200 ಯುನಿಟ್ ಉಚಿತ ಗ್ಯಾರಂಟಿ: ವಿದ್ಯುತ್ ಪ್ರಸರಣ ಮೂಲಸೌಕರ್ಯ ಅಭಿವೃದ್ಧಿ ಅನಿವಾರ್ಯ

Upayuktha
0

3 ವರ್ಷ ಕಳೆದರೂ ಜಾರಿಯಾಗದ ಯುಕೆಟಿಎಲ್‍ನಂಥ ಯೋಜನೆಗಳಿಗೆ ತ್ವರಿತ ಚಾಲನೆ ಅಗತ್ಯ


ಬೆಂಗಳೂರು: ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವು ಇಂದು ಬಹುತೇಕ  ಪೂರ್ಣ ಸ್ವಾವಲಂಬನೆ ಸಾಧಿಸಿದ್ದು, ಹೆಚ್ಚುವರಿ ವಿದ್ಯುತ್ ಅನ್ನೂ ಉತ್ಪಾದಿಸುತ್ತಿದೆ. ಈ ರೀತಿ ಹೆಚ್ಚುವರಿ ಉತ್ಪಾದಿಸಲಾದ ವಿದ್ಯುತ್ ಅನ್ನು ಇಂಧನ ಸಂಪನ್ಮೂಲದ ಕೊರತೆಯಿರುವ ನೆರೆಯ ರಾಜ್ಯಗಳಿಗೆ ಮಾರಾಟ ಮಾಡುವ ಮೂಲಕ 2022ರಲ್ಲಿ ಕರ್ನಾಟಕವು 2,500 ಕೋಟಿ ರೂ ಆದಾಯ ಗಳಿಸಿದೆ.


ಆದರೆ ವಿದ್ಯುತ್ ಪ್ರಸರಣದ ಮೂಲಸೌಕರ್ಯ ನಿರ್ಮಾಣದಲ್ಲಿ ಕರ್ನಾಟಕ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ. ವಿದ್ಯುತ್ ಉತದ್ಪಾದನೆ ಹೆಚ್ಚಾಗಿದ್ದರೂ ಉತ್ಪಾದಿತ ಸ್ಥಳಗಳಿಂದ ಕೊರತೆಯಿರುವ ಪ್ರದೇಶಗಳಿಗೆ ವಿದ್ಯುತ್ ರವಾನಿಸಲು ಸೂಕ್ತ ಮಾರ್ಗಗಳ ಕೊರತೆ ಎದುರಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಹೆಚ್ಚಿನ ಮುತುವರ್ಜಿವಹಿಸಿ ಅಧಿಕ ಶಕ್ತಿಯ ಪ್ರಸರಣ ಮಾರ್ಗಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಹಾಗಾದಲ್ಲಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಮತ್ತಷ್ಟು ಅಧಿಕ ಆದಾಯ ಬರುವುದರಲ್ಲಿ ಸಂದೇಹವಿಲ್ಲ ಎಂದು ಅಧ್ಯಯನ ವರದಿಗಳು ಹೇಳುತ್ತವೆ.


ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಈಗಾಗಲೇ 200 ಯುನಿಟ್ ವಿದ್ಯುತ್ ಅನ್ನು ಪ್ರತಿ ಮನೆಗೆ ಉಚಿತವಾಗಿ ನೀಡುವ ಘೋಷಣೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಇಂತಹ ಸನ್ನಿವೇಶದಲ್ಲಿ ವಿದ್ಯುತ್ ಪ್ರಸರಣದ ವ್ಯವಸ್ಥೆಯನ್ನು ಹೆಚ್ಚಿನ ಆದ್ಯತೆಯೊಂದಿಗೆ ಕೈಗೊಂಡಲ್ಲಿ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಹೊರೆಯಾಗದೆ ಈ ಗ್ಯಾರಂಟಿಯನ್ನು ಪೂರೈಸಲು ಸಾಧ್ಯವಿದೆ.


ಕಲ್ಲಿದ್ದಲಿನ ಕೊರತೆಯಿಂದ ದೇಶದ ಹಲವು ರಾಜ್ಯಗಳು 2022ರಲ್ಲಿ ತೀವ್ರ ವಿದ್ಯುತ್ ಕೊರತೆಯನ್ನು ಎದುರಿಸಿದರೂ ಕರ್ನಾಟಕದಲ್ಲಿ ಕಲ್ಲಿದ್ದಲಿನ ಅವಲಂಬನೆ ಕಡಿಮೆಯಿರುವುದರಿಂದ ಕೊರತೆಯು ಪರಿಣಾಮ ಬೀರಲಿಲ್ಲ. ಸರಕಾರದ ಪ್ರೋತ್ಸಾಹಕ ನೀತಿಯ ಪರಿಣಾಮ ಸೌರಶಕ್ತಿ ಉತ್ಪದನೆ ಸೇರಿದಂತೆ ಅಸಾಂಪ್ರದಾಯಿಕ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಯು ಕರ್ನಾಟಕದಲ್ಲಿ ಹೆಚ್ಚುತ್ತಿದೆ. ಹೀಗಾಗಿ ಅಗತ್ಯಕ್ಕಿಂತ  ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. 


