ಗೃಹಲಕ್ಷ್ಮಿ ಮತ್ತು ₹.2,000 !!!

Upayuktha
0

"ಜಾತಕ ಹೊಂದಿಕೆಯಾಗುತ್ತೆ. ಆದರೆ, ಮದುವೆ ಆದ ಮೇಲೆ ನಮ್ಮ ಹುಡುಗಿಯನ್ನೇ ಮನೆಯ ಗೃಹಲಕ್ಷ್ಮೀ ಅಂತ ಒಪ್ಪಬೇಕು. ಇದು ನಿಮಗೆ ಒಪ್ಪಿಗೆ ಆದ್ರೆ ತಾಂಬೂಲ ಬದಲಾಯಿಸಿಕೊಳ್ಳೋಣ"


**

ಹುಡುಗಿ ತಾಯಿ: ರೀssss?, ಹುಡುಗನಿಗೆ ತಂದೆ ಇಲ್ವಂತೆ ತಾಯಿ ಇದಾರೆ. ಏನ್ ಮಾಡೋದ್ರಿ?


ಹುಡುಗಿ ತಂದೆ: ಜಾತಕ ಹೊಂದಿಕೆಯಾಗುತ್ತೆ, ಹೂಂ ಅನ್ನೋದು.


ಹುಡುಗಿ ತಾಯಿ: (ಮಗಳನ್ನು ನೋಡುತ್ತ..) ನಿನಗೆ ಒಪ್ಪಿಗೆನೇನಮ್ಮಾ? ಬೀಗರು ಸಾಕಷ್ಟು ಶ್ರೀಮಂತರೆ. ನಿನ್ನ ಅತ್ತೆ ಆಗೋರು ಸಾಕ್ಷಾತ್ ಲಕ್ಷ್ಮಿ ತರಹ ಇದಾರೆ. ಆ ಮನೆಗೆ ಲಕ್ಷಣವಾಗಿರುವ ಗೃಹಲಕ್ಷ್ಮೀ ಅವರು.

ಮದುವೆ ಹುಡುಗಿ: ನಂಗೆ ಆ ಹುಡುಗ ಬೇಡ!! ಬೇರೆ ಕಡೆ ನೋಡಿ.


**

ಹೋಟಲ್‌ನ ಮೂಲೆ ಟೇಬಲ್‌ನಲ್ಲಿ ಒಂದೇ ಉದ್ದ ಗ್ಲಾಸ್‌ಗೆ ಎರಡು ಸ್ಟ್ರಾನಲ್ಲಿ (ಇಂಗ್ಲೀಷ್ ಅಂಕೆ 7 ರಂತೆ ಮೇಲ್ಗಡೆ ಬಾಗಿದ ಪ್ಲಾಸ್ಟಿಕ್ ಸ್ಟ್ರಾಗಳು!) ಜ್ಯೂಸ್ ಕುಡಿಯುತ್ತಿದ್ದ ಹೊಸಾ ಲವರ್ಸ್!!:


"ಮದುವೆ ಆದ ಮೇಲೆ ಬೇರೆ ಮನೆ ಮಾಡ್ತೀರಲ್ವಾ?"

"ಇಲ್ಲ ಕಣೆ, ಅಮ್ಮ ಒಬ್ಬಳೆ ಇರೋದು, ಬಿಟ್ಟು ಬೇರೆ ಇರೋಕಾಗಲ್ಲ"


"ಹಾಗಾದ್ರೆ, ನಾನು ಆ ಮನೆಗೆ ಬಂದ ಮೇಲೆ ನಾನೇ ಗೃಹಲಕ್ಷ್ಮಿ ಆಗಬೇಕು. ತುತ್ತಾ? ಮುತ್ತಾ? ಯಾರು ಅಂತ ಬೇಗ ಡಿಸೈಡ್ ಮಾಡಿ ಹೇಳಿ."


