ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ ಬೆಂಗಳೂರು ಶ್ರೀ ಶಾರದಾ ಕಲಾಸಂಘ ವಿಜಯನಗರ ಬಡಾವಣೆ, ಹಾಸನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಮೂರು ಸಾಮಾಜಿಕ ನಾಟಕಗಳು, ನೃತ್ಯ ಪ್ರಕಾರಗಳು, ಜನಪದ ಗೀತೆ ಗಾಯನಗಳು ಎಲ್ಲವೂ ಜನಮನ ಸೆಳೆದವು.
ಗಾಯಕ ಗ್ಯಾರಂಟಿ ರಾಮಣ್ಣ ರಚನೆ ನಿರ್ದೇಶನದ ಬಾಡಿದ ಬದುಕು ನಾಟಕ ವಯಸ್ಸಾದ ತಂದೆತಾಯಿಗಳನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೇ ಅವರ ಬದುಕು ಅತಂತ್ರವಾಗುತ್ತಿರುವ ವಾಸ್ತವ ಚಿತ್ರಣ ತೋರಿಸಿತು. ಸಹಬಾಳ್ವೆಯ ಸತ್ಯವನ್ನು ಸಾರುವ ಈ ನಾಟಕ ಸೋತ ಕಾಲದಲ್ಲಿ ಹೆತ್ತವರನ್ನು ಸಂರಕ್ಷಿಸಬೇಕು ಎಂಬ ಉದಾತ್ತ ಸಂದೇಶ ಒಡಲಲ್ಲಿ ಇರಿಸಿಕೊಂಡಿದೆ. ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದರು. ಸ್ವತ: ಗಾಯಕರಾಗಿ ರಾಮಣ್ಣ ತಮ್ಮದೇ ರಚನೆಯ ಹಾಡುಗಾರಿಕೆಯಲ್ಲಿ ನಾಟಕವನ್ನು ಸರಳ ರಂಗ ಸಜ್ಜಿಕೆಯಲ್ಲಿ ಸುಲಲಿತವಾಗಿ ಮುನ್ನೆಡಿಸಿ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಟ್ಟಾಯ ಚಂದನ್ ತಂಡ ಪ್ರದರ್ಶಿಸಿದ ತೋಳ ಬಂತು ತೋಳ ನಾಟಕದ ರಚನೆಕಾರರು ಸಾಹಿತಿ ಗೊರೂರು ಅನಂತರಾಜು. ಸೌಂದರ್ಯವೇ ಹೆಣ್ಣಿಗೆ ಕಂಟಕವಾಗಿ ಆಕೆಯ ಮೇಲೆ ನಡೆವ ಅತ್ಯಾಚಾರದ ಕೇಂದ್ರ ಬಿಂದುವಿನ ಸುತ್ತ ಹೆಣೆಯಲಾದ ನಾಟಕ ಗಾಯಕ ಯೋಗೇಂದ್ರ ದುದ್ದ ಅವರ ಹಿನ್ನೆಲೆ ಹಾಡು ಸಂಗೀತದಲ್ಲಿ ಮಧುರವಾಗಿ ಸಾಗಿ ಪ್ರೇಕ್ಷಕರ ಮನ ಸೆಳೆಯಿತು. ಯುವಕ ಕಟ್ಟಾಯ ಚಂದನ್ ನಾಟಕದ ವಿಲನ್ ಜನನಾಯಕ ಪಾತ್ರದಲ್ಲಿ ಭವಿಷ್ಯದ ಕಲಾವಿದನಾಗಿ ಬೆಳೆಯುವ ಲಕ್ಷಣ ತೋರಿದರು. ಶಾಂತಿ ಪಾತ್ರ ನಿರ್ವಹಿಸಿದ ಶಿಕ್ಷಕಿ ರಾಣಿಯವರ ಪ್ರಬುದ್ಧ ಅಭಿನಯ ಮೆಚ್ಚುಗೆ ಗಳಿಸಿತು. ಜನನಾಯಕನಲ್ಲಿ ನ್ಯಾಯ ಕೇಳಿ ಬರುವ ಶಾಂತಿಯ ತಂದೆ ಪಾತ್ರದಲ್ಲಿ ಯಲಗುಂದ ಶಾಂತಕುಮಾರ್ ಹಾಗೂ ತಾಯಿ ಪಾತ್ರದಲ್ಲಿ ಗಾಯಿತ್ರಿ ಪ್ರಕಾಶ್ ಅವರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದರು. ರಂಗೋಲಿ ಮಾರುವ ರಂಗನ ಪಾತ್ರದಲ್ಲಿ ಯುವ ನಟ ಕಿರಣ್ ರಾಜ್ ಹಾಸ್ಯ ಸಂಭಾಷಣೆ ಅಭಿವ್ಯಕ್ತಿಯಲ್ಲಿ ಪಳಗಬೇಕಿದೆ.
