ಗ್ರಾಮಸ್ಥರಿಂದ ತೀವ್ರ ವಿರೋಧ, ಪ್ರತಿಭಟನೆಯ ಎಚ್ಚರಿಕೆ
ಪಣಜಿ: ಗೋವಾದ ವಾಸ್ಕೊ ಸಾಂಕವಾಳ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಉತ್ತರ ಕರ್ನಾಟಕದ ಅಧಿದೇವತೆ, ಶಕ್ತಿದೇವತೆ ಜಗನ್ಮಾತೆ ಶ್ರೀ ಯಲ್ಲಮ್ಮ ದೇವಿಯ ಪುರಾತನ ದೇವಾಲಯವನ್ನು ತೆರವುಗೊಳಿಸಲು ಸಂಚು ನಡೆದಿದ್ದು, ಈಗಾಗಲೇ ಈ ಭಾಗದ ಜಮೀನನ್ನು ಅಭಿವೃದ್ಧಿ ಪಡಿಸುವ ನೆಪದಲ್ಲಿ ಶ್ರೀ ಯಲ್ಲಮ್ಮ ದೇವಿಯ ದೇವಸ್ಥಾನ ತೆರವಿಗೆ ಯೋಜನೆ ಸಿದ್ಧಗೊಂಡಿದೆ. ಇದಕ್ಕೆ ಈ ಭಾಗದ ಗ್ರಾಮಸ್ಥರ ತೀವ್ರ ವಿರೋಧವಿದ್ದು, ದೇವಸ್ಥಾನ ತೆರವುಗೊಳಿಸಿದರೆ ಉಪವಾಸ ಸತ್ಯಾಗೃಹ ನಡೆಸಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಯಲ್ಲಮ್ಮ ದೇವಿ ದೇವಸ್ಥಾನ ತೆರವಿಗೆ ಪ್ಲ್ಯಾನ್...!
ಗೋವಾದ ವಾಸ್ಕೊ ಸಾಂಕವಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸರ್ವೆ ನಂ-194/1 ರಲ್ಲಿ ಎಂಇಎಸ್ ಕಾಲೇಜು ಹಿಂಬದಿಯಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಕಳೆದ ಸುಮಾರು 70 ವರ್ಷಗಳಿಂದ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಪುರಾತನ ಕಾಲದಿಂದಲೂ ಪೂಜೆ ನಡೆಸುತ್ತ ಬಂದಿರುವ ಶೃದ್ಧಾ ಸ್ಥಾನವಾಗಿದೆ. ಆದರೆ ಕಳೆದ ಐದಾರು ತಿಂಗಳಿಂದ ಬಿಲ್ಡರ್‍ರೊಬ್ಬರು ಈ ಜಮೀನನ್ನು ಅಭಿವೃದ್ಧಿಪಡಿಸಲು ಸರ್ವೆ ಪ್ಲ್ಯಾನ್ ಮಾಡಿದ್ದು ಇದರಲ್ಲಿ ದೇವಸ್ಥಾನದ ಜಾಗವನ್ನು ನಮೂದಿಸದೇ ಇರುವುದು ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ. ಅಂದರೆ ಈ ಪ್ರೊಜೆಕ್ಟನ ಸರ್ವೆ ಪ್ಲ್ಯಾನ್ ನಕಾಶೆಯಲ್ಲಿ ದೇವಸ್ಥಾನಕ್ಕೆ ಜಾಗ ಬಿಟ್ಟಿರುವುದಿಲ್ಲ. ಇಷ್ಟೇ ಅಲ್ಲದೆಯೇ ದೇವಸ್ಥಾನಕ್ಕೆ ಹೋಗಲು ದಾರಿಯನ್ನೂ ಸಹ ಮಾರ್ಕ ಮಾಡಿರುವುದಿಲ್ಲ. ನಕಾಶೆಯಲ್ಲಿ ದೇವಸ್ಥಾನವನ್ನೇ ನಮೂದಿಸದಿರುವುದು ಈ ದೇವಸ್ಥಾನ ತೆರವುಗೊಳಿಸಲು ನಡೆಸಿರುವ ಹುನ್ನಾರ ಎಂಬುದು ಭಕ್ತಾದಿಗಳಿಗೆ ಕಂಡುಬಂದಿದ್ದು, ಭಕ್ತಾದಿಗಳು ಆತಂಕ್ಕೊಳಗಾಗಿದ್ದಾರೆ.