ಮಾತುಕತೆ ನೆಡೆಯುತ್ತಿದ್ದ ಹೋಟಲ್‌ನ ಸ್ಪೀಕರ್‌ನಲ್ಲಿ ಸಿನಿಮಾ ಹಾಡು ಬರ್ತಾ ಇತ್ತು: .... ಮಾತು ಕತೆ ಇನ್ನೂ ಮುಗಿದಿಲ್ಲಾ... ಹೆಣ್ಣಿಗೊಂದು ತಾಳಿ ಕಟ್ಟೋ......


ಟೇಬಲ್ ಖಾಲಿಯಾಯ್ತು. ಜ್ಯೂಸ್ ಮಾತ್ರ ಲೋಟದಲ್ಲಿ ಅರ್ಧ ಉಳಿದಿತ್ತು, ಬಾಗಿದ ಎರಡು ಸ್ಟ್ರಾಗಳೊಂದಿಗೆ!!

***

"ಎಲೆಕ್ಷನ್ ಮುಗೀಲಿ, ಮದುವೆ ಮಾತುಕತೆ ಇಟ್ಕೊಳ್ಳಣಾ ಅಂದಿದ್ರಿ. ಎಲೆಕ್ಷನ್ ಮುಗೀತು, ಮಾತುಕತೆ ಯಾವಾಗ ಇಟ್ಕೊಳ್ಳಣಾ?"

"ಇನ್ನೊಂದೆರಡು ದಿನ ಹೋಗಲಿ. ಮನೆಯ ಗೃಹಲಕ್ಷ್ಮಿ ಯಾರು ಅಂತ ಸರಕಾರವೇ ಕಾಯಿದೆ ತರುತ್ತಂತೆ. ಅದೂ ಒಂದು ತೀರ್ಮಾನ ಆಗಲಿ, ಆಮೇಲೆ ಮಾತುಕತೆಗೆ ಕೂರೋಣ"


**

ಪತ್ರಕರ್ತ: ಗೃಹಲಕ್ಷ್ಮೀ ₹ 2,000 ಯಾವಾಗ ಬರುತ್ತೆ?

ಸಚಿವೆ: ಗೃಹಲಕ್ಷ್ಮೀ ಯಾರು ಅಂತ ಕುಟುಂಬದ ಎಲ್ಲರೂ ಸೇರಿ ಒಬ್ಬರನ್ನು ಸರ್ವಾನು'ಮತ'ದಿಂದ ಆಯ್ಕೆ ಮಾಡಿ, ತೀರ್ಮಾನಿಸಿ, ₹200 ಚಾಪಾಕಾಗದದಲ್ಲಿ ಮುದ್ರಣ ಮಾಡಿಸಿ, ನೋಟರಿ ಸಹಿಯೊಂದಿಗೆ 'ನೊಂದಾ'ವಣಾಧಿಕಾರಿಗಳಲ್ಲಿ 'ನೊಂದಾ'ಯಿಸಿಬೇಕು. 'ಗೃಹಲಕ್ಷ್ಮಿ ನೊಂದಾವಣೆ ಪ್ರಕ್ರಿಯೆ ಮುಗಿದ ಮೇಲೆ, ಆಯ್ಕೆಯಾದ ಗೃಹಲಕ್ಷ್ಮಿಗೆ 'ಹಕ್ಕುಪತ್ರ' ವಿತರಿಸಲಾಗುತ್ತದೆ. ರೇಷನ್ ಕಾರ್ಡ್ ಪ್ರಕಾರ, ಕುಟುಂಬ ಸದಸ್ಯರಾಗಿರುವ ಇತರ ಮಹಿಳೆಯರು ಅಂದರೆ ಗೃಹಲಕ್ಷ್ಮಿ ಅಲ್ಲದವರು "ನಾನು ಈ ಮನೆಯ ಗೃಹಲಕ್ಷ್ಮಿ ಅಲ್ಲ" ಅಂತ ಪ್ರತ್ಯೇಕ ಪ್ರತ್ಯೇಕವಾಗಿ ಖುಲಾಸೆ ಪತ್ರ ಬರೆಸಿ ನೋಟರಿ ಮಾಡಿಸಿ ಕೊಡಬೇಕು.

