ಮೂಲ್ಕಿಯಲ್ಲಿ ನಮೋ ಗುಡುಗು, ಕರಾವಳಿಯಲ್ಲಿ ಮಿಂಚಿನ ಸಂಚಾರ

Upayuktha
0

ಪ್ರಧಾನಿ ಮೋದಿ ಸಮಾವೇಶಕ್ಕೆ ಹರಿದು ಲಕ್ಷಾಂತರ ಜನರ ಪ್ರವಾಹ


ಮೂಲ್ಕಿ: ಶಿಕ್ಷಣ, ಬ್ಯಾಂಕಿಂಗ್, ಕೌಶಲ್ಯಭರಿತ ಮಾನವ ಸಂಪನ್ಮೂಲ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳು ಇಡೀ ಕರ್ನಾಟಕದಲ್ಲೇ ನಂ.1 ಆಗಿವೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಕರಾವಳಿ ಕರ್ನಾಟಕದ ಕೊಡುಗೆ ಬಹಳ ದೊಡ್ಡದು. ಅದೇ ರೀತಿ ಭಾರತದ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಮಹತ್ವದ್ದು. ಇಂತಹ ಅಭಿವೃದ್ಧಿಯ ಸರಪಳಿ ಮುಂದುವರಿಯಲು ಈ ಬಾರಿ ಬಹುಮತದ ಬಿಜೆಪಿ ಸರಕಾರ ಮರಳಿ ಅಧಿಕಾರಕ್ಕೆ ಬರಬೇಕು ಎಂದು ಪ್ರಧಾನಿ ನರೇದ್ರ ಮೋದಿ ಹೇಳಿದರು.


ಮೂಲ್ಕಿಯಲ್ಲಿ ಇಂದು ಬೆಳಗ್ಗೆ ಕರಾವಳಿ ಕರ್ನಾಟಕದ ಬೃಹತ್ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿದ ಕಾಂಗ್ರೆಸ್‌ ಪ್ರಣಾಳಿಕೆಯನ್ನು ತೀವ್ರವಾಗಿ ಖಂಡಿಸಿದರು.


ವೇದಿಕೆಗೆ ಬರುತ್ತಿದ್ದಂತೆಯೇ ತುಳುನಾಡಿನ ಎಲ್ಲ ಮಠಗಳು, ದೇವಸ್ಥಾನಗಳಿಗೆ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ತುಳುವಿನಲ್ಲಿ- ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೆಗ್ ಎನ್ನ ಸೊಲ್ಮೆಲು ಎಂದು ಭಾಷಣ ಆರಂಭಿಸಿದರು. ಮೋದಿ ಅವರ ತುಳು ಮಾತುಗಳನ್ನು ಕೇಳುತ್ತಲೇ ಸಭಾಂಗಣದಲ್ಲಿ ಸೇರಿದ್ದ ಎರಡೂವರೆ ಲಕ್ಷಕ್ಕೂ ಅಧಿಕ ಜನಸ್ತೋಮದಿಂದ ಹರ್ಷೋದ್ಗಾರ ಕೇಳಿಬಂತು. ಬಳಿಕ ಮೂಲ್ಕಿಯ ವೆಂಕಟರಮಣ ಸ್ವಾಮಿ, ಶಾಂತಿ ಮತ್ತು ಸದ್ಭಾವ ಸಾರುವ ಕರಾವಳಿಯ ಎಲ್ಲ ಮಠಗಳು, ದೇವಸ್ಥಾನಗಳು, ಸಂತರಿಗೆ ನಮಿಸಿ ಪ್ರಧಾನಿ ಮಾತು ಮುಂದುವರಿಸಿದರು.


ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿದ ಕಾಂಗ್ರೆಸ್ ಪ್ರಣಾಳಿಕೆಯನ್ನು ತಮ್ಮದೇ ಶೈಲಿಯಲ್ಲಿ ಖಂಡಿಸಿದ ಪ್ರಧಾನಿ ಭಾರತ್ ಮಾತಾ ಕೀ, ಬಜರಂಗ್ ಬಲಿ ಕೀ ಜೈ ಎಂದು ಘೋಷಣೆ ಮೊಳಗಿಸಿದಾಗ ಪ್ರೇಕ್ಷಕರಿಂದಲೂ ಅದು ಪ್ರತಿಧ್ವನಿಸಿತು. ನಿಮ್ಮ ಈ ಧ್ವನಿ ದಿಲ್ಲಿಯವರೆಗೂ ಕೇಳಿಸಲಿ ಎಂದು ಪ್ರಧಾನಿ ಹೇಳಿದರು.


ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೆಗ್ ಎನ್ನ ಸೊಲ್ಮೆಲು. ಶ್ರೀ ಮೂಲ್ಕಿ ವೆಂಕಟರಮಣ ಸ್ವಾಮಿಗೆ ನಮಸ್ಕರಿಸಿ, ಶಾಂತಿ ಮತ್ತು ಸದ್ಭಾವದ ಸಂದೇಶ ನೀಡುವ ಎಲ್ಲ ಮಠಗಳು, ತೀರ್ಥಕರರು, ಮತ್ತು ಸಂತರಿಗೆ ಶ್ರದ್ಧಾಪೂರ್ವಕ ನಮಿಸುತ್ತೇನೆ. ಕಳೆದ ವರ್ಷ ನನಗೆ ಶಿವಗಿರಿಯ ಶ್ರೀ ನಾರಾಯಣಗುರುಗಳ ಮಠದಲ್ಲಿ ಗುರುಗಳಿಂದ ಆಶೀರ್ವಾದ  ಪಡೆಯುವ ಸೌಭಾಗ್ಯ ದೊರಕಿತ್ತು ಎಂದು ಪ್ರಧಾನಿ ನುಡಿದರು.


ಪ್ರಧಾನಿ ಮೋದಿ ಅವರ ಹಿಂದಿ ಭಾಷಣದ ಅನುವಾದಕ್ಕೆ ವ್ಯವಸ್ಥೆ ಮಾಡಲಾಗಿದ್ದರೂ, ಸ್ವತಃ ಪ್ರಧಾನಿ ಅವರೇ ಜನಸ್ತೋಮಕ್ಕೆ ಭಾಷಾಮತರದ ಅಗತ್ಯವಿದೆಯೇ ಎಂದು ಕೇಳಿದರು. ಜನರಿಂದ ಹರ್ಷೋದ್ಗಾರದ ಜತೆಗೆ ಅನುವಾದ ಬೇಡ ಎಂಬ ಉತ್ತರ ಬಂದುದರಿಂದ ಹಿಂದಿಯಲ್ಲಿ ಮಾತು ಮುಂದುವರಿಸಿದರು. ಜನತಾ ಜನಾರ್ದನನ ಆದೇಶವನ್ನು ಶಿರಸಾವಹಿಸಿ ಪಾಲಿಸುವೆ. ದೇಶದ 140 ಕೋಟಿ ಜನರೇ ನನ್ನ ರಿಮೋಟ್ ಕಂಟ್ರೋಲ್. ನಿಮ್ಮ ಆದೇಶ ಪಾಲಿಸುವೆ ಎಂದು ಮೋದಿ ಹೇಳಿದರು.


ಸುಮಾರು 45 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ಮೋದಿ, ನಡುನಡುವೆ ಕನ್ನಡದಲ್ಲಿ ಸಹೋದರ, ಸಹೋದರಿಯರೇ, ಬಂಧು-ಭಗಿನಿಯರೇ, ಸ್ನೇಹಿತರೇ ಎಂದು ಸಂಬೋಧಿಸುತ್ತ ಕನ್ನಡಿಗರ ಮನಗೆದ್ದರು.