ಹೆಸರಾಂತ ನಾಟಕಕಾರ ಸಂಸರ ಬದುಕಿನ ಕೊನೆಯ ದಿನಗಳ ಭಯದ ವಿಲಕ್ಷಣ ನಡೆಯ ಪೊಲೀಸರಿದ್ದಾರೆ ಎಚ್ಚರಿಕೆ ನಾಟಕದ ಕರ್ತೃ ಪಿ.ಲಂಕೇಶ್. ಸಂಸರ ಪಾತ್ರದಲ್ಲಿ ಪ್ರದೀಪ್ ಮತ್ತು ಸಿವಿಲ್ ಡ್ರೆಸ್‍ನಲ್ಲಿ ಪೊಲೀಸ್ ಆಗಿ ಯದೀಶ್ ಏಕಾಂಕವನ್ನು ಉತ್ತಮ ನಟನೆಯಲ್ಲಿ ಮುನ್ನೆಡೆಸಿದರು. ಎಂ.ಬಿ.ಜ್ಞಾನೇಶ್ ನಿರ್ಮಾಣದ ಪ್ರಶಸ್ತಿ ವಿಜೇತ ಅಂಗೈಲಿ ಅಕ್ಷರ ಮಕ್ಕಳ ಚಲನಚಿತ್ರ ಪ್ರದರ್ಶನ ನಂತರ ಶ್ರೀಮತಿ ಕಲಾವತಿ ಮಧುಸೂದನ್ ಅವರ ವೀಣಾವಾದನ ಕಾರ್ಯಕ್ರಮ ಆಯೋಜಿಸಿದ್ದ ಗಾಯಕ ಹೆಚ್.ಜಿ.ಗಂಗಾಧರ್ ಅವರು ಭಾವಗೀತೆ ರಂಗಗೀತೆಗಳಿಂದ ರಂಜಿಸಿದರೆ ನಟ ನಿರ್ದೇಶಕ ಎ.ಸಿ.ರಾಜು ಶಕುನಿಯ ಏಕ ಪಾತ್ರಾಭಿನಯದಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಯೋಗೇಂದ್ರ ದುದ್ದ, ನಂಜನಗೂಡು ಸೊಮರಾಜ್ ಅವರ ಜಾನಪದ ಗೀತೆಗಳು, ಬೆಂಗಳೂರಿನ ಹಾಸ್ಯ ದರ್ಶನ ಪತ್ರಿಕೆಯ ಸಂಪಾದಕರು ಎಸ್.ಎಸ್.ಪಡಶೆಟ್ಟಿರವರ ಹಾಸ್ಯ ರಸಾಯನ ಎಲ್ಲವೂ ಸೊಗಸಾಗಿದ್ದವು. ಚನ್ನರಾಯಪಟ್ಟಣ ಶ್ರೀಮತಿ ಶೈಲಜಾ ತಂಡದವರ ಶಾಸ್ತ್ರೀಯ ನೃತ್ಯ ರೂಪಕ ಅದರಲ್ಲೂ ಕುವೆಂಪು ಅವರ ಆನಂದಮಯ ಈ ಜಗಹೃದಯ ಭಾವಗೀತೆಗೆ ಹೆಣ್ಣುಮಕ್ಕಳ ನರ್ತನ ಮನಕ್ಕೆ ಆನಂದ ನೀಡಿತು. ಪುಟ್ಟಮ್ಮ ತಂಡದ ಶೋಬಾನೆ ಪದಗಳು. ಸಾವಿತ್ರಮ್ಮ ತಂಡದ ದೀಪದಾರತಿ ಮತ್ತು ಯೋಗಾಸನ ನೃತ್ಯಗಳು ಮನಸೆಳೆದವು. ಬಿಜಾಪುರದ ಚಡಚಣದಿಂದ ಆಗಮಿಸಿದ್ದ ಶಿವಣ್ಣಗೊಂಡ ಮಹಾದೇವ ಬಿರಾದಾರ ಸಂಗಪ್ಪ ಜಯಗೊಂಡರ ದೊಡ್ಡಾಟ ಮತ್ತು ನಿಂಬವ್ವ ತಂಡದ ಹಾಡುಗಾರಿಕೆ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ತೋರ್ಪಡಿಸಿತು.
-ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