಟಕದ ಜನತೆಗೆ ಬೇಕೆ? ಜಗತ್ತಿನಲ್ಲಿ ಭಾರತದ ಹೆಸರು ಪ್ರಸಿದ್ಧವಾಗಿದೆ ಅಲ್ಲವೇ? ಗೌರವ ಹೆಚ್ಚಾಗಿದೆ ಅಲ್ಲವೆ? ಅಮೆರಿಕ, ಆಸ್ಟ್ರೇಲಿಯ, ಜಪಾನ್, ಯುಕೆ ಎಲ್ಲೆಡೆ ಭಾರತಕ್ಕೆ ಜಯಕಾರ ಕೇಳುತ್ತಿದೆ ಅಲ್ಲವೆ? ಈ ಜಯಕಾರಕ್ಕೆ ಕಾರಣವೇನು? ಯೋಚಿಸಿ ಎಂದರು ಪ್ರಧಾನಿ.


ಕರ್ನಾಟಕಕ್ಕೆ ಜೈಕಾರ ಎಲ್ಲೆಡೆ ಮೊಳಗಲಿ

ಉಡುಪಿಯ ಜನರು ಎಲ್ಲದರಲ್ಲೂ ಟಾಪರ್. ಇದು ಮೋದಿಯ ಕಾರಣದಿಂದ ಅಲ್ಲ. ಇದು ನಿಮ್ಮ ವೋಟಿನ ತಾಕತ್ತಿನಿಂದ ಆಗಿದೆ. ಜಗತ್ತಿನಲ್ಲಿ ಭಾರತದ ಗೌರವಗಾನ ಕೇಳಲು ನಿಮ್ಮ ವೋಟು ಕಾರಣ. ನಿಮ್ಮ ಒಂದು ವೋಟಿನಿಂದ ದಿಲ್ಲಿಯಲ್ಲಿ ಸ್ಥಿರ ಸರಕಾರ- ಬಲಿಷ್ಠ ಸರಕಾರ ಬಂದಿದೆ. ಇದರಿಂದಾಗಿ ಜಗತ್ತು ಭಾರತವನ್ನು ಗೌರವಿಸುತ್ತಿದೆ. ಅಂತೆಯೇ ಕರ್ನಾಟಕದ ಹೆಸರು ಇಡೀ ಜಗತ್ತಿನಲ್ಲಿ ಕೇಳಿಸಬೇಕು. ಇಡೀ ಹಿಂದೂಸ್ಥಾನದಲ್ಲಿ, ಅಸ್ಸಾಂ, ಗುಜರಾತ್, ತಮಿಳುನಾಡು, ಜಮ್ಮು ಕಾಶ್ಮೀರದಲ್ಲೂ ಜೈ ಕರ್ನಾಟಕ ಎಂಬ ಘೋಷಣೆ ಕೇಳಬೇಕು. ಅದಕ್ಕಾಗಿ ಭಾಜಪದ ಪೂರ್ಣ ಬಹುಮತದ ಸ್ಥಿರ ಬಲಿಷ್ಠ ಸರಕಾರ ಬರಬೇಕು ಎಂದು ಮೋದಿ ನುಡಿದರು.


ತುಳುನಾಡಿನ ರಾಣಿ ಅಬ್ಬಕ್ಕ, ನಮ್ಮ ಮಹಿಳೆಯರ ಸಾಮರ್ಥ್ಯ ಏನೆಂದು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಮಹಿಳೆಯರನ್ನು ಮತದಾರರಾಗಿ ಮಾತ್ರ ನೋಡಿದೆ. ಸಬಲೀಕರಣ ಮಾಡಿಲ್ಲ. ಮಹಿಳೆಯರ ಮಾನ-ಗೌರವಗಳನ್ನು ಕಾಪಾಡಲು ಕಾಂಗ್ರೆಸ್ ಕೆಲಸ ಮಾಡಲಿಲ್ಲ. ಬಡವರ ಮನೆ ಮನೆಗಳಲ್ಲಿ, ಸರಕಾರಿ ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಅವಮಾನಕರ ಪರಿಸ್ಥಿತಿ ಇತ್ತು. ಇದರಿಂದಾಗಿ ಬಾಲಕಿಯರು ಶಾಲೆ ಬಿಡುವ ಪರಿಸ್ಥಿತಿ ಇತ್ತು. ಇಂತಹ ಸನ್ನಿವೇಶದಲ್ಲಿ ಭಾಜಪ ಸರಕಾರ ಮನೆ ಮನೆಗೆ ಶೌಚಾಲಯವನ್ನು ನಿರ್ಮಿಸಿಕೊಡುವ ಯೋಜನೆ ಮಾಡಿತು.