ವಿಶ್ವದರ್ಜೆಯ ಮೂಲಸೌಕರ್ಯ ನಿರ್ಮಾಣದ ಗುರಿ:

ಎಲ್ಲಾ ರಾಜ್ಯಗಳ ಪವರ್ ಗ್ರಿಡ್‍ಗಳನ್ನು ನ್ಯಾಷನಲ್ ಪವರ್ ಗ್ರಿಡ್‍ನೊಂದಿಗೆ ಸಂಪರ್ಕಿಸುವ ಪ್ರಯತ್ನದಲ್ಲಿ ಕೇಂದ್ರವು ಅಂತರ-ರಾಜ್ಯ ಪ್ರಸರಣ ವ್ಯವಸ್ಥೆ -ಗ್ರೀನ್ ಎನರ್ಜಿ ಕಾರಿಡಾರ್ ಹಂತ 2 ಅನ್ನು ಅನುಮೋದಿಸಿದೆ. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ರೂ. 12,000 ಕೋಟಿಗಳಲ್ಲಿ ಕೇಂದ್ರವು ಶೇ 33ರಷ್ಟು ಹಣವನ್ನು ನೀಡುತ್ತದೆ. ಲೋಡ್ ಶೆಡ್ಡಿಂಗ್ ಮತ್ತು ವಿದ್ಯುತ್ ಕೊರತೆಯ ಸಮಸ್ಯೆ ನಿವಾರಿಸಲು ದೇಶದ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ವಿಶ್ವ ದರ್ಜೆಗೆ ತರುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.


ಯುಕೆಟಿಎಲ್ ಕ್ಷಿಪ್ರ ಕಾರ್ಯಾರಂಭದ ಅಗತ್ಯ:

ಒಂದು ಯೋಜನೆಯು ಉಡುಪಿ ಮತ್ತು ದಕ್ಷಿಣ ಕನ್ನಡದ ಮೂಲಕ ಕೇರಳದ ಕಾಸರಗೋಡಿಗೆ ವಿದ್ಯುತ್ ಪೂರೈಸಲು 400 ಕೆವಿ ಉಡುಪಿ-ಕಾಸರಗೋಡು ಟ್ರಾನ್ಸ್‍ಮಿಷನ್ ಲೈನ್ (ಯುಕೆಟಿಎಲ್) ಅನ್ನು ಒಳಗೊಂಡಿದೆ. ಯುಕೆಟಿಎಲ್ ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಾಜೆಕ್ಟ್ (ಟಿಬಿಸಿಬಿ) ಕೇಂದ್ರ ಸರ್ಕಾರದ ಅಂತರರಾಜ್ಯ ಪ್ರಸರಣ ವ್ಯವಸ್ಥೆ (ಐಎಸ್‍ಟಿಎಸ್), ಹೆಚ್ಚುವರಿ ಶಕ್ತಿಯಿಂದ ಕರ್ನಾಟಕದ ಗಳಿಕೆಯನ್ನು ಸೇರಿಸಲು ಮತ್ತು ಉತ್ತರ ಕೇರಳದಲ್ಲಿನ ವಿದ್ಯುತ್ ಕೊರತೆಯ ಸಮಸ್ಯೆಗಳಿಗೆ ವಿಶ್ವಾಸಾರ್ಹ ಮತ್ತು ಸುಸ್ಥಿರ ಪರಿಹಾರವನ್ನು ಒದಗಿಸುತ್ತದೆ.


ಕುತೂಹಲಕಾರಿ ಅಂಶವೆಂದರೆ ಕೇರಳದಲ್ಲಿ ಅಗತ್ಯವಿರುವ ಪ್ರಸರಣ ಟವರ್‌ಗಳ ನಿರ್ಮಾಣ ಪೂರ್ಣಗೊಂಡಿದೆ. ಆದರೆ ಕರ್ನಾಟಕದ ಭಾಗದಲ್ಲಿ ಕೆಲಸ ಇನ್ನೂ ಪ್ರಾರಂಭವಾಗಿಲ್ಲ.


