ಕೆಂಜಾರಿನ ಕಪ್ಪು ಮುಂಜಾನೆ

Upayuktha
0


ಮುಂಜಾನೆಯ ಮಂಜು ಮುಸುಕಿದ ಹೊತ್ತು,

ಮೂಡಣ ತೀರದಿ ಮೇಲೇರುತ್ತಿದ್ದ ದಿನಕರ,

ರವಿ ನೀಡುತ್ತಿದ್ದ ಬೆಳಕು ಜಗಕೆಲ್ಲಾ, ನಿಸ್ವಾರ್ಥದಿಂದ!

ಅವಶೇಷಗಳ ಅಡಿಯಲ್ಲಿ ಅವರು ಬೆಳಕಿಗಾಗಿ ಬೇಡುತ್ತಿದ್ದರು,

ದೀನರಾಗಿ ಕೂಗುತ್ತಿದ್ದರು, ಅಮ್ಮಾ......

ದಿನಕರನಿಗೆ ಕೇಳಿಸಲೇ ಇಲ್ಲಾ!!

ಊಹೂಂ ಏನೂ ಕಾಣುತ್ತಿಲ್ಲ ಎಲ್ಲವೂ ಅಸ್ಪಷ್ಠ

ಅವರಿಗೆ ಬೆಳಕು ಕಾಣಲೇ ಇಲ್ಲ!!

ಒಂದಲ್ಲ, ಎರಡಲ್ಲ, ನೂರಾರು ಜೀವಗಳು

ಮಕ್ಕಳು, ಮುಗ್ದರು, ಮುದುಕರು, ಮಾನಿನಿಯರು....

ಹಿಂದೂ, ಮುಸ್ಲಿಂ, ಕೈಸ್ತ  ಇಲ್ಲಿ ಜಾತಿಬೇಧವಿಲ್ಲ!

ಕತ್ತಲು ....  ಭೀಕರ ಕತ್ತಲು....!!

ಜಗಕೆಲ್ಲಾ ಬೆಳಕು, ಶುಭ ಮುಂಜಾನೆ ರವಿ ನಗುತ್ತಿದ್ದ!

ವಿಪರ್ಯಾಸ, ಕೆಂಜಾರಿನಲ್ಲಿ ಮುಂಜಾನೆ ಅಗಲೇ ಇಲ್ಲ!

ಹಕ್ಕಿಗಳ ಚಿಲಿಪಿಲಿ ಇಲ್ಲ ,ಊರು ಸೂರುಗಳಿಲ್ಲ,

ಮನೆ ಮಾರುಗಳಿಲ್ಲ, ದಟ್ಟ ಕಾನನ ಎಲ್ಲವೂ ಕತ್ತಲು,

ರುದ್ರ ಭೀಕರ ಮುಂಜಾನೆ .... ಆಕ್ರಂದನ,

ಕರುಳು ತಟ್ಟುವ ಆರ್ತನಾದ, ಮುಗಿಲುಮುಟ್ಟಿದ ರೋದನ

ಕೇಳಲು ಕಿವಿಗಳೇ ಇಲ್ಲ. ನೋಡಲು ಕಂಗಳೇ ಇಲ್ಲ!

ದಿನಕರ ಏರುತ್ತಲೇ ಇದ್ದ , ಜಗಕೆಲ್ಲಾ ಬೆಳಕು ನೀಡಿದ್ದ!

ಕೆಂಜಾರಿನಲ್ಲೂ ಸೂರ್ಯ ಉದಯಿಸಿದ್ದ!! ಕೋಳಿಕೂಗಿತ್ತು!!

ವಿಪರ್ಯಾಸ !! ಕೆಂಜಾರಿನ ಕಪ್ಪು ಮುಂಜಾನೆ,

ಹಲವರ ಬಾಳಿಗೆ ಮುಸ್ಸಂಜೆ ತಂದಿತ್ತು!!

ಯಾರ ಬಾಳಲ್ಲೂ ಬೆಳಕು ಹರಿಯಲೇ ಇಲ್ಲ!!

ಕತ್ತಲು....   ಬರೀ ಕತ್ತಲು....!!


- ಡಾ ಮುರಲಿ ಮೋಹನ್ ಚೂಂತಾರು.


(13 ವರ್ಷಗಳ ಹಿಂದೆ ಮೇ ತಿಂಗಳ 22 ರಂದು ಮಂಗಳೂರಿನ ಕೆಂಜಾರಿನಲ್ಲಿ ನಡೆದ ಭೀಕರ ವಿಮಾನ  ದುರ್ಘಟನೆಯಲ್ಲಿ ಮೃತಪಟ್ಟ ಎಲ್ಲಾ ಬಾಂಧವರ ಆತ್ಮಗಳಿಗೆ ಶಾಂತಿ ಕೋರುತ್ತಾ, ಅವರಿಗಾಗಿ ಈ ಕವನ ಸಮರ್ಪಣೆ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top