ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಉದ್ಯೋಗ ಮಾಹಿತಿ ಘಟಕ, ಐಕ್ಯೂಎಸಿ ಘಟಕ ಹಾಗೂ ವಾಣಿಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಏ.25 ರಂದು ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀಮತಿ ಜ್ಯೋತಿ ಪ್ರಶಾಂತ್ ಅವರು ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳ ಬಗ್ಗೆ ಉಪನ್ಯಾಸ ನೀಡಿದರು. ಬದುಕಿನಲ್ಲಿ ಈ ಕೌಶಲ್ಯಗಳನ್ನು ಅರಿತು ಅಳವಡಿಸಿಕೊಳ್ಳಬೇಕೆಂದು ನಿದರ್ಶನ ಸಹಿತ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಸುರೇಶ್ ರೈ ಕೆ. ಅವರು ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಅಗತ್ಯವಾಗಿ ಈ ಜೀವನ ಕೌಶಲ್ಯಗಳನ್ನು ಕಲಿತು, ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯ ಬೇಕೆಂದು ಸಲಹೆ ನೀಡಿದರು.
ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಉದ್ಯೋಗ ಮಾಹಿತಿ ಘಟಕದ ಸಂಚಾಲಕರಾದ ಡಾ. ಎಚ್.ಕೆ. ವೆಂಕಟೇಶ ಸ್ವಾಗತಿಸಿದರೆ, ಶ್ರೀ ಉಮೇಶ್ ಪೈ ವಂದಿಸಿದರು.