ಅದೊಂದು ಚಲನಚಿತ್ರ.. ಚಟರ್ಜಿ ವರ್ಸಸ್ ನಾರ್ವೆ. ಎರಡು ವಿಭಿನ್ನ ದೇಶಗಳ ಸಾಂಸ್ಕೃತಿಕ ವ್ಯತ್ಯಾಸಗಳನ್ನು ಹೇಳುತ್ತಲೇ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ಅವಕಾಶವಾದಿಗಳಾಗಿ ಬೇರೊಬ್ಬರ ಮಕ್ಕಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಹೂಡುವ ಹುನ್ನಾರಗಳನ್ನು ತಿಳಿಸುವ ಚಿತ್ರ ಇದು.
ದೇವಿಕಾ ಚಟರ್ಜಿ (ಸಾಗರಿಕ) ಮತ್ತು ಆಕೆಯ ಪತಿ ಉದ್ಯೋಗ ನಿಮಿತ್ತ ನಾರ್ವೆಯಲ್ಲಿ ನೆಲೆಸಿದ ಅನಿವಾಸಿ ಭಾರತೀಯರಾಗಿದ್ದರು. ಅವರಿಗೆ ಎರಡನೇ ಮಗು ಹುಟ್ಟಿದ ನಂತರ, ನಾರ್ವೆಯ ಚೈಲ್ಡ್ ವೆಲ್ಫೇರ್ ಸೊಸೈಟಿ,(ಸಿಡಬ್ಲ್ಯೂಎಸ್) ನವರು ಸತತವಾಗಿ ಆಕೆಯ ಮನೆಗೆ ಭೇಟಿ ನೀಡಲಾರಂಭಿಸಿದರು. ಮೊದಮೊದಲು (2ನೆಯ ಮಗುವಿಗೆ, ಈಗಾಗಲೇ ಒಂದು ಮಗುವನ್ನು ಆಕೆ ಬೆಳೆಸಿದ್ದಳು!!) ಮಗುವಿಗೆ ಮೊಲೆ ಹಾಲನ್ನೂಡುವುದರ ಕುರಿತು ತರಬೇತಿ ನೀಡಲು ಪ್ರಾರಂಭಿಸಿದರು. ಭಾರತೀಯ ಸಂಪ್ರದಾಯದಲ್ಲಿ ಹುಟ್ಟಿ ಬೆಳೆದ ದೇವಿಕಳಿಗೆ ಇದರಿಂದ ಕೊಂಚ ಮುಜುಗರವಾದರೂ ಅಧಿಕಾರಿಗಳು ಕೂಡ ಹೆಣ್ಣುಮಕ್ಕಳೇ ಅಲ್ಲವೇ ಎಂದು ಸುಮ್ಮನಾದಳು.
ಆದರೆ ಸತತ 10 ವಾರ ಕಳೆದು ಕೊನೆಯ ದಿನ ಎಂದು ಹೇಳಿ ತಮ್ಮ ಮೇಲಾಧಿಕಾರಿಯೊಡನೆ ಬಂದ ಮಕ್ಕಳ ಕಲ್ಯಾಣ ಕೇಂದ್ರದ ಸಿಬ್ಬಂದಿಗಳು, ದೇವಿಕಾ ಪತಿಯನ್ನು ಕರೆಯಲು ತನ್ನ ಕೋಣೆಗೆ ತೆರಳಿದಾಗ, ಯಾವುದೇ ರೀತಿಯ ಮುನ್ಸೂಚನೆಯನ್ನು ಕೊಡದೆ ಆಕೆಯ ಎರಡೂ ಮಕ್ಕಳನ್ನು ಮಕ್ಕಳ ಪೋಷಣ ಕೇಂದ್ರಕ್ಕೆ ಅಕ್ಷರಶಃ ಹೊತ್ತೊಯ್ದರು. ಇದರಿಂದ ಹೌಹಾರಿದ ದೇವಿಕ ಮತ್ತು ಆಕೆಯ ಪತಿ ಅಧಿಕಾರಿಗಳ ಹಿಂದೆಯೇ ಧಾವಿಸಿ ಪೋಷಣ ಕೇಂದ್ರಕ್ಕೆ ಹೋಗಿ ತಮ್ಮ ಮಕ್ಕಳನ್ನು ಮರಳಿ ಕೊಡುವಂತೆ ವಿಧವಿಧವಾಗಿ ಕೇಳಿಕೊಂಡರು. ಆದರೆ ಇವರ ಯಾವ ಮಾತಿಗೂ ಆ ಮೇಲಾಧಿಕಾರಿಗಳು ಸೊಪ್ಪು ಹಾಕದೆ ಮಗುವಿಗಾಗಿ ಅಧೀರಳಾಗಿ ಹಲುಬುತ್ತಿದ್ದ ತಾಯಿಯ ಕ್ರಿಯೆಗಳನ್ನು ವೈಪರೀತ್ಯವೆಂಬಂತೆ ಚಿತ್ರೀಕರಿಸಿದರು.