ಯೋಜನೆಯನ್ನು ಚಾಲನೆ ನೀಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದ್ದರೂ, ಅಗತ್ಯವಿರುವ ಸಮೀಕ್ಷೆಗಳು ಇನ್ನೂ ಪೂರ್ಣಗೊಂಡಿಲ್ಲ. ರಾಜ್ಯಕ್ಕೆ 2,500 ಕೋಟಿ (6,500 ಕೋಟಿ ಗುರಿ) ಆದಾಯವನ್ನು ತರುವ ಸಾಮಥ್ರ್ಯವನ್ನು ಹೊಂದಿರುವ ಯೋಜನೆಯ ಪ್ರಯೋಜನಗಳ ಬಗ್ಗೆ ಅಸಮರ್ಪಕ ತಿಳುವಳಿಕೆಯಿಂದಾಗಿ ಕರ್ನಾಟಕ ಪ್ರದೇಶದಲ್ಲಿ ಬೆಂಬಲದ ಕೊರತೆ ಉಂಟಾಗಬಹುದು ಎಂದು ಕೆಲವು ತಜ್ಞರು ನಂಬುತ್ತಾರೆ.


ಅಭಿವೃದ್ಧಿಯ ರಥ ಮುಂದುವರಿದಂತೆ ವಿಶ್ವಾಸಾರ್ಹ ಶಕ್ತಿಯ ಬೇಡಿಕೆ ಹೆಚ್ಚಾಗುತ್ತಿದೆ ಮತ್ತು ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಹೊಂದಿಸಲು ದೃಢವಾದ ವಿದ್ಯುತ್ ಕಾರಿಡಾರ್ ಅಗತ್ಯವಿದೆ. ಇದರಿಂದ ಸ್ಥಳೀಯ ಭೌಗೋಳಿಕ ಪ್ರದೇಶಗಳು ಕೂಡ ಪ್ರಯೋಜನವನ್ನು ಪಡೆಯುತ್ತವೆ ಎಂಬುದರಲ್ಲಿ ಸಂದೇಹವಿಲ್ಲ.  ಪ್ರಸರಣ ಮೂಲಸೌಕರ್ಯದ ಲಭ್ಯತೆಯು ವಿದ್ಯುತ್ ಉತ್ಪಾದನಾ ಕಂಪನಿಗಳನ್ನು ಪ್ರಸರಣ ಮೂಲಸೌಕರ್ಯದ ಸಮೀಪದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪ್ರೇರೇಪಿಸುತ್ತದೆ. ದಕ್ಷಿಣ ಕನ್ನಡ ಪ್ರದೇಶವು ನಿರಂತರವಾಗಿ ಕಡಿಮೆ ವೋಲ್ಟೇಜ್‍ನ ಸವಾಲುಗಳನ್ನು ಎದುರಿಸುತ್ತಿದೆ, ಯುಕೆಟಿಎಲ್ ಪ್ರಸರಣ ಮಾರ್ಗ ಪೂರ್ಣಗೊಂಡ ನಂತರ ಅದನ್ನು ಪರಿಹರಿಸಬಹುದು, ಇದು ಈ ಪ್ರದೇಶಕ್ಕೆ ಮತ್ತು ಕೇರಳಕ್ಕೆ ಹೆಚ್ಚುವರಿ ಸಾಮಥ್ರ್ಯವನ್ನು ತರುತ್ತದೆ.


ಹೊಸ ಸರಕಾರ, ಜನಪ್ರತಿನಿಧಿಗಳಿಂದ ಜನರ ನಿರೀಕ್ಷೆ:

ಹೀಗಾಗಿ ದೊಡ್ಡ ಪ್ರಮಾಣದ ಮತ್ತು ದೂರಗಾಮಿ ಪ್ರಭಾವದ ಯೋಜನೆಗಳನ್ನು ತ್ವರಿತಗೊಳಿಸಲು ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸುವುದು ಅನಿವಾರ್ಯವಾಗಿದೆ. ಇಲ್ಲಿ ಜನಜಾಗೃತಿ ಮೂಡಿಸುವಲ್ಲಿ ಹಾಗೂ ತಳಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಅನುಕೂಲ ಮಾಡಿಕೊಡುವಲ್ಲಿ ಜನಪ್ರತಿನಿಧಿಗಳ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ಈಗಾಗಲೇ 3 ವರ್ಷಗಳಷ್ಟು ವಿಳಂಬವಾಗಿರುವ ಈ ನಿರ್ಣಾಯಕ ಪ್ರಸರಣ ಮೂಲಸೌಕರ್ಯವನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಕ್ರಮಗಳನ್ನು ಹೊಸದಾಗಿ ಚುನಾಯಿತ ನಾಯಕತ್ವ ಮತ್ತು ಕಾರ್ಯನಿರ್ವಾಹಕರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top