ಅಡುಗೆ ಮನೆಯಲ್ಲಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಉಜ್ವಲಾ ಯೋಜನೆ, ಕುಡಿಯುವ ನೀರಿಗಾಗಿ ಹರ್ ಘರ್ ಜಲ್ ಯೋಜನೆ ಜಾರಿಗೆ ತಂದಿತು. 

ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಜನರಿಗೆ ಅಡುಗೆ ಅನಿಲ ಸಂಪರ್ಕ ಸಿಗುವುದೇ ದುಸ್ತರವಾಗಿತ್ತು. ಸಂಪರ್ಕ ಇದ್ದವರಿಗೂ ಅಡುಗೆ ಅನಿಲದ ರಿಫಿಲ್ ಸಿಲಿಂಡರ್ ಸಿಗುತ್ತಿರಲಿಲ್ಲ. ಆದರೆ 2014ರಲ್ಲಿ ಮೋದಿ ಸರಕಾರ ಬಂದ ನಂತರ ಈ ಅಭಾವವನ್ನು ದೂರ ಮಾಡಲಾಗಿದೆ ಎಂದು ಮೋದಿ ಹೇಳಿದರು.


ಬಿಜೆಪಿಯ ಡಬಲ್ ಎಂಜಿನ್ ಸರಕಾರವು ಮಹಿಳಾ ಸಶಕ್ತೀಕರಣಕ್ಕಾಗಿ ಯೋಜನೆ ಮಾಡಿದೆ. ಪಿಎಂ ಕಿಸಾನ್ ನಿಧಿಯ ಹಣ 12 ಕೋಟಿ ರೈತರಿಗೆ ದೊರೆತಿದೆ. ಅವರಲ್ಲಿ 3 ಕೋಟಿ ಮಹಿಳಾ ರೈತರಿದ್ದಾರೆ. ಮುದ್ರಾ ಯೋಜನೆ 3 ಕೋಟಿ ಸಾಲ ಕರ್ನಾಟಕಕ್ಕೆ ಸಿಕ್ಕಿದೆ. ಅದರಲ್ಲಿ ಅರ್ಧದಷ್ಟು  ಮಹಿಳೆಯರಿಗೆ ಸಿಕ್ಕಿದೆ. ಪ್ಪಿಎಂ ಆವಾಸ್ ಯೋಜನೆಯಲ್ಲಿ ಬಡವರಿಗಾಗಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಮನೆಗೂ ಲಕ್ಷಾಂತರ ರೂ ವೆಚ್ಚ ಮಾಡಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಜೋಪಡಿಯಲ್ಲಿ ವಾಸಿಸುತ್ತಿದ್ದ ನಮ್ಮ ಸೋದರಿಯರು ಈ ಯೋಜನೆಯಡಿ ಮನೆಯನ್ನು ಪಡೆಯುವ ಮೂಲಕ ಲಕ್ಷಾಧಿಪತಿ ಆಗುತ್ತಾರೆ ಎಂದರೆ ತಪ್ಪಾಗದು ಅಲ್ಲವೆ?  ಇಂದು ಪುಟ್ಟ ಮಕ್ಕಳೂ ಜಿ20 ಬಗ್ಗೆ ಮಾತಾಡುತ್ತಾರೆ. ಜಿ20 ಎಂದರೆ ಏನು? ಸಣ್ಣ ಸಣ್ಣ ನಗರಗಳಲ್ಲೂ ಜಿ20 ಶೃಂಗಸಭೆ ನಡೆಯುತ್ತಿದೆ. ಮಹಿಳೆಯರ ಅಭಿವೃದ್ಧಿಯಷ್ಟೇ ಅಲ್ಲ, ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಬಗ್ಗೆ ಇಂದು ಚರ್ಚೆಗಳು, ಯೋಜನೆಗಳು ನಡೆಯುತ್ತಿವೆ. ಜಿ20 ಶೃಂಗದಲ್ಲೂ ಇದು ಪ್ರತಿಧ್ವನಿಸುತ್ತಿದೆ. ದೇಶದ ಹಲವು ನಗರಗಳಲ್ಲಿ ಜಿ20 ಶೃಂಗಸಭೆಗಳು ನಡೆಯುತ್ತಿವೆ. ಭಾರತದ ಅಭಿವೃದ್ಧಿಯ ಅವಕಾಶಗಳನ್ನು ಜಗತ್ತಿನ ಮುಂದೆ ತೆರೆದಿಡಲಾಗುತ್ತಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