ಮುಂದೆ ಓಸ್ಲೋದ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು. ಅಲ್ಲಿ ವೆಲ್ಫ್ರೆಡ್ ನ ಅಧಿಕಾರಿಗಳು ದೇವಿಕ ಚಟರ್ಜಿಯನ್ನು ಮನೆಯನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳದ, ಮಕ್ಕಳನ್ನು ಪಾಲಿಸಲಾಗದ, ಪತಿಯೊಂದಿಗೆ ವಿನಾಕಾರಣ ಕಾದಾಡುವ, ಮಕ್ಕಳಿಗೆ ಕೈಯಲ್ಲಿಯೇ ಊಟ ಮಾಡಿಸುವ (ಟೇಬಲ್ ಮ್ಯಾನರ್ಸ್ ಇಲ್ಲದ!!) ಹೊಣೆಗೇಡಿ ಹೆಣ್ಣು ಮಗಳು ಎಂಬಂತೆ ಬಿಂಬಿಸಿದರು. ಇದಕ್ಕೆ ಪೂರಕವಾಗಿ ಮಗನ ಪ್ರಾಜೆಕ್ಟ್ ವರ್ಕ್ ಅನ್ನು ತಂದು ತೋರಿಸದ, ಮಕ್ಕಳ ವಿಷಯದಲ್ಲಿ ನಾರ್ವೆ ಸರ್ಕಾರ ಅಪೇಕ್ಷಿಸುವ ಯಾವುದೇ ಗುಣಗಳನ್ನು ಹೊಂದಿರದ ದೇವಿಕಳ ಕುರಿತು ಶಾಲೆಯವರು ನಕಾರಾತ್ಮಕವಾಗಿ ಹೇಳಿಕೆಗಳನ್ನು ನೀಡಿದ್ದರು. ಪತ್ನಿಗೆ ಗೃಹ ಕೃತ್ಯದಲ್ಲಿ ಸಹಾಯ ಮಾಡದ ಪತಿ ಎಂದು ಆಕೆಯ ಪತಿಯನ್ನು ಕೂಡ ದೋಷಿ ಎಂದು ಹೇಳಿದರು.