ಇದರಿಂದಾಗಿ ಪ್ರತಿನಿತ್ಯ ಅಮ್ಮನವರನ್ನು ಪೂಜಿಸಿತ್ತ ಬಂದಿರುವ ಭಕ್ತಾದಿಗಳಿಗೆ ತೊಂದರೆಯುಂಟಾಗಿದೆ. ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ಭಕ್ತಾದಿಗಳು ಭಯಭೀತರಾಗಿದ್ದಾರೆ. ಈ ಪ್ಲ್ಯಾನ್‍ಗೆ ಸ್ಥಳೀಯ ಪಂಚಾಯತಿ ಕೂಡ ಸಮ್ಮತಿ ಸೂಚಿಸಿದೆ ಎಂದು ಹೇಳಲಾಗುತ್ತಿದ್ದು ಇದರಿಂದಾಗಿ ದೇವಸ್ಥಾನಕ್ಕೆ ಧಕ್ಕೆಯುಂಟಾದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಭಕ್ತಾದಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಗೋವಾ ವಾಸ್ಕೊ ಸಾಂಕವಾಳ ಗ್ರಾಮ ಪಂಚಾಯತ ಮಾಜಿ ಸದಸ್ಯ ಶಿವಾನಂದ ಬಿಂಗಿ ಪ್ರತಿಕ್ರಿಯೆ ನೀಡಿ- ಈ ದೇವಸ್ಥಾನ ಪ್ರದೇಶದ ಸರ್ವೆ ಪ್ಲ್ಯಾನ್‍ನಲ್ಲಿ ದೇವಸ್ಥಾನ ನಮೂದಿಸಬೇಕು ಮತ್ತು ದೇವಸ್ಥಾನಕ್ಕೆ ತೆರಳಲು ರಸ್ತೆ ಮಾರ್ಕ ಮಾಡಬೇಕು ಎಂದು ಸಾಂಕವಾಳ ಗ್ರಾಮ ಪಂಚಾಯತಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಭಾನುವಾರ ನಡೆದ ಸಾಂಕವಾಳ ಪಂಚಾಯತಿ ಗ್ರಾಮ ಸಭೆಯಲ್ಲಿ ಪ್ರೀ ಪ್ಲ್ಯಾನ್ ನಡೆಸಿ ಗದ್ದಲ ಸೃಷ್ಠಿಸುವಂತೆ ಮಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರು ಸಭೆಯಿಂದ ಎದ್ದು ನಡೆದರು. ಇದರಿಂದಾಗಿ ದೇವಸ್ಥಾನದ ವಿಷಯ ಪ್ರಸ್ತಾಪವೇ ಆಗಿಲ್ಲ. ಇದು ಒಂದು ಫ್ರೀ ಪ್ಲ್ಯಾನ್ ಆಗಿದೆ. ಇಂದಿನ ಗ್ರಾಮ ಸಭೆಗೆ ಸುಮಾರು 200 ಕ್ಕೂ ಹೆಚ್ಚು ಜನ ಕನ್ನಡಿಗರು ಆಗಮಿಸಿದ್ದರು. ಆದರೆ ಪಂಚಾಯತಿ ಕೂಡ ಬಿಲ್ಡರ್‍ಗಳ ಪರವಾಗಿಯೇ ಇರುವುದು ಇದರಿಂದಾಗಿ ಖಚಿತವಾಗುತ್ತಿದೆ. ಈ ಕುರಿತಂತೆ ಮನವಿ ಸಲ್ಲಿಸಲು ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ. ದೇವಸ್ಥಾನಕ್ಕೆ ಧಕ್ಕೆಯುಂಟಾಗುವ ಸಂದರ್ಭ ಬಂದರೆ ಭಕ್ತಾದಿಗಳು ಉಗ್ರ ಹೋರಾಟ ನಡೆಸಲಿದ್ದಾರೆ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