ಮಗನ ಕನವರಿಕೆ...
ಅಂದು ಭಾನುವಾರ. ರಜೆಯೆಂದು ಸುಮ್ಮನೆ ಮಲಗಿದ್ದೆ. ಅಮ್ಮನ ಅಡುಗೆ ಮನೆ ಶಬ್ದ ಎಂದಿನ ಧಾವಂತವಿಲ್ಲದೆ ನಿಧಾನವಾಗಿ ಕೇಳುತ್ತಿತ್ತು. ಅಮ್ಮನಿಗೆ ನಾನೇ ಪ್ರಪಂಚ. ಊಟ, ತಿಂಡಿ, ನಿದ್ದೆಯಲ್ಲೂ ನನ್ನನ್ನೇ ಕಾಣುವ ಅಮ್ಮನಿಗೆ ಹೊರ ಜಗತ್ತಿನ ಆಗು ಹೋಗುಗಳ ಅರಿವಿಲ್ಲವೆಂದಲ್ಲ. ಆಕೆಗದು ಅಗತ್ಯವಿಲ್ಲವಷ್ಟೇ. ಅಪ್ಪ ಅಮ್ಮನನ್ನು ಅಗಲುವ ಹೊತ್ತಿಗೆ ಆಕೆಗಿನ್ನೂ ಇಪ್ಪತ್ತೈದರ ಹರೆಯ. ಆಗಷ್ಟೇ ಓದು ಮುಗಿಸಿ ಶಿಕ್ಷಕಿಯಾಗಿ ಸೇರಿದ್ದಳು. ಕೆಲಸ ಸಿಗುತ್ತಲೂ ಅಜ್ಜ ಮದುವೆ ಮಾಡಿ ಬಿಟ್ಟ. ಅಜ್ಜ ಮದುವೆಯೇನೋ ಮಾಡಿದ, ಅಮ್ಮನಿಗೆ ಅಪ್ಪನೊಂದಿಗೆ ಯಾಕೋ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲವೆನಿಸುತ್ತದೆ ಅಥವಾ ಅಪ್ಪನಿಗೇ ಅಮ್ಮ ಅರ್ಥವಾಗಲಿಲ್ಲವೋ ನನ್ನ ಊಹೆಗೆ ನಿಲುಕದ ಸಂಗತಿ. ಅಪ್ಪನೆಂಬ ಪಾತ್ರ ನನ್ನ ಬದುಕಿನಲ್ಲಿ ಹೆಚ್ಚೇನು ವ್ಯತ್ಯಾಸ ಮಾಡದೆ ಇದ್ದುದರಿಂದ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಅಮ್ಮನನ್ನು ಕೆದಕುವ ಗೌಜಿಗೂ ಹೋಗಲಿಲ್ಲ. ಆದರೆ ಈಗ ನನ್ನ ಬದುಕಿನಲ್ಲಿ ಮತ್ತೆ ಅಪ್ಪನ ಕುರಿತು ಉತ್ತರಿಸ ಬೇಕಾದ ಅನಿವಾರ್ಯತೆ. ಅಮ್ಮ ನನಗೆ ಮದುವೆ ಮಾಡ ಹೊರಟಿದ್ದಾಳೆ. ಎಲ್ಲಾ ಓಕೆ. ಆದರೆ ಹುಡುಗನ ಅಪ್ಪ??? ಪ್ರಶ್ನೆಗೆ ಉತ್ತರಿಸಬೇಕಾದದ್ದು ನಮ್ಮ ಕರ್ತವ್ಯ. ನಾನೇನೂ ಹೆಚ್ಚು ಚರ್ಚಿಸ ಹೋಗದೆ ಅಪ್ಪನ ಹಳೇ ಫೋಟೋವನ್ನು ದೊಡ್ಡದಾಗಿ ಅಚ್ಚು ಹಾಕಿ ಚೆಂದದ ಪ್ರೇಮ್ ಮಾಡಿ ಎದುರು ಹಾಲ್ ನಲ್ಲಿ ತಂದು ಹಾಕಿದೆ. ಅದಕ್ಕೆ ಚೆಂದದ ಮಾಲೆ ಹಾಕಿ ಸುಮ್ಮನಾದೆ. ಪ್ರಶ್ನೆಗೆ ಉತ್ತರ ಸಿಕ್ಕಿತೆಂದು. ಅಮ್ಮನ ಮುಖ ನೋಡಿದರೆ ನಿರ್ಭಾವುಕವಾಗಿತ್ತು ಎಂದಿನಂತೆ.
ಅಮ್ಮನ ಸ್ವಗತ...
ಆಫೀಸ್ ನಿಂದ ಬರುತ್ತಲು ಮಗ ದೊಡ್ಡದಾದ ಕವರ್ ತಂದು ಹಾಲ್ ನಲ್ಲಿಟ್ಟು ಫ್ರೆಶ್ ಅಪ್ ಆಗಿ ಬರಲು ಒಳ ಹೋದ. ಯಾವತ್ತೂ ತಾನಾಗಿ ಏನನ್ನೂ ನೋಡದವಳಿಗೆ ಇಂದೂ ನೋಡಬೇಕೆಂದೆನಿಸಲಿಲ್ಲ. ಹಾಗಾಗಿ ಸುಮ್ಮನಿದ್ದಳು. ಮಗನೇ ತೋರಿಸಲಿ ಎಂದು.