ಕಂದಾಯ ಇಲಾಖೆ ಕೊಡಮಾಡುವ 'ವಂಶವೃಕ್ಷ'ದ ಪ್ರತಿ, 

ರೇಷನ್ ಕಾರ್ಡ್ ಪ್ರತಿ, 

ಖುಲಾಸೆ ಪತ್ರ ಪ್ರತಿ,  

ಗೃಹಲಕ್ಷ್ಮಿ ಹಕ್ಕು ಪತ್ರ ಪ್ರತಿ, 

ಬ್ಯಾಂಕ್ ಪಾಸ್ ಬುಕ್ ಪ್ರತಿ, 

ಆಧಾರ್ ಪ್ರತಿ, 

ಎಲೆಕ್ಷನ್ ಕಾರ್ಡ್ ಪ್ರತಿ, 

ಭಾವಚಿತ್ರ, 

ಪಾನ್ ಕಾರ್ಡ್ ಪ್ರತಿಗಳನ್ನು 

ಭರ್ತಿಮಾಡಿದ ನಮೂದಿತ ಗೃಹಲಕ್ಷ್ಮಿ ಅರ್ಜಿ ಫಾರಂ‌ನೊಂದಿಗೆ ತಾಲೂಕು ಕಚೇರಿಯಲ್ಲಿ ಮೂರು ತಿಂಗಳೊಳಗೆ 'ದ್ವಿಪ್ರತಿ'ಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಮೂರು ತಿಂಗಳಲ್ಲಿ, ಯಾವುದೇ ತಪ್ಪುಗಳಿಲ್ಲದೆ ಸ್ವೀಕೃತಗೊಂಡ ಗೃಹಲಕ್ಷ್ಮಿ ಅರ್ಜಿದಾರರಿಗೆ ಯಾವುದೇ ವಿಳಂಬವಿಲ್ಲದೆ ₹.2000 ಮೊತ್ತವನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗುವುದು. 


ಪತ್ರಕರ್ತ: ಈ ಪ್ರೊಸೀಜರ್ ಒಂದ್ಸಲ ಮಾಡಿದ್ರಾಯ್ತು ಅಲ್ವಾ?

ಸಚಿವೆ: ಹೌದು ವರ್ಷಕ್ಕೊಮ್ಮೆ ರಿನ್ಯುಯಲ್‌ಗಾಗಿ, ಈ ಅರ್ಜಿ ಮತ್ತು ದಾಖಲೆಗಳನ್ನು ಕೊಡಬೇಕಾಗುತ್ತೆ.  ಇನ್ ಬಿಟ್ವೀನ್ ಮನೆಯಲ್ಲಿ ಒಬ್ಬಳು ಹೆಣ್ಮಗಳಿಗೆ ಮದುವೆ ಆಗಿ ಅತ್ತೆ ಮನೆಗೆ ಹೋದ್ರೂ, ಹೊಸ ಹೆಣ್ಮಗಳು ಮದುವೆ ಆಗಿ ಅಕ್ಕಿ ಸಿದ್ದೆ ಒದ್ದು ಒಳಗೆ ಬಂದಾಗಲೂ ಮೊದಲು ಹೇಳಿದ ಎಲ್ಲ ಪ್ರೊಸೀಜರ್‌ಗಳನ್ನು ಹೊಸದಾಗಿ ಮಾಡಿ ನವೀಕರಿಸಬೇಕಾಗುತ್ತೆ.  ಮನೆಯಲ್ಲಿ ಹೊಸದಾಗಿ ಹೆಣ್ಮಕ್ಕಳು ಜನಿಸಿದರೂ ಅ್ಯಂಡ್ ವೈಸಾ ವರ್ಸಾ, ಪ್ರೊಸೀಜರ್‌ಗಳನ್ನು ಹೊಸದಾಗಿ ಮಾಡಿ ನವೀಕರಿಸಬೇಕಾಗುತ್ತೆ!!