ಮೂಲ್ಕಿಯಲ್ಲಿ ನಮೋ ಗುಡುಗು, ಕರಾವಳಿಯಲ್ಲಿ ಮಿಂಚಿನ ಸಂಚಾರ


ನೀಲಿ ಕ್ರಾಂತಿ (ಬ್ಲೂ ರೆವೊಲ್ಯೂಷನ್) ಗೆ ಮುನ್ನುಡಿ

ಕರ್ನಾಟಕದ ಕರಾವಳಿಯ ಮೀನುಗಾರ ಬಂಧುಗಳನ್ನು ಕಾಂಗ್ರೆಸ್‌ ಅಭಾವದಲ್ಲಿಟ್ಟಿತ್ತು. ಅವರಿಗೆ ಅವಶ್ಯವಿರುವ ಸೌಲಭ್ಯಗಳನ್ನು ಕೊಡದೆ ಕತ್ತಲಲ್ಲಿಟ್ಟಿತ್ತು. ಆದರೆ ಬಿಜೆಪಿ ಸರಕಾರ ಮೀನುಗಾರರಿಗಾಗಿ ಮೊದಲ ಬಾರಿಗೆ ಪ್ರತ್ಯೇಕ ಸಚಿವಾಲಯವನ್ನೇ ರಚಿಸಿತು. ಸಮುದ್ರವೇನು ಮೋದಿ ಸರಕಾರ ಬಂದ ನಂತರ ಸೃಷ್ಟಿಯಾಯಿತೇ? ಮೀನುಗಾರಿಕೆ ನಂತರ ಶುರುವಾಗಿದ್ದೇ? ಆದರೆ ದಿಲ್ಲಿಯಲ್ಲಿ ಕುಳಿತ ಹಿಂದಿನ ಸರಕಾರಗಳಿಗೆ ಇವೆಲ್ಲ ಕಾಣುತ್ತಿರಲಿಲ್ಲ. ಮೋದಿಗೆ ಕಾಣುತ್ತಿತ್ತು ಅಷ್ಟೆ. ಉಡುಪಿಯ ಕರಾವಳಿ ತೀರದಲ್ಲೂ ನಮ್ಮ ಮೀನುಗಾರ ಬಂಧುಗಳು ವಾಸಿಸುತ್ತಿದ್ದಾರೆ ಎಂಬುದು ದಿಲ್ಲಿಯಲ್ಲಿ ಕುಳಿತ ಮೋದಿಗೆ ಕಾಣುತ್ತಿತ್ತು.

ಸ್ವಾತಂತ್ರ್ಯದ ಬಳಿಕ ಮೊದಲ ಬಾರಿ ಮೀನುಗಾರಿಕೆ ಕಲ್ಯಾಣಕ್ಕೆ ಪ್ರತ್ಯೇಕ ಸಚಿವರು, ಪ್ರತ್ಯೇಕ ಬಜೆಟ್‌, ಸ್ವತಂತ್ರ ಕಾರ್ಯ ನಿರ್ವಹಣೆಯ ಅಧಿಕಾರ ನೀಡಲಾಯಿತು.


