ಕುಂಬಳೆ: ಕವಿಗಳು ಭಾಷೆಯ ಮೇಲೆ ಹಿಡಿತವನ್ನು ಸಾಧಿಸಿ ಭಾಷಾ ಶುದ್ಧಿ ಹೊಂದಿರಬೇಕು.ಕಾವ್ಯ ಸ್ವರೂಪವನ್ನು ತಿಳಿಯಬೇಕು. ಪ್ರಚಾರಕ್ಕಾಗಿ ತೂಕವಿಲ್ಲದ ಪ್ರಶಸ್ತಿಗಳನ್ನು ಪಡೆಯಲು ಹಾತೊರೆವ ಕವಿಗಳಿಂದ ಪ್ರಬುದ್ಧ ಕವಿಗಳು ಎಲೆಯ ಮರೆಯ ಕಾಯಂತೆ ಮೂಲೆ ಪಾಲಾಗುತ್ತಿದ್ದಾರೆ ಎಂದು ಇತ್ತೀಚೆಗೆ ಕುಂಬಳೆಯ ಸನಿಹದ ನಾರಾಯಣ ಮಂಗಲ ಶಾಲೆಯ ಸಭಾಂಗಣದಲ್ಲಿ ನಡೆದ 'ಗಡಿ ಉತ್ಸವ'ದ ಸಂದರ್ಭದಲ್ಲಿ ಆಯೋಜಿಸಲಾದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕವಿ ಡಾ.ಸುರೇಶ ನೆಗಳಗುಳಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವನ್ನು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆಸಲಾಯಿತು.
'ಸಾವಿರಾರು ಕನ್ನಡ ಕೃತಿಗಳು ಪ್ರಕಟವಾಗುತ್ತಿರುವ ಕಾಸರಗೋಡಿನಲ್ಲಿ ಕನ್ನಡದ ಸತ್ತ್ವ ಶಕ್ತಿ ಎದ್ದು ಕಾಣುತ್ತಿದ್ದು ಈ ಪ್ರದೇಶ ಕನ್ನಡ ನಾಡು ಎಂಬುದಕ್ಕೆ ಸಾಕ್ಷಿ. ಇಲ್ಲಿ ಹೆಚ್ಚೆಚ್ಚು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಕನ್ನಡ ಸಂಸ್ಕೃತಿಯನ್ನು ಉಳಿಸಬಹುದು' ಎಂದು ಈ ಸಮಾರಂಭವನ್ನು ಉದ್ಘಾಟಿಸಿ ಮಾತಾಡುತ್ತಾ ಕನ್ನಡ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಕವಿ ಸಾಹಿತಿ ವೆಂಕಪ್ಪ ಭಟ್ ಕುಳಮರ್ವರನ್ನು ಸನ್ಮಾನಿಸಲಾಯಿತು. ಹಿರಿಯ ಕವಿ ಗುಣಾಜೆ ರಾಮಚಂದ್ರ ಭಟ್ ಕವಿಗೋಷ್ಠಿಯನ್ನು ಚಾಲನೆಗೊಳಿಸಿ ಮಾತನಾಡುತ್ತಾ ಕಾವ್ಯ ರಚನೆಗೆ ಅಭ್ಯಾಸ, ಮಾರ್ಗದರ್ಶನ ಅಗತ್ಯ ಎಂದರು.
ಜಯಾನಂದ ಪೆರಾಜೆ,ಕೊಳ್ಚಪ್ಪೆ ಗೋವಿಂದ ಭಟ್, ಅವಿನಾಶ್ ಶಾಸ್ತ್ರಿ ಪೆರ್ಲ, ಸೌಮ್ಯಾ ಆರ್.ಶೆಟ್ಟಿ, ಪರಿಮಳಾ ರಾವ್, ಭಾಸ್ಕರ ವರ್ಕಾಡಿ, ಜಯಲಕ್ಷ್ಮಿ ಶರತ್ ಶೆಟ್ಟಿ, ರಶ್ಮಿ ಸನಿಲ್, ಪ್ರಣತಿ ಎನ್, ಸೌಮ್ಯಾ ಜಿ, ರೇಖಾ ಸುಧೇಶ್ ರಾವ್, ವಿರಾಜ್ ಅಡೂರು, ಆದ್ಯಂತ್ ಅಡೂರು, ಸುಮಂಗಲಾ, ಡಿ.ಶೆಟ್ಟಿ ಮುಂತಾದವರು ಸ್ವರಚಿತ ಕವನ ವಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ.ಎಸ್.ಎಸ್.ಎ.ಪಿ.ಯ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿದರು. ಗೀತಾ ಪ್ರಾರ್ಥಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಸ್ಮಿತಾ ಉಪಸ್ಥಿತರಿದ್ದರು. ಕಾರ್ಯಕ್ರಮದ ರೂವಾರಿ ಗಂಗಾಧರ ಗಾಂಧಿ ವಂದಿಸಿದರು. ರೇಖಾ ಸುಧೇಶ್ ರಾವ್ ನಿರೂಪಿಸಿದರು. ಗಡಿನಾಡು ಸಾಂಸ್ಕೃತಿಕ ಸಂಘ ಕಾಸರಗೋಡು ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವರದಿ : ಗುಣಾಜೆ ರಾಮಚಂದ್ರ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