***

ಹೆಣ್ಣು ಒಪ್ಪಿಸಿ ಕೊಡುವಾಗ ಅಳುತ್ತಾ "ಇಷ್ಟು ದಿನ ಇವಳು ನಮ್ಮ ಮನೆ ಮಗಳು.  ಇವತ್ತಿಂದ ಇವಳು ನಿಮ್ಮ ಮನೆ ಮಗಳು, ನಿಮ್ಮ ಮನೆ ಗೃಹಲಕ್ಷ್ಮಿ"


ಕಳಿಸಿಕೊಡುತ್ತಿದ್ದ ತಾಯಿಯ ಕಣ್ಣಲ್ಲಿ ಮಾತ್ರ ಕಣ್ಣೀರಲ್ಲ!! ಅತ್ತೆಯ ಕಣ್ಣಲ್ಲೂ ಸಣ್ಣ ಆತಂಕದ ಕಣ್ಣೀರು!!!


***

ಮುಂದಿನ ಎಲೆಕ್ಷನ್ ಸಂದರ್ಭದಲ್ಲಿ ಟಿವಿ ಚಾನಲ್‌ನಲ್ಲಿ ಚರ್ಚೆ:

ಫಲಾನುಭವಿ ಗೃಹಲಕ್ಷ್ಮಿಯರು ಹೊರೆತಾಗಿ, ಈ ಬಾರಿ ಉಳಿದೆಲ್ಲ ಮಹಿಳೆಯರು ದ್ವೇಷ ಭಾವನೆಯಿಂದ ಬೇರೆ ಪಕ್ಷಕ್ಕೆ ಮತ ಹಾಕುವ ಸಾಧ್ಯತೆ,


ಚರ್ಚೆ, ವಾದ-ವಿವಾದ, ಸಮೀಕ್ಷೆ, ಅಂಕಿ ಅಂಶ, ಗ್ರಾಫ್‌ಗಳ ಮೇಲೆ 160 ಡೆಸಿಬಲ್ ಧ್ವನಿಯಲ್ಲಿ ಆ್ಯಂಕರ್‌ಗಳೊಂದಿಗೆ ರಾಜಕೀಯ ತಜ್ಞರ ವಿಶ್ಲೇಷಣೆ!!


ಮಧ್ಯ ಮಧ್ಯೆ ಏನು ಮಾಡಿದರೂ ಬೆಂಡಾಗದ ಗಟ್ಟಿ TMT ಕಂಬಿಯ ಜಾಹೀರಾತು!!!

**

ಸೋತ ಪಕ್ಷಗಳು ಮುಂದಿನ ಕೇಂದ್ರ ಚುನಾವಣೆ ಸಂದರ್ಭದಲ್ಲಿ ಹೊರತರುವ ಪ್ರಣಾಳಿಕೆಯಲ್ಲಿ ಮಾಡಬಹುದಾದ ಘೋಷಣೆ!!:


'ಮನೆಯ ಪ್ರತೀ ಮಹಿಳೆಯನ್ನು ಗೃಹಲಕ್ಷ್ಮಿ ಎಂದು ಪರಿಗಣಿಸಿ, ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ₹.3000 ಗೃಹಲಕ್ಷ್ಮಿ ಸಮ್ಮಾನ್ ಭಾಗ್ಯ ಯೋಜನೆ ಜಾರಿ ಭರವಸೆ'


***

ಟಿವಿ ಆ್ಯಂಕರ್: ಗೃಹಲಕ್ಷ್ಮಿ ₹.2000 ಎಲ್ಲ ಮಹಿಳೆಯರಿಗೂ ಸಿಗುತ್ತಾ?