ಭಾರತದ ಕರಾವಳಿ ತೀರದ ಅಭಿವೃದ್ಧಿ, ಮೀನುಗಾರರ ಅಭಿವೃದ್ಧಿ, ಬ್ಲೂ ಎಕಾನಮಿಗೆ ಬಿಜೆಪಿ ಪ್ರತ್ಯೇಕವಾದ 'ಬ್ಲೂ ರೆವಲ್ಯೂಷನ್ ರೋಡ್ ಮ್ಯಾಪ್' ರೂಪಿಸಿದೆ. ಪಿಎಂ ಮತ್ಸ್ಯ ಸಂಪದ ಯೋಜನೆ, ಕರ್ನಾಟಕದಲ್ಲಿ 

ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರಕಾರ ಜಾರಿಗೊಳಿಸಿರುವ ಮತ್ಸ್ಯ ಸಿರಿ ಯೋಜನೆ ಮಹತ್ವದ್ದಾಗಿದೆ. ಬಿಜೆಪಿ ಸರಕಾರ ಮೊದಲ ಬಾರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಕಡಿಮೆ ಬಡ್ಡಿದರಕ್ಕೆ ಮೀನುಗಾರರಿಗೆ ಸಾಲ ದೊರಕಿಸಿ ಕೊಟ್ಟಿದೆ. ಕೋಟ್ಯಂತರ ಮೀನುಗಾರರು ಇದರ ಲಾಭ ಪಡೆದಿದ್ದಾರೆ. ಅವರ ಮಕ್ಕಳ ಭಾಗ್ಯ ಬದಲಿಸಲು ಕೃತಸಂಕಲ್ಪರಾಗಿದ್ದೇವೆ ಎಂದು ಮೋದಿ ನುಡಿದರು.


ಒಳನಾಡು ಮೀನುಗಾರಿಕೆ, ಅಕ್ವಾ ಕಲ್ಚರ್‌ಗೆ ಡಬಲ್ ಎಂಜಿನ್ ಸರಕಾರ ಆದ್ಯತೆ ನೀಡಿದೆ. 2014ರ ಮೊದಲು ಒಳನಾಡ ಮೀನು ಉತ್ಪಾದನೆ- 60 ಲಕ್ಷ ಟನ್ ಆಗಿತ್ತು. 201ರಲ್ಲಿ ಮೋದಿ ಸರಕಾರ ಬಂದ ನಂತರ ಕೇವಲ  9 ವರ್ಷಗಳಲ್ಲಿ ಇದು ದ್ವಿಗುಣವಾಗಿ 120 ಲಕ್ಷ ಟನ್‌ಗೆ ಹೆಚ್ಚಿದೆ. ಇಂತಹ ಕೆಲಸ ಮಾಡುವ ಜನರು ನಿಮಗೆ ಬೇಕೇ? ರಿವರ್ಸ ಗೇರ್‌ನ ಕಾಂಗ್ರೆಸ್ ಬೇಕೆ?  ಇದರ ಲಾಭ ದ.ಕ ಉಡುಪಿಯಂತಹ ಕ್ಷೇತ್ರಗಳ ಮೀನುಗಾರರಿಗೆ ಲಭಿಸಿದೆ. ಸಮುದ್ರದ ಅಲೆಗಳ ಜತೆಗೆ ಎಲ್ಲ ಮೀನುಗಾರರು- 'ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರಕಾರ' ಎಂದು ಹಾಡುತ್ತಿದ್ದಾರೆ.


ಬ್ಯಾಂಕಿಂಗ್ ಹಬ್:

