ಧರ್ಮಸ್ಥಳದಲ್ಲಿ 201 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

Upayuktha
0

 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ


ನೂತನ ದಂಪತಿಗಳು ಪರಸ್ಪರ ಹೊಂದಾಣಿಕೆಯೊಂದಿಗೆ ಸಹನೆ, ತಾಳ್ಮೆಯಿಂದ ಸಾರ್ಥಕಜೀವನ ನಡೆಸಿ : ಡಿ. ವೀರೇಂದ್ರ ಹೆಗ್ಗಡೆ

ಚಲನಚಿತ್ರ ನಟ ದರ್ಶನ್ ತೂಗುದೀಪ ಶುಭ ಹಾರೈಸಿದರು


ಉಜಿರೆ:
ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ಸಂಜೆಗಂಟೆ 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 201 ಜೋಡಿ ವಧು-ವರರುದಾಂಪತ್ಯಜೀವನಕ್ಕೆ ಪಾದಾರ್ಪಣೆ ಮಾಡಿದರು.


ಭವ್ಯ ಮೆರವಣಿಗೆಯಲ್ಲಿ ವಧು-ವರರುದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ದರ್ಶನ್‍ ತೂಗುದೀಪ, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರ ಕುಮಾರ್ ಮತ್ತು ಗಣ್ಯ ಅತಿಥಿಗಳು ಮಂಗಲಸೂತ್ರವನ್ನು ವಿತರಿಸಿದರು. 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವೇದ, ಮಂತ್ರ ಘೋಷ ಪಠಣದೊಂದಿಗೆ ವರನು ವಧುವಿಗೆ ಮಂಗಲಸೂತ್ರಧಾರಣೆ ಮಾಡಿ, ಆಯಾಜಾತಿ ಸಂಪ್ರದಾಯದಂತೆ ಮದುವೆಯಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.


ವಧು-ವರರ ಪ್ರಮಾಣ ವಚನ: ಧರ್ಮಸ್ಥಳದಲ್ಲಿ ಮಂಗಲ ಮುಹೂರ್ತದಲ್ಲಿ ವಧು-ವರರಾಗಿ ಪವಿತ್ರ ಬಾಂಧವ್ಯ ಹೊಂದಿರುವ ನಾವು ಮುಂದೆ ಜೀವನದಲ್ಲಿ ಧರ್ಮ, ಅರ್ಥ ಮತ್ತು ಕಾಮದಲ್ಲಿ ಸಹಚರರಾಗಿ, ಪರಸ್ಪರ ಪ್ರೀತಿ-ವಿಶ್ವಾಸದಿಂದಒಬ್ಬರಿಗೊಬ್ಬರು ವಂಚನೆ ಮಾಡದೆ, ಯಾವುದೇದುರಭ್ಯಾಸಕ್ಕೂತುತ್ತಾಗದೆ ಬದುಕುತ್ತೇವೆಎಂಬುದಾಗಿ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತೇವೆ.


ಮದುವೆಯ ವಿವರ: ಅಂತರ್ಜಾತಿ ವಿವಾಹ: 52, ಪರಿಶಿಷ್ಟ ಜಾತಿ: 52, ಕುರುಬ:9, ವೀರಶೈವರು:9, ಪರಿಶಿಷ್ಟ ವರ್ಗ:11 ಉಳಿದ 68 ಜೊತೆ ಇತರ ಜಾತಿಗೆ ಸೇರಿದವರು.

ಕೇರಳದಿಂದ ಮೂರು ಜೊತೆ ಹಾಗೂ ಆಂಧ್ರಪ್ರದೇಶದ ಒಂದು ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾದರು.


ಮುಖ್ಯಾಂಶಗಳು:

  • 1972 ರಲ್ಲಿ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದ್ದು ಪ್ರತಿವರ್ಷ ನಡೆಸಲಾಗುತ್ತದೆ. ಕಳೆದ ವರ್ಷದವರೆಗೆ 12,576 ಜೊತೆ ವಿವಾಹವಾಗಿದ್ದು ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
  • ಈವರೆಗೆ ಒಂದು ಕೂಡಾ ವಿಚ್ಛೇದನ ಪ್ರಕರಣ ವರದಿಯಾಗಿಲ್ಲ ಎಂಬುದು ಗಮನಾರ್ಹವಾಗಿದೆ.
  • ಧರ್ಮಸ್ಥಳದಲ್ಲಿ ಆರಂಭಿಸಿದ ಸಾಮೂಹಿಕ ವಿವಾಹವನ್ನು ಮಾದರಿಎಂದು ಮಾನ್ಯತೆ ನೀಡಿ ಸರ್ಕಾರ, ಇತರ ದೇವಸ್ಥಾನಗಳು, ಮಠ-ಮಂದಿರಗಳು, ರೋಟರಿಕ್ಲಬ್‍ನಂತಹ ಸೇವಾಸಂಸ್ಥೆಗಳು ಅನುಸರಿಸುತ್ತಿರುವ ಬಗ್ಯೆ ಡಿ. ವೀರೇಂದ್ರ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸುತ್ತಾರೆ.
  • ಹಿರಿಯರಒಪ್ಪಿಗೆಯೊಂದಿಗೆಅಂತರ್‍ಜಾತೀಯ ವಿವಾಹಕ್ಕೂ ಅವಕಾಶ ನೀಡಲಾಗುತ್ತದೆ.
  • ಸಾಮೂಹಿಕ ವಿವಾಹದಲ್ಲಿ ಮದುವೆಯಾದವರಿಗೆ ಇಲಾಖಾ ಅಧಿಕಾರಿಗಳಿಂದ ವಿವಾಹ ನೋಂದಣಿ ಪ್ರಮಾಣ ಪತ್ರಕೂಡಾಒದಗಿಸಲಾಗುತ್ತದೆ.
  • 12777ನೆ ಜೋಡಿಯಾದ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಸಿಬ್ಬಂದಿಗಳಾದ ಪ್ರಸಾದ್ ಮತ್ತು ಅಶ್ವಿನಿ ದಂಪತಿಗೆಉನ್ನತ ಸ್ಥಾನ ನೀಡಿ ವಿಶೇಷ ಗೌರವ ನೀಡಲಾಯಿತು.
  • ನೂತನ ದಂಪತಿಗಳಿಗೆ ಧರ್ಮಸ್ಥಳದ ವತಿಯಿಂದ ವಿಶೇಷ ಉಡುಗೊರೆ ನೀಡಲಾಯಿತು. 


