ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ಹಿಂದೂ ವಿರೋಧಿ ಮಾನಸಿಕತೆಗೆ ಸಾಕ್ಷಿ: ಸುದರ್ಶನ್

Upayuktha
0

ಮಂಗಳೂರು: ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡುಬಿದ್ರೆ ಅವರು ತೀಕ್ಷ್ಣವಾಗಿ ಖಂಡಿಸಿದ್ದಾರೆ.


ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಶೀರ್ಷಿಕೆ ಅಡಿಯಲ್ಲಿ ಕಾಂಗ್ರೆಸ್‌ ಪಕ್ಷವು ಇಂದು  ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದಕ್ಕೆ ತದ್ವಿರುದ್ಧವಾಗಿ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದೆ. ದೇಶದ್ರೋಹಿ, ಭಯೋತ್ಪಾದಕ ಸಂಘಟನೆ ಪಿಎಫ್‌ಐಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ನಿಷೇಧಿಸಿದ್ದರೆ, ಕಾಂಗ್ರೆಸ್‌ ಪಕ್ಷದ ಮುಖಂಡರು, ದೇಶಭಕ್ತ ಹಿಂದೂ ಸಂಘಟನೆ ಬಜರಂಗದಳವನ್ನು ನಿಷೇಧಿಸುವುದಾಗಿ ಘೋಷಿಸಿರುವುದು ಆ ಪಕ್ಷದ ವಿಭಜನಕಾರಿ ಮಾನಸಿಕತೆಯ ಪ್ರತೀಕವಾಗಿದೆ. ದೇಶದ್ರೋಹಿಗಳನ್ನು ವಿಜೃಂಭಿಸಿ, ದೇಶಪ್ರೇಮಿ ಸಂಘಟನೆಗಳನ್ನು ಹತ್ತಿಕ್ಕುವ ಕಾಂಗ್ರೆಸ್ ಪಕ್ಷದ ಈ ನೀತಿಯನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸುತ್ತೇನೆ' ಎಂದಿದ್ದಾರೆ.


ದೇಶದ್ರೋಹಿ ಪಿಎಫ್‌ಐ ಸಂಘಟನೆಗೆ ದೇಶಭಕ್ತ ಬಜರಂಗದಳವನ್ನು ಹೋಲಿಸಿರುವುದು, ಉಗ್ರರೆಲ್ಲರೂ ನನ್ನ ಸಹೋದರರು ಎನ್ನುವ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಧೋರಣೆಯ ಮುಂದುವರಿದ ಭಾಗ ಎನ್ನುವುದರಲ್ಲಿ ಸಂದೇಹವಿಲ್ಲ.


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾಗಾಂಧಿ, ತಾತ ನೆಹರೂ ಕಾಲದಲ್ಲಿ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಲಾಗಿತ್ತು. ಅನಂತರ ಏನಾಯಿತು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಸರ್ವೋಚ್ಚ ನ್ಯಾಯಾಲಯ ಆ ನಿಷೇಧವನ್ನು ರದ್ದುಪಡಿಸಿತು. ಅನಂತರ ದೇಶದ ಜನತೆಯೇ ಕಾಂಗ್ರೆಸ್ ಅನ್ನು ಗುಡಿಸಿಹಾಕಿದರು. ಆದರೂ ಕಾಂಗ್ರೆಸ್ ಪಾಠ ಕಲಿತಿಲ್ಲ.


ಇಂದು ಬಿಜೆಪಿ ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ವಿಶ್ವನಾಯಕ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಸರಕಾರ ದೇಶವನ್ನು ಆಳುತ್ತಿದೆ. ಮುಸ್ಲಿಮರನ್ನು ವಿಪರೀತ ಓಲೈಕೆಯೇ ಕಾಂಗ್ರೆಸ್ ನ ಇಂದಿನ ದುಸ್ಥಿತಿಗೆ ಕಾರಣ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಸ್ಲಿಮರ ಓಲೈಕೆಗಾಗಿ ಬಜರಂಗದಳ ನಿಷೇಧದ ಬಗ್ಗೆ ಹೇಳಿದೆ. ಇದು ಪಿಎಫ್‌ಐ ಪ್ರಚೋದಿತ ಪ್ರಣಾಳಿಕೆ. ಪಿಎಫ್‌ಐ ಮನಸ್ಥಿತಿಯವರು, ಮುಸ್ಲಿಂ ಮೂಲಭೂತವಾದಿ ಮನಸ್ಥಿತಿಯವರು ರಚಿಸಿರುವ ಪ್ರಣಾಳಿಕೆ ಎಂಬುದರಲ್ಲಿ ಸಂದೇಹವಿಲ್ಲ. ನಿಮ್ಮ ಈ ಪ್ರಣಾಳಿಕೆಗೆ ಈ ರಾಜ್ಯದ ಹಿಂದೂಗಳು ಮೇ 10ರಂದು ಉತ್ತರ ನೀಡಲಿದ್ದಾರೆ ಎಂದು ಸುದರ್ಶನ್ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top