ದಕ್ಷಿಣ ಕನ್ನಡ, ಉಡುಪಿಯ ಈ ಕ್ಷೇತ್ರ ಬಹುದೊಡ್ಡ ಆರ್ಥಿಕ ಮತ್ತು ಹಣಕಾಸು ಚಟುವಟಿಕೆಗಳ ಹಬ್ ಆಗಿದೆ. ಬ್ಯಾಂಕಿಂಗ್ ವಲಯಕ್ಕೆ  ಹೊಸ ದಿಕ್ಕು ತೋರಿದ ನಾಡು ಇದು. ಬ್ಯಾಂಕಿಂಗ್‌ನ ತೊಟ್ಟಿಲು. ದೇಸದ ನಾನಾ ಭಾಗಗಳಿಂದ ಯುವಕರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ಶಿಕ್ಷಣ ಸಂಸ್ಥೆಗಳು ದೇಶದಲ್ಲೇ ಖ್ಯಾತಿ ಪಡೆದಿವೆ. ಎಲ್ಲ ವಲಯಗಳಲ್ಲಿ ಕರ್ನಾಟಕದ ಯುವಕರಿಗೆ ದೊಡ್ಡ ದೊಡ್ಡ ಅವಕಾಶಗಳು ಲಭ್ಯವಿದೆ. ಈ ನಾಡಿನ ಯುವಶಕ್ತಿಗೆ ಹೃದಯದಿಂದ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು ಮೋದಿ.


ಸ್ಟಾರ್ಟಪ್ ಕ್ರಾಂತಿ:

ಕರ್ನಾಟಕದ ಇಂದು ಭಾರತದಲ್ಲಿ ಸ್ಟಾರ್ಟಪ್ ಕ್ರಾಂತಿಯನ್ನೇ ಮಾಡಿದೆ. ಕರ್ನಾಟಕವು ಇಂದು ಬಹುದೊಡ್ಡ ವ್ಯಾಲ್ಯೂ ಕ್ರಿಯೇಟರ್ ಆಗಿದೆ. ನಾವು ಹಲವು ಸೆಕ್ಟರ್‌ಗಳನ್ನು ಖಾಸಗಿಯವರಿಗೆ ತೆರೆದಿದ್ದೇವೆ. ಬಾಹ್ಯಾಕಾಶದಲ್ಲಿ ಖಾಸಗಿ ಪಾಲುದಾರಿಕೆಗೆ ಅವಕಾಶ ನೀಡಿದ್ದೇವೆ. ಕರ್ನಾಟಕದ ಯುವಕರು ಇಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ನನ್ನ ಕನ್ನಡಿಗರು ಹಿಂದೂಸ್ಥಾನದ ಬಾವುಟವನ್ನು ಜಗತ್ತಿನೆಲ್ಲೆಡೆ ಹಾರಿಸುತ್ತಿದ್ದಾರೆ .

ರಾಕೆಟ್, ಉಪಗ್ರಹಗಳನ್ನು ತಯಾರಿಸುತ್ತಿದ್ದಾರೆ ಕನ್ನಡಿಗರು. ಎಚ್‌ಎಎಲ್ ಅತಿ ಹೆಚ್ಚು ಲಾಭ ಮಾಡಿದೆ. ಈ ಕೆಲಸ ಮಾಡಿದ ಕನ್ನಡಿಗರಿಗೆ ಇದುವರೆಗೂ ಈ ಸಾಧನೆ ಮಾಡಲು ಯಾಕೆ ಸಾಧ್ಯವಾಗಲಿಲ್ಲ?  

ಮೊದಲ ಬಾರಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಸರಕಾರ ಬೇಕು. ಭಾಜಪಾ ಅಧಿಕಾರಕ್ಕೆ ಬಂದ ಬಳಿಕ ಹಲವು ಅಸಾಧ್ಯಗಳು ಸಾಧ್ಯವಾಯಿತು. ಭವಿಷ್ಯದ ದೃಷ್ಟಿಕೋನವಿಟ್ಟುಕೊಂಡು ದೂರದೃಷ್ಟಿಯ ಯೋಜನೆಗಳನ್ನು ಬಿಜೆಪಿ ರೂಪಿಸುತ್ತದೆ.