ಸಹೋದರ ಸಹೋದರಿಯರೇ, ಮುಂದಿನ ಬುಧವಾರ, ಮೇ 10ರಂದು ಚುನಾವಣೆ. ಮತದಾನದ ದಿನ ದೂರವಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ನಂ 1 ಮಾಡುವುದು. ಕರ್ನಾಟಕದಲ್ಲಿ ಆಧುನಿಕ ಮೂಲಸೌಕರ್ಯ ನಿರ್ಮಿಸುವುದು, ಕರ್ನಾಟಕವನ್ನು ಮ್ಯಾನ್ಯುಫಾಕ್ಚರಿಂಗ್ ಸೂಪರ್ ಪವರ್ ಆಗಿ ಅಭಿವೃದ್ಧಿಪಡಿಸುವುದು ನಮ್ಮ ಮುಂದಿನ ವರ್ಷಗಳ ರೋಡ್ ಮ್ಯಾಪ್ ಎಂದು ಪ್ರಧಾನಿ ಮೋದಿ ಹೇಳಿದರು.


ಮೋದಿ ಮಾತಿನ ಮೋಡಿ: ಪೂರ್ಣ ವಿವರ ಇಲ್ಲಿ ಓದಿ


ಈ ಚುನಾವಣೆಗಾಗಿ ಕಾಂಗ್ರೆಸ್‌ ಕೂಡ ಓಟು ಕೇಳುತ್ತಿದೆ. ಆದರೆ ಅದು ಏನು ಹೇಳುತ್ತಿದೆ ಗಮನಿಸಿದ್ದೀರಾ? ನಮ್ಮ ಒಬ್ಬ ನಾಯಕ ನಿವೃತ್ತರಾಗುತ್ತಿದ್ದಾರೆ. ಅವರಿಗೆ ಮತ ಹಾಕಿ ಎಂದು ಕೇಳುತ್ತಿದೆ. ನಿವೃತ್ತನಾಗುವುದಾಗಿ ಹೇಳಿದ ತನ್ನ ಒಬ್ಬ ನಾಯಕನಿಗಾಗಿ ಅದು ನಿಮ್ಮ ಮತಗಳನ್ನು ಕೇಳುತ್ತಿದೆ. ಬಿಜೆಪಿ ಸರಕಾರದ ನಿರ್ಧಾರಗಳನ್ನು, ರಾಜ್ಯದ ಅಭಿವೃದ್ಧಿಗಾಗಿ ಕೈಗೊಂಡ ಕ್ರಮಗಳನ್ನು, ಜನಹಿತದ ಕಾರ್ಯಕ್ರಮಗಳನ್ನು ಎಲ್ಲವನ್ನೂ ರದ್ದು ಮಾಡುವುದಕ್ಕಾಗಿ 'ರಿವರ್ಸ್ ಗೇರ್‌'ನ ಕಾಂಗ್ರೆಸ್ ನಿಮ್ಮ ಮತಗಳನ್ನು ಕೇಳುತ್ತಿದೆ. ಅಂತಹ ಕಾಂಗ್ರೆಸ್ ನಿಮಗೆ ಬೇಕೆ? ಎಂದು ಪ್ರಧಾನಿ ಪ್ರಶ್ನಿಸಿದರು.

 

ಕಳೆದ ನಾಲ್ಕಾರು ದಿನಗಳಿಂದ ಚುನಾವಣೆ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದೇನೆ. ಸಣ್ಣ ಪುಟ್ಟ ಮಕ್ಕಳೂ ಹೇಳುತ್ತಿದ್ದಾರೆ. ಮಹಿಳೆಯರು, ರೈತರು- ಎಲ್ಲರ ಮುಖದಲ್ಲಿ ಉತ್ಸಾಹ ಕಾಣುತ್ತಿದೆ. ಎಲ್ಲ ಕಡೆ ನನಗೆ ಒಂದೇ ಧ್ವನಿ, ಒಂದೇ ಸಂದೇಶ ಕೇಳುತ್ತಿದೆ, ಒಂದೇ ಉತ್ಸಾಹ ಕಾಣುತ್ತಿದೆ. ಅದು- 'ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರಕಾರ' ಎಂದು ಪ್ರಧಾನಿ ನುಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top