ನಾಲ್ಕು ವರ್ಷಗಳಲ್ಲಿ 1.38 ಕೋಟಿಗೂ ಅಧಿಕ ಆಯುಷ್ಮಾನ್ ಕಾರ್ಡ್‌ ವಿತರಣೆ

Upayuktha
0

ಮಂಗಳೂರು: ಭಾರತೀಯ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ನಂತರ ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಸುಧಾರಣೆಗಳು ಅನೇಕ. 2018ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಿಂದ ಕೆಳಗಿಳಿಯುವ ವೇಳೆಗೆ ವಸ್ತುಶಃ ರಾಜ್ಯದ ಆರೋಗ್ಯ ಕ್ಷೇತ್ರ ಐಸಿಯುನಲ್ಲಿತ್ತು. ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ, ಚಿಕಿತ್ಸೆಗಾಗಿ ಸಾರ್ವಜನಿಕರು ಪಡುತ್ತಿದ್ದ ಸಂಕಷ್ಟಗಳು ಅಪಾರ. ಇಂತಹ ಸನ್ನಿವೇಶದಲ್ಲಿ ರಾಜ್ಯದ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಬಿಜೆಪಿ ಸರಕಾರ ಕೈಗೊಂಡ ಕ್ರಮಗಳು ಇಂದು ದೇಶದ ಗಮನ ಸೆಳೆಯುವಂತಿದೆ ಎಂದು ದ.ಕ ಜಿಲ್ಲಾ ಭಾರತೀಯ ಜನತಾ ಪಕ್ಷದ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ಜಿ.ಕೆ ಭಟ್ ಸಂಕಬಿತ್ತಿಲು ಹೇಳಿದರು.


ನಗರದ ವಿಭಾಗ ಮಾಧ್ಯಮ ಕೇಂದ್ರದಲ್ಲಿ ಇಂದು (ಏ.22, ಶನಿವಾರ) ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.


ಬಿ.ಎಸ್‌ ಯಡಿಯೂರಪ್ಪರವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯದ ಮೂಲ ಸೌಕರ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ 117 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಯಿತು. ಅಸ್ತಿತ್ವದಲ್ಲಿರುವ ಶೇ 43ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24x7 ಸೇವೆ ನೀಡುವ ಕೇಂದ್ರಗಳಾಗಿ ಪರಿವರ್ತಿಸಲಾಯಿತು. ಯಡಿಯೂರಪ್ಪ ಸರಕಾರವು ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿತು. ಈ ಯೋಜನೆಯಡಿ ಬಡವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ ಎಂದು ಡಾ. ಜಿ.ಕೆ ಭಟ್ ಮಾಹಿತಿ ನೀಡಿದರು.


1.38 ಕೋಟಿಗೂ ಅಧಿಕ ಆಯುಷ್ಮಾನ್‌ ಕಾರ್ಡ್ ವಿತರಣೆ:

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ 1.38 ಕೋಟಿಗೂ ಅಧಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ.. ಚಿಕ್ಕಮಗಳೂರು, ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರಗಳಲ್ಲಿ 325 ಕೋಟಿ ರೂ ವೆಚ್ಚದಲ್ಲಿ 4 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದೆ. 2020ರಲ್ಲಿ ಯಡಿಯೂರಪ್ಪ ಅವರ ದೂರದೃಷ್ಟಿ ಮತ್ತು ಸಮಯೋಚಿತ ಕ್ರಮದಿಂದಾಗಿ 2,359 ಪ್ರಾಥಮಿಕ ಆರೋಗ್ಯ ಕೇಂದ್ರಗಳ ದೊಡ್ಡ ನೆಟ್‌ವರ್ಕ್ ಅನ್ನು 20 ಹಾಸಿಗೆಗಳ ಸೌಲಭ್ಯಗಳೊಂದಿಗೆ ಉನ್ನತೀಕರಣ ಮಾಡಲಾಯಿತು. ಈ ಆಸ್ಪತ್ರೆಗಳು ಸುಮಾರು 30,000 ಜನರಿಗೆ ಸೇವೆ ಒದಗಿಸುತ್ತಿವೆ ಎಂದು ಅವರು ತಿಳಿಸಿದರು.


ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ನಮ್ಮ ಕ್ಲಿನಿಕ್‌ಗಳ ಮೂಲಕ 20 ಪ್ರಾಥಮಿಕ ಆರೋಗ್ಯ ಸೇವೆಗಳ ಸಮಗ್ರ ಪ್ಯಾಕೇಜ್‌ನೊಂದಿಗೆ ನಗರದ ಬಡವರಿಗೆ ಕೈಗೆಟುಕುವ ಆರೋಗ್ಯ ಸೇವೆಗಳನ್ನು ನೀಡಲಾಯಿತು. ಇದುವರೆಗೆ ರಾಜ್ಯದಲ್ಲಿ 272 ನಮ್ಮ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ.


ಕುಮಟಾ, ಶಿರಸಿಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹು ಕಾಲದ ಬೇಡಿಕೆ ಆಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಕ್ರಮ ಕೈಗೊಂಡಿದೆ. ಕುಮಟಾದಲ್ಲಿ ಈ ವರ್ಷ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುತ್ತಿದೆ. ಶಿರಸಿಯಲ್ಲಿ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ.


ಕೋವಿಡ್‌ ನಿರ್ವಹಣೆಯಲ್ಲಿ ಅದ್ವಿತೀಯ ಸಾಧನೆ:

ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಆರೋಗ್ಯ ರಕ್ಷಣೆಯನ್ನು ತ್ವರಿತವಾಗಿ ಹೆಚ್ಚಿಸಬೇಕಾಗಿತ್ತು. ಆ ಜವಾಬ್ದಾರಿಯನ್ನು ಸರಕಾರ ಸಮರ್ಥವಾಗಿ ನಿಭಾಯಿಸಿದ್ದು, ಆಯುಷ್ಮಾನ್ ಭಾರತ್ ಅಡಿಯಲ್ಲಿ 8,618 ಆರೋಗ್ಯ ಮತ್ತು ಸ್ವಾಸ್ಥ್ಯ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ. ಇದು ದೇಶದಲ್ಲಿಯೇ ಅತ್ಯಧಿಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಕೋವಿಡ್‌ ಸಾಂಕ್ರಾಮಿಕದ ನಂತರ ಒಂದು ವರ್ಷದೊಳಗೆ 8 ಕೋಟಿ ಜನರಿಗೆ ಮತ್ತು 2 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಡಿಸೆಂಬರ್ 2021ರೊಳಗೆ ರಾಜ್ಯದ ಸಂಪೂರ್ಣ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. 50 ಆಮ್ಲಜನಕ ಘಟಕಗಳು ಮತ್ತು 2025 ವೆಂಟಿಲೇಟರ್‌ಗಳನ್ನು ಸಹ PM-CARES ಅಡಿಯಲ್ಲಿ ಸ್ಥಾಪಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ನಿರಂತರ ಸುಧಾರಣೆ ಮತ್ತು ಸೌಲಭ್ಯಗಳನ್ನು ಒದಗಿಸಲು ಭಾರತೀಯ ಜನತಾ ಪಕ್ಷದ ಸರಕಾರ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತದೆ ಎಂದು ಅವರು ನುಡಿದರು.


ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ವಕ್ತಾರರಾದ ಜಗದೀಶ್ ಶೇಣವ, ಜಿಲ್ಲಾ ಮಾಧ್ಯಮ ಸಂಚಾಲಕರಾದ ರಂದೀಪ್ ಕಾಂಚನ್, ಬಿಜೆಪಿ ಪ್ರಮುಖರಾದ ಸಂಜಯ್ ಪ್ರಭು, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top