ಇತ್ತೀಚೆಗೆ ಪುತ್ತೂರಿಗೆ ಆಗಮಿಸಿದ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರೊಂದಿಗೆ ಪುತ್ತೂರು ಭಾಗದ ಅವರ ಶಿಷ್ಯರ ಒಂದು ಸುಮಧುರ ನೆನಪುಗಳ ಶಿಷ್ಯ ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಅವರ ಅಣ್ಣ ಪ್ರೊ. ವಿ ಬಿ ಅರ್ತಿಕಜೆ ಅವರು ಪುತ್ತೂರಿನ ಅನುರಾಗ ವಠಾರದಲ್ಲಿ ಇದರ ಆಯೋಜನೆಯನ್ನು ಮಾಡಿದ್ದರು. ಕಾರ್ಯಕ್ರದಲ್ಲಿ ಅವರ ಶಿಷ್ಯಂದಿರು, ಹಿತೈಷಿಗಳು, ಬಂಧುಮಿತ್ರರು ಭಾಗವಹಿಸಿದ್ದರು.
ಶಿಷ್ಯರು ಅವರನ್ನು 'ಒಂದು ವಿಸ್ಮಯ' ಎಂದು ಸ್ಮರಿಸಿಕೊಂಡರು. ಮದರಾಸಿಗೆ ಕನ್ನಡ ಎಂ.ಎ ಅಧ್ಯಯನಕ್ಕೆ ಹೋಗುವ ವಿದ್ಯಾರ್ಥಿಯನ್ನು ರೈಲ್ವೆ ಸ್ಟೇಷನ್ನಿಗೆ ಹೋಗಿ ಕರೆದುಕೊಂಡು ಬಂದು, ತಾನೇ ಫೀಸು ಕಟ್ಟಿ ಎಂ.ಎ ಪದವಿಗೆ ಸೇರಿಸಿ, ಮನೆಯಲ್ಲಿ ಊಟ ಹಾಕಿ, ಆಮೇಲೆ ಹಾಸ್ಟೇಲಿನಲ್ಲಿ ಸೀಟು ಸಿಗುವಂತೆ ಮಾಡಿ, ಅಧ್ಯಯನಕ್ಕೆ ಅವಕಾಶ ಮಾಡುವಂತಹ ಇನ್ನೊಬ್ಬ ಪ್ರಾಧ್ಯಾಪಕ ಸಿಗಲಾರರು. ಅರ್ತಿಕಜೆಯವರಿಗೆ ಸಿಹಿ ಎಂದರೆ ತುಂಬಾ ಇಷ್ಟ, ಅವರ ಬದುಕು, ಆತಿಥ್ಯ, ಪ್ರೀತಿ, ತರಗತಿ ಎಲ್ಲವೂ ಸಿಹಿ ಸಿಹಿಯಾಗಿರುತ್ತಿತ್ತು. ಅವರ ತರಗತಿಗಳಲ್ಲಿ ಹಳೆಗನ್ನಡ ಕಾವ್ಯದ ಪದ್ಯಗಳನ್ನು ಹಾಡಿ ಪಾಠಮಾಡುವ ಕ್ರಮದಿಂದಾಗಿ ಅವರ ತರಗತಿಗಳು ರೋಮಾಂಚ ತರಿಸುತ್ತಿತ್ತು. ಎಲ್ಲರಿಗೂ ಅವರೊಂದು ಸ್ಪೂರ್ತಿಯ ಚಿಲುಮೆ. ಬದುಕನ್ನು ತ್ರಿಲ್ಲ್ ಆಗಿ ಹೇಗೆ ಬದುಕಬಹುದೆಂದು ತೋರಿಸಿಕೊಟ್ಟವರು ಎಂದು ಹಿರಿಯ ವಿದ್ಯಾರ್ಥಿಗಳು, ಹಿತೈಷಿಗಳು, ಬಂಧುಮಿತ್ರರು ಮದರಾಸಿನಲ್ಲಿ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರ ಜೊತೆಗಿನ ಒಡನಾಟದ ಅನುಭವಗಳನ್ನು ಹಂಚಿಕೊಂಡರು.
ಇದಕ್ಕೆ ಪ್ರತಿಯಾಗಿ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರು ತಮ್ಮ ಬಾಲ್ಯ, ಶಿಕ್ಷಣ, ಮದರಾಸಿಗೆ ಹೋದದ್ದು, ಅಲ್ಲಿಯ ತರಗತಿಗಳು, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳನ್ನು ಕಲಿತದ್ದು, ವಿದ್ಯಾರ್ಥಿಗಳ ಜೊತೆಗಿನ ಒಡನಾಟ ಮುಂತಾದ ಅನೇಕ ಸಂಗತಿಗಳನ್ನು ಹಂಚಿಕೊಂಡರು. ರನ್ನನ ಗದಾಯುದ್ಧದ ಕೆಲವು ಪದ್ಯಗಳನ್ನು ಹಾಡಿ ತರಗತಿಯಲ್ಲಿ ಪಾಠ ಕೇಳಿದ ಹಳೆಯ ನೆನಪುಗಳು ಮತ್ತೆ ಮರುಕಳಿಸುವಂತೆ ಮಾಡಿದರು.
ಈ ಸಂದರ್ಭದಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ. ತಾಳ್ತಜೆ ವಸಂತಕುಮಾರ್, ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ, ಕರ್ನಾಟಕ ಸಂಘದ ಅಧ್ಯಕ್ಷರಾದ ಪುರಂದರ ಭಟ್, ಡಾ. ರೇಣುಕಾ ಶೆಟ್ಟಿ, ಡಾ. ವಿಶ್ವನಾಥ, ಡಾ. ವರದರಾಜ ಚಂದ್ರಗಿರಿ, ಡಾ. ಶ್ರೀಧರ ಎಚ್ ಜಿ, ಡಾ. ವಿಜಯಕುಮಾರ್ ಮೊಳೆಯಾರ್, ಡಾ. ನರೇಂದ್ರ ರೈ ದೇರ್ಲ ಹಾಗೂ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರ ಕುಟುಂಬದವರು, ಇನ್ನೂ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ. ವಿ ಬಿ ಅರ್ತಿಕಜೆ ಸ್ವಾಗತಿಸಿದರು. ಡಾ. ನರೇಂದ್ರ ರೈ ದೇರ್ಲ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