ಮದುವೆಯ ವಯಸ್ಸಿಗೆ ಬಂದ ಮಗನಿಗೆ ಹೆಣ್ಣು ಹುಡುಕುವುದೇ ಕಷ್ಟವಾಗಿತ್ತು. ದೊಡ್ಡ ಕಂಪೆನಿಯಲ್ಲಿದ್ದ ಮಗನಿಗೆ ಸುಲಭದಲ್ಲಿ ಮದುವೆಯಾದೀತು ಎಂಬ ಅಂದಾಜು ತಲೆಕೆಳಗಾಗಿತ್ತು. ಗುಣವಂತ, ಸುಂದರ ವಾಗಿದ್ದರೂ ಮದುವೆಯಾಗಲು ಯಾರೂ ತಯಾರಿರಲಿಲ್ಲ. ಹುಡುಗ ನಮಗೆ ಓಕೆ, ಆದರೆ ಅವರಪ್ಪನ ವಿಷಯ ಬರುತ್ತಲೂ ನಮ್ಮದು ಮೌನವೇ ಉತ್ತರವಾಗಿತ್ತು. ಅಮ್ಮ ಹೇಳಲು ತಯಾರಿದ್ದರೂ ಅವನದೊಂದು ಮುಗಿಯದ ಮೌನ. ಮನದೊಳಗಿನ ಶೀತಲ ಕದನವನ್ನು ಹೇಳಲೂ ಆಗದೆ, ನುಂಗಲೂ ಆಗದೆ ಚಡಪಡಿಸುವ ಮಗನ ನಡವಳಿಕೆ ಅಮ್ಮನಿಗೆ ನಿತ್ಯ ನರಕ. ಬೇರೆಲ್ಲಾ ಲೌಕಿಕಕ್ಕೆ ವಿದಾಯ ಹೇಳಿದರೂ ಮಗನ ಈ ಪರಿ ಬಹಳ ದುಃಖ ಕೊಡುತ್ತಿತ್ತು.
ಮೊನ್ನೆ ಮಗನಿಗೆ ಬಂದ ಹುಡುಗಿಯ ಜಾತಕ ಎಲ್ಲಾ ವಿಧದಲ್ಲೂ ಹೊಂದಾಣಿಕೆಯಾಗುತ್ತಿತ್ತು. ಮಗನಿಗೂ ಆಕೆ ಹಿಡಿಸಿದ್ದಳು. ಅವರ ಮಾತು ಕೇಳಿದಾಗ ನಾಳೆ ಮನೆಗೆ ಬರುವುದಾಗಿ ಹೇಳಿದ್ದರು. ಹಾಗಾಗಿ ಏನೋ ವಿಶೇಷ ವಾದುದನ್ನು ಮಗ ತಂದಿರಬೇಕೆಂದು ಮಗನಿಗೆ ತಿಂಡಿ ತಯಾರು ಮಾಡಲು ಅಮ್ಮ ಒಳಗೆ ಹೋದಳು.
ಕಾಫಿ, ತಿಂಡಿಯೊಂದಿಗೆ ಹೊರ ಬಂದ ಅಮ್ಮನಿಗೆ ಹಾಲ್ ನಲ್ಲಿ ಕಂಡ ಭಾವಚಿತ್ರ ಎಲ್ಲವನ್ನೂ ಹೇಳಿತು. ಅಪ್ಪನ ಹಾರ ಹಾಕಿದ ಸುಂದರವಾದ ಛಾಯಾಚಿತ್ರವು ದೊಡ್ಡದಾಗಿ ಗೋಡೆಯನ್ನು ಅಲಂಕರಿಸಿತ್ತು. ಅಮ್ಮ, ನಾನೇ ಅಪ್ಪನ ನೆನಪಾಗಿ ಸದಾ ನಿನ್ನ ಮುಂದೆ ಇರುವಾಗ ಇದೊಂದು ಫೋಟೋ ದೊಡ್ಡ ಸಂಗತಿಯಲ್ಲ ಬಿಡು. ನಿತ್ಯ ಕಾಡುವ ಪ್ರಶ್ನೆಗೆ ಇದು ಉತ್ತರವಾಗುವುದಾದರೆ ಇರಲಿ ಬಿಡು ಎಂಬಂತೆ ನೋಡಿದ ಮಗನ ದೃಷ್ಟಿಯನ್ನು ತಪ್ಪಿಸಿಕೊಳ್ಳಬೇಕೆಂದು ಆ ಕ್ಷಣಕ್ಕೆ ಅನ್ನಿಸಲಿಲ್ಲ.
- ಅಶ್ವಿನಿಮೂರ್ತಿ ಅಯ್ಯನಕಟ್ಟೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