ಮತ್ತೆ ಮಕ್ಕಳು ಪೋಷಣ ಕೇಂದ್ರಕ್ಕೆ ಕಳುಹಿಸಲ್ಪಟ್ಟರು. ಆದರೆ ಪೋಷಣ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಓರ್ವ ಹೆಣ್ಣು ಮಗಳು, ಆಟಿಸಂ ತೊಂದರೆಯಿಂದ ಬಳಲುತ್ತಿದ್ದ ದೇವಿಕಳ ದೊಡ್ಡ ಮಗ ತಾಯಿಗಾಗಿ ಹಂಬಲಿಸುತ್ತ ಮಾನಸಿಕವಾಗಿ ಅಸ್ವಸ್ಥನಾಗುತ್ತಿರುವುದನ್ನು ಗಮನಿಸಿ ಅದನ್ನು ವಿಡಿಯೋ ಮಾಡಿ ಓರ್ವ ಸ್ನೇಹಿತೆಯ ಮೂಲಕ ದೇವಿಕಳಿಗೆ ತಲುಪಿಸುತ್ತಾಳೆ. ಇದರಿಂದ ಮತ್ತಷ್ಟು ನೊಂದ ದೇವಿಕ ಮತ್ತು ಆಕೆಯ ಪತಿಯ ವಕೀಲರ ಮೂಲಕ ನಾರ್ವೆ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಇಲ್ಲಿಯೂ ಕೂಡ ನೊಂದ ದೇವಿಕ ನ್ಯಾಯಾಲಯದಲ್ಲಿ ವಕೀಲರ ಬದಲಾಗಿ ತಾನೇ ಮುಂದಾಗಿ ತನ್ನ ಮಕ್ಕಳ ಕುರಿತ ತನ್ನ ಹಕ್ಕುಗಳನ್ನು ಮಂಡಿಸಲು ಮುಂದಾದಾಗ ಆಕೆಯನ್ನು ಮಾನಸಿಕವಾಗಿ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದ ಅಸ್ವಸ್ಥೆ ಎಂದು ತೀರ್ಮಾನಿಸಿ ಮಕ್ಕಳನ್ನು ಮತ್ತೆ ಪೋಷಣ ಕೇಂದ್ರಕ್ಕೆ ಕಳುಹಿಸುತ್ತಾರೆ. ಈಗ ಪೋಷಣ ಕೇಂದ್ರ ದಿಂದ ತನ್ನ ಮಕ್ಕಳನ್ನು ಗುಪ್ತವಾಗಿ ಸಾಗಿಸಿ ಪಕ್ಕದ ಸ್ವೀಡನ್ ಗೆ ಹೋಗಲು ದೇವಿಕಾ ಪ್ರಯತ್ನಿಸಿ ಏರ್ಪೋರ್ಟ್ ಅಥಾರಿಟಿಯವರ ಕೈಯಲ್ಲಿ ಸಿಕ್ಕಿ ಬೀಳುತ್ತಾಳೆ. ಪತಿ-ಪತ್ನಿಯರು ತೀವ್ರ ಮುಖಭಂಗ ಅನುಭವಿಸಿ ಮತ್ತೊಮ್ಮೆ ದೇವಿಕಾ ತನ್ನ ಮಕ್ಕಳಿಗಾಗಿ ಗೋಗರೆದು ಚೀರಾಡುವುದನ್ನು ವಿಡಿಯೋ ಚಿತ್ರೀಕರಣ ಮಾಡಿದ ವೆಲ್ಫೇಡ್ ಅಧಿಕಾರಿಗಳು ಆಕೆಯನ್ನು ಮಾನಸಿಕ ಅಸ್ವಸ್ಥಳೆಂದು ಸಾಬೀತು ಮಾಡಲು ಶತಾಯಗತಾಯ ಪ್ರಯತ್ನಿಸುತ್ತಾರೆ.
ಇದೇ ಸಮಯದಲ್ಲಿ ಭಾರತದ ವಿದೇಶಾಂಗ ಸಚಿವರು ನಾರ್ವೆ ದೇಶಕ್ಕೆ, ಉಭಯ ದೇಶಗಳ ನಡುವಣ ಒಪ್ಪಂದವೊಂದಕ್ಕೆ ಸಹಿ ಹಾಕಲು ಭೇಟಿ ನೀಡಿದ್ದು, ಆ ಸಭೆಯಲ್ಲಿ ಎಲ್ಲರ ಮುಂದೆಯೇ ಭಾರತ ಮತ್ತು ನಾರ್ವೆ ದೇಶಗಳ ನಡುವಿನ ಸಾಂಸ್ಕೃತಿಕ ವ್ಯತ್ಯಾಸವನ್ನು ವಿವರಿಸಿ ಹೇಳಿದ ದೇವಿಕ ಚಟರ್ಜಿ ತನ್ನ ಮಕ್ಕಳನ್ನು ಮರಳಿ ಕೊಡಿಸಲು ಆ ಮಹಿಳಾ ವಿದೇಶಾಂಗ ಸಚಿವೆಗೆ ಕೇಳಿಕೊಳ್ಳುತ್ತಾಳೆ. ಮಹಿಳಾ ವಿದೇಶಾಂಗ ಸಚಿವೆ ಭಾರತ ದೇಶದ ಸಂಸತ್ತಿನಲ್ಲಿ ಈ ವಿಷಯವನ್ನು ಎತ್ತಿ ಭಾರತೀಯ ಸಂಸ್ಕೃತಿಯನ್ನು ಅರಿಯದ ನಾರ್ವೆಯೊಂದಿಗೆ ಒಪ್ಪಂದವನ್ನು ಕಡಿದುಕೊಳ್ಳುವ ಮಾತನಾಡಿದಾಗ ಈ ಬಿಕ್ಕಟ್ಟನ್ನು ಬಗೆಹರಿಸಲು ನಾರ್ವೆ ದೇಶವು ಮತ್ತೊಮ್ಮೆ ನ್ಯಾಯಾಲಯದ ಮೂಲಕ ದೇವಿಕಳನ್ನು ಕರೆ ಕಳುಹಿಸುತ್ತದೆ.