ಕಾಲು ಮೇಲೆ ಕಾಲು ಹಾಕಿ, ಎಡಗೈಯನ್ನು ವರಗುವ ಸೋಫಾದ ಬೆನ್ನಿನ ಮೇಲಿಟ್ಟು ಗತ್ತಿನಿಂದ ಕುಳಿತ ಶಾಸಕ: "ಹಾಗೆ ಹಾದಿ ಬೀದಿಯಲ್ಲಿ ತಿರುಗಾಡುವವರಿಗೆಲ್ಲ ಗೃಹಲಕ್ಷ್ಮಿ ಹಣ ಕೊಡೋಕಾಗುತ್ತೇನ್ರಿ!!? 


ಟಿವಿ ಆ್ಯಂಕರ್:  ಮತ್ತೆ!!?

ಶಾಸಕ: ಯಾರು ಯಾವಾಗಲೂ ಮನೆಯಲ್ಲೇ ಇರುತ್ತಾರೋ ಅವರಿಗೆ ಮಾತ್ರ ಗೃಹಲಕ್ಷ್ಮೀ ಹಣ ಸಿಗುತ್ತೆ.


ಟಿವಿ ಆ್ಯಂಕರ್: ಇದನ್ನು ಸ್ವಲ್ಪ ವಿವರಿಸುತ್ತೀರಾ? ಸ್ಪಷ್ಟ ಮಾಡಬಹುದಾ?

ಶಾಸಕ: ನೋಡಿ....


ಟಿವಿ ಆ್ಯಂಕರ್: ಎಲ್ಲ ನೋಡ್ತಾ ಇದಾರೆ, ನೀವು ಹೇಳಿ ಸರ್.

ಶಾಸಕ: ಹಾಂ. ಗೃಹಲಕ್ಷ್ಮಿ ಅಂದ್ರೆ ಮನೆಯಲ್ಲಿ ಇರುವವರು ಅಂತ. ದಿನ ಹೊರಗಡೆ ಕೆಲಸಕ್ಕೆ ಹೋಗುವವರು ಗೃಹಲಕ್ಷ್ಮಿ ಹ್ಯಾಗ್ರಿ ಆಗ್ತಾರೆ?  ಉಚಿತವಾಗಿ ಸರಕಾರಿ ಬಸ್‌ನಲ್ಲಿ ತಿರುಗುವವರು KSRTC ಲಕ್ಷ್ಮಿ ಆಗ್ತಾರೆ, ಬ್ಯಾಂಕ್‌ನಲ್ಲಿ ಕೆಲಸ ಮಾಡುವವರು ಬ್ಯಾಂಕ್ ಲಕ್ಷ್ಮಿ ಆಗ್ತಾರೆ. ನಾವು ಗೃಹಲಕ್ಷ್ಮಿಯರಿಗೆ ಮಾತ್ರ ₹.2000 ಕೊಡೋದು. ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿದಿವಲ್ರಿ  'ಪ್ರತೀ ಮನೆಯ ಒಬ್ಬ ಗೃಹಲಕ್ಷ್ಮಿಗೆ ₹ 2000 ಗೌರವ ಧನ' ಅಂತ.

***

ಮೊದಲ ಗೃಹಲಕ್ಷ್ಮಿ ಹಣ ₹ 2000 ಅಕೌಂಟಿಗೆ ಜಮೆ ಆದ ನೋಟಿಫಿಕೇಷನ್ ನೋಡಿದ ಅತ್ತೆ ಸೊಸೆಗೆ ಹೇಳುವ ಮಾತು: ಇವತ್ತಿಂದ ಅಡಿಗೆ ಮಾಡುವುದು, ಪಾತ್ರೆ ತೊಳೆಯುವುದು, ಕಸ ಗುಡಿಸುವುದು, ಬಟ್ಟೆ ಒಗೆಯುವುದು... ಯಾವುದೂ ಆಗಲಮ್ಮ. ಕಾಲು ನೋವು ಜಾಸ್ತಿ ಆಗ್ತಾ ಇದೆ. ನೀನೆ ಸುಧಾರಿಸಿಕೊಂಡು ಮಾಡು.


- ಅರವಿಂದ ಸಿಗದಾಳ್, ಮೇಲುಕೊಪ್ಪ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top