ಆವಿಷ್ಕಾರಗಳಿಗೆ ಪ್ರೋತ್ಸಾಹ:

ಯುವಕರಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲ ಮಾಡಿಕೊಡುವುದು ಸರ್ವೋಚ್ಚ ಎಂದು ಬಿಜೆಪಿ ಭಾವಿಸಿದೆ. ಅವರ ಸಾಮರ್ಥ್ಯದ ಪ್ರದರ್ಶನಕ್ಕೆ ಎಲ್ಲ ಅವಕಾಶ ಒದಗಿಸುತ್ತಿದ್ದೇವೆ. ಜಾಗತಿಕ ವೇದಿಕೆಯಲ್ಲಿ ಭಾರತದ ಶಕ್ತಿಯ ಚರ್ಚೆಯಾಗುತ್ತಿದೆ. ಇಂದು ಭಾರತದಲ್ಲಿ 1 ಲಕ್ಷ ಸ್ಟಾರ್ಟಪ್ ಗಳು ಶುರುವಾಗಿದೆ. ನಮ್ಮ ಯುವಕರು ಯುನಿಕಾರ್ನ್ ಸ್ಥಾನಮಾನ ಗಳಿಸಿದ್ದಾರೆ. ಅದರ ಬೆಲೆ 1 ಬಿಲಿಯ ಡಾಲರ್- 8 ಸಾವಿರ ಕೋಟಿ ರೂ ಮೌಲ್ಯ. ಬಿಜೆಪಿ ಸರಕಾರ ಸ್ಟಾರ್ಟಪ್ ವ್ಯವಸ್ಥೆಗೆ ಪಾಲಿಸಿ ಸಪೋರ್ಟ್ ನೀಡುತ್ತಿದೆ. ನಾವು ಭವಿಷ್ಯಕ್ಕಾಗಿ ಲಕ್ಷಾಂತರ ಇನ್ನೋಟರ್‌ಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಇಂದು ದೇಶದಲ್ಲಿ 10 ಸಾವಿರ ಅಟಲ್ ಟಿಂಕರಿಂಗ್ ಲ್ಯಾಬ್ ಗಳಿವೆ. ಅವುಗಳಲ್ಲಿ 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಸ ಹೊಸ ಆವಿಷ್ಕಾರಗಳ ಸಂಂಭವನೀಯತೆಯ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಅಟಲ್‌ ಟಿಂಕರಿಂಗ್ ಲ್ಯಾಬ್‌ಗಳು ಸ್ಟಾರ್ಟಪ್ ನರ್ಸರಿಯ ರೀತಿ ಕೆಲಸ ಮಾಡುತ್ತಿವೆ. ಇದರಿಂದಾಗಿ ನೂತನ ಆವಿಷ್ಕಾರಗಳ ಹೊಸ ಅಲೆಯೇ ಬರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.


ಇಂದು ಭಾರತದ ಆರ್ಥಿಕತೆ ವಿಶ್ವದಲ್ಲಿ 5ನೇ ಸ್ಥಾನಕ್ಕೆ ಏರಿದೆ. 10ರಿಂದ 9ಕ್ಕೆ ಏರಿದಾಗ ಯಾರೂ ಮಾತನಾಡಲಿಲ್ಲ. 9ರಿಂದ 8ಕ್ಕೆ  8ರಿಂದ 7ಕ್ಕೆ, 7ರಿಂದ 6ನೇ ಸ್ಥಾನಕ್ಕೆ ಬಂದಾಗ ಮೋದಿ ಏನೋ ಮಾಡುತ್ತಿದ್ದಾರೆ ಎಂಬುದು ಗೊತ್ತಾಯಿತು. ಇಂದು ಇಡೀ ಜಗತ್ತಿಗೇ ಗೊತ್ತಾಗಿದೆ. ದೇಶದ ಆರ್ಥಿಕತೆ 5ನೇ ಸ್ಥಾನಕ್ಕೆ ಬಂದ ಬಳಿಕ ಹೊಸ ಉತ್ಸಾಹ ಕಾಣಿಸುತ್ತಿದೆ. ನಮ್ಮ ಮುಂದೆ ಇಂಗ್ಲೆಂಡ್ ಇತ್ತು. ನಮ್ಮನ್ನು ಗುಲಾಮರನ್ನಾಗಿ ಮಾಡಿದ ದೇಶ ಅದು. ಮೋದಿ ಸರಕಾರ ಅದನ್ನು ಹಿಂದಿಕ್ಕಿ ಭಾರತವನ್ನು 5ನೇ ಸ್ಥಾನಕ್ಕೆ ಏರಿಸಿದೆ. ಇದಕ್ಕೆ ನಿಮಗೆ ಹೆಮ್ಮೆಯಲ್ಲವೇ? ನಿಮ್ಮ ಸಹಾಯ ನನಗೆ ಬೇಕು. ನೀಡುವಿರಾ? ಭಾರತದ ಅರ್ಥಿಕತೆಯನ್ನು ಜಗತ್ತಿನಲ್ಲೇ 3ನೇ ಸ್ಥಾನಕ್ಕೆ ಒಯ್ಯಬೇಕು. ಅದಕ್ಕೆ ಕರ್ನಾಟಕದ ಸಹಾಯದ ಹೊರತು ನಾನು ಮುಂದುವರಿಯಲು ಸಾಧ್ಯವಿಲ್ಲ. ಅದಕ್ಕಾಗಿ ಕರ್ನಾಟಕದಲ್ಲಿ ಭಾಜಪ ಸರಕಾರ ಬರಬೇಕು. ಮೇ 10ಕ್ಕೆ ನಿಮ್ಮ ವೋಟು ಕರ್ನಾಟಕದ ಭವಿಷ್ಯ ಬರೆಯುತ್ತದೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರಕಾರ- ಈ ಸಂಕಲ್ಪವನ್ನು ನೀವು ಸಾಕಾರಗೊಳಿಸಬೇಕು ಎಎಂದು ಪ್ರಧಾನಿ ಮನವಿ ಮಾಡಿದರು.


