ಉಡುಪಿ: 'ದಲಿತ ಪೆರ್ಣನಿಗೊಲಿದ ಮಹಾಗಣಪತಿ ಉದ್ಭವಿಸಿದ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಅತ್ಯಂತ ಪುರಾತನ ಇತಿಹಾಸ ಹೊಂದಿದೆ. ಪ್ರಸ್ತುತ ಜೀರ್ಣೋದ್ಧಾರಗೊಳ್ಳುತ್ತಿರುವ ದೇಗುಲದ ಹಿರಿಮೆಯನ್ನು ಸಾರುವ ಭಕ್ತಿ ಗೀತೆಗಳ ರಚನೆಗೆ ಸಮಿತಿ ಸಂಕಲ್ಪಿಸಿದೆ. ಅದು ಸುಂದರವಾಗಿ ಮೂಡಿಬಂದು ಕ್ಷೇತ್ರ ಮಹಿಮೆ ಬೆಳಗಲಿ' ಎಂದು ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಮುಂಬೈ ವಿದ್ಯಾ ವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾ ಗಣಪತಿ ದೇವಸ್ಥಾನದ ಧರ್ಮದರ್ಶಿ ಪೆರ್ಣಂಕಿಲ ಹರಿದಾಸ ಭಟ್ ಹೇಳಿದ್ದಾರೆ.
'ಶ್ರೀ ಕ್ಷೇತ್ರ ಪೆರಣಂಕಿಲ' ಭಕ್ತಿ ಗೀತೆಗಳ ರಚನೆಗೆ ಮುಹೂರ್ತ ಮಾಡಿ ಮಾತನಾಡಿದ ಅವರು, ಭಕ್ತಿ ಗೀತೆಯ ಧ್ವನಿಸುರಳಿಯನ್ನು ಮುಂದಿನ ತಿಂಗಳು 21 ಕ್ಕೆ ಕ್ಷೇತ್ರದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಗೀತೆ ರಚನೆಕಾರರಾದ ಮಂಗಳೂರಿನ ಸಾಹಿತಿ ಮತ್ತು ಜಾನಪದ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರಿಗೆ ದೇವರ ಪ್ರಸಾದ ನೀಡಿ ಅವರು ಶುಭ ಹಾರೈಸಿದರು.
ಲೇಖಕ ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ, 'ತಾನು ಈ ಹಿಂದೆಯೂ ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದ ಭಕ್ತಿಗೀತೆಗಳನ್ನು ರಚಿಸಿದ್ದರೂ ಪೇಜಾವರ ಮಠಕ್ಕೆ ಸೇರಿದ ಈಶ -ಗಣೇಶ ಉಭಯ ಸಾನಿಧ್ಯಗಳ ಬಗ್ಗೆ ಬರೆಯುತ್ತಿರುವುದು ಇದೇ ಮೊದಲು' ಎಂದು ತಿಳಿಸಿ ದೇವರ ಅನುಗ್ರಹ ಕೋರಿದರು.
ಮುಂಬೈಯ ಖ್ಯಾತ ಸಂಗೀತ ನಿರ್ದೇಶಕ, ಕಲಾ ಸೌರಭ ಸಂಸ್ಥೆಯ ಸಂಚಾಲಕ ಪದ್ಮನಾಭ ಸಸಿಹಿತ್ಲು ಮತ್ತು ಪ್ರಸಿದ್ಧ ಗಾಯಕ, ಕಲಾ ಸಾರಥಿ ತೋನ್ಸೆ ಪುಷ್ಕಳ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ, ಪೆರಣಂಕಿಲ ಶ್ರೀಶನಾಯಕ್ ಸ್ವಾಗತಿಸಿದರು. ಉಮೇಶ್ ನಾಯಕ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