ಇದರ ನಂತರವೇ ಗೊತ್ತಾಗುತ್ತದೆ ವೆಲ್ಫೇಡ್ ನವರ ಕರಾಮತ್ತು. ಮಕ್ಕಳ ಪಾಲನೆ ಪೋಷಣೆಗೆ ಸರ್ಕಾರ ನೀಡುವ ಹಣದಲ್ಲಿ ಅರ್ಧ ಪಾಲನ್ನು ಪಡೆಯುವ ಹುನ್ನಾರವೊಂದನ್ನು ರೂಪಿಸಿ ದೇವಿಕಳ ಮೈದುನನ ಮೂಲಕ ಆಕೆಯ ಪತಿಯನ್ನು ಬಲೆಗೆ ಹಾಕಿಕೊಂಡಿರುತ್ತಾರೆ ವೆಲ್ಫೇರ್ ನ ಅಧಿಕಾರಿಗಳು. ಲಕ್ಷಾಂತರ ರೂಪಾಯಿ ಹಣವನ್ನು ಪಡೆವ ಆಸೆಯಿಂದ ದೇವಿಕಳ ಪತಿ ಮತ್ತು ಮೈದುನ ಮಕ್ಕಳನ್ನು ಮೈದುನನ ಮೂಲಕವೇ ಆಕೆಗೆ ಒಪ್ಪಿಸುವರು ಎಂದು ಭರವಸೆ ನೀಡಿ ಆಕೆಯಿಂದ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ.
ಮುಂದೆ ಭಾರತ ದೇಶಕ್ಕೆ ಮರಳಿದ ನಂತರ ಮೈದುನನ ಬಳಿಯಿಂದ ಮಕ್ಕಳನ್ನು ಕರೆದುಕೊಂಡು ಹೋಗಲು ತಂದೆಯೊಂದಿಗೆ ಬಂದ ದೇವಿಕಳಿಗೆ ಮೈದುನ ಅತ್ತೆ ಮತ್ತು ಮಾವ ಮಕ್ಕಳನ್ನು ಕೊಡಲು ನಿರಾಕರಿಸುತ್ತಾರೆ. ಬೇಸತ್ತ ದೇವಿಕ ಕೊಲ್ಕತ್ತದ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗುತ್ತಾಳೆ. ಅಲ್ಲಿ ಈಕೆಯ ಪರವಾಗಿ ವಾದ ಮಾಡಿದ ಮಹಿಳಾ ವಕೀಲರು ಭಾರತೀಯ ಸಂಪ್ರದಾಯದಲ್ಲಿ ಬೆಳೆದ ದೇವಿಕ ತನ್ನ ಮಕ್ಕಳಿಗಾಗಿ ಹಂಬಲಿಸಿ, ಮಾನಸಿಕವಾಗಿ ನೊಂದು ಆ ರೀತಿ ವರ್ತಿಸಿರುವುದಾಗಿಯೂ, ಮಕ್ಕಳು ಭಾವನಾತ್ಮಕವಾಗಿ ತಾಯಿಯ ರಕ್ಷಣೆಯಲ್ಲಿ ಇದ್ದರೆ ಅವರ ಭವಿಷ್ಯಕ್ಕೆ ಒಳ್ಳೆಯದು ಎಂದು, ಸ್ವತಃ ದೇವಿಕಳನ್ನು ಆಕೆಯ ಪತಿ, ಮೈದುನ, ಅತ್ತೆ ಮತ್ತು ಮಾವ ಮಕ್ಕಳ ವಿಷಯದಲ್ಲಿ ಅಂಧಕಾರದಲ್ಲಿ ಇರಿಸಿರುವುದನ್ನು ಕೋರ್ಟಿಗೆ ಮನವರಿಕೆ ಮಾಡಿಕೊಡುತ್ತಾರೆ. ಅದೇ ಸಮಯದಲ್ಲಿ ನಾರ್ವೆ ದೇಶದ ಪರವಾಗಿ ಬಂದ ವಕೀಲರು ಕೂಡ ಈ ವಾದವನ್ನು ಸರಿಯೆಂದು ಪುಷ್ಟೀಕರಿಸುತ್ತಾರೆ.