ಮನೆ ಮನೆ ಪ್ರಚಾರ ಮಾಡಿ:

ಮನೆ ಮನೆಗೆ ತೆರಳಿ, ಮತದಾರರಿಗೆ ಮನವರಿಕೆ ಮಾಡಿ. ಹೆಚ್ಚು ಹೆಚ್ಚು ಮತದಾನ ಮಾಡಿಸಿ, ಬಿಜೆಪಿ ಬಗ್ಗೆ ಕರ್ನಾಟಕದ ಉಜ್ವಲ ಭವಿಷ್ಯ ಬಗ್ಗೆ ಹೇಳಿ. ಇದು ನನ್ನ ವೈಯಕ್ತಿಕ ಕೆಲಸ. ಇದನ್ನು ನೀವು ಮಾಡುವಿರಾ? ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ, ನೆರೆದ ಲಕ್ಷಾಂತರ ಬೆಂಬಲಿಗರಿಗೆ ಮೊಬೈಲ್ ಫೋನ್ ಲೈಟ್ ಬೆಳಗಿಸಿ ಬೆಂಬಲ ಸೂಚಿಸುವಂತೆ ಕರೆ ನೀಡಿದರು. ದಿಲ್ಲಿಯಿಂದ ಮೋದಿ ಮೂಲ್ಕಿಗೆ ಬಂದಿದ್ದರು. ಅವರು ನಿಮಗೆ ನಮಸ್ಕಾರ ತಿಳಿಸಿದ್ದಾರೆ ಎಂದು ಮನೆ ಮನೆಗೆ ತಲುಪಿಸಿ ಎಂದು ಮೋದಿ ಮನವಿ ಮಾಡಿದರು. ನಿಮ್ಮ ಆಶೀರ್ವಾದದಿಂದ ನನ್ನ ಶಕ್ತಿ ಹೆಚ್ಚುತ್ತದೆ. ಈಗ ಮಾಡಿರುವ ಅನೇಕ ಪಟ್ಟು ಕೆಲಸಗಳನ್ನು ಮುಂದೆ ಮಾಡುತ್ತೇನೆ. ನನಗೆ ಎಲ್ಲ ಪರಿವಾರದಿಂದ ಆಶೀರ್ವಾದ ಬೇಕು ಎಂದ ಪ್ರಧಾನಿ, ಕೊನೆಗೆ ಬಜರಂಗ್ ಬಲಿ ಕೀ ಜೈ... ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳೊಂದಿಗೆ ಭಾಷಣ ಕೊನೆಗೊಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top