ಮದುವೆಯಾಗಿ ಬಂದಗೃಹಿಣಿ ಭಾಗ್ಯಲಕ್ಷ್ಮಿಯಾಗಿ ಮನೆಯನ್ನೇ ಬೆಳಗಿ ಸ್ವರ್ಗವನ್ನಾಗಿ ಮಾಡುತ್ತಾಳೆ. ಪತಿ-ಪತ್ನಿ ಪರಸ್ಪರ ಹೊಂದಾಣಿಕೆ, ತಾಳ್ಮೆ ಮತ್ತು ಸಹನೆಯಿಂದ ಸುಖ-ಕಷ್ಟವನ್ನು ಸಮಾನವಾಗಿ ಸ್ವೀಕರಿಸಿ ಅನುಭವಿಸಿ, ಸಾರ್ಥಕ ದಾಂಪತ್ಯ ಜೀವನ ನಡೆಸಬೇಕು. ಆಗ ಮನೆಯೇ ಮಂದಿರವಾಗುತ್ತದೆ. ಸ್ವರ್ಗ ಸುಖವನ್ನು ಅನುಭವಿಸಬಹುದು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನೂತನ ದಂಪತಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.


ಸಾಮೂಹಿಕ ವಿವಾಹ ಸರಳವಾಗಿ ಕಡಿಮೆ ವೆಚ್ಚದಲ್ಲಿ ನಡೆಯುತ್ತದೆ. ಆದರೆ ಅಲ್ಪ ಅಲ್ಲ ಎಂದು ಹೆಗ್ಗಡೆಯವರು ಸ್ಪಷ್ಟಪಡಿಸಿದರು. 


ಮದುವೆಗಾಗಿ ದುಂದು ವೆಚ್ಚ ಮಾಡಬಾರದು. ನಿಶ್ಚಿತಾರ್ಥ, ಮೆಹೆಂದಿ ಮೊದಲಾದ ಕಾರ್ಯಕ್ರಮಗಳಿಗೂ ದುಂದುವೆಚ್ಚ ಮಾಡದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಮೂಲಕ ಜನರಲ್ಲಿ ಅರಿವು, ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು. 


ಸಾಮೂಹಿಕ ವಿವಾಹವನ್ನು ವೈಭವೀಕರಿಸುವುದಕ್ಕಾಗಿ ಚಲನಚಿತ್ರ ನಟದರ್ಶನ್‍ತೂಗುದೀಪ್‍ ಅವರನ್ನು ಆಹ್ವಾನಿಸಲಾಗಿದೆ. ತಾನು ಕೂಡಾ ಅವರ ಅಭಿಮಾನಿಯಾಗಿದ್ದು ಅವರ ಮಾನವೀಯತೆ ಸೇವಾ ಕಳಕಳಿ, ಪರಿಸರ ಪ್ರೇಮ, ಪ್ರಾಣಿ-ಪಕ್ಷಿಗಳ ಬಗ್ಗೆ ಒಲವು   ಮತ್ತು ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು. 


ಶುಭಾಶಂಸನೆ ಮಾಡಿ ಮಾತನಾಡಿದ ಚಲನಚಿತ್ರ ನಟ ದರ್ಶನ್‍ತೂಗುದೀಪ್‍ ತಾನು ಕೂಡಾ ಧರ್ಮಸ್ಥಳದಲ್ಲೇ ಮದುವೆಯಾಗಿರುವುದನ್ನು ಸ್ಮರಿಸಿದರು. ಪೂಜ್ಯ ಹೆಗ್ಗಡೆಯವರ ಆಶೀರ್ವಾದದಿಂದ ತಾನು ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದರು. ನೂತನ ದಂಪತಿಗಳು ಪರಸ್ಪರ ಅರಿತುಕೊಂಡು, ಗೌರವಿಸಿ, ಪ್ರೀತಿ ವಿಶ್ವಾಸದಿಂದ ಸಾರ್ಥಕಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು. 


ಹೇಮಾವತಿ ವಿ. ಹೆಗ್ಗಡೆ, ಶ್ರದ್ಧಾಅಮಿತ್, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್. ಸುಪ್ರಿಯಾ ಹರ್ಷೇಂದ್ರಕುಮಾರ್, ಶ್ರುತಾಜಿತೇಶ್ ಮತ್ತು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. 


ಡಿ. ಹರ್ಷೇಂದ್ರಕುಮಾರ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು. ದಿವ್ಯಕುಮಾರಿಕಾರ್ಯಕ್ರಮ ನಿರ್ವಹಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top