ನ್ಯಾಯಾಧೀಶರ ಕೋಣೆಯಲ್ಲಿ ಅಂತಿಮವಾಗಿ ಮಕ್ಕಳನ್ನು ಭೇಟಿಯಾಗುವ ನ್ಯಾಯಾಧೀಶರು ಮಕ್ಕಳು ತಾಯಿಯೆಡೆ ಓಡೋಡಿ ಹೋಗುವುದನ್ನು ಕಂಡು ಆರ್ದ್ರರಾಗುತ್ತಾರೆ. ಬಳಿಕ ತಮ್ಮ ತೀರ್ಪಿನಲ್ಲಿ ಮಕ್ಕಳ ಸುರಕ್ಷಿತ ಬೆಳವಣಿಗೆ ಮತ್ತು ಪಾಲನೆ ಪೋಷಣೆಯನ್ನು ತಾಯಿಗಿಂತ ಮಿಗಿಲಾಗಿ ಮಾಡಲು ಬೇರಾರಿಗೂ ಸಾಧ್ಯವಿಲ್ಲ ಎಂದು ಘೋಷಿಸಿ ಆಕೆಯ ಎರಡು ಮಕ್ಕಳನ್ನು ಆಕೆಯ ಸುಪರ್ದಿಗೆ ಒಪ್ಪಿಸಲು ಆದೇಶಿಸುತ್ತಾರೆ. ಸುಮಾರು ಎರಡುವರೆ ವರ್ಷಕ್ಕಿಂತ ಹೆಚ್ಚು ಸಮಯ ನಾರ್ವೆ ಸರ್ಕಾರ, ಮಕ್ಕಳ ಕಲ್ಯಾಣ/ಪೋಷಣ ಕೇಂದ್ರ, ಸ್ವತಹ ಪತಿ ಮತ್ತವನ ಸಂಬಂಧಿಗಳು ಮತ್ತು ಭಾರತ ದೇಶದ ನ್ಯಾಯಾಲಯದಲ್ಲಿ ಹೋರಾಡಿದ ಆ ಮಹಿಳೆಯೇ ಸಾಗರಿಕ ಭಟ್ಟಾಚಾರ್ಯ.
2013ರ ಜನವರಿಯಲ್ಲಿ ಭಾರತ ಸರ್ಕಾರದ ಮೂಲಕ ತನ್ನ ಮಕ್ಕಳ ಸುಪರ್ದಿಯನ್ನು ಪಡೆದುಕೊಂಡ ಸಾಗರಿಕಾಳಿಗೆ ಸಹಾಯ ಹಸ್ತವೆಸಗಿದ್ದು ಅಂದಿನ ವಿದೇಶಾಂಗ ಮಂತ್ರಿಯಾದ ಶ್ರೀಮತಿ ಸುಷ್ಮಾ ಸ್ವರಾಜ್. ಭಾರತೀಯ ಕಾನೂನು ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲಾದ ಕೇಸ್ ಆಗಿದ್ದು.... ಮಕ್ಕಳ ಪಾಲನೆ ಪೋಷಣೆಗಾಗಿ ಭಾರತೀಯ ನಾರಿ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಇತಿಹಾಸ ಬರೆದದ್ದು ಈ ಕೇಸಿನ ಮೂಲಕವೆ.
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